ರಾಮನಗರ, ಅಕ್ಟೋಬರ್ 26: ಅತ್ತ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕನಕಪುರ (Kanakapur) ವಿಚಾರಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಜತೆ ವಾಕ್ಸಮರಕ್ಕಿಳಿದಿದ್ದರೆ, ಇತ್ತ ಅವರ ಕ್ಷೇತ್ರ ಚನ್ನಪಟ್ಟಣದ (Channapatna) ಜನರ ಗೋಳು ಕೇಳುವವರೇ ಇಲ್ಲದಂತಾಗಿದೆ. ನಾಗರೀಕ ಸಮಾಜವೇ ತಲೆತಗ್ಗಿಸುವಂತಹ ದುಸ್ಥಿತಿಯ ಜೀವನ ನಡೆಸ್ತಿದ್ದು, ಶೌಚಾಲಯಕ್ಕೂ ಬಳಿಸಿದ ನೀರನ್ನು ತಾವೇ ತಮ್ಮ ಕೈಯ್ಯಲ್ಲಿ ಎತ್ತಿ ಬೇರೆಡೆ ಸಾಗಿಸಬೇಕಿದೆ.
ಪ್ರತಿ ಮನೆಯ ಮುಂದೆ ಕಿರು ಚರಂಡಿ ಗುಂಡಿಗಳು, ಬೆಳಗಾದರೆ ಸಾಕು ಕಲುಷಿತ ನೀರನ್ನು ಕೋರುವ ಕಾಯಕ, ಒಂದು ಲೋಟ ನೀರು ಬಳಸಲೂ ಯೋಚಿಸಬೇಕಾದ ದುಸ್ಥಿತಿ, ಚರಂಡಿ ನೀರಲ್ಲೇ ಕಂದಮ್ಮಗಳ ಆಟ, ಊಟ. ಈ ಸ್ಥಿತಿ ಕಂಡು ಬಂದಿರೋದು ಯಾವುದೋ ಕುಗ್ರಾಮವಲ್ಲ, ಅಸಲಿಗೆ ರಾಜ್ಯದಲ್ಲಿ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸ್ವಕ್ಷೇತ್ರ ಚನ್ನಪಟ್ಟಣ. ಚನ್ನಪಟ್ಟಣ ತಾಲೂಕು ಕಚೇರಿಯ ಅನತಿ ದೂರದಲ್ಲೇ ಇರುವ ಆನಂದಪುರದ 1ನೇ ಅಡ್ಡರಸ್ತೆಯ ನಿವಾಸಿಗಳ ಸ್ಥಿತಿ ಹೇಳತೀರದಾಗಿದೆ. ಹಲವು ದಶಕಗಳು ಕಳೆದರೂ ಇಲ್ಲಿನ ನಿವಾಸಿಗಳ ಬದುಕು ಶೋಚನೀಯವಾಗಿದೆ.
ಚನ್ನಪಟ್ಟಣ ನಗರಸಭಾ ವ್ಯಾಪ್ತಿಯ 29ನೇ ವಾರ್ಡ್‌ಗೆ ಸೇರುವ ಆನಂದಪುರ 1ನೇ ಅಡ್ಡರಸ್ತೆಯಲ್ಲಿ 100 ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ತಮಿಳು ಹಾಗೂ ಮುಸ್ಲಿಂ ಸಮುದಾಯ ಸೇರಿ 300ಕ್ಕೂ ಹೆಚ್ಚು ಮಂದಿ ಈ ಬಡಾವಣೆಯಲ್ಲಿದ್ದಾರೆ. ಸಣ್ಣ ಮನೆಗಳನ್ನ ಕಟ್ಟಿಕೊಂಡು ಜೀವನ ನಡೆಸುತ್ತಿರುವ ಈ ಬಡಾವಣೆಯ ನಿವಾಸಿಗಳಿಗೆ ಕನಿಷ್ಠ ಮೂಲಭೂತ ಸೌಕರ್ಯಗಳು ಮರೀಚಿಕೆಯಾಗಿವೆ. ರಸ್ತೆ, ಚರಂಡಿ ಸೇರಿ ಹಲವು ಸಮಸ್ಯೆಗಳಿವೆ. ಮನೆಯ ಕೊಳಚೆ ನೀರನ್ನು ಮನೆಯವರೇ ಎತ್ತಿ ಬಹುದೂರ ಹೋಗಿ ಸುರಿದು ಬರುವ ಅನಿವಾರ್ಯತೆಯಿದೆ. ಮನೆಮುಂದೆ ಗುಂಡಿ ನಿರ್ಮಿಸಿಕೊಂಡು ಬರಿಗೈಯಲ್ಲಿ ಮೋರಿ ನೀರನ್ನ ಬಾಚಿ ಹೊರಹಾಕುವ ಪರಿಸ್ಥಿತಿ ಇದೆ. ಒಂದು ಲೋಟ ನೀರು ಬಳಸಲು ಯೋಚಿಸುವ ಸಂದರ್ಭ ಎದುರಾಗಿದೆ.
ಇದನ್ನೂ ಓದಿ: ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಜಿಲ್ಲೆಯೆಂದು ನಾಮಕರಣಕ್ಕೆ ಚಿಂತನೆ: ಡಿಸಿಎಂ ಡಿಕೆ ಶಿವಕುಮಾರ್
3 ಈ ಹಿಂದೆ ಈ ಬಡಾವಣೆಯಲ್ಲಿ ಚರಂಡಿ ವ್ಯವಸ್ಥೆ ಇತ್ತು. ಇಲ್ಲಿನ ಮನೆಗಳ ಚರಂಡಿ ನೀರು ಪಕ್ಕದ ಖಾಸಗಿ ಜಾಗದಲ್ಲಿ ಹರಿದುಹೋಗುತ್ತಿತ್ತು. ಆದರೆ, ಕಳೆದ ಐದಾರು ವರ್ಷಗಳ ಹಿಂದೆ ಜಾಗದ ಮಾಲೀಕರು ಕಾಂಪೌಂಡ್ ಹಾಕಿಕೊಂಡ ಪರಿಣಾಮ ಈ ಬಡಾವಣೆ ನಿವಾಸಿಗಳಿಗೆ ಚರಂಡಿಯೇ ಇಲ್ಲವಾಗಿದೆ. ಪ್ರತಿ ಮನೆಯ ಎದುರು ಕಿರುಗುಂಡಿಗಳನ್ನು ನಿರ್ಮಿಸಿಕೊಳ್ಳಲಾಗಿದೆ. ಸ್ನಾನ ಮಾಡುವ, ಪಾತ್ರೆ ತೊಳೆದ, ಬಟ್ಟೆ ಒಗೆದ ನೀರು ಈ ಗುಂಡಿಯಲ್ಲಿ ಶೇಖರಣೆಯಾಗುತ್ತದೆ. ಇದನ್ನು ಪ್ರತಿನಿತ್ಯ ಬಕೆಟ್‌ನಲ್ಲಿ ತುಂಬಿಕೊಂಡು ಪಕ್ಕದ ರಸ್ತೆಯಲ್ಲಿರುವ ಚರಂಡಿಗೆ ಸುರಿಯುತ್ತಿದ್ದಾರೆ. ಇನ್ನು ಕೆಲವೆಡೆ ರಸ್ತೆಯೇ ಬಯಲು ಚರಂಡಿಯಾಗಿದೆ. ಈ ಪ್ರದೇಶದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು, ಅನಾರೋಗ್ಯದ ಆತಂಹ ಹೆಚ್ಚಾಗಿದೆ. ಇನ್ನೂ ಈ ಕ್ಷೇತ್ರವನ್ನ ಪ್ರತಿನಿಧಿಸುತ್ತಿರುವ ಎಚ್.ಡಿ.ಕುಮಾರಸ್ವಾಮಿ ಹಾಗೂ ನಗರಸಭೆ ಅಧ್ಯಕ್ಷರು ಮತ್ತು ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗದೇ ಇರೋದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಒಟ್ಟಾರೆ ಹೀನಾಯ ಸ್ಥಿತಿಯಲ್ಲಿ ಬದುಕುತ್ತಿರುವ ಈ ಆನಂದಪುರ ಬಡಾವಣೆಯ ಜನ, ರಾಜಕೀಯ ಗುದ್ದಾಟ ಏನಾದ್ರೂ ಇರಲಿ ಮೊದಲು ಮೂಲಭೂತ ಅವಶ್ಯಕ ಕೆಲಸ ಮಾಡುವಂತೆ ಕೋರಿದ್ದಾರೆ. ತಾವೂ ಜಳಕ ಮಾಡಿ ಶೌಚ ಮಾಡಿದ ನೀರು ಬೇರೆಡೆಗೆ ಹರಿದು ಹೋಗಲು ವ್ಯವಸ್ಥೆ ಇಲ್ಲದೇ ಬದುಕು ದುಸ್ತವಾಗಿದ್ದು ಕೂಡಲೆ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಡಬೇಕು ಅಂತ ಮನವಿ ಮಾಡಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 4:20 pm, Thu, 26 October 23