ಬಳ್ಳಾರಿ: ಜನ ಮರಳೋ ಜಾತ್ರೆ ಮರಳೋ ಗೊತ್ತಿಲ್ಲ. ನಾವೆಲ್ಲಾ ಎಷ್ಟೇ ಆಧುನಿಕವಾಗಿ ಮುಂದುವರೆದಿದ್ದರೂ ನಮ್ಮ ಜನರು ಮಾತ್ರ ವದಂತಿಗಳಿಗೆ ಬೇಗ ಮಾರು ಹೋಗುತ್ತಾರೆ. ಈಗ ತಾಯಿಗೆ ಮಗಳು ಹೊಸ ಸೀರೆ ಕೊಡಿಸಬೇಕು ಎನ್ನುವ ವದಂತಿ ಈಗ ಗಣಿ ನಾಡಿನಲ್ಲಿ ಹಬ್ಬಿದೆ. ಸೀರೆ ಕೊಡದಿದ್ದರೆ ಕೇಡಾಗುತ್ತದೆ ಎಂಬ ವದಂತಿ ಹಿನ್ನೆಲೆಯಲ್ಲಿ ಮಹಿಳೆಯರು ತಾಯಿಗೆ ಸೀರೆ ಕೊಡಲು ಬಟ್ಟೆ ಅಂಗಡಿಗಳಿಗೆ ಮುಗಿಬಿದ್ದಿದ್ದಾರೆ.
ಗಣಿ ನಾಡು ಬಳ್ಳಾರಿಯ ಸೀರೆ ಅಂಗಡಿಗಳಲ್ಲಿ ಈಗ ಎಲ್ಲಿ ನೋಡಿದರೂ ಮಹಿಳೆಯರು ಸೀರೆ ಖರೀದಿಗೆ ಮುಗಿ ಬಿದ್ದಿರುವುದೇ ಕಾಣುತ್ತಿದೆ. ತಾಯಿಗೆ ಸೀರೆ ಕೊಡಿಸದಿದ್ದರೆ ಕೆಟ್ಟದಾಗುತ್ತದೆ ಎನ್ನುವ ವದಂತಿ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿದೆ. ಜೊತೆಗೆ ಇಂತಹ ವದಂತಿ ಒಬ್ಬರಿಂದ ಮತ್ತೊಬ್ಬರಿಗೆ ಹಬ್ಬಿದ್ದೇ ತಡ.. ಮಹಿಳೆಯರು ತಮ್ಮ ತಾಯಿಗೆ ಸೀರೆ ಕೊಡಿಸಲು ಮುಂದಾಗಿದ್ದಾರೆ. ಕೆಲವರು ಸೀರೆ ಕೊಡಿಸದಿದ್ದರೆ ಏನಾದರೂ ಕೇಡಾಗಬಹುದು ಎನ್ನುವ ಭಯದಿಂದಲೂ ಸೀರೆ ಕೊಡಿಸಲು ಬಟ್ಟೆ ಅಂಗಡಿಗಳಿಗೆ ಮುಗಿಬಿದ್ದಿದ್ದಾರೆ.
ಬೆಳ್ಳಿ ಕಡಗ ವದಂತಿ
ಈ ಹಿಂದೆಯೂ ಜನರು ಒಬ್ಬನೇ ಮಗನಿದ್ದರೆ ಅವರಿಗೆ ಬೆಳ್ಳಿ ಕಡಗ ಕೊಡಬೇಕು ಎನ್ನುವ ವದಂತಿ ಹಬ್ಬಿದಾಗ ಕೂಡ ಬೆಳ್ಳಿ ಕಡಗ ನೀಡಿದ್ದರು. ಈಗ ಮಗಳು ತಾಯಿಗೆ ಸೀರೆ ಕೊಡಬೇಕು ಎನ್ನುವ ವದಂತಿ ಹಬ್ಬಿದೆ. ಹೀಗಾಗಿ ಗಂಡನ ಮನೆಯಲ್ಲಿದ್ದರೂ ತವರು ಮನೆಗೆ ಹೋಗಿ ಮಹಿಳೆಯರು ತಾಯಿಗೆ ಸೀರೆ ಕೊಟ್ಟು ಬರುತ್ತಿದ್ದಾರೆ..
ದೂರದ ಊರು, ಬೇರೆ ಜಿಲ್ಲೆಯಲ್ಲಿ ತಾಯಿ ಇದ್ದರೂ ಅಲ್ಲಿಗೆ ಹೋಗಿ ಸೀರೆ ಕೊಟ್ಟು ಬರುತ್ತಿದ್ದಾರೆ. ಈ ಕಾರಣಕ್ಕಾಗಿ ನಗರದ ಬಟ್ಟೆ ಅಂಗಡಿಗಳಲ್ಲಿ ಕಳೆದ ಒಂದು ವಾರದಿಂದಲೂ ಸೀರೆ ಖರೀದಿ ವ್ಯಾಪಾರ ಜೋರಾಗಿ ನಡೆಯುತ್ತಿದೆ.
ಕೊರೊನಾ ಹಾಗೂ ಲಾಕ್ಡೌನ್ ನಂತರ ಬಟ್ಟೆ ಅಂಗಡಿಗಳು ವ್ಯಾಪಾರ ಇಲ್ಲದೇ ಸಂಕಷ್ಟದ ಸ್ಥಿತಿಯಲ್ಲಿದ್ದವು. ಆದರೆ ಈಗ ಗ್ರಾಮೀಣ ಪ್ರದೇಶದಲ್ಲಿ ಹಬ್ಬಿರುವ ಸೀರೆ ಕೊಡುವ ವದಂತಿಯಿಂದಾಗಿ ಭರ್ಜರಿಯಾಗಿ ಸೀರೆ ವ್ಯಾಪಾರ ನಡೆಯುತ್ತಿದೆ.
ಇದನ್ನೂ ಓದಿ
ನೋಟ್ ಬ್ಯಾನ್ ವದಂತಿಗೆ RBI ಸ್ಪಷ್ಟನೆೆ.. ದೇಶದಲ್ಲಿ ಸದ್ಯಕ್ಕೆ ಯಾವುದೇ ನೋಟ್ ಬ್ಯಾನ್ ಖಂಡಿತ ಆಗಲ್ಲ!
ಆಸ್ತಿ ವಿವಾದ, ಸಾಲಬಾಧೆ: ಬೆಂಗಳೂರಿನ ತಾಯಿ-ಮಗಳು ನರಸಾಪುರ ಕೆರೆಗೆ ಜಿಗಿದು ಆತ್ಮಹತ್ಯೆ