ರಾಮನಗರ: ಮಹಾಮಾರಿ ಕೊರೊನಾ 3ನೇ ಅಲೆ ಭೀತಿ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆ ಇತಿಹಾಸ ಪ್ರಸಿದ್ಧ ಅಂಬೆಗಾಲು ಕೃಷ್ಣ ದೇವಾಲಯ ಬಂದ್ ಮಾಡಿದೆ. ಹೀಗಾಗಿ ಶ್ರೀಕೃಷ್ಣ ಜನ್ಮಾಷ್ಟಮಿಯಂದು ಕೃಷ್ಣನ ಭಕ್ತರಿಗೆ ನಿರಾಶೆಯಾಗಿದೆ.
ರಾಮನಗರ ಜಿಲ್ಲೆ ಚನ್ನಪಟ್ಟಣದ ಕಣ್ವ ನದಿ ತಟದಲ್ಲಿರುವ ಕಣ್ವ ಮಹರ್ಷಿಗಳಿಂದ ಪ್ರತಿಷ್ಠಾಪಿತವಾಗಿ ಪೂಜಿಸಲ್ಪಟ್ಟ ಐತಿಹಾಸಿಕ ದೇವಾಲಯವಾಗಿರುವ ಅಂಬೆಗಾಲು ಕೃಷ್ಣ ದೇವಾಲಯವನ್ನು ಬಂದ್ ಮಾಡಲಾಗಿದೆ. ಈ ದೇವಾಲಯದಲ್ಲಿ ಶ್ರೀ ಕೃಷ್ಣ ಅಂಬೆಗಾಲಲ್ಲಿ ಕುಳಿತಿದ್ದು ದೇಶದಲ್ಲೇ ವಿಶೇಷವಾದ, ಅಪರೂಪದ ದೇವಾಲಯವಾಗಿದೆ. ಹೀಗಾಗಿ ಶ್ರೀಕೃಷ್ಣ ಜನ್ಮಾಷ್ಟಮಿಯಂದು ಕೃಷ್ಣನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದ್ದು ಕೊರೊನಾ ನಿಯಮ ಉಲ್ಲಂಘನೆಯಾಗಬುವುದೆಂದು ದೇವಾಲಯವನ್ನು ಬಂದ್ ಮಾಡಲಾಗಿದೆ.
ಶ್ರೀಕೃಷ್ಣ ಜನ್ಮಾಷ್ಟಮಿಯಾದ ಇಂದು ಸಾಮಾನ್ಯವಾಗಿ ಭಕ್ತರು ತಮ್ಮ ಮಕ್ಕಳಿಗೆ ರಾಧೆ-ಕೃಷ್ಣನ ವೇಷಾ ಧರಿಸಿ ದೇವಾಲಯಕ್ಕೆ ಬರುತ್ತಾರೆ. ಹೀಗಾಗಿ ಇಲ್ಲಿ ಕೊರೊನಾ ಮೂರನೇ ಅಲೆ ಹೆಚ್ಚಾಗುವ, ಹರಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ದೇವಾಲಯಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿದೆ. ಭಕ್ತರು ದೇವಸ್ಥಾನದ ಬಾಗಿಲಲ್ಲೇ ಕೈ ಮುಗಿದು ತೆರಳುತ್ತಿದ್ದಾರೆ. ಕಳೆದ ಬಾರಿ ಕೂಡ ಕೊರೊನಾ 2ನೇ ಅಲೆಯಿಂದಾಗಿ ದೇವಸ್ಥಾನ ಮುಚ್ಚಲಾಗಿತ್ತು. ಈ ವರ್ಷ ಕೂಡ ಇದೇ ಪರಿಸ್ಥಿತಿ ಮುಂದುವರೆದಿದೆ.