ಅಹಮದಾಬಾದ್: ಹೊಸ ದೇಶ ಸ್ಥಾಪನೆ ಮಾಡ್ತೀನಿ ಅಂತಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದ, ಹುಟ್ಟಿದ ದೇಶದಲ್ಲೇ ನೆಲೆ ಕಳೆದುಕೊಳ್ಳುವಂತಾಗಿದೆ. ಗುಜರಾತ್ ನ ಅಹಮದಾಬಾದ್ನಲ್ಲಿರುವ ನಿತ್ಯಾ ಆಶ್ರಮವನ್ನು ಎರಡು ದಿನಗಳಿಂದ ನಗರಾಡಳಿತ ನೆಲಸಮಗೊಳಿಸ್ತಿದೆ.
ನಾನೇ ಪರಮೇಶ್ವರ, ನನ್ನ ದೇಶವೇ ಕೈಲಾಸ ಅನ್ನೋ ಹುಚ್ಚಾಟಗಳಿಂದಲೇ ಕುಖ್ಯಾತಿ ಪಡೆದಿರೋ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ. ಬಿಟ್ಟರೂ ಬಿಡದಿ ಮಾಯೆಯಲ್ಲಿ ಮಾಡಿದ ಹುಚ್ಚಾಟಗಳಿಂದ ರಾಜ್ಯದ ಜನರ ಆಕ್ರೋಶಕ್ಕೆ ತುತ್ತಾಗಿದ್ದ ನಿತ್ಯಾನಂದನೀಗ, ತನ್ನ ನೆಲೆಯನ್ನೇ ಕಳೆದುಕೊಂಡಿದ್ದಾನೆ. ಹೌದು, ಈಕ್ವೆಡಾರ್ನಲ್ಲಿ ಯಾವುದೇ ದ್ವೀಪವನ್ನ ನೀಡಿಲ್ಲ. ಆದ್ರೂ, ನಿತ್ಯಾನಂದ ಎಲ್ಲಿದ್ದಾನೆ ಅನ್ನೋದು ಪ್ರಶ್ನೆಯಾಗಿಯೇ ಉಳಿದಿದೆ.
ಕುಸಿಯುತ್ತಿದೆ ನಿತ್ಯಾನಂದನ ಆಧ್ಯಾತ್ಮಿಕ ಸಾಮ್ರಾಜ್ಯ..!
ಅತ್ಯಾಚಾರ, ಕಿಡ್ನಾಪ್ ಕೇಸ್ಗಳನ್ನು ಎದುರಿಸುತ್ತಿರುವ ನಿತ್ಯಾನಂದ ಭಾರತಕ್ಕೆ ಮೋಸ್ಟ್ ವಾಂಟೆಡ್ ಸ್ವಾಮಿ. ನಿತ್ಯಾನಂದನ ಆಶ್ರಮದ ಮೇಲೆ ಕಣ್ಣಿಟ್ಟಿರುವ ಪೊಲೀಸರು ಆಶ್ರಮ ಕೆಡವಲು ಮುಂದಾಗಿದ್ದಾರೆ. ಹೌದು, ಹಲವು ಕ್ರಿಮಿನಲ್ ಕೇಸ್ಗಳನ್ನು ಹೊಂದಿರುವ ವಿವಾದಿತ ಸ್ವಾಮೀಜಿ ನಿತ್ಯಾನಂದ ಆಶ್ರಮಕ್ಕೆ ಅಕ್ರಮವಾಗಿ ಜಾಗ ನೀಡಲಾಗಿದೆ ಅನ್ನೋ ಆರೋಪಗಳು ಕೇಳಿಬಂದಿವೆ. ಹೀಗಾಗಿ, ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ನಿತ್ಯಾನಂದ ದೇಶದಿಂದಲೇ ಪರಾರಿಯಾಗಿರುವ ವಿಷಯ ಖಚಿತವಾಗಿದ್ದು, ವಿದೇಶಾಂಗ ನೀತಿಯ ಪ್ರಕಾರ ಆತನ ವಿರುದ್ಧ ಅಗತ್ಯ ಕ್ರಮಗಳನ್ನ ಕೈಗೊಳ್ಳಲು ಗುಜರಾತ್ ಸರ್ಕಾರಕ್ಕೆ ಗೃಹ ಸಚಿವಾಲಯ ಸೂಚಿಸಿದೆ.
ಗುಜರಾತ್ನಲ್ಲಿದ್ದ ನಿತ್ಯಾನಂದ ಆಶ್ರಮ ನೆಲಸಮ..!
ನಿತ್ಯಾನಂದನನ್ನು ವಶಕ್ಕೆ ಪಡೆಯಲು ಪೊಲೀಸರು ಆತ ಇರುವ ಜಾಗದ ಬಗ್ಗೆ ತಡಕಾಡುತ್ತಿದ್ದಾರೆ. ಡಿಪಿಎಸ್ಗೆ ಸೇರಿದ ಮಠದ ವಿವಾದಿತ ಜಾಗದಲ್ಲಿರುವ ಕಟ್ಟಡಗಳನ್ನ ನೆಲಸಮಗೊಳಿಸಲಾಗಿದೆ. ಶನಿವಾರದಿಂದಲೇ ಕಟ್ಟಡ ತೆರವು ಕಾರ್ಯ ನಡೆಯುತ್ತಿದ್ದು, ಡಿಪಿಎಸ್ಗೆ ಸೇರಿದ ಸರ್ಕಾರಿ ಜಾಗವನ್ನ ಅಕ್ರಮವಾಗಿ ಪಡೆದಿದ್ದ ನಿತ್ಯಾನಂದ ಆಶ್ರಮದ ಕಟ್ಟಡಗಳನ್ನ ಅಹಮದಾಬಾದ್ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಮುಂದಾಳತ್ವದಲ್ಲಿ ನೆಲಸಮಗೊಳಿಸಲಾಗಿದೆ.
ಅಹಮದಾಬಾದ್ ಹೊರವಲಯದಲ್ಲಿರುವ ಹೀರಾಪುರ ಗ್ರಾಮದಲ್ಲಿರುವ ದೆಹಲಿ ಪಬ್ಲಿಕ್ ಶಾಲೆಯ ಬಳಿ ನಿತ್ಯಾನಂದ ಆಶ್ರಮಕ್ಕೆ ಅಕ್ರಮವಾಗಿ ಜಾಗ ನೀಡಿದ ಆರೋಪ ಕೇಳಿಬಂದಿತ್ತು. ಗುಜರಾತ್ನ ಅಹಮದಾಬಾದ್ನಲ್ಲಿರುವ ಯೋಗಿನಿ ಸರ್ವಜ್ಞಪೀಠಂ ಆಶ್ರಮಕ್ಕೆ ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿ ಭೂಮಿಯನ್ನು ಲೀಸ್ಗೆ ನೀಡಿದ್ದ ದೆಹಲಿ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲರನ್ನು ಪೊಲೀಸರು ಬಂಧಿಸಿದ್ರು. ಹೊಸದೇಶ ಕಟ್ಟಲು ಹೋಗಿರುವ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ, ತಾನೂ ಹುಟ್ಟಿದ ದೇಶದಲ್ಲೇ ತನ್ನ ಆಧ್ಯಾತ್ಮಿಕ ಸಾಮ್ರಾಜ್ಯ ಕುಸಿಯುತ್ತಿರುವುದು ಸುಳ್ಳಲ್ಲ.
Published On - 7:02 am, Mon, 30 December 19