ರಾಮನಗರ: ಮನೆಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರ ಮೃತ ದೇಹಗಳು ಪತ್ತೆಯಾಗಿರುವ ಘಟನೆ ರಾಮನಗರ ಜಿಲ್ಲೆ ಮಾಗಡಿ ಪಟ್ಟಣದ ತಿರುಮಲೆ ದೇವಾಂಗ ಬೀದಿಯಲ್ಲಿ ನಡೆದಿದೆ. ನರಸಿಂಹ ಮೂರ್ತಿ ರಾವ್(35) ಹಾಗೂ ಹೇಮಾ(35) ಮೃತ ದುರ್ದೈವಿಗಳು. ಇವರಿಬ್ಬರು ಬೇರೆ ಬೇರೆ ಮದುವೆಯಾಗಿದ್ದರು, ಆದರೆ ಒಟ್ಟಿಗೆ ಒಂದೇ ಮನೆಯಲ್ಲಿ ವಾಸವಾಗಿದ್ದರು. ಅಕ್ಕಪಕ್ಕದ ಮನೆಯವರೆಲ್ಲ ಇವರಿಬ್ಬರನ್ನು ಗಂಡ ಹೆಂಡತಿಯೆಂದೇ ತಿಳಿದುಕೊಂಡಿದ್ದರು. ಇವರಿಬ್ಬರು ಕೂಡ ಅಷ್ಟೇ ಅನ್ಯೋನ್ಯವಾಗಿದ್ದರು. ಆದರೆ ಅವರಿಬ್ಬರ ನಡುವೆ, ಕಳೆದ ಕೆಲ ತಿಂಗಳಿಂದ ಗಲಾಟೆ ನಡೆಯುತ್ತಿತ್ತು. ಹೀಗಾಗಿ ನಿನ್ನೆ ಇಬ್ಬರು ಒಂದೇ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಇದೀಗ ಸಾವಿನ ಸುತ್ತ, ಅನೇಕ ಅನುಮಾನಗಳು ಹುಟ್ಟಿಕೊಂಡಿದೆ.
ನರಸಿಂಹ ಮೂರ್ತಿ ಹಾಗೂ ಹೇಮಾ ಕಳೆದ ಎರಡು ವರ್ಷದಿಂದ ಇದೇ ಮನೆಯಲ್ಲಿ ವಾಸವಾಗಿದ್ದರು. ನರಸಿಂಹ ಮೂರ್ತಿ ಗಾರೆ ಕೆಲಸದ ಜೊತೆಗೆ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಇದ್ದ. ಹೇಮಾ ಯಾವುದೇ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದಳು. ಆದರೆ ಇಬ್ಬರ ನಡುವೆ ಕಳೆದ ನಾಲ್ಕು ತಿಂಗಳಿಂದ ಸಾಕಷ್ಟು ಗಲಾಟೆ ನಡೆಯುತ್ತಿತ್ತಂತೆ. ಇವತ್ತು ಸಹಾ ಇಬ್ಬರ ನಡುವೆ ಬೆಳಗ್ಗೇಯೆ ಗಲಾಟೆ ನಡೆದಿದೆ. ಹೀಗಾಗಿ ಹೇಮಾಳನ್ನು ನರಸಿಂಹ ಮೂರ್ತಿ ನೇಣು ಹಾಕಿ, ಆನಂತರ ತಾನು ನೇಣಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಬೆಳಗ್ಗೆ ಸ್ಥಳೀಯರು ನೋಡಿ, ಮಾಗಡಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಮನೆ ಮಾಲಕಿ ರೇಣುಕಾ ತಿಳಿಸಿದ್ದಾರೆ.
ನೇಣು ಬಿಗಿದುಕೊಂಡಿರೋ ನರಸಿಂಹಮೂರ್ತಿಗೆ ಈಗಾಗಲೇ ಮದುವೆಯಾಗಿ ಒಂಬತ್ತು ವರ್ಷದ ಮಗು ಸಹ ಇದೆ. ಅಲ್ಲದೆ ಮೃತ ಹೇಮಾ ಸಹ ಈಗಾಗಲೇ ಏಳು ವರ್ಷದ ಹಿಂದೆ ವಿವಾಹವಾಗಿ ಎರಡು ವರ್ಷಗಳ ಕಾಲ ಗಂಡನ ಜೊತೆ ಸಂಸಾರ ಮಾಡಿ, ಗಂಡನನ್ನು ಬಿಟ್ಟು ತುಮಕೂರಿನಿಂದ ಮಾಗಡಿಗೆ ಬಂದು ನೆಲೆಸಿದ್ದಳು. ಈ ವೇಳೆ ನರಸಿಂಹಮೂರ್ತಿ ಪರಿಚಯವಾಗಿ ಇಬ್ಬರು ಸಹ ಕಳೆದ ಐದು ವರ್ಷದಿಂದ ಮದುವೆಯಾಗದೇ ಜೊತೆಗೆ ಸಂಸಾರ ಮಾಡಿಕೊಂಡು ಹೋಗುತ್ತಿದ್ದರು. ಹೀಗೆ ಎರಡು ವರ್ಷದ ಕೆಳಗೆ ಮಾಗಡಿ ಪಟ್ಟಣದ ತಿರುಮಲೆ ನಗರದಲ್ಲಿ ಬಾಡಿಗೆ ಮನೆ ಪಡೆದು ವಾಸವಾಗಿದ್ದರು. ಇಬ್ಬರನ್ನು ಗಂಡ ಹೆಂಡತಿ ಎಂದು ಅಕ್ಕಪಕ್ಕದ ಮನೆಯವರು ಅಂದುಕೊಂಡಿದ್ದರು.
ಇಂದು ಇಬ್ಬರು ಬಾಡಿಗೆ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾರೆ. ಈ ಸಂಬಂಧ ಮಾಗಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಮೃತ ಇಬ್ಬರು ಮಾಗಡಿ ಪಟ್ಟಣದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹಗಳು ಪತ್ತೆಯಾಗಿವೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗಾಗಿ ರಾಜರಾಜೇಶ್ವರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಮಾಗಡಿ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದು ರಾಮನಗರ ಎಸ್ಪಿ ಗಿರೀಶ್. ಎಸ್ ಮಾಹಿತಿ ನೀಡಿದ್ದಾರೆ.
ವರದಿ: ಪ್ರಶಾಂತ್ ಹುಲಿಕೆರೆ
ಇದನ್ನೂ ಓದಿ:
ಒಂದೇ ಕುಟುಂಬದ 5 ಮಂದಿ ಆತ್ಮಹತ್ಯೆ ಪ್ರಕರಣ: ಪೊಲೀಸರಿಗೆ ಸಿಕ್ಕಿದ್ದು ಒಟ್ಟು 27 ಪುಟಗಳ ಡೆತ್ ನೋಟ್!