ರಾಮನಗರ: ಕಾರು ತಡೆದು ನಿಲ್ಲಿಸಿ ಹಣ, ಚಿನ್ನದ ಸರ ಲೂಟಿ ಮಾಡಿದ ಘಟನೆ ಬೆಂಗಳೂರು- ಮೈಸೂರು ಹೆದ್ದಾರಿಯ(Bangalore Mysore Expressway) ಚೆನ್ನಪಟ್ಟಣ ಸಮೀಪದ ಕನ್ನಮಂಗಲ ಬ್ರಿಡ್ಜ್ ಬಳಿ ನಡೆದಿದೆ. ಮೈಸೂರಿನಿಂದ ಬೆಂಗಳೂರಿಗೆ ಧನುಷ್ ಎಂಬುವವರು ಸಂಬಂಧಿಕರ ಅಂತ್ಯಕ್ರಿಯೆಗೆ ತೆರಳುತ್ತಿದ್ದರು. ಈ ವೇಳೆ ಕನ್ನಮಂಗಲ ಬ್ರಿಡ್ಜ್ ಬಳಿ ಎರಡು ಬೈಕ್ಗಳಲ್ಲಿ ಹಿಂದಿನಿಂದ ಬಂದ ನಾಲ್ಕು ಅಪರಿಚಿತರು ಕಾರು ತಡೆದು ನಿಲ್ಲಿಸಿ, ಚಾಕು ತೋರಿಸಿ ಹಲ್ಲೆ ಮಾಡಿ ಬರೊಬ್ಬರಿ ಒಂದೂವರೆ ಲಕ್ಷ ಮೌಲ್ಯದ ಚಿನ್ನದ ಸರ, ಹಣ ದರೋಡೆ ಮಾಡಿದ್ದಾರೆ.
ಹೌದು ಇದೇ ತಿಂಗಳ ಜುಲೈ 7 ರ ರಾತ್ರಿ 8 ಗಂಟೆಗೆ ನಡೆದಿರುವ ಘಟನೆ ಇದಾಗಿದ್ದು, ನಾವು ಪೊಲೀಸರು ತಪಾಸಣೆ ಮಾಡ್ಬೇಕು ಎಂದು ಅವಾಜ್ ಹಾಕಿ ಧನುಷ್ ಮುಖಕ್ಕೆ ಗುದ್ದಿ, ಹಣ ನೀಡುವಂತೆ ಬೆದರಿಕೆ ಹಾಕಿದ್ದಾರೆ. ಈ ವೇಳೆ ಕೊರಳಲಿದ್ದ 28 ಗ್ರಾಂ ಚಿನ್ನದ ಸರ, ಹಣವನ್ನ ಎಗರಿಸಿ ಎಸ್ಕೇಪ್ ಆಗಿದ್ದಾರೆ. ಘಟನೆ ಬಳಿಕ ದಿಕ್ಕು ತೋಚದೆ ಸುಮ್ಮನಿದ್ದ ಧನುಷ್, ಬಳಿಕ ಕುಟುಂಬದವರ ಜತೆ ಚರ್ಚಿಸಿ ರಾಮನಗರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಮಂಗಳೂರು: ತಾಲೂಕಿನ ಹೊಸಬೆಟ್ಟು ಜಂಕ್ಷನ್ ಬಳಿಯಿರುವ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಳಿಗೆಯಲ್ಲಿ ಕಳ್ಳರು ಕೈ ಚಳಕ ತೋರಿಸಿದ್ದಾರೆ. ಅಬಿದ್ ಅಹಮ್ಮದ್ ಸುರಲ್ಪಾಡಿ ಎಂಬವರಿಗೆ ಸೇರಿದ್ದ ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಕಚೇರಿ ಇದಾಗಿದ್ದು, ತಡರಾತ್ರಿ ಕಚೇರಿಗೆ ಎಂಟ್ರಿ ಕೊಟ್ಟಿದ್ದ ಖದೀಮರ ತಂಡ, ಮುಂಭಾಗದ ಡೋರಿನ ಗ್ಲಾಸ್ ಮುರಿದು ಒಳ ನುಗ್ಗಿದ್ದಾರೆ. ಕಚೇರಿ ಪೂರ್ತಿ ತಡಕಾಡಿ ಡ್ರಾವರ್ನಲ್ಲಿದ್ದ ಕಾರುಗಳ ಕೀಯನ್ನು ಪಡೆದಿದ್ದ ತಂಡ, ಕೀ ಬಳಸಿ ಕಚೇರಿ ಮುಂಭಾಗ ಮಾರಾಟಕ್ಕೆ ನಿಲ್ಲಿಸಿದ್ದ ಎರಡು ಕಾರು ಕಳ್ಳತನ ಮಾಡಿದ್ದಾರೆ.
ಖದೀಮರು ಕಚೇರಿಯ ಸುಮಾರು 15 ಲಕ್ಷ ಮೌಲ್ಯದ ಲ್ಯಾಪ್ ಟಾಪ್, ಪ್ರಿಂಟರ್, ಮೊಬೈಲ್, ಕಾರುಗಳ ದಾಖಲಾತಿ ಪತ್ರಗಳ ಸೇರಿದಂತೆ 6 ಲಕ್ಷ ಮೌಲ್ಯದ ಸ್ವಿಫ್ಟ್ ಕಾರು, 9 ಲಕ್ಷ ಮೌಲ್ಯದ ಕ್ರೇಟಾ ಕಾರನ್ನು ಕಳ್ಳತನ ಮಾಡಿದ್ದಾರೆ. ಖದೀಮರ ಕಳ್ಳತನದ ಕೃತ್ಯ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಹೆಲ್ಮೆಟ್ ಹಾಗೂ ರೈನ್ ಜಾಕೆಟ್ ಹಾಕಿ ಒಳಪ್ರವೇಶಿಸಿದ್ದಾರೆ. ಈ ವೇಳೆ ಗ್ಲಾಸ್ ಒಡೆಯುವ ಹಾಗೂ ಕಾರು ಎಸ್ಕೇಪ್ ಮಾಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:18 am, Thu, 13 July 23