ರಾಮನಗರ, ಸೆಪ್ಟೆಂಬರ್ 25: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೈವೇನಲ್ಲಿ (Bengaluru-Mysuru Expressway) ಸರಣಿ ಅಪಘಾತ ಸಂಭವಿಸಿದ್ದು, ಮೂವರು ಮೃತಪಟ್ಟಿದ್ದಾರೆ. ಮಳೆಯಿಂದ ನಿಯಂತ್ರಣ ತಪ್ಪಿ ಡಿವೈಡರ್ ದಾಟಿದ್ದ ಫಾರ್ಚೂನರ್ ಕಾರು, ಎದುರಿಗೆ ಬರುತ್ತಿದ್ದ ಕಾರುಗಳಿಗೆ ಡಿಕ್ಕಿ ಹೊಡೆದ ರಭಸಕ್ಕೆ ಮೂವರ ಸ್ಥಿತಿ ಗಂಭೀರವಾಗಿತ್ತು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಇಬ್ಬರು, ಆಸ್ಪತ್ರೆಯಲ್ಲಿ ಓರ್ವ ಸಾವನ್ನಪ್ಪಿದ್ದಾರೆ. ಮೃತರ ಮಾಹಿತಿಯನ್ನು ಚನ್ನಪಟ್ಟಣ ಸಂಚಾರಿ ಠಾಣೆ ಪೊಲೀಸರು ಸಂಗ್ರಹಿಸುತ್ತಿದ್ದಾರೆ.
ಚಿಕ್ಕಬಳ್ಳಾಪುರ: ಜಮೀನು ವಿವಾದ ಹಿನ್ನೆಲೆ ಅಣ್ಣನನ್ನೇ ಚಾಕುವಿನಿಂದ ಇರಿದು ತಮ್ಮ ಕೊಲೆ ಮಾಡಿರುವಂತಹ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಚಿಕ್ಕದಾಸರಹಳ್ಳಿ ಗ್ರಾಮದಲ್ಲಿ ನಡೆದಿದೆ. ಮುನಿಯಪ್ಪ (50) ಕೊಲೆಯಾದ ವ್ಯಕ್ತಿ. ಬ್ಯಾಟರಾಯಪ್ಪ (48) ಕೊಲೆ ಆರೋಪಿ.
ಇದನ್ನೂ ಓದಿ: ರಾಯಚೂರು: ಅಡ್ಡಬಂದ ಕುದುರೆಗೆ ಬೈಕ್ ಡಿಕ್ಕಿ, ಸ್ಥಳದಲ್ಲೇ ಗಾಯಕ ಮೃತ್ಯು
ಹಲವು ದಿನಗಳಿಂದ ಜಮೀನು ವಿವಾದ ವಿಚಾರವಾಗಿ ಅಣ್ಣ ತಮ್ಮಂದಿರು ಗಲಾಟೆ ಮಾಡಿಕೊಂಡಿದ್ದರು. ಗಲಾಟೆ ವಿಕೋಪಕ್ಕೆ ತಿರುಗಿ ಅಣ್ಣನ ಕೊಲೆಯಲ್ಲಿ ಅಂತ್ಯವಾಗಿದೆ. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಮೈಸೂರು: ಕಾರು, ಆಟೋ ನಡುವೆ ಅಪಘಾತ ಸಂಭವಿಸಿದ್ದು ಆಟೋ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹುಣಸೂರು ನಗರದ ಬೈಪಾಸ್‌ನಲ್ಲಿ ಘಟನೆ ನಡೆದಿದೆ. ಘಟನೆಯಲ್ಲಿ ನಗರದ ಕಲ್ಕುಣಿಕೆ ನಿವಾಸಿ ಶ್ರೀನಿವಾಸ್(55) ಮೃತರು. ಆಟೋದಲ್ಲಿದ್ದ ಮಂಗಳಮುಖಿಯರಾದ ಲಕ್ಷ್ಮಿ ಹಾಗೂ ಎಂಜೆಲ್‌ಗೆ ಗಾಯಗಳಾಗಿವೆ. ಗಾಯಾಳುಗಳನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಇದನ್ನೂ ಓದಿ: ಬಿಬಿಎಂಪಿ ಕಸದ ಲಾರಿಗೆ ವ್ಯಕ್ತಿ ಬಲಿ; ರಸ್ತೆಯಲ್ಲಿ ವಾಹನ ಪಾರ್ಕಿಂಗ್ ಮಾಡುವಾಗ ಇರಲಿ ಎಚ್ಚರ!
ಹುಣಸೂರು ತಹಶೀಲ್ದಾರ್ ಕಚೇರಿ ಕಡೆಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದ್ದು ಕಾರು ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಸನ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದ್ದು, ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂವರಿಗೆ ಗಂಭೀರ ಗಾಯಗಳಾಗಿರುವಂತಹ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಶೆಟ್ಟಿಹಳ್ಳಿ ಗ್ರಾಮದ ಸಮೀಪ ನಡೆದಿದೆ. ಬೆಂಗಳೂರು ಮೂಲದ ಧೀರಜ್ (18) ಮೃತ ಯುವಕ.
ಕಾರಿನಲ್ಲಿದ್ದ ಜಗದೀಶ್, ನಳಿನಾಕ್ಷಿ, ದುಷ್ಯಂತ್‌ಗೆ ಗಂಭೀರ ಗಾಯಗಳಾಗಿದ್ದು, ಬೆಂಗಳೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:52 pm, Mon, 25 September 23