ಬೆಂಗಳೂರು: ಜೀವದ ಹಂಗು ತೊರೆದು ಸೋಂಕಿತರ ಸೇವೆಯಲ್ಲಿ ತೊಡಗಿದ್ದರೂ ಯಾವುದೇ ವೇತನ ನೀಡಿಲ್ಲ ಎಂದು ಬೆಂಗಳೂರು ಮೆಡಿಕಲ್ ಕಾಲೇಜಿನ ರೆಸಿಡೆಂಟ್ ಡಾಕ್ಟರ್ಗಳು ಇಂದು ಪ್ರತಿಭಟನೆಗೆ ಮುಂದಾಗಿದ್ದಾರೆ. ರೆಸಿಡೆಂಟ್ ಡಾಕ್ಟರ್ಗಳು ತಮ್ಮ ಕಾಲೇಜಿನ ಎದುರು ಪತ್ರಿಭಟನೆ ನಡೆಸುತ್ತಿದ್ದಾರೆ.
ಕಳೆದ ಮೂರು ತಿಂಗಳಿಂದ ವೇತನವಿಲ್ಲ. ಜೊತೆಗೆ ಕೊವಿಡ್ ವಿಭಾಗದಲ್ಲಿ ಕೆಲಸ ಮಾಡಿದ್ದಕ್ಕೆ ರೆಮ್ಯುನರೇಶನ್ ಸಹ ನೀಡಿಲ್ಲ. ಆದರೂ, ನಾವು ಯಾರೂ ನಮ್ಮ ಕೆಲಸ ನಿಲ್ಲಿಸಿಲ್ಲ ಎಂದು ರೆಸಿಡೆಂಟ್ ಡಾಕ್ಟರ್ಗಳು ತಮ್ಮ ನೋವು ತೋಡಿಕೊಂಡರು.
ಫೆಬ್ರವರಿಗೆ ಮುಗಿಯಬೇಕಿದ್ದ ಇಂಟರ್ನ್ಶಿಪ್ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಜೊತೆಗೆ, ಈ ವರ್ಷ ಕಾಲೇಜು ನಡೆಯದೇ ಇದ್ದರೂ ಫೀಸ್ ಮನ್ನಾ ಮಾಡಿಲ್ಲ. ಹಾಗಾಗಿ, ಇದೆಲ್ಲದರ ಬಗ್ಗೆ ಸರ್ಕಾರ ಗಮನ ಹರಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿರುವ ವೈದ್ಯರು ಕಪ್ಪು ಪಟ್ಟಿ ಧರಿಸಿ ಕೆಲಸಕ್ಕೆ ಹಾಜರಾದರು.