ರೆಮ್ಡೆಸಿವರ್ ಬೇಕೋ? ಬೇಡವೋ? ವೈದ್ಯರಲ್ಲೇ ಭಿನ್ನಾಭಿಪ್ರಾಯ, ಒಬ್ರು ಬೇಡ ಅಂತಾರೆ, ಇನ್ನೊಬ್ರು ಜೀವ ರಕ್ಷಕ ಅಂತಾರೆ
ರೆಮ್ಡೆಸಿವಿರ್ ಬಳಕೆಗೆ ಸಹಮತ ವ್ಯಕ್ತಪಡಿಸುವವರ ಬಗ್ಗೆ ಗಂಭೀರ ಆರೋಪಗಳೂ ಇದ್ದು, ಇದೆಲ್ಲಾ ಹಣಕ್ಕಾಗಿ ಮಾಡುತ್ತಿರುವುದು ಎಂದು ಕೆಲವರು ದೂಷಿಸುತ್ತಾರೆ. ಕೊವಿಡ್ ಅಲ್ಲದೇ ನ್ಯುಮೋನಿಯಾ ರೋಗಿಗಳಿಗೂ ರೆಮ್ಡೆಸಿವಿರ್ ನೀಡಲು ಹೇಳುತ್ತಿರುವುದು ಕೇವಲ ಹಣದ ದೃಷ್ಟಿಯಿಂದ ಎಂಬ ಮಾತುಗಳು ಕೇಳಿಬರುತ್ತಿವೆ.
ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆಯಿಂದಾಗಿ ಸೋಂಕಿತರ ಸಂಖ್ಯೆ ನಿರೀಕ್ಷೆಗಿಂತಲೂ ಅತ್ಯಧಿಕ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಈ ಬಾರಿ ಸೋಂಕಿನಿಂದ ಗಂಭೀರಾವಸ್ಥೆಗೆ ತಲುಪಿದವರನ್ನು ಬಚಾಯಿಸುವುದೇ ವೈದ್ಯರಿಗೆ ಬಹುದೊಡ್ಡ ಸವಾಲಾಗಿದ್ದು, ವೈದ್ಯಕೀಯ ಸೌಲಭ್ಯಗಳ ಕೊರತೆಯೂ ತಲೆದೋರಿದ ಕಾರಣ ಮರಣ ಪ್ರಮಾಣವೂ ಆತಂಕ ಮೂಡಿಸಿದೆ. ಏತನ್ಮಧ್ಯೆ, ಕೊರೊನಾ ಸೋಂಕಿತರಿಗೆ ಜೀವರಕ್ಷಕ ಎಂದು ಬಿಂಬಿತವಾಗಿರುವ ರೆಮ್ಡೆಸಿವಿರ್ ಆ್ಯಂಟಿ ವೈರಲ್ ಇಂಜೆಕ್ಷನ್ ಬಗ್ಗೆ ವೈದ್ಯರಲ್ಲೇ ಹಲವು ಗೊಂದಲಗಳಿದ್ದು ಕೆಲವರು ರೆಮ್ಡೆಸಿವಿರ್ ಅವಶ್ಯಕತೆಯೇ ಇಲ್ಲ ಎಂದರೆ, ಇನ್ನು ಕೆಲವರು ಕೊವಿಡ್ಗೆ ಮಾತ್ರವಲ್ಲದೇ, ನ್ಯುಮೋನಿಯಾ ರೋಗಿಗಳಿಗೂ ರೆಮ್ಡೆಸಿವಿರ್ ಬರೆದುಕೊಡುತ್ತಿದ್ದಾರೆ. ವೈದ್ಯರ ಈ ನಡೆಯಿಂದ ರೋಗಿಗಳು ಹಾಗೂ ಅವರ ಕುಟುಂಬಸ್ಥರು ಸಹಜವಾಗಿ ಗೊಂದಲಕ್ಕೀಡಾಗಿದ್ದಾರೆ.
ರೆಮ್ಡೆಸಿವಿರ್ ಬಳಕೆ ಬಗ್ಗೆ ಮಾತನಾಡುವ ಕೆಲ ವೈದ್ಯರು, ಇದು ಮೊದಲ ಅಲೆಯಲ್ಲಿ ನಿಸ್ಸಂದೇಹವಾಗಿ ಹಲವರ ಜೀವ ಉಳಿಸಿದೆ. ಆದರೆ, ಈ ಬಾರಿ ಸೋಂಕಿತರನ್ನು ಗುಣಪಡಿಸುವಲ್ಲಿ ಅಷ್ಟು ಪರಿಣಾಮಕಾರಿ ಎನಿಸುತ್ತಿಲ್ಲ. ಬಹುಮುಖ್ಯವಾಗಿ ಸರ್ಕಾರವೇ ಕಳೆದ ಬಾರಿ ರೆಮ್ಡೆಸಿವಿರ್ ಬಗ್ಗೆ ಹೆಚ್ಚು ಒತ್ತು ನೀಡಿತ್ತು. ಅದರಿಂದಾಗಿ ಜನರಿಗೆ ರೆಮ್ಡೆಸಿವಿರ್ ಜೀವರಕ್ಷಕ ಎಂಬ ಭಾವನೆ ಬೇರೂರಿದೆ. ಈಗ ರೆಮ್ಡೆಸಿವಿರ್ ಉಪಯೋಗಕ್ಕೆ ಬರುವುದಿಲ್ಲ ಎಂದರೆ ಜನರು ವೈದ್ಯರ ಮೇಲೆಯೇ ಅನುಮಾನ ಪಡುತ್ತಾರೆ. ಎರಡನೇ ಅಲೆಯ ಸೋಂಕು ವಿಭಿನ್ನವಾಗಿ ವರ್ತಿಸುತ್ತಿರುವುದರಿಂದ ರೆಮ್ಡೆಸಿವಿರ್ ಚುಚ್ಚುಮದ್ದನ್ನೇ ನಂಬಿಕೊಂಡಿರಲು ಸಾಧ್ಯವಿಲ್ಲ ಎನ್ನುತ್ತಾರೆ.
ಆದರೆ, ಇನ್ನು ಕೆಲ ವೈದ್ಯರು ಕೊರೊನಾ ಸೋಂಕಿನಿಂದ ಉಸಿರಾಟದ ಸಮಸ್ಯೆಗೆ ತುತ್ಥಾಗಿ ಗಂಭೀರ ಸ್ಥಿತಿ ತಲುಪಿದವರಿಗೆ ರೆಮ್ಡೆಸಿವಿರ್ ಅನಿವಾರ್ಯ. ಕೆಲವರು ಸ್ಟಿರಾಯ್ಡ್ ಬಳಸುವಂತೆ ಸೂಚನೆ ನೀಡುತ್ತರಾದರೂ ಅದು ಮಧುಮೇಹದ ಮಟ್ಟವನ್ನು ಏರಿಳಿತ ಮಾಡುವುದರಿಂದ ಅಷ್ಟೊಂದು ಸುರಕ್ಷಿತವಲ್ಲ ಎನ್ನುವ ಮೂಲಕ ರೆಮ್ಡೆಸಿವಿರ್ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಇದಕ್ಕೆ ವ್ಯತಿರಿಕ್ತವಾಗಿ ರೆಮ್ಡೆಸಿವಿರ್ ಬಳಕೆಗೆ ಸಹಮತ ವ್ಯಕ್ತಪಡಿಸುವವರ ಬಗ್ಗೆ ಗಂಭೀರ ಆರೋಪಗಳೂ ಇದ್ದು, ಇದೆಲ್ಲಾ ಹಣಕ್ಕಾಗಿ ಮಾಡುತ್ತಿರುವುದು ಎಂದು ಕೆಲವರು ದೂಷಿಸುತ್ತಾರೆ. ಕೊವಿಡ್ ಅಲ್ಲದೇ ನ್ಯುಮೋನಿಯಾ ರೋಗಿಗಳಿಗೂ ರೆಮ್ಡೆಸಿವಿರ್ ನೀಡಲು ಹೇಳುತ್ತಿರುವುದು ಕೇವಲ ಹಣದ ದೃಷ್ಟಿಯಿಂದ ಎಂಬ ಮಾತುಗಳು ಕೇಳಿಬರುತ್ತಿವೆ. ವೈದ್ಯರ ನಡುವೆಯೇ ಇರುವ ಈ ಭಿನ್ನಾಭಿಪ್ರಾಯಗಳಿಂದಾಗಿ ಜನರಲ್ಲಿ ಯಾರನ್ನು ನಂಬಬೇಕು, ಯಾರು ಸತ್ಯ ಹೇಳುತ್ತಿದ್ದಾರೆ, ಯಾರು ಮೋಸ ಮಾಡುತ್ತಿದ್ದಾರೆ ಎಂಬ ಗೊಂದಲ ಮೂಡಿದೆ.
ಇದನ್ನೂ ಓದಿ: Covid Helpline Numbers: ಆಕ್ಸಿಜನ್, ರೆಮ್ಡೆಸಿವರ್ ಬೇಕಾದಲ್ಲಿ ಈ ಸಂಖ್ಯೆಗಳನ್ನು ಸಂಪರ್ಕಿಸಿ
25 ಮಂದಿಗೆ ರೆಮ್ಡೆಸಿವರ್ಗೆ ವೈದ್ಯರ ಸೂಚನೆ; ಬೆಂಗಳೂರಿನ ಕಿಮ್ಸ್ ಆಸ್ಪತ್ರೆ ಬಳಿ ಕುಟುಂಬಸ್ಥರ ಆಕ್ರೋಶ