ಕಾನೂನಿನ ಭಯ ಇಲ್ಲದ ಶಕ್ತಿಗಳನ್ನು ಕಾನೂನು ವ್ಯಾಪ್ತಿಗೆ ತಂದು ನಿರ್ಮೂಲನೆ ಮಾಡಲಾಗುವುದು: ಆರಗ ಜ್ಞಾನೇಂದ್ರ

| Updated By: Rakesh Nayak Manchi

Updated on: Oct 30, 2022 | 12:49 PM

ಶಿವಮೊಗ್ಗದಲ್ಲಿ ಕಿಡಿಗೇಡಿಗಳಿಂದ ಶಾಂತಿ ಭಂಗ ಉಂಟುಮಾಡುವ ಕೃತ್ಯಗಳು ನಡೆಯುತ್ತಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗೃಹಸಚಿವ ಆರಗ ಜ್ಞಾನೇಂದ್ರ, ಎಲ್ಲವನ್ನೂ ಮಟ್ಟಹಾಕಲು ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದಿದ್ದಾರೆ.

ಕಾನೂನಿನ ಭಯ ಇಲ್ಲದ ಶಕ್ತಿಗಳನ್ನು ಕಾನೂನು ವ್ಯಾಪ್ತಿಗೆ ತಂದು ನಿರ್ಮೂಲನೆ ಮಾಡಲಾಗುವುದು: ಆರಗ ಜ್ಞಾನೇಂದ್ರ
ಗೃಹಸಚಿವ ಆರಗ ಜ್ಞಾನೇಂದ್ರ
Follow us on

ಶಿವಮೊಗ್ಗ: ಕಾನೂನಿನ ಬಗ್ಗೆ ಭಯ ಇಲ್ಲದಿರುವಂತಹ ಒಂದಷ್ಟು ಬೆರಳೆಣಿಕೆ ಶಕ್ತಿಗಳು ಇದ್ದಾವೆ. ಅವರುಗಳನ್ನು ಕಾನೂನು ವ್ಯಾಪ್ತಿಗೆ ತಂದು ದಮನ ಮಾಡುವ ಮತ್ತು ಅವರ ಶಕ್ತಿಗಳನ್ನು ನಿರ್ಮೂಲನೆ ಮಾಡುವಂತಹ ಎಲ್ಲಾ ಪ್ರಯತ್ನಗಳು ಆಗುತ್ತಿವೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ (Araga Jnanendra) ಹೇಳಿದರು. ಶಿವಮೊಗ್ಗ ನಗರದಲ್ಲಿ ಮುಂದುವರಿದ ಗಲಭೆ ಪ್ರಕರಣ ವಿಚಾರವಾಗಿ ಜಿಲ್ಲೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಶಿವಮೊಗ್ಗ ರೌಡಿಗಳ ಟ್ರೈನಿಂಗ್ ಸೆಂಟರ್ ಆಗಿತ್ತು. ಎಲ್ಲವನ್ನೂ ಮಟ್ಟಹಾಕಲು ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದರು.

ಬಹಳ ಹಿಂದೆ ರೌಡಿಗಳ ತರಬೇತಿ ಕೇಂದ್ರವಾಗಿದ್ದ ಶಿವಮೊಗ್ಗದಲ್ಲಿ ಪೊಲೀಸರ ಸೂಕ್ತ ಕ್ರಮದಿಂದಾಗಿ ಎಲ್ಲವೂ ಕಡಿಮೆಯಾಗುತ್ತಿದೆ. ಎಲ್ಲಾ ರೀತಿಯಲ್ಲಿ ಮಟ್ಟ ಹಾಕಲು ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಒಂದೊಂದು ಸರಿ ಯಾವ ಮತ್ತಿನಲ್ಲಿ ಇರುತ್ತಾರೋ, ಏನು ತಿನ್ನುತ್ತಾರೋ ಗೊತ್ತಿಲ್ಲ. ಜಿಲ್ಲೆಯಲ್ಲಿ ಗಾಂಜಾ ಪೂರೈಕೆ ಆಗುತ್ತಿದೆ, ಇದನ್ನೂ ಮಟ್ಟ ಹಾಕುವ ನಿಟ್ಟಿನಲ್ಲಿ ಪೊಲೀಸರು ಮುಂದಾಗಿದ್ದಾರೆ. ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಪತ್ರಕರ್ತರಿಗೆ ಹಣ ಹೋಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ

ಮುಖ್ಯಮಂತ್ರಿ ಕಚೇರಿಯಿಂದ ಪತ್ರಕರ್ತರಿಗೆ ಹಣ ಹೋಗಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಗೃಹಸಚಿವರು, ಇದರ ಬಗ್ಗೆ ‌ನಾನು ರಿಯಾಕ್ಟ್ ಮಾಡಲ್ಲ, ಪತ್ರಕರ್ತರಿಗೆ ಹಣ ಹೋಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ ಸ್ವೀಟ್ ಬಾಕ್ಸ್ ಆಗಿದೆ.​​ ಎಲ್ಲಾ ಸರ್ಕಾರದಲ್ಲೂ ಪತ್ರಕರ್ತರಿಗೆ ಗಿಫ್ಟ್​​ಗಳನ್ನು ನೀಡುತ್ತಾರೆ. ಆದರೆ ಪತ್ರಕರ್ತರಿಗೆ ಹಣ ಕೊಟ್ಟಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದರು.

ನಂದೀಶ್ ಅನಾರೋಗ್ಯದಿಂದ ನಿಧನ

ಕೆ.ಆರ್​.ಪುರಂ ಠಾಣೆ ಇನ್ಸ್​ಪೆಕ್ಟರ್​ ನಂದೀಶ್ ಸಾವು ಪ್ರಕರಣದ ಬಗ್ಗೆ ಮಾತನಾಡಿದ ಗೃಹಸಚಿವರು, ಇನ್ಸ್​​ಪೆಕ್ಟರ್​ ನಂದೀಶ್ ಅನಾರೋಗ್ಯದಿಂದ ನಿಧನರಾಗಿದ್ದಾರೆ. ನನಗಿರುವ ಮಾಹಿತಿ ಪ್ರಕಾರ​ ನಂದೀಶ್ ಆರೋಗ್ಯ ಸರಿಯಿರಲಿಲ್ಲ. ಆಡಿಯೋ ಬಗ್ಗೆ ಸಚಿವ ಎಂಟಿಬಿ ನಾಗರಾಜ್​ ಅವರನ್ನೇ ಕೇಳಬೇಕು. ಈ ಬಗ್ಗೆ ಯಾರಾದರೂ ದೂರು ನೀಡಿದರೆ ತನಿಖೆ ಮಾಡಿಸಬಹುದು ಎಂದರು.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:47 pm, Sun, 30 October 22