ಬೆಂಗಳೂರು: ಬಿಜೆಪಿ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (B.S.Yediyurappa) ಅವರಿಗೆ ಸ್ಥಾನ ಸಿಕ್ಕಿರುವ ಹಿನ್ನೆಲೆ ಯಡಿಯೂರಪ್ಪ ಅವರಿಗೆ ರಾಜ್ಯ ಬಿಜೆಪಿ ಘಟಕವು ಸನ್ಮಾನ ಮಾಡಲು ನಿರ್ಧರಿಸಿದೆ. ಆಗಸ್ಟ್ ಆಗಸ್ಟ್ 28ರಂದು ಮಂಡ್ಯ ಜಿಲ್ಲೆಯ ಬೂಕನಕೆರೆಯಲ್ಲಿ ಅಭಿನಂದನಾ ಸಮಾವೇಶ ಆಯೋಜಿಸಿ ಸನ್ಮಾನ ನಡೆಸಲು ನಿರ್ಧರಿಸಲಾಗಿದೆ.
ಬಿಜೆಪಿಯ ನೀತಿ ನಿಯಮಗಳಂತೆ 75 ವರ್ಷ ತುಂಬಿದ ಹಿನ್ನೆಲೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರು. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಕಾಂಗ್ರೆಸ್, ಬಿಜೆಪಿ ಹೈಕಮಾಂಡ್ ರಾಜೀನಾಮೆ ಕೊಡಿಸಿದೆ, ಪಕ್ಷ ಕಟ್ಟಿದ ನಾಯಕನನ್ನು ಬಿಜೆಪಿ ಮೂಲೆಗುಂಪು ಮಾಡಿದೆ ಎಂದು ಬಿಜೆಪಿಯ ಕಾಲೆಳೆಯುತ್ತಿತ್ತು. ಆದರೆ ಸಂಸದೀಯ ಮಂಡಳಿ, ಚುನಾವಣಾ ಸಮಿತಿಯಲ್ಲಿ ಯಡಿಯೂರಪ್ಪ ಅವರಿಗೆ ಸ್ಥಾನ ಸಿಗುತ್ತಿದ್ದಂತೆ ವಿಪಕ್ಷಗಳ ಟೀಕೆಗೆ ಪೂರ್ಣವಿರಾಮ ಹಾಕಿದಂತಾಗಿದೆ. ಅಷ್ಟೇ ಅಲ್ಲದೆ ಬಿಜೆಪಿಯ ಒಂದಷ್ಟು ನಾಯಕರು ಅಚ್ಚರಿಗೊಂಡಿದ್ದಾರೆ.
ಫುಲ್ ಜೋಶ್ನಲ್ಲಿರುವ ಮಾಜಿ ಸಿಎಂ
ಬಿಜೆಪಿ ಸಂಸದೀಯ ಮಂಡಳಿ, ಚುನಾವಣಾ ಸಮಿತಿಯಲ್ಲಿ ಸ್ಥಾನ ಸಿಕ್ಕಿರುವ ಹಿನ್ನೆಲೆ ಯಡಿಯೂರಪ್ಪ ಅವರು ಸಂತೋಷದಿಂದ ಇದ್ದು, ಆಪ್ತರ ಬಳಿ ಉತ್ಸಾಹ ಹಂಚಿಕೊಂಡಿದ್ದಾರೆ. ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲಾ ರೀತಿಯ ಪ್ಲ್ಯಾನ್ ಮಾಡಿಕೊಳ್ಳಿ, ಎಲ್ಲರೂ ಸೇರಿ ಪ್ರವಾಸ ಮಾಡೋಣ. ಇನ್ನು ಯಾರಿಗೂ ಹೆದರಿಕೊಳ್ಳಬೇಕಾಗಿಲ್ಲ. ಸಮುದಾಯದ ಮತ ಒಂದೂ ಕೂಡ ಆಚೆ ಈಚೆ ಹೋಗುವುದಿಲ್ಲ ಎಂದು ಆಪ್ತರಿಗೆ ಅಭಯ ನೀಡಿದ್ದಾರೆ.
ಬಿಎಎಸ್ವೈಯಿಂದ ಪಕ್ಷಕ್ಕೆ ಇನ್ನಷ್ಟು ಶಕ್ತಿ
ಬಿಜೆಪಿ ಸಂಸದೀಯ ಮಂಡಳಿ, ಚುನಾವಣಾ ಸಮಿತಿಯಲ್ಲಿ ಯಡಿಯೂರಪ್ಪ ಅವರಿಗೆ ಸ್ಥಾನ ಸಿಕ್ಕ ಹಿನ್ನೆಲೆ ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿಕೆ ನೀಡಿದ್ದು, ಯಡಿಯೂರಪ್ಪನವರು ನಾಲ್ಕು ಬಾರಿ ಮುಖ್ಯಮಂತ್ರಿಯಾದವರು, 3 ಬಾರಿ ವಿಪಕ್ಷ ನಾಯಕರಾಗಿದ್ದವರು. ಉನ್ನತ ಮಟ್ಟದ ಸಮಿತಿಯ ಸದಸ್ಯರಾಗಿರುವುದರಿಂದ ಪಕ್ಷಕ್ಕೆ ದೊಡ್ಡ ಶಕ್ತಿ ಮತ್ತು ಲಾಭ ತಂದಂತಾಗಿದೆ. ಯಡಿಯೂರಪ್ಪರ ರಾಜಕೀಯ ಅನುಭವ ಪಕ್ಷಕ್ಕೆ ಲಾಭ ತಂದಿದೆ. ಕರ್ನಾಟಕದಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತಕ್ಕೆ ಲಾಭ ಸಿಗುತ್ತದೆ. ಯಡಿಯೂರಪ್ಪನವರ ಮಾರ್ಗದರ್ಶನದಲ್ಲಿ ನಾವು ಸಾಗುತ್ತೇವೆ ಎಂದಿದ್ದಾರೆ.
ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯಿಂದ ಪಕ್ಷಕ್ಕೆ ಡ್ಯಾಮೇಜ್ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಆ ವಿಷಯದ ಬಗ್ಗೆ ಇಲ್ಲಿ ಮಾತನಾಡುವುದಿಲ್ಲ. ಆ ಪ್ರಕರಣದ ವಿಚಾರವಾಗಿ ಸರ್ಕಾರ ಎಲ್ಲಾ ಕ್ರಮ ತೆಗೆದುಕೊಂಡಿದೆ. ಆರೋಪಿಗಳನ್ನು ಬಂಧಿಸಿ ಜೈಲಿನಲ್ಲಿಟ್ಟಿದ್ದಾರೆ. ಅವರಿಗೆ ಕಾನೂನು ರೀತಿಯ ಶಿಕ್ಷೆ ನೀಡಲಾಗುವುದು ಎಂದರು. ಮುಂದುವರೆದು ಮಾತನಾಡಿದ ಅವರು, ಕಾಂಗ್ರೆಸ್‌ನವರು ಸಿದ್ದರಾಮಯ್ಯ ಹೆಸರಿನಲ್ಲಿ ಉತ್ಸವ ಮಾಡಿದರು. ಬಿಜೆಪಿ ರೈತರು, ಕೂಲಿಕಾರ್ಮಿಕರು, ಬಡವರಿಗಾಗಿ, ಜನರಿಗಾಗಿ ಉತ್ಸವ ಮಾಡುತ್ತದೆ ಎಂದರು.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:42 am, Thu, 18 August 22