ಶಿವಮೊಗ್ಗ: ಲಿಂಗಾಯತ ಪಂಚಮಸಾಲಿ (Lingayat Panchamasali Community) ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಈ ಹಿಂದೆ ಯಡಿಯೂರಪ್ಪ ಅವರಿದ್ದಾಗ ಪ್ರತಿಭಟನೆ ಮಾಡಿದ್ದೆವು. ನಂತರ ಮುಖ್ಯಮಂತ್ರಿಯಾದ ಬಸವರಾಜ ಬೊಮ್ಮಾಯಿ ಅವರನ್ನೂ ಆಗ್ರಹಿಸಿದೆವು. ಆದರೆ ಏನೂ ಪ್ರಯೋಜನವಾಗಲಿಲ್ಲ ಎಂದು ಕೂಡಲಸಂಗಮ ಪಂಚಮಸಾಲಿ ಗುರುಪೀಠಾಧ್ಯಕ್ಷರಾದ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ಸತತ ಎರಡು ವರ್ಷಗಳಿಂದ ನಮ್ಮ ಪ್ರಯತ್ನ ಮುಂದುವರಿಯುತ್ತಿದೆ. ಹಿಂದೆ ಸಿಎಂ ಯಡಿಯೂರಪ್ಪ ಮಾತು ತಪ್ಪಿದ್ದರು. ಈಗ ಬಸವರಾಜ ಬೊಮ್ಮಾಯಿ ಮಾತು ಮರೆತಿದ್ದಾರೆ. ನಮ್ಮ ಹೋರಾಟ ನಿರಂತರ ನಡೆಯುತ್ತದೆ ಎಂದು ಹೇಳಿದರು.
ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು, ಲಿಂಗಾಯತ ಪಂಚಮಸಾಲಿ ಸಮುದಾಯವು ‘2ಎ’ ಮೀಸಲಾತಿಗಾಗಿ ಕಳೆದ ಎರಡು ವರ್ಷಗಳಿಂದ ಹೋರಾಟ ನಡೆಸುತ್ತಿದೆ. ಇವರಿಗೆ ನಮ್ಮ ಹೋರಾಟದ ಬಗ್ಗೆ ಪುನಃ ಜ್ಞಾಪನಾ ಪತ್ರ ನೀಡಿ, ನಮ್ಮ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುತ್ತೇವೆ ಎಂದರು.
ಬಸವರಾಜ್ ಬೊಮ್ಮಾಯಿ ಅವರ ಆಡಳಿತ ಕೊನೆಗೊಳ್ಳುತ್ತಿದೆ. ಚುನಾವಣಾ ನೀತಿ ಸಂಹಿತೆ ಹೇರಿದರೆ ಈವರೆಗಿನ ನಮ್ಮ ಹೋರಾಟ ವ್ಯರ್ಥವಾದಂತೆ ಆಗುತ್ತದೆ. ಮೀಸಲು ಹಕ್ಕೊತ್ತೋಯಕ್ಕಾಗಿ ಪುನಃ ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಮೀಸಲಾತಿ ಘೋಷಣೆ ವಿಳಂಬವಾಗುತ್ತಿರುವುದರಿಂದ ಸಮುದಾಯದಲ್ಲಿ ನನ್ನ ಮೇಲೆ ಅನುಮಾನ ಆರಂಭವಾಗಿದೆ. ಇಂದು ರಾತ್ರಿಯೊಳಗೆ ಯಡಿಯೂರಪ್ಪ ಮತ್ತು ಬೊಮ್ಮಾಯಿ ಈ ಸಂಬಂಧ ಹೇಳಿಕೆ ನೀಡಬೇಕು ಎಂದು ಆಗ್ರಹಿಸಿದರು.
ಯಡಿಯೂರಪ್ಪ ಅವರಿಗೆ ಸಮದಾಯವು ಸಾಕಷ್ಟು ಬೆಂಬಲ ನೀಡಿದೆ. ಈಗ ಯಡಿಯೂರಪ್ಪ ಗುಡುಗಿದರೆ ಸಾಮಾಜಿಕ ನ್ಯಾಯ ಸಿಗಲಿದೆ. ಸಿಎಂಗೆ ನೀಡಿದ ಗಡುವು ಮುಗಿದಿದೆ. ಆದರೂ ಗಡುವು ನೀಡಿಲ್ಲ ಎಂದು ಸಿಎಂ ಹೇಳಿಕೆ ನೀಡಿದ್ದಾರೆ. ಆಗಸ್ಟ್ 25ರಂದು ಶಿವಮೊಗ್ಗದ ಶಿವಪ್ಪನಾಯಕ ವೃತ್ತದಲ್ಲಿ ಯಡಿಯೂರಪ್ಪ ಅವರು ನಮ್ಮಿಂದ ಜ್ಞಾಪನಾಪತ್ರ ಸ್ವೀಕರಿಸಬೇಕು. ನಾಳೆ (ಆಗಸ್ಟ್ 23) ಶಿಗ್ಗಾಂವಿಯಲ್ಲಿ ಬೃಹತ್ ಸಭೆ ಕರೆಯಲಾಗಿದೆ. ಸಮಾಜದ ಮುಖಂಡರು ಎರಡೂ ಸಭೆಗಳಿಗೆ ಅಧಿಕ ಸಂಖ್ಯೆಯಲ್ಲಿ ಸೇರಬೇಕು ಎಂದು ಕೋರಿದರು.
ಮೀಸಲಾತಿ ಹೋರಾಟಕ್ಕಾಗಿ ನಡೆಯಲಿರುವ ಸಭೆಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಹ ಭಾಗವಹಿಸಲಿದ್ದಾರೆ. ಯಾರು ಯಾರಿಗೆ ಮಾತು ನೀಡಿದ್ದಾರೆ? ಯಾರು ಮಾತು ತಪ್ಪಿದ್ದಾರೆ ಎಂದು ಯತ್ನಾಳ್ ನಾಳೆ ಹೇಳುತ್ತಾರೆ ಎಂದರು.