ರಾಮನಗರ, ಜನವರಿ 13: ಉದ್ಯೋಗಿಗಳು ವಾರಕ್ಕೆ 90 ಗಂಟೆ ಕೆಲಸ ಮಾಡಬೇಕು ಎಂದು ಹೇಳಿದ ಎಲ್ ಅಂಡ್ ಟಿ ಛೇರ್ಮನ್ ಎಸ್ ಎನ್ ಸುಬ್ರಹ್ಮಣಿಯನ್ ಅವರ ಹೇಳಿಕೆಯನ್ನು ವಾಟಾಳ್ ನಾಗರಾಜ್ ಖಂಡಿಸಿದ್ದಾರೆ. ರಾಮನಗರದ ಐಜೂರು ಸರ್ಕಲ್ ಬಳಿ ವಾಟಾಳ್ ಅವರು ಪ್ರತಿಭಟನೆ ನಡೆಸಿ ಸುಬ್ರಮಣಿಯನ್ ಅವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಎಲ್ ಅಂಡ್ ಟಿ ಮುಖ್ಯಸ್ಥರನ್ನು ಮಾತ್ರವಲ್ಲ, ಇನ್ಫೋಸಿಸ್ನ ಸಹ-ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರ ವಿರುದ್ಧವೂ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉದ್ಯಮಿಗಳು ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ನೌಕರರ ಬೆನ್ನು ಮೂಳೆ ಮುರಿಯುತ್ತಿದ್ದಾರೆ. ಉದ್ಯೋಗಿಗಳ ಆರೋಗ್ಯ ಹಾಳು ಮಾಡ ಹೊರಟಿದ್ದಾರೆ ಎಂದು ಕನ್ನಡಪರ ಚಳವಳಿಗಾರರಾದ ವಾಟಾಳ್ ನಾಗರಾಜ್ ಆರೋಪಿಸಿದ್ದಾರೆ.
ಎಲ್ ಅಂಡ್ ಟಿ ಮುಖ್ಯಸ್ಥ ಸುಬ್ರಹ್ಮಣಿಯನ್ ಅವರು ಹೆಂಡತಿಯ ಮುಖ ನೋಡಿ ಕೂರಬೇಡಿ ಎಂದು ನಿಕೃಷ್ಟವಾಗಿ ಮಾತನಾಡಿದ್ದಾರೆ. ಗಂಡ ಹೆಂಡತಿಯ ದಾಂಪತ್ಯ ಜೀವನಕ್ಕೆ ಅಗೌರವ ತೋರಿದ್ದಾರೆ. ಇನ್ಫೋಸಿಸ್ ನಾರಾಯಣ ಮೂರ್ತಿ ಕೂಡ ವಾರಕ್ಕೆ 70 ಗಂಟೆ ಕೆಲಸ ಮಾಡುವಂತೆ ಹೇಳುತ್ತಾರೆ. ಇವು ನೌಕರರನ್ನು ಜೀತದಾಳುಗಳನ್ನಾಗಿ ಮಾಡುವ ಹುನ್ನಾರವಾಗಿದೆ. ಸುಬ್ರಮಣಿಯನ್ ಮತ್ತು ನಾರಾಯಣಮೂರ್ತಿ ಅವರು ದೇಶದ ಪ್ರಜೆಗಳ ಕ್ಷಮೆಕೇಳಬೇಕು. ನೌಕರರಿಂದ ಹೆಚ್ಚಿಗೆ ಕೆಲಸ ಮಾಡುವ ಆಲೋಚನೆ ಕೈಬಿಡಬೇಕು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಕೆಲವೇ ದಿನಗಳಲ್ಲಿ ಬ್ರೋಕರ್ಗಳು ನಿಮ್ಮ ಮನೆಗೆ ಬರ್ತಾರೆ, ಆಸ್ತಿ ಮಾರಿಕೊಳ್ಳಬೇಡಿ: ಡಿಕೆ ಶಿವಕುಮಾರ್
ಎಲ್ ಅಂಡ್ ಟಿ ಛೇರ್ಮನ್ ಎಸ್ ಎನ್ ಸುಬ್ರಹ್ಮಣ್ಯನ್ ಅವರು ಉದ್ಯೋಗಿಗಳು 90 ಗಂಟೆ ಕೆಲಸ ಮಾಡಬೇಕು. ಶನಿವಾರ ಮಾತ್ರವಲ್ಲ, ಭಾನುವಾರವೂ ಕೆಲಸ ಮಾಡಬೇಕು ಎಂದು ವಾದಿಸಿದ್ದರು. ವಾರಕ್ಕೆ ಎರಡು ದಿನ ವೀಕಾಫ್ ವಿಚಾರ ಕುರಿತು ಉದ್ಯೋಗಿಗಳೊಂದಿಗೆ ಮಾತನಾಡುತ್ತಾ ಅವರು ಈ ವಿಚಾರ ಹೇಳಿದ್ದಾರೆ.
‘ನೀವು ಮನೆಯಲ್ಲಿ ಕೂತು ಏನು ಮಾಡುತ್ತೀರಿ? ನಿಮ್ಮ ಹೆಂಡತಿಯನ್ನು ಎಷ್ಟು ಹೊತ್ತು ನೋಡಿಕೊಂಡು ಇರುತ್ತೀರಿ? ಹೆಂಡತಿಯರು ತಮ್ಮ ಗಂಡಂದಿರ ಮುಖವನ್ನು ಎಷ್ಟು ಹೊತ್ತು ನೋಡಿಕೊಂಡು ಇರುತ್ತಾರೆ? ಆಫೀಸ್ಗೆ ಬಂದು ಕೆಲಸ ಮಾಡಿ’ ಎಂದ ಅವರು, ಉದ್ಯೋಗಿಗಳಿಗೆ ಭಾನುವಾರ ಕೆಲಸ ಮಾಡುವುದನ್ನು ಕಡ್ಡಾಯ ಮಾಡಲಾಗದೇ ಇರುವುದಕ್ಕೆ ತನಗೆ ವಿಷಾದ ಇದೆ ಎಂದೂ ಹೇಳಿ ತಮ್ಮ ಕೋಪವನ್ನು ಹೊರಹಾಕಿದ್ದಾರೆ.
ಇದನ್ನೂ ಓದಿ: ಸಾಲ ಕೊಡಿಸುವುದಾಗಿ ಮಹಿಳೆಯನ್ನ ಲಾಡ್ಜ್ಗೆ ಕರೆದೊಯ್ದ, ಬಿಜೆಪಿ ಮುಖಂಡ ಅರೆಸ್ಟ್
ಇನ್ಫೋಸಿಸ್ ನಾರಾಯಣ ಮೂರ್ತಿ ಅವರು ಕೆಲ ತಿಂಗಳ ಹಿಂದೆ, ಇವತ್ತಿನ ಯುವಕರು ದೇಶದ ಅಭ್ಯುದಯಕ್ಕಾಗಿ ಹೆಚ್ಚು ಅವಧಿ ಕೆಲಸ ಮಾಡಬೇಕು. ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದರು. ನಾರಾಯಣಮೂರ್ತಿ ಅವರ ಹೇಳಿಕೆಗೆ ಪರವಿರೋಧ ಅಭಿಪ್ರಾಯಗಳು ಮತ್ತು ಚರ್ಚೆಗಳು ನಡೆಯುತ್ತಲೇ ಇವೆ. ಆದರೆ, ಎಲ್ ಅಂಡ್ ಟಿ ಮುಖ್ಯಸ್ಥರ ಹೇಳಿಕೆಗೆ ಬಹುತೇಕ ವಿರೋಧವೇ ವ್ಯಕ್ತವಾಗಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ