ಬಾಗಲಕೋಟೆಯಲ್ಲೂ ಹೆಚ್ಚಿದ ರೆಮ್​ಡೆಸಿವಿರ್ ಬೇಡಿಕೆ; ಕೊರೊನಾಗಿಂತಲೂ ಇಂಜೆಕ್ಷನ್ ಸಿಗುತಿಲ್ಲ ಎನ್ನುವ ಆತಂಕವೇ ಹೆಚ್ಚು

|

Updated on: May 03, 2021 | 1:04 PM

ಕೊರೊನಾ ಇದೆ ಎಂದಾಕ್ಷಣ ರೆಮ್​ಡೆಸಿವಿರ್ ಇಂಜೆಕ್ಷನ್ ಹಾಕಿಸಲೇಬೇಕೆಂದೇನು ಇಲ್ಲ. ಅಗತ್ಯ ಇದ್ದರೆ ಮಾತ್ರ ವೈದ್ಯರು ಕೊಡುತ್ತಾರೆ. ಸುಮ್ಮನೆ ಆತಂಕಕ್ಕೆ ಒಳಗಾಗಬಾರದು ಎಂದು ಬಾಗಲಕೋಟೆ ಸಹಾಯಕ ಔಷಧ ನಿಯಂತ್ರಕರಾದ ಪರಶುರಾಮ್ ಹೇಳಿದ್ದಾರೆ.

ಬಾಗಲಕೋಟೆಯಲ್ಲೂ ಹೆಚ್ಚಿದ ರೆಮ್​ಡೆಸಿವಿರ್ ಬೇಡಿಕೆ; ಕೊರೊನಾಗಿಂತಲೂ ಇಂಜೆಕ್ಷನ್ ಸಿಗುತಿಲ್ಲ ಎನ್ನುವ ಆತಂಕವೇ ಹೆಚ್ಚು
ರೆಮ್​​ಡೆಸಿವಿರ್​ ಚುಚ್ಚುಮದ್ದು
Follow us on

ಬಾಗಲಕೋಟೆ: ಕೊರೊನಾ ಎರಡನೇ ಅಲೆಗೆ ಬಾಗಲಕೋಟೆ ಜನ ತತ್ತರಿಸಿ ಹೋಗಿದ್ದು, ಸೋಂಕಿತರ ಸಂಖ್ಯೆಯ ಹೆಚ್ಚಳದ ಜೊತೆಗೆ ಸಾವಿನ ಸಂಖ್ಯೆಯಲ್ಲಿ ಕೂಡ ಏರಿಕೆ ಕಂಡುಬಂದಿದೆ. ಬಾಗಲಕೋಟೆಯಲ್ಲಿ ಏಪ್ರಿಲ್ ಆರಂಭಕ್ಕೆ ಕೊರೊನಾ ಎರಡನೇ ಅಲೆ ಮೆಲ್ಲಗೆ ಶುರುವಾಗಿ, ಏಪ್ರಿಲ್ ಅಂತ್ಯದ ವೇಳೆ ತನ್ನ ಕಬಂಧ ಬಾಹುವನ್ನು ಜಿಲ್ಲಾದ್ಯಂತ ಚಾಚಿದೆ. ಪ್ರತಿ ದಿನ 200 ರಿಂದ 300 ಪ್ರಕರಣಗಳು ಸಾಮಾನ್ಯವಾಗಿವೆ. ಹೀಗಾಗಿ ಜಿಲ್ಲೆಯಲ್ಲಿ ಈಗ ರೆಮ್​ಡೆಸಿವಿರ್ ಇಂಜೆಕ್ಷನ್​ಗೆ ಬೇಡಿಕೆ ಹೆಚ್ಚಾಗಿದ್ದು, ಇಂಜೆಕ್ಷನ್ ಕೊಟ್ಟುಬಿಡಿ ಎನ್ನುವ ಸೋಂಕಿತ ವ್ಯಕ್ತಿಗಳ ಕುಟುಂಬದವರ ಒತ್ತಡ ತೀವ್ರಗೊಂಡಿದೆ.

ಕಳೆದ ಹದಿನೈದು ದಿನಗಳಲ್ಲಿ ಜಿಲ್ಲೆಯಲ್ಲಿ ಹೊಸ ಸೋಂಕಿತರ ಸಂಖ್ಯೆ ಮೂರು ಸಾವಿರದ ಗಡಿ ದಾಟಿದ್ದರೆ, ಸರ್ಕಾರಿ ಲೆಕ್ಕದ ಪ್ರಕಾರ ಕೊವಿಡ್​ನಿಂದ ಸತ್ತವರು 16 ಜನರು. ಇನ್ನು ಕೊವಿಡ್ ನೆಗೆಟಿವ್ ಬಂದು, ಉಸಿರಾಟದ ತೊಂದರೆಯಿಂದ ಸಾಯುತ್ತಿರುವವರ ಸಂಖ್ಯೆ ನಿತ್ಯ ಹತ್ತಕ್ಕೂ ಕಡಿಮೆ ಇಲ್ಲ. ಹೀಗಾಗಿ ಜನರು ಬೆಚ್ಚಿ ಬಿದ್ದಿದ್ದಾರೆ. ಬದುಕುಳಿಯಲು ರೆಮ್​ಡೆಸಿವಿರ್ ಬೇಕೇ ಬೇಕು ಎನ್ನುವ ಸ್ವಯಂ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಆಸ್ಪತ್ರೆಗೆ ಕಾಲಿಡುತ್ತಲೇ ನಮಗೆ ರೆಮ್​ಡೆಸಿವಿರ್ ಇಂಜೆಕ್ಷನ್ ಕೊಡಿ ಎಂದು ವೈದ್ಯರ ಮೇಲೆ ರೋಗಿ ಕುಟುಂಬದವರು ಒತ್ತಡ ಹೇರುತ್ತಿದ್ದಾರೆ.

ಖಾಸಗಿ ಆಸ್ಪತ್ರೆ ವೈದ್ಯರು ರೆಮ್​ಡೆಸಿವಿರ್ ತಮ್ಮ ಕಡೆಗೆ ಇಲ್ಲ. ನೀವೇ ವ್ಯವಸ್ಥೆ ಮಾಡಬೇಕು ಎಂದು ಹೇಳಿ ಕಳುಹಿಸುತ್ತಿದ್ದಾರೆ. ಇದರಿಂದ ಜಿಲ್ಲಾಡಳಿತದ ಮೇಲೆ ಒತ್ತಡ ಹೆಚ್ಚಿದ್ದು, ಅನಗತ್ಯವಾಗಿ ರೆಮ್​ಡೆಸಿವಿರ್ ಬಳಕೆ ಬೇಡ ಎಂದು ಮನವಿ ಮಾಡುತ್ತಿದ್ದರೂ ಸಹ ಜನರು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ಖಾಸಗಿ ಆಸ್ಪತ್ರೆಯಲ್ಲಿ ಅನಗತ್ಯ ಬೇಡಿಕೆ ಸರಿಯಲ್ಲ. ಖಾಸಗಿ ಆಸ್ಪತ್ರೆಯವರು ಎಬಿಆರ್​ಕೆ ಅಡಿಯಲ್ಲಿ ಒಡಂಬಡಿಕೆ ಮಾಡಿಕೊಂಡು ಜಿಲ್ಲಾಡಳಿತದಿಂದ ಶಿಫಾರಸು ಮಾಡಿದ ಕೊವಿಡ್ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಿದರೆ ಅಂತಹ ಆಸ್ಪತ್ರೆಗಳಿಗೆ ರೆಮ್​ಡೆಸಿವಿರ್ ಇಂಜೆಕ್ಷನ್ ಉಚಿತವಾಗಿ ಪೂರೈಕೆ ಮಾಡುತ್ತೇವೆ. ಆದರೆ, ಅಗತ್ಯ ಇರುವವರಿಗೆ ಮಾತ್ರ ಇಂಜೆಕ್ಷನ್ ಬಳಕೆ ಮಾಡಬೇಕು ಎಂದು ಬಾಗಲಕೋಟೆ ಡಿಎಚ್​ಒ ಡಾ.ಅನಂತ ದೇಸಾಯಿ ಹೇಳಿದ್ದಾರೆ.

ಇನ್ನು ಜಿಲ್ಲೆಯಲ್ಲಿ ರೆಮ್​ಡೆಸಿವಿರ್ ಖಾಲಿ ಆಗಿವೆ ಎಂದು ಕೆಲ ಖಾಸಗಿ ಆಸ್ಪತ್ರೆ ವೈದ್ಯರು ರೋಗಿಗಳಿಗೆ ತಪ್ಪು ಮಾಹಿತಿ ಕೊಡುತ್ತಿದ್ದಾರೆ ಎನ್ನುವ ಆರೋಪಗಳು ಇವೆ. ಸದ್ಯ ಬಾಗಲಕೋಟೆ ಜಿಲ್ಲೆಯಲ್ಲಿ 36 ಖಾಸಗಿ ಆಸ್ಪತ್ರೆಗಳಲ್ಲಿ ಕೊವಿಡ್ ಚಿಕಿತ್ಸೆ ನೀಡಲಾಗುತ್ತಿದೆ. ಬಾಗಲಕೋಟೆ ನಗರದಲ್ಲೇ 19 ಆಸ್ಪತ್ರೆಗಳು ಇವೆ. ಈ ಆಸ್ಪತ್ರೆಗಳಿಗೆ ಕಳೆದ ಏಪ್ರಿಲ್ 22 ರಿಂದ ಏಪ್ರಿಲ್ 28 ರವರೆಗೆ, ಒಟ್ಟು 2170 ರೆಮ್​ಡೆಸಿವಿರ್ ಇಂಜೆಕ್ಷನ್ ಪೂರೈಕೆ ಮಾಡಲಾಗಿದೆ. ಇನ್ನು ಸರ್ಕಾರಿ ಆಸ್ಪತ್ರೆಗಳಿಗೆ 1170 ಇಂಜೆಕ್ಷನ್ ಪೂರೈಕೆ ಆಗಿದೆ. ಸದ್ಯ 3 ಸಾವಿರ ಇಂಜೆಕ್ಷನ್ ಖಾಲಿ ಆಗಿವೆ. ಇನ್ನು ಬೇಡಿಕೆ ಸಲ್ಲಿಸಿದ್ದು, ಹಂತ ಹಂತವಾಗಿ ಇಂಜೆಕ್ಷನ್ ಪೂರೈಕೆ ಆಗುತ್ತಿದೆ. ಸದ್ಯ ಖಾಸಗಿ ಆಸ್ಪತ್ರೆಗಳಲ್ಲಿ 138 ಇಂಜೆಕ್ಷನ್ ಲಭ್ಯ ಇದೆ. ಹೀಗಾಗಿ ಸಾರ್ವಜನಿಕರಲ್ಲಿ ಇಂಜೆಕ್ಷನ್ ಇಲ್ಲ ಎಂದು ಗೊಂದಲ ಸೃಷ್ಟಿ ಆಗುತ್ತಿದೆ ಅಷ್ಟೇ  ಎಂದು ಬಾಗಲಕೋಟೆಯ ಸಹಾಯಕ ಔಷಧ ನಿಯಂತ್ರಕರಾದ ಪರಶುರಾಮ್ ಹೇಳಿದ್ದಾರೆ.

ಕೊವಿಡ್ ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಮುನ್ನವೇ ಅಲ್ಲಿ ರೆಮ್​ಡೆಸಿವಿರ್ ಲಭ್ಯ ಇದೆಯೋ ಇಲ್ಲವೋ ಎಂದು ವಿಚಾರಣೆ ಮಾಡುತ್ತಿದ್ದಾರೆ. ಅವರು ಇಲ್ಲ ಎನ್ನುತ್ತಿದ್ದಂತೆ ಇಂಜೆಕ್ಷನ್ ಸಿಗುತಿಲ್ಲ ಎನ್ನುವ ವಾತಾವರಣ ಸೃಷ್ಟಿಯಾಗಿದೆ. ಕೊರೊನಾ ಇದೆ ಎಂದಾಕ್ಷಣ ಆ ಇಂಜೆಕ್ಷನ್ ಹಾಕಿಸಲೇಬೇಕೆಂದೇನು ಇಲ್ಲ. ಅಗತ್ಯ ಇದ್ದರೆ ಮಾತ್ರ ವೈದ್ಯರು ಕೊಡುತ್ತಾರೆ. ಸುಮ್ಮನೆ ಆತಂಕಕ್ಕೆ ಒಳಗಾಗಬಾರದು ಎಂದು ಬಾಗಲಕೋಟೆ ಸಹಾಯಕ ಔಷಧ ನಿಯಂತ್ರಕರಾದ ಪರಶುರಾಮ್ ಹೇಳಿದ್ದಾರೆ.

ಒಟ್ಟಾರೆ ಜಿಲ್ಲೆಯಲ್ಲಿ ಕೊರೊನಾ ಅಬ್ಬರ ಜೋರಾಗಿದೆ. ಕೊರೊನಾ ಆತಂಕಕ್ಕಿಂತ ರೆಮ್​ಡೆಸಿವಿರ್ ಇಂಜೆಕ್ಷನ್ ಸಿಗುತ್ತೋ ಇಲ್ಲವೋ ಎನ್ನುವ ಭೀತಿಯೇ ಹೆಚ್ಚಾಗ ತೊಡಗಿದೆ. ರೆಮ್​ಡೆಸಿವಿರ್ ಇಂಜೆಕ್ಷನ್ ಅಂತಿಮ ಹಾಗೂ ಕಡ್ಡಾಯವಲ್ಲ ಎನ್ನುವ ಬಗ್ಗೆ ಕೊರೊನಾ ಸೋಂಕಿತರ ಕುಟುಂಬದವರಿಗೆ ಮೊದಲು ಜಾಗೃತಿ ಮೂಡಿಸಬೇಕಿದೆ. ಇನ್ನು ಕೆಲ ವೈದ್ಯರೇ ಅನಗತ್ಯವಾಗಿಯೂ ಇಂಜೆಕ್ಷನ್ ಕೊಡುತ್ತಿದ್ದಾರೆ ಎನ್ನುವ ಆರೋಪಗಳು ಇದ್ದು, ಈ ಬಗ್ಗೆ ಜಿಲ್ಲಾಡಳಿತ ಒಂದು ಪ್ರತ್ಯೇಕ ತಂಡದ ಮೂಲಕ ತನಿಖೆಗೆ ಮುಂದಾಗಬೇಕಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ:

ರೆಮ್​ಡೆಸಿವರ್​ ಬೇಕೋ? ಬೇಡವೋ? ವೈದ್ಯರಲ್ಲೇ ಭಿನ್ನಾಭಿಪ್ರಾಯ, ಒಬ್ರು ಬೇಡ ಅಂತಾರೆ, ಇನ್ನೊಬ್ರು ಜೀವ ರಕ್ಷಕ ಅಂತಾರೆ

Published On - 1:02 pm, Mon, 3 May 21