ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಮಹತ್ವದ 5 ಉಚಿತ ಯೋಜನೆಗಳದ್ದೇ ಚರ್ಚೆ ಜೋರಾಗಿದೆ. ಈ ಯೋಜನೆಗಳನ್ನು ಸರ್ಕಾರ ಒಂದೊಂದಾಗಿ ಚಾಲನೆ ನೀಡಲು ನಿರ್ಧರಿಸಿದೆ. ಮೊದಲನೆಯದಾಗಿ ಇಂದು (ಜೂ.11) “ಶಕ್ತಿ ಯೋಜನೆ” ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಚಾಲನೆ ನೀಡಲಿದ್ದಾರೆ. ವಿಧಾನಸೌಧದಲ್ಲಿ ಶಕ್ತಿ ಯೋಜನೆಗೆ ಚಾಲನೆ ದೊರೆಯುತ್ತಿದ್ದಂತೆ ರಾಜ್ಯದ ಎಲ್ಲಾ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಆಯಾ ಜಿಲ್ಲೆಯ ಸಚಿವರು, ಶಾಸಕರು ಯೋಜನೆಗೆ ಚಾಲನೆ ನೀಡಲಿದ್ದಾರೆ. ಮತ್ತೊಂದಡೆ ವಿದ್ಯುತ್ ಬಿಲ್ ದರ ಏರಿಕೆ ರಾಜ್ಯದ ಜನರನ್ನು ಕಂಗೆಡಿಸಿದೆ. ಇನ್ನು ಮುಂಗಾರು ಕೇರಳ ಪ್ರವೇಶ ಮತ್ತು ಬಿಪರ್‌ಜಾಯ್ ಚಂಡಮಾರುತ ತೀರ್ವತೆ ಜೋರಾಗಿದ್ದು ದಕ್ಷಿಣ ಭಾರತದಲ್ಲಿ ಅಧಿಕ ಮಳೆಯಾಗಲಿದೆ. ರಾಜ್ಯದ ಕರವಾಳಿ ಅತಿಯಾಗಿ ಮಳೆಯಾಗಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಇದರೊಂದಿಗೆ ಇಂದಿನ ಕ್ಷಣ ಕ್ಷಣ ಮಾಹಿತಿ ಇಲ್ಲಿದೆ…
ದಾವಣಗೆರೆ: ಶಕ್ತಿ ಯೋಜನೆ ಉದ್ಘಾಟನೆ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ, ಎಸ್ಪಿ, ಪಾಲಿಕೆ ಆಯುಕ್ತರು ಸೇರಿ ಹಿರಿಯ ಅಧಿಕಾರಿಗಳು ಗೈರಾಗಿದ್ದಾರೆ. ಇದರಿಂದ ಗರಂ ಆದ ಜಿಲ್ಲಾ ಉಸ್ತುವಾರಿ ಎಸ್ ಎಸ್ ಮಲ್ಲಿಕಾರ್ಜುನ, ಅಧಿಕಾರಿಗಳ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ. ಸರ್ಕಾರಿ ಕಾರ್ಯಕ್ರಮಗಳಿಗೆ ಬಹಳಷ್ಟು ಅಧಿಕಾರಿಗಳು ಗೈರು ಹಾಜರಿದ್ದಾರೆ. ಇದು ಸರಿಯಲ್ಲ. ಸೂಕ್ತ ರೀತಿಯಿಂದ ಜನ ಪ್ರತಿನಿಧಿಗಳಿಗೆ ಸ್ಪಂದಿಸಿ ಕೆಲಸ ಮಾಡಿ. ಇಲ್ಲಾ ಇಲ್ಲಿಂದ ಜಾಗಾ ಖಾಲಿಮಾಡಿ ಎಂದರು.
ಕಾಫಿನಾಡು ಚಿಕ್ಕಮಗಳೂರಿನ ಮೂಡಿಗೆರೆ ಚಿಕ್ಕಮಗಳೂರು, ಕಳಸ ತಾಲೂಕಿನಲ್ಲಿ ಧಾರಾಕಾರ ಮಳೆಯಾಗಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹರ ಚಾರ್ಮುಡಿ ಘಾಟ್ನಲ್ಲಿ ಸುಮಾರು ಒಂದು ಗಂಟೆಗಳ ಕಾಲ ಭಾರೀ ಮಳೆಯಾಗಿದ್ದು, ಇದರೊದಿಗೆ ಗಾಳಿಯೂ ಬೀಸತೊಡಗಿದೆ. ಯಗಟಿಪುರದಲ್ಲಿ ಸಿಡಿಲು ಬಡಿದು ಓರ್ವ ಸಾವನ್ನಪ್ಪದ ಘಟನೆಯೂ ನಡೆದಿದೆ.
ರಾಯಚೂರು ಜಿಲ್ಲೆಯ ಹಲವೆಡೆ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ದೇವದುರ್ಗ ತಾಲೂಕಿನ ಗೆಜ್ಜೆಬಾವಿದೊಡ್ಡಿ ಗ್ರಾಮದಲ್ಲಿ ಸಿಡಿಲು ಬಡಿದು ಮೌನೇಶ (35) ಎಂಬವರು ಸಾವನ್ನಪ್ಪಿದ್ದಾರೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಸ್ಥಳಕ್ಕೆ ದೇವದುರ್ಗ ಕ್ಷೇತ್ರದ ಶಾಸಕಿ ಕರಿಯಮ್ಮ ನಾಯಕ್ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.
ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನಲ್ಲಿ ಅಬ್ಬರದ ಮಳೆಯಾಗುತ್ತಿದೆ. ಚಿಂಚೋಳಿ ಸೇರಿದಂತೆ ಹಲವೆಡೆ ಗುಡುಗು ಸಹಿತ ಭಾರೀ ಮಳೆಯಾಗುತ್ತಿದ್ದು, ಕೊಳ್ಳೂರು ಗ್ರಾಮದಲ್ಲಿ ಹಲವು ಮನೆಗಳಿಗೆ ನಾಲೆ ನೀರು ನುಗ್ಗಿದೆ. ಪರಿಣಾಮ ಮನೆಯಲ್ಲಿದ್ದ ದವಸ ಧಾನ್ಯ ನೀರುಪಾಲಾಗಿದೆ. ಚಿಂಚೋಳಿಯ ಹಲವೆಡೆ ರಸ್ತೆಗಳೂ ಜಲಾವೃತಗೊಂಡಿವೆ.
ಯಾದಗಿರಿಯಲ್ಲಿ ಕಳೆದ ಒಂದು ಗಂಟೆಯಿಂದ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ. ಸುರಪುರ, ಶಹಾಪುರ, ವಡಗೇರಾ ಹಾಗೂ ಯಾದಗಿರಿಯಲ್ಲಿ ಧಾರಕಾರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಬಿರುಗಾಳಿ ಮಳೆಗೆ ಶಹಾಪುರದ ಸಗರ ಗ್ರಾಮದಲ್ಲಿ ಶೆಡ್ ಮನೆ ನೆಲಕ್ಕುರಳಿದ್ದು, ದಿನಬಳಕೆ ವಸ್ತಗಳೆಲ್ಲಾ ಹಾನಿಯಾಗಿದೆ. ಮಾತ್ರವಲ್ಲದೆ, ಗಾಳಿಗೆ ಮರಗಳು ವಿದ್ಯುತ್ ಕಂಬಗಳು ಧರೆಗುರುಳಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಇನ್ನೊಂದೆಡೆ, ಉತ್ತಮ ಮಳೆಯಿಂದಾಗಿ ರೈತರು ಸಂತಸಗೊಂಡಿದ್ದಾರೆ.
ವಿದ್ಯುತ್ ದರ ಏರಿಕೆಗೆ ರಾಜ್ಯದ ಹಲವೆಡೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನೆಲೆ ಮಾಧ್ಯಮ ಪ್ರಕಟಣೆ ಹೊರಡಿಸಿದ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ, ಮೇ 12ರಂದು KERC ಪ್ರತಿ ಯೂನಿಟ್ಗೆ 70 ಪೈಸೆ ಏರಿಕೆ ಮಾಡಿದೆ. ಈ ಹಿನ್ನೆಲೆಯಲ್ಲಿ ಬೆಸ್ಕಾಂ, ಜೂನ್ ತಿಂಗಳಲ್ಲಿ ನೀಡುವ ಮೇ ತಿಂಗಳ ವಿದ್ಯುತ್ ಬಳಕೆಯ ಬಿಲ್ ನಲ್ಲಿ ಪರಿಷ್ಕೃತ ವಿದ್ಯುತ್ ಶುಲ್ಕವನ್ನು ನಮೂದಿಸಿದೆ. ವಿದ್ಯುತ್ ದರ ಪರಿಷ್ಕರಣೆ ಆದೇಶ ಏಪ್ರಿಲ್ನಿಂದ ಪೂರ್ವನ್ವಯವಾಗುವುದರಿಂದ ಬಿಲ್ನಲ್ಲಿ ಏಪ್ರಿಲ್ ತಿಂಗಳ ಹಿಂಬಾಕಿಯನ್ನು ನೀಡಲಾಗಿದೆ ಎಂದಿದ್ದಾರೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಪರ್‌ಜಾಯ್ ಚಂಡಮಾರುತದ ಅಬ್ಬರ ಜೋರಾಗಿದೆ. ಸೋಮೇಶ್ವರ ಬಳಿಯ ಬಟ್ಟಪ್ಪಾಡಿ ಕಡಲತೀರದಲ್ಲಿ ಕಡಲ್ಕೊರೆತ ಉಂಟಾಗಿ ತೆಂಗಿನಮರವೊಂದು ಧರೆಗುರುಳಿದೆ. ಟಿವಿ9 ವರದಿ ಮಾಡುತ್ತಿದ್ದ ಸ್ಥಳದಲ್ಲೇ ಈ ಮೊದಲು ಮನೆಯ ಒಂದು ಭಾಗ ಕುಸಿತವಾಗಿತ್ತು. ಮರ ಬೀಳುವ ದೃಶ್ಯ ಮೊಬೈನಲ್ಲಿ ಸೆರೆಯಾಗಿದೆ.
ಮಂಗಳೂರು: ಉಚ್ಚಿಲ ಬಟ್ಟಪಾಡಿ ಕಡಲ್ಕೊರೆತ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿದರು. ಈ ವೇಳೆ ಉಳ್ಳಾಲ ಶಾಸಕ, ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಜೊತೆಗಿದ್ದರು. ಕಡಲ್ಕೊರೆತ ಸಂತ್ರಸ್ತರ ಸಮಸ್ಯೆ ಆಲಿಸಿದ ಸಚಿವ ಗುಂಡೂರಾವ್ ಅವರಿಗೆ ಶಾಶ್ವತ ಪರಿಹಾರ ಒದಗಿಸುವಂತೆ ಸ್ಥಳೀಯರು ಆಗ್ರಹಿಸಿದರು. ಸಮಸ್ಯೆಯಿಂದ ರಾತ್ರಿ ಕಳೆಯಲು ಭಯವಾಗುತ್ತಿದೆ ಅಂತ ಅಳಲು ತೋಡಿಕೊಂಡಿದ್ದಾರೆ. ಸಮಸ್ಯೆ ಆಲಿಸಿದ ಸಚಿವರು ತಕ್ಷಣ ಸ್ಥಳೀಯ ಸಂತ್ರಸ್ತರಿಗೆ ಪರಿಹಾರ ಒದಗಿಸುವಂತೆ ಜಿಲ್ಲಾಧಿಕಾರಿಯವರಿಗೆ ಸೂಚಿಸಿದರು.
ಬೆಳಗಾವಿ: ವಿಧಾನಸಭೆ ಚುನಾವಣೆಯಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಸೋತಿದ್ದೇವೆ ಆ ಬಗ್ಗೆ ಕುಂಟು ನೆಪ ಹೇಳಲ್ಲ ಎಂದು ಅಥಣಿಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಸೋಲು ಸ್ವೀಕಾರ ಮಾಡುತ್ತೇವೆ, ಹೊಸ ಶಾಸಕರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದು ಪರೋಕ್ಷವಾಗಿ ಲಕ್ಷ್ಮಣ್ ಸವದಿಗೆ ಅಭಿನಂದನೆ ಸಲ್ಲಿಸಿದರು. ಅವರು ಕಾಂಗ್ರೆಸ್ ಸೇರುವಾಗ ಅಥಣಿ ಅಭಿವೃದ್ಧಿಗಾಗಿ ಕಾಂಗ್ರೆಸ್ ಸೇರುತ್ತೇವೆ ಅಂದಿದ್ದರು. ಅಭಿವೃದ್ಧಿ ಮಾಡಲಿ ನಾವು ಸಹಕಾರ ಕೊಡುತ್ತೇವೆ ಎಂದರು. ರಾಜ್ಯ ಸರ್ಕಾರದಿಂದ ಗ್ಯಾರಂಟಿ ಯೋಜನೆಗಳ ಘೋಷಣೆ ವಿಚಾರವಾಗಿ ಮಾತನಾಡಿದ ಅವರು, ನನಗೆ ತಿಳಿದ ಮಟ್ಟಿಗೆ ಅವರು ನಕ್ಕಿ ಮೋಸ ಮಾಡುತ್ತಾರೆ. ನನ್ನ ರಾಜಕೀಯ ಅನುಭವ ಪ್ರಕಾರ ಲೋಕಸಭೆ ಚುನಾವಣೆವರೆಗೆ ಗುದ್ದಾಡಿ ಕೊಡುತ್ತಾರೆ, ಮುಂದೆ ಕೈ ಎಬಿಸುತ್ತಾರೆ. ಎಲ್ಲಾ ಅಭಿವೃದ್ಧಿ ಕಾರ್ಯ ಬಂದ್ ಮಾಡಿ ಬರೀ ಅದನ್ನೇ ಮಾಡಬೇಕಾಗುತ್ತದೆ. ಇದರಿಂದ ರಾಜ್ಯದ ಅಭಿವೃದ್ಧಿ ಕಾರ್ಯ ಕುಂಠಿತ ಆಗುತ್ತದೆ ಎಂದರು.
ಪಠ್ಯ ಪುಸ್ತಕ ಪರಿಷ್ಕರಣೆಗೆ ರಾಜ್ಯ ಸರ್ಕಾರ ನಿರ್ಧಾರ ವಿಚಾರವಾಗಿ ಬಾಗಲಕೋಟೆಯಲ್ಲಿ ಮಾತನಾಡಿದ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ, ಪಠ್ಯ ಪರಿಷ್ಕರಣೆ ಮಾಡಬೇಕೆಂದರೆ ಮಾಡುತ್ತೇವೆ, ಅದರಲ್ಲಿ ತಪ್ಪೇನು? ರಾಜ್ಯ, ದೇಶದ ಜನರಿಗೆ ಅಗತ್ಯವಿರುವ ಶಿಕ್ಷಣವನ್ನು ಕೊಡುತ್ತೇವೆ. ಕೋಮು ಗಲಭೆ ಹಚ್ಚುವಂತಹ ಶಿಕ್ಷಣವನ್ನು ಹೇಳಿಕೊಡುವುದಿಲ್ಲ. ದೇಶ ಕಟ್ಟುವಂತಹ, ಪ್ರೀತಿ ವಿಶ್ವಾಸ ಗಳಿಸುವ ಶಿಕ್ಷಣ ನೀಡುತ್ತೇವೆ. ಜನರಲ್ಲಿ ಒಡಕುಂಟು ಮಾಡುವ ಶಿಕ್ಷಣ ನೀಡಲ್ಲ ಎಂದರು.
ಕೋಲಾರ: ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಸಾಲ ಮನ್ನಾ ವಿಚಾರವಾಗಿ ಕಾಂಗ್ರೇಸ್ ಶಕ್ತಿ ಯೋಜನೆ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ಕೋಲಾರ ಜಿಲ್ಲೆ ಶ್ರೀನಿವಾಸಪುರ ಜೆಡಿಎಸ್ ಶಾಸಕ ವೆಂಕಟಶಿವಾರೆಡ್ಡಿ, ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೇಸ್ ಸರ್ಕಾರ ಐದು ಗ್ಯಾರಂಟಿ ಜೊತೆಗೆ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಸಾಲ ಮನ್ನ ಮಾಡಬೇಕು. ಸಿಎಂ ಸಿದ್ದರಾಮಯ್ಯ ಅವರು ಚುನಾವಣೆಗೂ ಮೊದಲು ಕೋಲಾರದ ವೇಮಗಲ್ ಮಹಿಳಾ ಸಮಾವೇಶದಲ್ಲಿ ಆಶ್ವಾಸನೆ ನೀಡಿದ್ದರು. ಹೀಗಾಗಿ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಸಾಲ ಮನ್ನಾ ಮಾಡಿದರೆ ಮಹಿಳೆಯರಿಗೆ ಅನುಕೂಲ ಆಗಲಿದೆ ಎಂದರು.
ಚುನಾವಣೆಗೆ ಮೊದಲು ಐದು ಗ್ಯಾರಂಟಿಗಳನ್ನ ನಾವು ಜನರಿಗೆ ತಿಳಿಸಿದ್ದೆವು. ನಮ್ಮ ಭರವಸೆ ಮಾತು, ಬದ್ಧತೆ ಹಾಗೂ ಜನಪರ ನಿಲುವು ಗ್ಯಾರಂಟಿಗಳ ಅನುಷ್ಠಾನ ಮಾಡಲು ನಿರ್ಣಯಿಸಿದ್ದೇವೆ ಎಂದು ಗದಗದಲ್ಲಿ ಸಚಿವ ಹೆಚ್.ಕೆ.ಪಾಟೀಲ ಹೇಳಿದ್ದಾರೆ. ಇದಕ್ಕೆಲ್ಲ ಸಾಕಷ್ಟು ಆರ್ಥಿಕ ಹೊರೆಯಾಗಿ ಸಾಕಷ್ಟು ಖರ್ಚಾಗುತ್ತದೆ. ಆದರೆ ಜನರ ಕಲ್ಯಾಣದ ಸಲುವಾಗಿ ಆ ವೆಚ್ಚವನ್ನ ಭರಿಸಬೇಕು. ಸರ್ಕಾರದಲ್ಲಿ ಅನವಶ್ಯಕವಾಗಿ ಆಗುತ್ತಿದ್ದ ಖರ್ಚನ್ನ ನಿಗ್ರಹಿಸಿ ಹಣವನ್ನ ಉಳಿಸಿ, ಗಳಿಸಬೇಕಾಗಿದೆ. ಅನವಶ್ಯಕವಾಗಿ ಲೇಟಾಯಿತು, ಎರಡು ದಿವಸ, ಮೂರು ದಿವಸ ಆಯಿತು ಅಂತ ಹೇಳುತ್ತಾ ಇದ್ದರು. ಮೊದಲನೇ ದಿವಸವೇ ಅನೌಪಚಾರಿಕ ಕ್ಯಾಬಿನೆಟ್ ಮೀಟಿಂಗ್ನಲ್ಲಿ ನಿರ್ಣಯ ಮಾಡಿದ್ದೇವೆ. ನಂತರ ಮೊದಲ ಅಧಿಕೃತ ಕ್ಯಾಬಿನೇಟ್ ಮೀಟಿಂಗ್ನಲ್ಲಿ ಆಫೀಶಿಯಲ್ ಆಗಿ ನಿರ್ಧಾರ ಮಾಡಿದ್ದೆವು ಎಂದರು.
ಬಳ್ಳಾರಿ: ಶಕ್ತಿ ಯೋಜನೆಯ ಚಾಲನೆ ವೇಳೆ ಅಧಿಕಾರಿಗಳ ಕಡೆಯಿಂದ ಸಣ್ಣ ಎಡವಟ್ಟೊಂದಾಗಿದೆ, ಯೋಜನೆ ಚಾಲನೆ ನೀಡಲು ಆರು ಹೊಸ ಬಸ್ ತರಲಾಗಿತ್ತು. ಈ ಪೈಕಿ ಒಂದು ಬಸ್ನಲ್ಲಿ ಬಿಜೆಪಿ ಕಮಲದ ಚಿಹ್ನೆಯ ಹಳೆಯ ಪೋಸ್ಟರ್ ಅಂಟಿಸಲಾಗಿತ್ತು. ಚಾಲನೆ ನೀಡುವ ವೇಳೆ ಇದನ್ನು ಗಮನಿಸಿದ ಸಚಿವ ನಾಗೇಂದ್ರ ಅವರು ಪೋಸ್ಟರ್ ತೆಗೆಯುವಂತೆ ಸೂಚಿಸಿದರು. ಬಿಜೆಪಿ ಚಿಹ್ನೆಯ ಪೋಸ್ಟರ್ ತೆಗೆದ ಮೇಲೆ ಯೋಜನೆಗೆ ಚಾಲನೆ ನೀಡಿದರು.
ಬಾಗಲಕೋಟೆ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ ಅವರು ಶಕ್ತಿಯೋಜನೆಗೆ ಚಾಲನೆ ನೀಡಿದರು. ಮೊದಲ ಟಿಕೆಟ್ ಪಡೆದ ನರ್ಸಿಂಗ್ ವಿದ್ಯಾರ್ಥಿನಿ ಸಂತಸಗೊಂಡಿದ್ದು, ಮಹಿಳೆಯರು ಈ ದಿನ ಬಹಳ ಖುಷಿ ಪಟ್ಟಿದ್ದಾರೆ. ಬಡವರಿಗೆ, ಬಡ ವಿದ್ಯಾರ್ಥಿನಿಯರಿಗೆ, ನಿತ್ಯ ಕೆಲಸಕ್ಕೆ ಹೋಗುವ ಮಹಿಳೆಯರಿಗೆ ಇದರಿಂದ ಬಹಳ ಸಹಾಯವಾಗಲಿದೆ. ಎಷ್ಟೋ ಜನರಿಗೆ ಬಸ್ ಸಂಚಾರ ಮಾಡಲೂ ಹಣ ಇರುವುದಿಲ್ಲ. ಬೇರೆ ಊರಿಗೆ ಹೋಗಲು ಬಸ್ ಚಾರ್ಜ್ ಇರುವುದಿಲ್ಲ. ಅವರಿಗೆಲ್ಲ ಸಹಾಯವಾಗುತ್ತದೆ. ನನಗೆ ಮೊದಲ ಟಿಕೆಟ್ ಕೊಟ್ಟಿದ್ದಾರೆ ಬಹಳ ಸಂತಸವಾಗಿದೆ. ಕೆಲಸ ಮಾಡಲು ಮಹಿಳೆಯರು ಎಲ್ಲಿ ಬೇಕಾದರು ಹೋಗಬಹುದು. ಪಾಸ್ ಇಲ್ಲ ಅಂತ ಎಷ್ಟೋ ವಿದ್ಯಾರ್ಥಿಗಳು ಶಾಲೆಕಾಲೇಜು ಬಿಡುತ್ತಿದ್ದರು. ಆದರೆ ಈಗ ಎಲ್ಲವೂ ಅನುಕೂಲವಾಗಿದೆ. ನಾವು ಉಚಿತ ಇರೋದರಿಂದ ಈಗ ಬನಶಂಕರಿ ದೇವಸ್ಥಾನಕ್ಕೆ ಹೊರಟಿದ್ದೇವೆ. ಈ ಯೋಜನೆ ಕಂಟಿನ್ಯೂ ಆಗಿ ಇರುತ್ತದೆ ಎಂಬ ವಿಶ್ವಾಸವಿದೆ. ಅರ್ಧಕ್ಕೆ ನಿಲ್ಲಿಸಲ್ಲ ಅಂತ ಭಾವಿಸಿದ್ದೇನೆ ಎಂದರು.
ಬೀದರ್: ಇಂದು ಕಾಂಗ್ರೆಸ್ ಸರ್ಕಾರ ಮೊದಲ ಶಕ್ತಿ ಯೋಜನೆ ಜಾರಿಯಾಗಿದೆ. ಮಹಿಳೆಯರಿಗೆ ಸಬಲಿಕರಣ ಮಾಡುವ ಈ ಶಕ್ತಿ ಯೋಜನೆಯಾಗಿದೆ. ಕಾರ್ಮಿಕ ವರ್ಗ, ಕೆಲಸ ಕಾರ್ಯಗಳಿಗೆ ತೆರಳುವ ಮಹಿಳೆಯರಿಗೆ ಈ ಯೋಜನೆ ಅನುಕುಲವಾಗಲಿದೆ. ಮಹಿಳೆಯರು ಶಕ್ತಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಹೇಳಿದರು. ಸಿದ್ದರಾಮಯ್ಯ ಐದು ವರ್ಷ ಪುರ್ಣ ಅವದಿ ಸಿಎಂ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಬದಲಾವಣೆ ವಿಚಾರ ಅಪ್ರಸ್ತುತ ಪ್ರಶ್ನೆಯಾಗಿದೆ. 136 ಜನ ಶಾಸಕರು ಗೆದ್ದಿದ್ದಾರೆ. ಈ ಸರ್ಕಾರಕ್ಕೆ ಯಾರಿಂದಲೂ ಅಲಿಗಾಡಿಸಲು ಸಾಧ್ಯವಿಲ್ಲ. ಸರ್ಕಾರ ಯಾವ ರೀತಿ ಆಡಳಿತ ನಿಡುತ್ತಿದೆ ಅನ್ನುವುದು ಪ್ರಮುಖವಾದದ್ದು. ಹಗರಣ ರಹಿತ, ಪಾರದರ್ಶಕ ಆಡಳಿತ ನಿಡುವ ನಮ್ಮ ಸರ್ಕಾರ ಬಂಡೆಯಂತಿದೆ ಎಂದರು.
ಕಾಂಗ್ರೆಸ್ ಸರ್ಕಾರದ ಬಗ್ಗೆ ಬೇಕಾದಷ್ಟು ಟೀಕೆಗಳ ಸುರಿಮಳೆ ಸುರಿಸಿದ್ದಾರೆ. 41 ಲಕ್ಷ ಮಹಿಳೆಯರು ಪ್ರತಿದಿನ ರಾಜ್ಯದಲ್ಲಿ ಸಂಚಾರ ಮಾಡುತ್ತಾರೆ. ವಿದ್ಯುತ್ ದರ ಏರಿಸಿದ್ದು ನಾವಲ್ಲ. ಮೇ 12 ರಿಂದ ವಿದ್ಯುತ್ ದರ ಏರಿಕೆ ಅಂತ ಏಪ್ರಿಲ್ನಲ್ಲೇ ತೀರ್ಮಾನ ಆಗಿತ್ತು. ವಿಪಕ್ಷಗಳಿಗೆ ಭಯ ಶುರುವಾಗಿದೆ. ಅವರು ಗೇಲಿ ಮಾಡಿಕೊಂಡು ಅಲ್ಲಿಯೇ ಇರಲಿ. ನಮ್ಮ ಗ್ಯಾರಂಟಿ ಮುಂದುವರಿಸಿಕೊಂಡು ನಾವು ಮುಂದೆ ಹೋಗುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಟೀಂ ಇಂಡಿಯಾ ಅಜಿಂಕ್ಯ ರಹಾನೆ ಮತ್ತು ಕೊಹ್ಲಿ ಅವರಿಂದ ದೊಡ್ಡ ಜೊತೆಯಾಟವನ್ನು ನಿರೀಕ್ಷಿಸುತ್ತಿದೆ. ಇಬ್ಬರೂ ಅನುಭವಿ ಆಟಗಾರರು ಹೌದು. ಸದ್ಯ ಇವರಿಬ್ಬರು ನಾಲ್ಕನೇ ವಿಕೆಟ್‌ಗೆ ಅಜೇಯ 71 ರನ್‌ಗಳ ಜೊತೆಯಾಟವಾಡಿದ್ದಾರೆ. ಎಲ್ಲಾ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಈ ಪಾಲುದಾರಿಕೆ ಬೆಳೆಯಲಿ ಎಂದು ಹಾರೈಸಿದ್ದಾರೆ.
ಬೆಂಗಳೂರು: ಇಂದು ರಾಜ್ಯಾದ್ಯಂತ ಶಕ್ತಿ ಯೋಜನೆ ಜಾರಿಯಾಗಿದೆ. 41.85 ಲಕ್ಷ ಮಹಿಳೆಯರು ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಅಂತಾರಾಜ್ಯ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲ. ಮಂಗಳಮುಖಿಯರು ಸಹ ಉಚಿತವಾಗಿ ಪ್ರಯಾಣ ಮಾಡಬಹುದು. ಮಹಿಳೆಯರಿಗೆ ಶಕ್ತಿ ತುಂಬಲು ‘ಶಕ್ತಿ ಯೋಜನೆ’ ಎಂಬ ಹೆಸರು ಇಟ್ಟಿದೆ. ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಪಾಲ್ಗೊಂಡಾಗ ಮಾತ್ರ ದೇಶ ಅಭಿವೃದ್ದಿ. ಬಡವರ ಜೇಬಿಗೆ ದುಡ್ಡು ಹಾಕುವುದೇ ನಮ್ಮ ಸರ್ಕಾರದ ಉದ್ದೇಶ. 5 ಗ್ಯಾರಂಟಿಗಳಲ್ಲಿ 4 ಗ್ಯಾರಂಟಿಗಳು ಮಹಿಳೆಯರಿಗೆ ಸೀಮಿತವಾಗಿದೆ. ಹೆಣ್ಣು ಸಮಾಜದ ಕಣ್ಣು ಇದ್ದಂತೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು: ಚುನಾವಣೆ ಪೂರ್ವದಲ್ಲಿ 5 ಗ್ಯಾರಂಟಿ ಘೋಷಣೆ ಮಾಡಿದ್ದೇವು. ಈ ಹಿಂದೆ ಅಧಿಕಾರದಲ್ಲಿದ್ದಾಗಲೂ ನುಡಿದಂತೆ ನಡೆದಿದ್ದೇವೆ. ಜನರಿಗೆ ಕೊಟ್ಟ ಭರವಸೆ ಈಡೇರಿಸಬೇಕೆಂಬುದು ನಮ್ಮ ಉದ್ದೇಶ. ಚುನಾವಣಾ ಪ್ರಣಾಳಿಕೆಯಲ್ಲಿ ಅನೇಕ ಭರವಸೆ ಕೊಟ್ಟಿದ್ದೇವೆ. ನಮ್ಮ ಪ್ರಣಾಳಿಕೆಯಲ್ಲಿ 5 ಗ್ಯಾರಂಟಿಗಳು ಪ್ರಮುಖವಾದದ್ದು. ನಾನು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನೆ ಮನೆಗೆ ಗ್ಯಾರಂಟಿ ವಿತರಿಸಿದ್ದೇವು. ಗ್ಯಾರಂಟಿ ಕಾರ್ಡ್ ಕೊಟ್ಟಿದ್ದನ್ನು ವಿಪಕ್ಷಗಳು ಗೇಲಿ ಮಾಡಿದ್ದರು. ವಿಪಕ್ಷಗಳ ಟೀಕೆಗೆ ನಾವು ವಿಚಲಿತರಾಗಲಿಲ್ಲ. ರಾಜ್ಯದ ಜನರ ಆಶೀರ್ವಾದಿಂದ ನಮಗೆ ಸ್ಪಷ್ಟ ಬಹುಮತ ಸಿಕ್ಕಿತು. ಮೊದಲ ಕ್ಯಾಬಿನೆಟ್ನಲ್ಲೇ ಗ್ಯಾರಂಟಿಗಳಿಗೆ ಒಪ್ಪಿಗೆ ನೀಡಿದ್ದೆವು
ಯಾವ್ಯಾವ ಗ್ಯಾರಂಟಿ ಯಾವ ದಿನ ಜಾರಿ ಎಂದು ಆದೇಶ ಹೊರಡಿಸಿದ್ದೇವೆ. ಅದರಂತೆಯೇ ಇಂದು ಶಕ್ತಿ ಯೋಜನೆ ಜಾರಿ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು: ರಾಜ್ಯಾದ್ಯಂತ ಏಕಕಾಲದಲ್ಲಿ ಶಕ್ತಿ ಯೋಜನೆಗೆ ಚಾಲನೆ ದೊರೆತಿದೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರಗಳಲ್ಲಿ ಆಯಾ ಜಿಲ್ಲೆಯ ಸಚಿವರು, ಶಾಸಕರು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಉಡುಪಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಬೆಳಗಾವಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ, ವಿಜಯಪುರದಲ್ಲಿ ಸಚಿವ ಎಂ.ಬಿ.ಪಾಟೀಲ್, ಚಾಮರಾಜನಗರದಲ್ಲಿ ಸಚಿವ ಕೆ.ವೆಂಕಟೇಶ್, ಹಾವೇರಿಯಲ್ಲಿ ಸಚಿವ ಶಿವಾನಂದ ಪಾಟೀಲ್, ಗದಗದಲ್ಲಿ ಸಚಿವ ಹೆಚ್.ಕೆ.ಪಾಟೀಲ್, ದೇವನಹಳ್ಳಿಯಲ್ಲಿ ಸಚಿವ ಕೆ.ಹೆಚ್.ಮುನಿಯಪ್ಪ, ಧಾರವಾಡದಲ್ಲಿ ಸಚಿವ ಸಂತೋಷ್ ಲಾಡ್, ಬಳ್ಳಾರಿಯಲ್ಲಿ ಸಚಿವ ಬಿ.ನಾಗೇಂದ್ರ, ರಾಮನಗರದಲ್ಲಿ ಡಿಸಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಚಾಲನೆ ನೀಡಿದ್ದಾರೆ.
ಬೆಂಗಳೂರು: ರಾಜ್ಯಾದ್ಯಂತ ಏಕಕಾಲದಲ್ಲಿ ಶಕ್ತಿ ಯೋಜನೆಗೆ ಚಾಲನೆ ದೊರೆತಿದೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರಗಳಲ್ಲಿ ಆಯಾ ಜಿಲ್ಲೆಯ ಸಚಿವರು, ಶಾಸಕರು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಮೈಸೂರಿನಲ್ಲಿ ಸಚಿವ ಹೆ.ಸಿ.ಮಹದೇವಪ್ಪ, ತುಮಕೂರಿನಲ್ಲಿ ಸಚಿವ ಡಾ.ಜಿ.ಪರಮೇಶ್ವರ್, ಕೊಪ್ಪಳದಲ್ಲಿ ಸಚಿವ ಶಿವರಾಜ್ ತಂಗಡಗಿ, ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ, ಹಾಸನದಲ್ಲಿ ಸಚಿವ ಕೆ.ಎನ್.ರಾಜಣ್ಣ,
ಮಂಗಳೂರಿನಲ್ಲಿ ಸಚಿವ ದಿನೇಶ್ ಗುಂಡೂರಾವ್, ಶಿವಮೊಗ್ಗದಲ್ಲಿ ಸಚಿವ ಮಧು ಬಂಗಾರಪ್ಪ, ಚಿಕ್ಕಬಳ್ಳಾಪುರದಲ್ಲಿ ಸಚಿವ ಡಾ.ಎಂ.ಸಿ.ಸುಧಾಕರ್, ಚಿತ್ರದುರ್ಗದಲ್ಲಿ ಸಚಿವ ಡಿ.ಸುಧಾಕರ್ ಚಾಲನೆ ನೀಡಿದ್ದಾರೆ.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿದ್ದ ಬಸ್ ಮೆಜೆಸ್ಟಿಕ್ ತಲುಪಿದೆ. ನಿಲ್ದಾಣದಲ್ಲಿ ಮಹಿಳೆಯರಿಗೆ ಟಿಕೆಟ್ ಹರಿದು ಕೊಡುವ ಮೂಲಕ ಮತ್ತೊಮ್ಮೆ ಶಕ್ತಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಚಾಲನೆ ನೀಡಿದರು.
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಶಕ್ತಿ ಯೋಜನೆಗೆ ಶಾಸಕಿ ನಯನಾ ಮೋಟಮ್ಮ ಮಹಿಳೆಯರಿಗೆ ಬಸ್ ಟಿಕೆಟ್ ನೀಡುವ ಮೂಲಕ ಚಾಲನೆ ನೀಡಿದ್ದಾರೆ. ಮಹಿಳೆಯರು ಸ್ವಾವಲಂಬಿಯಾಗಿ ಬದುಕು ಶಕ್ತಿ ಯೋಜನೆ ಪ್ರಮುಖವಾಗಿದ್ದು, ಶಕ್ತಿ ಯೋಜನೆ ತುಂಬಾ ಮಹತ್ವದ ಯೋಜನೆಯಾಗಿದೆ. ಗಂಡಂದಿರ ಹಣದಲ್ಲಿ ಅವಲಂಬಿತರಾಗುವುದು ಈ ಯೋಜನೆಯಿಂದ ತಪ್ಪುತ್ತದೆ. ಈ ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಸಾಕಷ್ಟು ಉಳಿತಾಯವಾಗುತ್ತೆ ಎಂದು ಹೇಳಿದ್ದಾರೆ.
ಬೆಂಗಳೂರು: ವಿಧಾನಸೌಧದಿಂದ ಮೆಜೆಸ್ಟಿಗೆ ಸಿಎಂ ಸಿದ್ದರಾಮಯ್ಯ ತೆರಳಲಿದ್ದಾರೆ. ಮೆಜೆಸ್ಟಿಕ್ನಲ್ಲಿ ಟಿಕೆಟ್ ನೀಡಿ ಮತ್ತೆ ಯೋಜನೆಗೆ ಚಾಲನೆ ನೀಡಲಿದ್ದಾರೆ. ಬಿಎಂಟಿಸಿಯ ಡಿಪೋ 10ರ ಕೆಎ 57 ಎಫ್ 5324 ಸಂಖ್ಯೆಯ ಬಸ್ ನಲ್ಲಿ
ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ರಾಮಲಿಂಗಾರೆಡ್ಡಿ, ಇಲಾಖೆ ಅಧಿಕಾರಿಗಳು ಬಸ್ನಲ್ಲಿ ಪ್ರಯಾಣ ಮಾಡಲಿದ್ದಾರೆ. ಬಸ್ ವಿಧಾನಸೌಧದಿಂದ ಹೋಟೆಲ್ ಕ್ಯಾಪಿಟಲ್, ರಾಜಭವನ ರಸ್ತೆ,
ಮಹಾರಾಣಿ ಕಾಲೇಜ್ ಬಳಿ ಇರುವ ಅಂಡರ್ ಪಾಸ್ ರಸ್ತೆ, ಮೈಸೂರು ಬ್ಯಾಂಕ್ ಸರ್ಕಲ್, ಕೆ.ಜಿ.ರೋಡ್ ಮೂಲಕ
ಕೆಂಪೇಗೌಡ ಬಸ್ ನಿಲ್ದಾಣಕ್ಕೆ ತಲುಪಲಿದೆ.
ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಎಲ್ಲರಿಗೂ 10 ಕೆಜಿ ಅಕ್ಕಿ ಕೊಡುತ್ತೇವೆ. ಬಿಪಿಎಲ್, ಅಂತ್ಯೋದಯ ಕಾರ್ಡ್ನವರಿಗೆ 10 ಕೆಜಿ ಅಕ್ಕಿ ನೀಡುತ್ತೇವೆ. ಅನ್ನಭಾಗ್ಯ ಯೋಜನೆಗೆ 10 ಸಾವಿರದ ನೂರು ಕೋಟಿ ಖರ್ಚಾಗುತ್ತೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು: ಮಹಿಳಾ ಸಬಲೀಕರಣಕ್ಕಾಗಿ ಶಕ್ತಿ ಯೋಜನೆ ಜಾರಿ ಮಾಡಿದ್ದೇವೆ. ಸಾರ್ವಜನಿಕ ವಲಯದಲ್ಲಿ ಮಹಿಳೆಯರು ಹೆಚ್ಚು ಭಾಗಿಯಾಗಬೇಕು. 5 ಗ್ಯಾರಂಟಿಗಳ ಪೈಕಿ 4 ಗ್ಯಾರಂಟಿಗಳಿಂದ ಮಹಿಳೆಯರಿಗೆ ಅನುಕೂಲವಾಗಲಿದೆ. ಗ್ಯಾರಂಟಿಗಳ ಟೀಕೆಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಜುಲೈ 1ರಿಂದ ಗೃಹಜ್ಯೋತಿ ಯೋಜನೆಯನ್ನು ಜಾರಿ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ರಾಜ್ಯದ ಜನರಿಗೆ 5 ಗ್ಯಾರಂಟಿ ಕೊಟ್ಟಿದ್ದೇವು. ಇಂದು ಶಕ್ತಿ ಯೋಜನೆಗೆ ಚಾಲನೆ ನೀಡಿದ್ದೇವೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಮಾತ್ರ ಉಳಿಯುತ್ತದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬಿಜೆಪಿ, ಜೆಡಿಎಸ್ ಸ್ನೇಹಿತರು ಟೀಕೆಗಳ ಸುರಿಮಳೆ ಸುರಿಸ್ತಿದ್ದಾರೆ. ವಿಪಕ್ಷಗಳಿಗೆ ಉತ್ತರ ನೀಡುವ ಸಾಮರ್ಥ್ಯ ನಮ್ಮ ಬಳಿ ಇಲ್ಲ. ಮಂಗಳೂರಿನಲ್ಲಿ ಶಕ್ತಿ ಯೋಜನೆಯನ್ನು ಘೋಷಣೆ ಮಾಡಿದ್ದೇವು. ಬಹಳ ಚರ್ಚೆ ಮಾಡಿಯೇ ಶಕ್ತಿ ಯೋಜನೆ ಜಾರಿ ಮಾಡಿದ್ದೇವೆ. ನಮ್ಮ ರಾಜ್ಯ ದಿವಾಳಿ ಆಗುತ್ತೆ ಅಂತಾ ಬಿಜೆಪಿಯವರು ಹೇಳುತ್ತಿದ್ದಾರೆ ಎಂದರು.
ಬೆಂಗಳೂರು: ಸಮಾರಂಭದಲ್ಲಿ ಸಾಂಕೇತಿಕವಾಗಿ ಐವರು ಮಹಿಳೆಯರಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಿದರು.
ಬೆಂಗಳೂರು: ಶಕ್ತಿ ಯೋಜನೆಯ ಲೋಗೋ ಮತ್ತು ಸ್ಮಾರ್ಟ್ ಕಾರ್ಡ್ ಮಾದರಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಿಡುಗಡೆ ಮಾಡಿದರು.
ಬೆಂಗಳೂರು: ಶಕ್ತಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದಾರೆ. ವಿಧಾನಸೌಧ ಮುಂಭಾಗ ಶಕ್ತಿ ಯೋಜನೆ ಉದ್ಘಾಟನಾ ಸಮಾರಂಭ ನಡೆಯುತ್ತಿದೆ.
ಬೆಂಗಳೂರು: ಇಂದಿನಿಂದ ರಾಜ್ಯದ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣವಿರುತ್ತದೆ. ಉಚಿತ ಪ್ರಯಾಣಕ್ಕೆ ಬಿಪಿಎಲ್, ಎಪಿಎಲ್ ಎಂಬ ನಿಯಮವಿಲ್ಲ. ಯಾವುದಾದರೂ ಐಡಿ ತೋರಿಸಿದರೆ ಪ್ರಯಾಣ ಮಾಡಬಹುದು. ಸ್ಮಾರ್ಟ್ ಕಾರ್ಡ್ ಮಾಡಿಸಲು ಯಾರೂ ದುಡ್ಡು ಕೊಡಬೇಕಿಲ್ಲ. ಸ್ಮಾರ್ಟ್ ಕಾರ್ಡ್ ಮಾಡಿಸಿಕೊಳ್ಳಲು 3 ತಿಂಗಳ ಕಾಲಾವಕಾಶವಿದೆ. ಮಧ್ಯಾಹ್ನ ೧ ಗಂಟೆ ಮೇಲೆ ಉಚಿತ ಪ್ರಯಾಣ ಮಾಡಲು ಅವಕಾಶವಿದೆ. ಶೇ.90 ಕ್ಕಿಂತ ಹೆಚ್ಚು ಬಸ್ಗಳಲ್ಲಿ ರಾಜ್ಯದ ಯಾವುದೇ ಮೂಲೆಗೆ ಮಹಿಳೆಯರು ಹೋಗಬಹುದು ಸಮಾರಂಭದಲ್ಲಿ ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧಕ್ಕೆ ಆಗಮಿಸಿದ್ದು, ಕೆಲವೇ ಹೊತ್ತಿನಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ವಿಧಾನಸೌಧ ಮುಂಭಾಗ ಶಕ್ತಿ ಯೋಜನೆ ಉದ್ಘಾಟನಾ ಸಮಾರಂಭ ನಡೆಯುತ್ತಿದೆ. ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್, ಮಧು ಬಂಗಾರಪ್ಪ, ಕೃಷ್ಣಭೈರೇಗೌಡ, ಶಾಸಕ ರಿಜ್ವಾನ್ ಅರ್ಷದ್, ಎಂಎಲ್ಸಿ ಹರಿಪ್ರಸಾದ್, ಸಿಎಸ್ ವಂದಿತಾ ಶರ್ಮಾ, ಸಾರಿಗೆ ಇಲಾಖೆ ಕಾರ್ಯದರ್ಶಿ ಎನ್.ವಿ.ಪ್ರಸಾದ್, ಕೆಸ ಎಂಡಿ ಅನ್ಬುಕುಮಾರ್, ಬಿಎಂಟಿಸಿ ಎಂಡಿ ಸತ್ಯವತಿ ಉಪಸ್ಥಿತರಿದ್ದಾರೆ.
ಬೆಂಗಳೂರು: ನುಡಿದಂತೆ ನಡೆಯುವುದೇ ಕಾಂಗ್ರೆಸ್ನ ಶಕ್ತಿ. ಕಾಂಗ್ರೆಸ್ ಹಾಗೂ ಜೆಡಿಎಸ್ನವರು ಟೀಕೆ ಮಾಡುತ್ತಿದ್ದಾರೆ. ವಿರೋಧ ಪಕ್ಷದವರು ಟೀಕೆ ಮಾಡಲಿ, ಟೀಕೆ ಬೇಗ ಸಾಯುತ್ತದೆ. ಜನರನ್ನು ಸಂತೋಷಪಡಿಸುವುದೇ ನಿಜವಾದ ಈಶ್ವರನ ಪೂಜೆ. ಇದೀಗ ಈಶ್ವರನ ಪೂಜೆ ಮಾಡಿಕೊಂಡು ಬಂದಿದ್ದೇನೆ ಎಂದು
ವಿಧಾನಸೌಧದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು: ಮೈಸೂರಿನಿಂದ ಹೆಚ್ಎಎಲ್ ಏರ್ಪೋರ್ಟ್ಗೆ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ವೇದಿಕೆಗೆ ಆಗಮಿಸಲಿದ್ದಾರೆ. ಕೆಲವೇ ಹೊತ್ತಿನಲ್ಲಿ ಶಕ್ತಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.
ಧಾರವಾಡ: ಶಕ್ತಿ ಯೋಜನೆ ಉದ್ಘಾಟನೆಗೆ ಕ್ಷಣಗಣನೆ ಹಿನ್ನೆಲೆ ಧಾರವಾಡ ಬಸ್ ನಿಲ್ದಾಣದಲ್ಲಿ ಸಿದ್ದತೆ ನಡೆಯುತ್ತಿದೆ. ಶಕ್ತಿ ಯೋಜನೆಗೆ ನಾವು ಸಂಪೂರ್ಣ ಸಿದ್ದತೆ ಮಾಡಿಕೊಂಡಿದ್ದೇವೆ. ಧಾರವಾಡ ಜಿಲ್ಲೆಯಲ್ಲಿ ಒಟ್ಟು 733 ಬಸ್ಗಳಲ್ಲಿ ಮಹಿಳೆಯರು ಪ್ರಯಾಣ ಮಾಡಲು ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ ದಿನವೊಂದಕ್ಕೆ ಸುಮಾರು 2.30 ಸಾವಿರ ಮಹಿಳೆಯರು ಪ್ರಯಾಣ ಮಾಡ್ತಾರೆ. ಸಹಜವಾಗಿ ಇಲಾಖೆಗೆ 50 ಲಕ್ಷ ಹೊರೆ ಆಗತ್ತೆ.
ಇಲಾಖೆಗೆ 50 ಲಕ್ಷ ಹೊರೆ ಆದರೂ ಸರ್ಕಾರ ವೆಚ್ಚ ಭರಸತ್ತೆ ಎಂದು ಸಾರಿಗೆ ನಿಯಂತ್ರಣ ಅಧಿಕಾರಿ ಶಶಿಧರ ಚನ್ನಪ್ಪಗೌಡ ಹೇಳಿದ್ದಾರೆ.
ಬೆಂಗಳೂರು: ಶಕ್ತಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಚಾಲನೆ ನೀಡಲಿದ್ದು, ಕಾರ್ಯಕ್ರದ ವಿವರ ಹೀಗಿದೆ
ಬೆಳಗ್ಗೆ 11 ಗಂಟೆಗೆ ಶಕ್ತಿ ಯೋಜನೆ ಉದ್ಘಾಟನೆ ಕಾರ್ಯಕ್ರಮ ಆರಂಭವಾಗುತ್ತದೆ.
ಬೆಳಗ್ಗೆ 11.05ಕ್ಕೆ ಸಾರಿಗೆ ಇಲಾಖೆ ಕಾರ್ಯದರ್ಶಿ ಡಾ.ಎನ್.ವಿ. ಪ್ರಸಾದ್ ಅವರು ಸ್ವಾಗತಿಸುತ್ತಾರೆ.
ಬೆಳಗ್ಗೆ 11.10ಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿರಿಂದ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾರೆ.
ಬೆಳಗ್ಗೆ 11.25ಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಷಣ ಮಾಡುತ್ತಾರೆ.
ಬೆಳಗ್ಗೆ 11.35ಕ್ಕೆ ಕಾರ್ಯಕ್ರಮದಲ್ಲಿ ಶಕ್ತಿ ಯೋಜನೆಯ ಲೋಗೋ ಅನ್ನು ಬಿಡುಗಡೆ ಮಾಡಲಾಗುತ್ತದೆ.
ಬೆಳಗ್ಗೆ 11.40ಕ್ಕೆ ಶಕ್ತಿ ಯೋಜನೆಯ ಸ್ಮಾರ್ಟ್ಕಾರ್ಡ್ ಮಾದರಿ ಬಿಡುಗಡೆ ಮಾಡಲಾಗುತ್ತದೆ. ಇದೇ ವೇಳೆ ಸಾಂಕೇತಿಕವಾಗಿ 5 ಮಹಿಳೆಯರಿಗೆ ಸ್ಮಾರ್ಟ್ಕಾರ್ಡ್ ವಿತರಿಸುತ್ತಾರೆ.
ಬೆಳಗ್ಗೆ 11.45ಕ್ಕೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರಿಗೆ ಸನ್ಮಾನ ಮಾಡಲಾಗುತ್ತದೆ.
ಬೆಳಗ್ಗೆ 11.55ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮ ಉದ್ದೇಶಿಸಿ ಭಾಷಣ ಮಾಡುತ್ತಾರೆ.
ಮಧ್ಯಾಹ್ನ 12.20ಕ್ಕೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಗಣ್ಯರು ಬಸ್ನಲ್ಲಿ ಪ್ರಯಾಣಿಸುತ್ತಾರೆ.
ಬೆಂಗಳೂರು: ಮಹಿಳೆಯರಿಗೆ ಪಿಂಕ್ ಟಿಕೆಟ್ ನೀಡೋದಿಲ್ಲ, ಬಿಳಿಬಣ್ಣದ ಟಿಕೆಟ್ ನೀಡುತ್ತೇವೆ. ಅದರಲ್ಲಿ ಮಹಿಳಾ ಟಿಕೆಟ್ ಎಂದು ನಮೂದು ಮಾಡಲಾಗಿರುತ್ತದೆ. ಎಲ್ಲಿಂದ ಎಲ್ಲಿಗೆ ಎಂದು ಮಾಹಿತಿ ಇರುತ್ತದೆ ಎಂದು ಕೆಎಸ್ಆರ್ಟಿಸಿ ಎಂಡಿ ಅನ್ಬು ಕುಮಾರ್ ಮಾಹಿತಿ ನೀಡಿದ್ದಾರೆ.
ಕೋಲಾರ: ಕೆಜಿಎಫ್ ನಗರಸಭೆ ಸದಸ್ಯ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ರಮೇಶ್ (53) ಮೃತ ನಗರಸಭೆ ಕಾಂಗ್ರೇಸ್ ಸದಸ್ಯ. ಕೋಲಾರ ಜಿಲ್ಲೆಯ ಕೆಜಿಎಫ್ ನಗರಸಭೆ ೧೧ ನೇ ವಾರ್ಡ್ ಸದಸ್ಯ ರಮೇಶ್ ತಮಿಳುನಾಡಿನ ವೆಲ್ಲೂರಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ರಮೇಶ ಕುಟುಂಬ ಎರಡು ದಿನಗಳ ಹಿಂದೆ ಸಂಬಂಧಿಕರ ಮನೆಗೆ ತೆರಳಿತ್ತು. ಕಳೆದ ರಾತ್ರಿ ತೀವ್ರ ಹೃದಯಾಘಾತ ಸಂಭವಿಸಿ ವೆಲ್ಲೂರಿನ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಧಾರವಾಡ: ಲಾರಿ-ಕಾರ್ ಮಧ್ಯೆ ಅಪಘಾತ ಸಂಭವಿಸಿ ಮೂವರು ಸಾವನ್ನಪ್ಪಿರುವ ಘಟನೆ ಧಾರವಾಡದ ಬೈಪಾಸ್‌ನಲ್ಲಿ ನಡೆದಿದೆ. ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದು, ಇನ್ನೋರ್ವ ವ್ಯಕ್ತಿ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಬೆಂಗಳೂರು: ಶಕ್ತಿ ಯೋಜನೆ ಚಾಲನೆಗೆ ಕೆಲ ಗಂಟೆಗಳು ಬಾಕಿ ಇದ್ದು, ವಿಧಾನಸೌಧದ ಪೂರ್ವದ್ವಾರ ಗ್ರ್ಯಾಂಡ್ ಸ್ಟೆಪ್ ಮುಂಭಾಗ ವೇದಿಕೆ ನಿರ್ಮಾಣ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ರಾಜ್ಯ ಸಚಿವರು, ಶಾಸಕರು, ಸಂಸದರು. ಅಧಿಕಾರಿಗಳು ಭಾಗಿಯಾಗಲಿದ್ದಾರೆ. ಸಿಎಂ ಸಿದ್ದರಾಮಯ್ಯ. ಬೆಳಗ್ಗೆ ೧೧ ಗಂಟೆಗೆ ಯೋಜನೆಗೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಎರಡು ಬಿಎಂಟಿಸಿ ಬಸ್ ಗಳಿಗೆ ಚಾಲನೆ ನೀಡಲಿದ್ದು, ಕಾರ್ಯಕ್ರಮದಲ್ಲಿ ಆಯ್ದ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಬಳಿಕ ಅದೇ ಬಸ್ ಗಳಲ್ಲಿ ಮೆಜೆಸ್ಟಿಕ್ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಟರ್ಮಿನಲ್ ೨ ಗೆ ೧೨ ಗಂಟೆಗೆ ಸಿಎಂ ಸಿದ್ದರಾಮಯ್ಯ ಆಗಮಿಸಲಿದ್ದಾರೆ. ಅಲ್ಲಿ ಶೂನ್ಯದರದ ಟಿಕೆಟ್ ವಿತರಣೆ ಮಾಡುವ ಮೂಲಕ ಸಾಂಕೇತಿಕವಾಗಿ ಯೋಜನೆಗೆ ಚಾಲನೆ ನೀಡಲಾಗುತ್ತದೆ.
ಬೆಂಗಳೂರು: ಇಂದು (ಜೂ.11) ರಾಜ್ಯಾದ್ಯಂತ ಏಕಕಾಲದಲ್ಲಿ ಶಕ್ತಿ ಯೋಜನೆಗೆ ಚಾಲನೆ ದೊರೆಯಲಿದೆ. ವಿಧಾನಸೌಧದಲ್ಲಿ ಶಕ್ತಿ ಯೋಜನೆಗೆ ಚಾಲನೆ ದೊರೆಯುತ್ತಿದ್ದಂತೆ ರಾಜ್ಯದ ಎಲ್ಲಾ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಆಯಾ ಜಿಲ್ಲೆಯ ಸಚಿವರು, ಶಾಸಕರು ಯೋಜನೆಗೆ ಚಾಲನೆ ನೀಡಲಿದ್ದಾರೆ.
Published On - 7:56 am, Sun, 11 June 23