ವೀಕೆಂಡ್- ಅಮವಾಸ್ಯೆ: ಬಸ್ ಫುಲ್ ರಶ್, ಧಾರ್ಮಿಕ ಸ್ಥಳಗಳಿಗೆ ಮಹಿಳಾ ಭಕ್ತರ ದಂಡು: ಹಲವೆಡೆ ಗಲಾಟೆ ಗದ್ದಲ

|

Updated on: Jun 18, 2023 | 12:01 PM

ಇಂದು ಭಾನುವಾರ ಹಾಗೂ ಅಮಾವಾಸ್ಯೆ ಹಿನ್ನೆಲೆ ಮಹಿಳೆಯರ ದಂಡೇ ರಾಜ್ಯದ ಪ್ರಸಿದ್ಧ ಧರ್ಮ ಕ್ಷೇತ್ರಗಳತ್ತ ಮುಖ ಮಾಡಿದೆ. ಸಾಗರೋಪಾದಿಯಲ್ಲಿ ಮಹಿಳೆಯರು ದೇವಸ್ಥಾನಗಳಿಗೆ ಲಗ್ಗೆ ಇಟ್ಟಿದ್ದಾರೆ. ಹೀಗಾಗಿ ಬಸ್‌ಗಳಲ್ಲಿ ನೂಕುನುಗ್ಗಲು, ಕಾಲಿಡಲೂ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ವೀಕೆಂಡ್- ಅಮವಾಸ್ಯೆ: ಬಸ್ ಫುಲ್ ರಶ್, ಧಾರ್ಮಿಕ ಸ್ಥಳಗಳಿಗೆ ಮಹಿಳಾ ಭಕ್ತರ ದಂಡು: ಹಲವೆಡೆ ಗಲಾಟೆ ಗದ್ದಲ
ಉಚಿತ ಬಸ್​ಗಾಗಿ ಮಹಿಳೆಯರ ದಂಡು
Follow us on

ಮಂಗಳೂರು: ಶಕ್ತಿ ಯೋಜನೆಯಡಿ(Shakti Scheme) ಮಹಿಳೆಯರಿಗೆ ಉಚಿತ ಬಸ್​ ಸೇವೆ ಸಿಕ್ಕಿದೆ. ಈ ಹಿನ್ನೆಲೆ ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ (KSRTC Bus) ಮಹಿಳೆಯರ ದರ್ಬಾರು ಜೋರಾಗಿದೆ. ಅದರಲ್ಲೂ ಇಂದು ಭಾನುವಾರ ಹಾಗೂ ಅಮಾವಾಸ್ಯೆ ಹಿನ್ನೆಲೆ ಮಹಿಳೆಯರ(Woman) ದಂಡೇ ರಾಜ್ಯದ ಪ್ರಸಿದ್ಧ ಧರ್ಮ ಕ್ಷೇತ್ರಗಳತ್ತ ಮುಖ ಮಾಡಿದೆ. ಸಾಗರೋಪಾದಿಯಲ್ಲಿ ಮಹಿಳೆಯರು ದೇವಸ್ಥಾನಗಳಿಗೆ ಲಗ್ಗೆ ಇಟ್ಟಿದ್ದಾರೆ. ಹೀಗಾಗಿ ಬಸ್‌ಗಳಲ್ಲಿ ನೂಕುನುಗ್ಗಲು, ಕಾಲಿಡಲೂ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಚಿಕ್ಕಮಗಳೂರಿನಲ್ಲೊಬ್ಬ ಮಹಿಳೆ ಬಸ್ ಫುಲ್ ರಶ್ ಇದೆ ಎಂದು ಡ್ರೈವರ್ ಸೀಟ್ ಅನ್ನೇ ಹತ್ತಿರುವ ಘಟನೆ ನಡೆದಿದೆ.

ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ಬಸ್ ಹತ್ತಲು ಮಹಿಳೆಯರು ಪರದಾಡಿದ್ದಾರೆ. ಬಸ್‌ಗಾಗಿ ನಿಲ್ದಾಣದಲ್ಲಿ ಕಾದು ಕೂತಿದ್ದು ಕೊನೆಗೆ ಬಸ್ ಬಂದಾಗ ಬಸ್ ಹತ್ತಲು ಮುಗಿಬಿದ್ದಿದ್ದಾರೆ. ಈ ವೇಳೆ ಮಹಿಳೆ ಬಸ್‌ನಲ್ಲಿ ಸೀಟ್ ಇಲ್ಲ, ಕಾಲು ಹಾಕಲು ಕೂಡಾ ಜಾಗ ಇಲ್ಲ ಎಂದು ಡ್ರೈವರ್ ಸೀಟ್ ಮೊರೆ ಹೋಗಿದ್ದಾರೆ. ಮೊದಲು ತನ್ನ ಮಕ್ಕಳನ್ನ ಡ್ರೈವರ್ ಸೀಟ್​ಗೆ ಹತ್ತಿಸಿ ಬಳಿಕ ತಾನೂ ಕೂಡ ಹತ್ತಿ ಕುಳಿತಿದ್ದಾರೆ.

ಪ್ರಯಾಣಿಕರನ್ನ ನಿಯಂತ್ರಿಸಲು ಹೋಂ ಗಾರ್ಡ್ಸ್ ಮೊರೆ ಹೋದ ಸಾರಿಗೆ ಇಲಾಖೆ

ಇಂದು ವೀಕೆಂಡ್ ಜೋತೆ ಅಮಾವಾಸ್ಯೆ ಹಿನ್ನೆಲೆ ಮಹಿಳೆಯರು ಉಚಿತ ಬಸ್ ಪ್ರಯಾಣಕ್ಕೆ ಮುಗಿಬಿದ್ದಿದ್ದಾರೆ. ಪ್ರಯಾಣಿಕರನ್ನು ನಿಯಂತ್ರಿಸಲು ಸಾರಿಗೆ ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ. ಹೀಗಾಗಿ ಪ್ರಯಾಣಿಕರನ್ನ ನಿಯಂತ್ರಿಸಲು ಸಾರಿಗೆ ಇಲಾಖೆ ಹೋಂ ಗಾರ್ಡ್ಸ್ ಮೊರೆ ಹೋಗಿದೆ. ಯಾದಗಿರಿ ಜಿಲ್ಲೆಯಲ್ಲಿ ಪ್ರಯಾಣಿಕರ ನಿಯಂತ್ರಣಕ್ಕೆ 80 ಹೋಂ ಗಾರ್ಡ್ಸ್ ನಿಯೋಜನೆ ಮಾಡಲಾಗಿದೆ. ಜಿಲ್ಲೆಯ ಸುರಪುರ, ಶಹಾಪುರ, ಯಾದಗಿರಿ ಹಾಗೂ ಗುರುಮಠಕಲ್ ಡಿಪೋಗಳಿಗೆ 40 ಮಹಿಳಾ ಹೋಂ ಗಾರ್ಡ್ಸ್, 40 ಪುರುಷ ಹೋಂ ಗಾರ್ಡ್ಸ್ ನಿಯೋಜಿಸಲಾಗಿದೆ. ಸುರಪುರ 20, ಶಹಾಪುರ 20, ಯಾದಗಿರಿ 30 ಹಾಗೂ ಗುರುಮಠಕಲ್ 10 ಹೋಂ ಗಾರ್ಡ್ಸ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಉಚಿತ ಪ್ರಯಾಣಕ್ಕೆ‌ ಬೇಕಾಗುವ ದಾಖಲೆಗಳ ಬಗ್ಗೆ ಹೋಂ ಗಾರ್ಡ್ಸ್ ಸಿಬ್ಬಂದಿ ಜಾಗೃತಿ ಮೂಡಿಸುತ್ತಿದ್ದಾರೆ. ವಿಶೇಷವಾಗಿ ಮಹಿಳಾ ಪ್ರಯಾಣಿಕರು ಬಸ್ ಹತ್ತುವಾಗ, ಇಳಿಯುವಾಗ ನೂಕುನುಗ್ಗಲು ಆಗದಂತೆ ತಡೆಯಲಾಗುತ್ತಿದೆ. ಬಸ್ ಹಾಗೂ ಪ್ರಯಾಣಿಕರಿಗೆ ಯಾವುದೇ ಹಾನಿಯಾಗದಂತೆ ಹೋಂ ಗಾರ್ಡ್ಸ್ ನಿಗಾ ವಹಿಸುತ್ತಿದ್ದಾರೆ.

ಇದನ್ನೂ ಓದಿ: Bagalkote News: ಉಚಿತ ಪ್ರಯಾಣದಿಂದ ರಶ್​ ಆದ​ ಬಸ್​​ನಲ್ಲಿ ಕಳ್ಳರ ಕೈಚಳಕ, ಅಜ್ಜಿಯ ಬ್ಯಾಗನಿಂದ ಹಣ ಮಾಯ

ಮಂಜುನಾಥನ ದರ್ಶನಕ್ಕೆ ಬಂದ ಭಕ್ತ ಸಾಗರ

ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಹಿಳಾ ಭಕ್ತರ ಸಂಖ್ಯೆ ಹೆಚ್ಚಾಗಿದೆ. ರಾಜ್ಯದ ಬೇರೆ ಬೇರೆ ಭಾಗಗಳಿಂದ ಮಹಿಳಾ ಭಕ್ತರು ಕುಟುಂಬ ಸಮೇತರಾಗಿ ಆಗಮಿಸುತ್ತಿದ್ದಾರೆ. ಸರತಿ ಸಾಲಿನಲ್ಲಿ ನಿಂತು ಕುಕ್ಕೆ ಸುಬ್ರಹ್ಮಣ್ಯನ ದರ್ಶ‌ನ ಪಡೆಯುತ್ತಿದ್ದಾರೆ. ಇನ್ನು ಬಸ್​ಗಳಲ್ಲಿ ಸೀಟಿಗಾಗಿ ನೂಕುನುಗ್ಗಲಾಗುತ್ತಿದೆ. ಬಸ್​ ಸ್ಟ್ಯಾಂಡ್​ಗಳಿಗೆ ಬಸ್ ಬರುತ್ತಿದ್ದಂತೆ ಜನ ಓಡಿ ಹೋಗಿ ಬಸ್​ ಹತ್ತುತಿದ್ದಾರೆ. ಬಸ್​ ವಿಂಡೋ ಮೂಲಕವೇ ಹತ್ತಲು ಹರಸಾಹಸಪಡುತ್ತಿದ್ದ ದೃಶ್ಯ ಕಂಡು ಬಂದಿದೆ.

ಪತ್ನಿಗೆ ಸೀಟ್ ಹಿಡಿಯಲು ಹೋಗಿ ಸಾರಿಗೆ ಸಿಬ್ಬಂದಿ ಜೊತೆ ಕೈ ಕೈ ಮೀಲಾಯಿಸಿದ ಗಂಡ‌

ಕಲಬುರಗಿ ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ಬಸ್ ಬರುತ್ತಿದ್ದಂತೆ ಬಸ್ ಹತ್ತಿ ಪತ್ನಿಗೆ ಸೀಟ್ ಹಿಡಿಯಲು ಹೋದ ಪತಿರಾಯ ಸಾರಿಗೆ ಸಿಬ್ಬಂದಿ ಜೊತೆ ಕೈ ಕೈ ಮೀಲಾಯಿಸಲು ಮುಂದಾದ ಘಟನೆ ನಡೆದಿದೆ. ಬಸ್ ಬಳಿಯೇ ಸ್ಕೂಟಿ ನಿಲ್ಲಿಸಿ ಪತ್ನಿಗೆ ಸೀಟ್ ಕೊಡಿಸಲು ಬಸ್ ಹತ್ತಿದ ವ್ಯಕ್ತಿಗೆ ಗಾಡಿ ತೆರವುಗೊಳಿಸಲು ಸಾರಿಗೆ ಸಿಬ್ಬಂದಿ ಸೂಚನೆ ನೀಡಿದರು. ಆದರೆ ಪತ್ನಿಗೆ ಸೀಟ್ ಕೊಡಿಸುವದಕ್ಕಾಗಿ ಸ್ಕೂಟಿ ತೆಗೆದಿಲ್ಲ. ಹೀಗಾಗಿ ಸ್ಕೂಟಿ ಪಾಕ್೯ ಸಂಬಂಧ ಸಾರಿಗೆ ಸಿಬ್ಬಂದಿ ಹಾಗು ವ್ಯಕ್ತಿಯ ನಡುವೆ ವಾಕ್ ಸಮರವಾಗಿದ್ದು ಕೈ ಕೈ‌ ಮೀಲಾಯಿಸುವ ಹಂತಕ್ಕೆ ಹೋಗಿತ್ತು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ