ಬೆಳಗಾವಿ: ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸುವಲ್ಲಿ ದೊಡ್ಡ ಪಾತ್ರ ವಹಿಸಿದ್ದೇ ಸಾಹುಕಾರ್ ರಮೇಶ್ ಜಾರಕಿಹೊಳಿ. ಇನ್ನು ಲಕ್ಷ್ಮೀ ಹೆಬ್ಬಾಳ್ಕರ್ ಮೇಲಿನ ದ್ವೇಷಕ್ಕೆ ಈ ರೀತಿ ಸರ್ಕಾರವನ್ನ ಬೀಳಿಸಿ ಆಪರೇಷನ್ ಕಮಲದ ಮೂಲಕ ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿರುವ ರಮೇಶ್ ಇದೀಗ ಪವರ್ ಪುಲ್ ಸಚಿವ ಕೂಡ ಹೌದು. ರಾಜ್ಯ ರಾಜಕಾರಣದಲ್ಲಿ ತನ್ನದೆ ಛಾಪು ಮೂಡಿಸುತ್ತಿರುವ ರಮೇಶ್ ತಾವು ಅಂದುಕೊಂಡಿದ್ದನ್ನು ಕೊಟ್ಟ ಮಾತನ್ನ ಈಡೇರಿಸುವವರೆಗೂ ಬಿಡುವುದಿಲ್ಲ ಎನ್ನುವುದು ಗೊತ್ತಿರುವ ವಿಚಾರ. ಇನ್ನು ಬಿಜೆಪಿ ಸೇರ್ಪಡೆಯಾಗಿ ಉಪ ಚುನಾವಣೆಯಲ್ಲಿ ಗೆದ್ದು ಬಂದ ದಿನವೇ ಸಾಹುಕಾರ್ ಅದೊಂದು ಶಪಥ ಮಾಡಿ ಬಿಟ್ಟಿದ್ದರು. ಇದೀಗ ಆ ಶಪಥವನ್ನು ನನಸಾಗಿಸುವ ನಿಟ್ಟಿನಲ್ಲಿ ಸಾಹುಕಾರ್ ಕಾರ್ಯಪ್ರವೃತ್ತರಾಗಿದ್ದಾರೆ.
ಕುಂದಾರಾಣಿ ಲಕ್ಷ್ಮೀ ಹೆಬ್ಬಾಳ್ಕರ್ ಸೋಲಿಸುವುದಾಗಿ ಸಾಹುಕಾರ್ ಶಪಥ!
ಹೌದು 2019ರಲ್ಲಿ ನಡೆದಿದ್ದ ಉಪಚುನಾವಣೆಯಲ್ಲಿ ಗೋಕಾಕ್ ಕ್ಷೇತ್ರದಿಂದ ರಮೇಶ್ ಜಾರಕಿಹೊಳಿ ಮರು ಆಯ್ಕೆಯಾಗಿ ಬರುತ್ತಾರೆ. ಹೀಗೆ ಗೆದ್ದ ದಿನವೇ ರಮೇಶ್ ಜಾರಕಿಹೊಳಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ಗೆ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಸೋಲಿಸುವುದಾಗಿ ಶಪಥ ಮಾಡಿದ್ದರು. ಹೀಗೆ ಶಪಥ ಮಾಡಿದ ದಿನದಿಂದ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸುಮ್ಮನೆ ಕುಳಿತಿಲ್ಲ ಅಂದಿನಿಂದ ಇಂದಿನ ವರೆಗೂ ಗ್ರಾಮೀಣ ಕ್ಷೇತ್ರದಲ್ಲಿ ತಮ್ಮದೇ ಆದ ರಾಜಕೀಯ ಲೆಕ್ಕಾಚಾರ ಹಾಕುತ್ತಾ ದಿನಕ್ಕೊಂದು ದಾಳ ಉರುಳಿಸುತ್ತಾ ಬಿಜೆಪಿ ಪಕ್ಷವನ್ನು ಬಲಿಷ್ಠಗೊಳಿಸುತ್ತಿದ್ದಾರೆ.
ಗ್ರಾಮೀಣ ಕ್ಷೇತ್ರದಲ್ಲಿ ಆಪರೇಷನ್ ಕಮಲ:
ಇನ್ನು ರಾಜ್ಯದಲ್ಲಿ ಯಾವ ರೀತಿ ಆಪರೇಷನ್ ಕಮಲ ಮಾಡಿ ರಮೇಶ್ ಜಾರಕಿಹೊಳಿ ಸಮ್ಮಿಶ್ರ ಸರ್ಕಾರ ಪತನೊಳಿಸಿದರೋ ಅದೇ ಮಾದರಿಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಆಪರೇಷನ್ ಕಮಲ ಆರಂಭವಾಗಿದೆ. ಬೆಳಗಾವಿ ತಾಲೂಕಿನ ಸಾಂಬ್ರಾ ಜಿಲ್ಲಾ ಪಂಚಾಯಿತಿ ಕಾಂಗ್ರೆಸ್ ಸದಸ್ಯ ಕೃಷ್ಣಾ ಅನಗೋಳ್ಕರ್ ಸೇರಿದಂತೆ 500ಕ್ಕೂ ಅಧಿಕ ಕಾಂಗ್ರೆಸ್ ಕಾರ್ಯಕರ್ತರು ರಮೇಶ್ ಜಾರಕಿಹೊಳಿಯನ್ನು ನಂಬಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇನ್ನೂ ಹಲವು ಪ್ರಮುಖರನ್ನು ಬಿಜೆಪಿಗೆ ಸೇರಿಸಿಕೊಳ್ಳುವ ಪ್ಲಾನ್ ಮಾಡಿಕೊಂಡಿದ್ದು ಅದರಲ್ಲೂ ಮುಖ್ಯವಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತರನ್ನೇ ಟಾರ್ಗೆಟ್ ಮಾಡಿದ್ದು, ಅಂತವರನ್ನೇ ಬಿಜೆಪಿಗೆ ಕರೆತರುವ ಲೆಕ್ಕಾಚಾರ ಕೂಡ ನಡೆಯುತ್ತಿದೆ.
ಹೆಬ್ಬಾಳ್ಕರ್ ಕ್ಷೇತ್ರದ ಮನೆ ಮನೆಯಲ್ಲೂ ರಮೇಶ್ ಜಾರಕಿಹೊಳಿ:
ಬೆಳಗಾವಿ ಗ್ರಾಮೀಣ ಕ್ಷೇತ್ರ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿನಿಧಿಸುವ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಹಿಡಿತ ಸಾಧಿಸಲು ರಮೇಶ್ ಜಾರಕಿಹೊಳಿ ಹೆಚ್ಚು ಒತ್ತು ಕೊಡುವುದರ ಜೊತೆಗೆ ಬಿಜೆಪಿಯನ್ನ ಬಲಿಷ್ಠಗೊಳಿಸುತ್ತಿದ್ದಾರೆ. ಇದೆಲ್ಲದರ ನಡುವೆ ಈಗ ಹೊಸ ವರ್ಷಕ್ಕೆ ಕ್ಯಾಲೆಂಡರ್ ಕೂಡ ನೀಡಲಾಗುತ್ತಿದ್ದು, ಪ್ರತಿಯೊಂದು ಕ್ಯಾಲೆಂಡರ್ ಮೇಲೆ ರಮೇಶ್ ಜಾರಕಿಹೊಳಿ ಭಾವಚಿತ್ರಗಳನ್ನ ಹಾಕಲಾಗಿದೆ. ಇಂದು ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವನ್ನ ಬೆಳಗಾವಿ ನ್ಯೂ ಸರ್ಕ್ಯೌಟ್ ಹೌಸ್ನಲ್ಲಿ ರಮೇಶ್ ಜಾರಕಿಹಳಿ ಬಿಡುಗಡೆ ಮಾಡಿದ್ದು, ಇಂದಿನಿಂದ ಈ ಎಲ್ಲಾ ಕ್ಯಾಲೆಂಡರ್ಗಳನ್ನ ಕೇವಲ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಹಂಚಲಿದ್ದಾರೆ. ಈ ಮೂಲಕ ಪ್ರತಿಯೊಂದು ಮನೆಯಲ್ಲೂ ಸಚಿವ ರಮೇಶ್ ಜಾರಕಿಹೊಳಿ ಪೋಟೋಗಳು ರಾರಾಜಿಸಬೇಕು ಜನರು ಕೂಡ ರಮೇಶ್ನತ್ತ ಒಲವು ತೋರಿ ಮರಾಠ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಜನರನ್ನ ತನ್ನತ್ತ ಸೆಳೆಯುವ ಪ್ಲಾನ್ ರಮೇಶ್ ಜಾರಕಿಹೊಳಿಯದ್ದು ಎನ್ನುತ್ತಿವೆ ಬಿಜೆಪಿ ಮೂಲಗಳು.
ಹೆಬ್ಬಾಳ್ಕರ್ಗೆ ರಮೇಶ್ ಜಾರಕಿಹೊಳಿ ಸವಾಲ್!
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಪ್ರಯತ್ನಿಸುವೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗ್ರಾಮೀಣ ಕ್ಷೇತ್ರದಲ್ಲಿ ಯಾವ ಮಟ್ಟಿಗೆ ತಯಾರಿ ಮಾಡಿದ್ದೇವು ಎಲ್ಲರಿಗೂ ಗೊತ್ತಿದೆ. ಆದರೆ ಚುನಾವಣೆ ಗೆದ್ದ ಬಳಿಕ ಬೇರೆ ರೂಪ ತಾಳಿದ್ದರು. ಇರಲಿ ನೋಡೋಣ ಎಂದು ರಮೇಶ್ ಕಿಡಿಕಾರಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಪರಮಾಪ್ತ ಯುವರಾಜ್ ಕದಂ ಬಿಜೆಪಿ ಸೇರ್ಪಡೆಯಾಗುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಯುವರಾಜ್ ಕದಂ ಇಂದಿಗೂ ನನ್ನ ಸ್ನೇಹಿತ, ಅವನು ಯಾವ ಪಕ್ಷಕ್ಕೆ ಬರ್ತಾನೆ ಅದು ಅವನ ವೈಯಕ್ತಿಕ. ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ನಾನು ಸೇಡು ತೀರಿಸಿಕೊಳ್ಳುತ್ತಿಲ್ಲ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ 2018ರ ಚುನಾವಣೆಯಲ್ಲಿ ನನ್ನ ನಂಬಿ ಗ್ರಾಮೀಣ ಶಾಸಕಿಗೆ ವೋಟ್ ಹಾಕಿದ್ದರು. ಮುಂದಿನ ಬಾರಿ ಅವರಿಗೆ ಮತ ಹಾಕಿದರೆ ಶಾಸಕಿಗೆ ಮಾಲೆ ಹಾಕೋಣ ಎಂದು ರಮೇಶ್ ಓಪನ್ ಚಾಲೇಂಜ್ ಹಾಕಿದ್ದಾರೆ.
ಗೋಕಾಕ್ನಲ್ಲಿ ಶುರುವಾಯ್ತಾ ರಾಜಕೀಯ ದ್ವೇಷ? ಲಕ್ಷ್ಮೀ ಅಪಾರ್ಟ್ಮೆಂಟ್ಗೆ ನೀರು, ಕರೆಂಟ್ ಕಟ್!
Published On - 9:21 pm, Sat, 26 December 20