
ಚಿಕ್ಕಮಗಳೂರು: ರಿಯಲ್ ಎಸ್ಟೇಟ್ ವ್ಯವಹಾರದ ಮಾತುಕತೆ ವೇಳೆ ಮಾತಿನ ಚಕಮಕಿ ನಡೆದು ಇಬ್ಬರ ಮೇಲೆ ಗುಂಡು ಹಾರಿಸಿರೋ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಬಾಣೂರು ಗ್ರಾಮದಲ್ಲಿ ನಡೆದಿದೆ.
ಚಿಕ್ಕಮಗಳೂರು ನಗರದ ಬಿಜೆಪಿ ಮುಖಂಡ ಸಂಬಂಧಿ ಕಲ್ಯಾಣ್ ಕುಮಾರ್ ಹಾಗೂ ಖಾಸಗಿ ಶಾಲೆಯ ಉಪನ್ಯಾಸಕ ಸುಮಂತ್ ಎಂಬುವರಿಗೆ ಗುಂಡೇಟು ಬಿದ್ದಿದೆ. ಬೆಂಗಳೂರಿನಿಂದ ಬಂದಿದ್ದ ರಿಯಲ್ ಎಸ್ಟೇಟ್ ಉದ್ಯಮಿಗಳ ಜೊತೆ ವ್ಯವಹಾರದ ವೇಳೆ ಮಾತಿನ ಚಕಮಕಿ ನಡೆದು ಈ ಘಟನೆ ನಡೆದಿದೆ ಎಂದು ಹೇಳಲಾಗ್ತಿದೆ.
ಗುಂಡೇಟು ಬಿದ್ದ ಇಬ್ಬರನ್ನೂ ಚಿಕ್ಕಮಗಳೂರಿನ ಕೆ.ಆರ್.ಎಸ್. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ನಂತರ ಬೆಂಗಳೂರಿಗೆ ರವಾನಿಸಲಾಗಿದೆ. ಇಬ್ಬರ ಮೇಲೆ ಫೈರಿಂಗ್ ಮಾಡಿದ ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ಉದ್ಯಮಿಗಳು ನಾಪತ್ತೆಯಾಗಿದ್ದಾರೆ.
ಗುಂಡೇಟು ತಿಂದ ಕಲ್ಯಾಣ್ ಕುಮಾರ್ ಹಾಗೂ ಸುಮಂತ್ ಎಂಬುವರ ದೇಹದಲ್ಲಿ ಗುಂಡುಗಳು ಹಾಗೇ ಇದ್ದು ಅವುಗಳನ್ನ ತೆಗೆಯಲು ಇಬ್ಬರನ್ನೂ ಬೆಂಗಳೂರಿಗೆ ರವಾನಿಸಲಾಗಿದೆ. ಅದೃಷ್ಟವಶಾತ್ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಖರಾಯಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸ್ಥಳಕ್ಕೆ ಭೇಟಿ ನೀಡಿರೋ ಸಖರಾಯಪಟ್ಟಣ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸದ್ಯಕ್ಕೆ ರಿಯಲ್ ಎಸ್ಟೇಟ್ ವಿಷಯವಾಗಿ ಈ ಘಟನೆ ನಡೆದಿದೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಪೊಲೀಸರ ತನಿಖೆಯ ಬಳಿಕ ಘಟನೆ ಸ್ಪಷ್ಟವಾದ ಕಾರಣ ತಿಳಿಯಲಿದೆ.
Published On - 10:55 am, Thu, 28 May 20