ರಾಮನಗರ: ತಂದೆ ಜತೆ ಕಬ್ಬಿನ ಗದ್ದೆಗೆ ತೆರಳಿದ್ದ ಬಾಲಕನ ಮೇಲೆ ಚಿರತೆ ದಾಳಿ (Leopard Attacks) ಮಾಡಿರುವಂತಹ ಘಟನೆ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಬೋರೇಗೌಡನದೊಡ್ಡಿ ಬಳಿ ನಡೆದಿದೆ. ಗೌತಮ್(14) ಚಿರತೆ ದಾಳಿಗೊಳದಾಗ ಬಾಲಕ. ತಂದೆಯೊಂದಿಗೆ ಕಬ್ಬಿನ ಗದ್ದೆಗೆ ತೆರಳಿದ್ದ ವೇಳೆ ಬಾಲಕ ಮೇಲೆ ಚಿರತೆ ಏಕಾಏಕಿ ದಾಳಿ ನಡೆಸಿದೆ. ಬಾಲಕನ ಚೀರಾಟ ಕೇಳಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುತ್ತಿದ್ದಂತೆ ಬಾಲಕನನ್ನು ಬಿಟ್ಟು ಚಿರತೆ ಪರಾರಿಯಾಗಿದೆ. ದಾಳಿಯಲ್ಲಿ ಗೌತಮ್ ಕುತ್ತಿಗೆ ಮತ್ತು ತಲೆಗೆ ಗಂಭೀರ ಗಾಯವಾಗಿದ್ದು, ಮದ್ದೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಚಿರತೆ ದಾಳಿಯಿಂದ ತಪ್ಪಿಸಿಕೊಳ್ಳಲು ಕುರಿ ಕಾಯುತ್ತಿದ್ದ ಯುವತಿ ಮರವೇರಿರುವಂತಹ ಘಟನೆ ಕೂಡ ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದಿತ್ತು. ಗಡಿಬಿಡಿಯಲ್ಲಿ ಮರ ಏರುವಾಗ ಕೆಳಗೆಬಿದ್ದು ಯುವತಿಗೆ ಗಾಯವಾಗಿದ್ದು ಸ್ಥಿತಿ ಗಂಭೀರವಾಗಿತ್ತು. ಮರಳುದೇವನಪುರ ಗ್ರಾಮದ ವಿಜಯಲಕ್ಷ್ಮೀ ಚಿರತೆಯಿಂದ ಪಾರಾದ ಯುವತಿ. ಗಾಯಾಳು ವಿಜಯಲಕ್ಷ್ಮೀಯನ್ನು ಮಾಗಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಚಿರತೆ ಸೆರೆ ಹಿಡಿದು ಸ್ಥಳಾಂತರಿಸುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಗೊಂಗಡಿಪುರ ಗ್ರಾಮಕ್ಕೆ ನುಗ್ಗಿ ನಾಯಿ ಕೊಂದು ತಿಂದ ಚಿರತೆ, ಗ್ರಾಮಸ್ಥರಲ್ಲಿ ಆತಂಕ
ಮೈಸೂರು: ಹೊಲದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನ ಮೇಲೆ ಹುಲಿ ದಾಳಿ ಮಾಡಿರುವಂತಹ ಘಟನೆ ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಮೇಟಿಕುಪ್ಪೆ ಬಳಿ ನಡೆದಿದೆ. ಮುನೇಶ್ವರ(27) ಗಾಯಗೊಂಡ ಕಾರ್ಮಿಕ. ಜಮೀನಿನಲ್ಲಿ ಕೂಲಿ ಕೆಲಸಕ್ಕೆ ಮೂವರು ಕಾರ್ಮಿಕರು ಬಂದಿದ್ದು, ಬಾಳೆಗೊನೆ ಕತ್ತರಿಸುವಾಗ ಪೊದೆಯಲ್ಲಿದ್ದ ಹುಲಿ ಸಡನ್ ಆಗಿ ದಾಳಿ ಮಾಡಿದೆ. ಗಾಬರಿಯಿಂದ ಕೂಲಿ ಕಾರ್ಮಿಕರು ಕೂಗಾಡುತ್ತಿದ್ದಂತೆ ಹುಲಿ ಓಡಿ ಹೋಗಿದೆ. ಈ ವೇಳೆ ಮುನೇಶ್ವರ ಬಲಗೈ ಬೆರಳಿಗೆ ಗಾಯವಾಗಿದ್ದು, ಹೆಚ್.ಡಿ.ಕೋಟೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೆಚ್. ಡಿ. ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Mandya News: ಮಂಡ್ಯದಲ್ಲಿ ಮುಂದುವರೆದ ಚಿರತೆ ದಾಳಿ, ಚಿರತೆ ಬಾಯಿಗೆ ತುತ್ತಾದ ಹಸು, ಮಾಲೀಕನ ಗೋಳಾಟ
ಟಿ.ನರಸೀಪುರ ತಾಲೂಕಿನಲ್ಲಿ ಇಟ್ಟ ಬೋನುಗಳಿಗೂ ಬೀಳದೆ, ಯಾರ ಕಣ್ಣಿಗೂ ಬೀಳದೆ ಅರಣ್ಯ ಇಲಾಖೆ ಸಿಬ್ಬಂದಿಗೆ ಸವಾಲಾಗಿ ನಿಂತಿರುವ ಚಿರತೆಯು ಇದೀಗ ಮತ್ತೊಮ್ಮೆ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿದೆ. ಚಿರತೆ ಸೆರೆಗೆ ಕಾರ್ಯಾಚರಣೆ ಆರಂಭವಾದ ನಂತರ ಸಾಕು ಪ್ರಾಣಿಗಳ ಮೇಲಿನ ಎರಡನೇ ದಾಳಿ ಇದಾಗಿದೆ. ಟಿ.ನರಸೀಪುರ ತಾಲೂಕಿನ ಯಾಚೇನಹಳ್ಳಿ ಗ್ರಾಮದಲ್ಲಿ ಮೇಯುತ್ತಿದ್ದ ಮೇಕೆಯ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿದೆ. ರೈತ ಮಹಿಳೆ ಸೌಭಾಗ್ಯ ಅವರು ಮೇಕೆಗಳನ್ನ ಮೇಯಿಸುವಾಗ ಈ ಘಟನೆ ನಡೆದಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಿರತೆ ಸೆರೆಗೆ ಕಾರ್ಯಾಚರಣೆ ಮುಂದುವರಿದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.