ಶಿವಮೊಗ್ಗ ಜಿಲ್ಲೆಯಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಯನ್ನು ಪ್ರಸ್ತಾಪಿಸಿ ರಾಜಕೀಯ ಲಾಭ ಮಾಡಿಕೊಳ್ಳಲು ರಾಜಕೀಯ ಪಕ್ಷಗಳು ಮುಂದಾಗಿವೆ. ಶರಾವತಿ ಸಂತ್ರಸ್ತರ ಸಮಸ್ಯೆಯನ್ನು ಪ್ರಸ್ತಾಪಿಸಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಹೋರಾಟಕ್ಕೆ ಮುಂದಾಗಿದೆ. ಇದಕ್ಕೆ ಪ್ರತಿಯಾಗಿ, ‘ಈ ಹಿಂದೆ ಅಧಿಕಾರದಲ್ಲಿದ್ದಾಗ ನೀವೇನು ಮಾಡಿದ್ದಿರಿ’ ಎಂದು ಕಾಂಗ್ರೆಸ್ ಪ್ರಶ್ನಿಸುತ್ತಿದೆ. ಶರಾವತಿ ಸಂತ್ರಸ್ತರಿಗೆ ನೀಡಿದ್ದ ಹಕ್ಕುಪತ್ರಗಳನ್ನು ಕರ್ನಾಟಕ ಸರ್ಕಾರ ವಜಾ ಮಾಡಿದೆ. ಕಾಂಗ್ರೆಸ್ ಪಕ್ಷವು ಈ ವಿಚಾರವನ್ನು ದೊಡ್ಡದನಿಯಲ್ಲಿ ಪ್ರಸ್ತಾಪಿಸುತ್ತಿದ್ದು, ಸೋಮವಾರ (ನ.28) ಆಯನೂರಿನಿಂದ ಶಿವಮೊಗ್ಗದವರೆಗೆ 20 ಕಿಮೀ ಪಾದಯಾತ್ರೆ ಆಯೋಜಿಸಿತ್ತು. ಮಾಜಿ ಶಾಸಕ ಹಾಗೂ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಪಾದಯಾತ್ರೆಯ ನೇತೃತ್ವವಹಿಸಿದ್ದರು. ಶಿವಮೊಗ್ಗದಲ್ಲಿ ಆಯೋಜಿಸಿರುವ ಸಂತ್ರಸ್ತರ ಸಮಾವೇಶದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಾಯಕರಾದ ಬಿ.ಕೆ.ಹರಿಪ್ರಸಾದ್, ಧ್ರುವ ನಾರಾಯಣ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು. ಹಕ್ಕುಪತ್ರ ವಿವಾದವನ್ನು ಪ್ರಸ್ತಾಪಿಸಿ ರಾಜಕೀಯ ಲಾಭ ಪಡೆಯುವ ಕಾಂಗ್ರೆಸ್ನ ಪ್ರಯತ್ನಗಳಿಗೆ ಕಡಿವಾಣ ಹಾಕಲು ಮುಂದಿನ ದಿನಗಳಲ್ಲಿ ಬಿಜೆಪಿ ಸಹ ಪರ್ಯಾಯ ತಂತ್ರಗಳನ್ನು ಹೆಣೆದಿದೆ.
ಶರಾವತಿ ಸಂತ್ರಸ್ತರದ್ದು ಇಂದು ನಿನ್ನೆಯ ಸಮಸ್ಯೆಯಲ್ಲ. 1960ರ ದಶಕದಿಂದಲೂ ಅವರ ಪಾಡು ಹೀಗೆಯೇ ಇದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಲ್ಲಿ ಲಿಂಗನಮಕ್ಕಿ ಜಲಾಶಯ ನಿರ್ಮಾಣದ ವೇಳೆ 1 ಲಕ್ಷ ಹೆಕ್ಟೇರ್ಗೂ ಅಧಿಕ ವಿಸ್ತೀರ್ಣದ ಅರಣ್ಯ ಮುಳುಗಿತ್ತು. 10 ಸಾವಿರ ಕುಟುಂಬಗಳನ್ನು ಒಕ್ಕಲೆಬ್ಬಿಸಲಾಗಿತ್ತು. ಸಂತ್ರಸ್ತರಿಗೆ ಈವರೆಗೂ ಸರ್ಕಾರದಿಂದ ಸೂಕ್ತ ಪರಿಹಾರ ಸಿಕ್ಕಿಲ್ಲ. ತಲೆಮಾರು ಕಳೆದರೂ ಪರಿಹಾರ ಸಿಗದಿರುವುದು ಜನರಲ್ಲಿ ಆಕ್ರೋಶ ಮಡುಗಟ್ಟಿಸಿದೆ. 1959 ರಿಂದ 1969 ರ ಅವಧಿಯಲ್ಲಿ ಸಂತ್ರಸ್ತರಿಗೆ 9,934 ಎಕರೆ ಭೂಮಿಯನ್ನು ಸರ್ಕಾರವು ಬಿಡುಗಡೆ ಮಾಡಿತ್ತು. ಆದರೆ ಈ ಭೂಮಿಯು ಅರಣ್ಯ ಇಲಾಖೆ ಸುಪರ್ದಿಯಲ್ಲಿತ್ತು. ಈ ಭೂಮಿಯು ಕಂದಾಯ ಇಲಾಖೆಗೆ ಹಸ್ತಾಂತರವಾಗದ ಹಿನ್ನೆಲೆಯಲ್ಲಿ ಸಂತ್ರಸ್ತರಿಗೆ ಭೂಮಿ ಸಿಕ್ಕಿಲ್ಲ. ನಂತರದ ದಿನಗಳಲ್ಲಿ ಡಿನೋಟಿಫಿಕೇಶನ್ ಆದೇಶವೂ ರದ್ದಾಯಿತು. ಭೂಮಿಯ ಹಕ್ಕು ಪಡೆದುಕೊಳ್ಳಲು ಸಂತ್ರಸ್ತರು ಐದಾರು ದಶಕಗಳಿಂದ ಹೋರಾಟ ಮಾಡುತ್ತಲೇ ಇದ್ದಾರೆ.
ಭೂಮಿಯು ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ವರ್ಗಾವಣೆ ಮಾಡುವುದರಲ್ಲಿ ಆಗಿರುವ ಲೋಪದಿಂದಾಗಿಯೇ ಡಿನೋಟಿಫಿಕೇಶನ್ ರದ್ದಾಗಿದೆ. ಇದು ರಾಜ್ಯ ಸರ್ಕಾರದ ಕರ್ತವ್ಯಲೋಪ ಎಂದು ಕಾಂಗ್ರೆಸ್ ವಾದಿಸುತ್ತಿದೆ. ‘ಕಾನೂನು ಮಾಡಿ ಶರಾವತಿ ಸಂತ್ರಸ್ತರನ್ನು ಕಾಡಿನಲ್ಲಿ ಕೂರಿಸಿದ್ದೇ ಸರ್ಕಾರ. ಆದರೆ ಈಗ ಸರ್ಕಾರವು ಡಿನೋಟಿಫಿಕೇಶನ್ ರದ್ದುಗೊಳಿಸಿ ಮುಳುಗಡೆ ಸಂತ್ರಸ್ತರನ್ನು ಅತಂತ್ರಗೊಳಿಸಿದೆ. ಈ ಬೆಳವಣಿಗೆಗೆ ಸೊರಬ ಹಾಗೂ ಸಾಗರ ಕ್ಷೇತ್ರಗಳ ಶಾಸಕರೇ ಮುಖ್ಯ ಕಾರಣ. ಡಿನೋಟಿಫಿಕೇಶನ್ ರದ್ದಾಗಿರುವುದರಿಂದ 18 ಸಾವಿರ ಕುಟುಂಬಗಳು ಅತಂತ್ರವಾಗಿವೆ’ ಎಂದು ಕಾಂಗ್ರೆಸ್ ನಾಯಕ ಮಧು ಬಂಗಾರಪ್ಪ ಹೇಳಿದ್ದಾರೆ.
ಪ್ರತಿಪಕ್ಷ ಕಾಂಗ್ರೆಸ್ ಆರೋಪವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಪ್ಪುತ್ತಿಲ್ಲ. ‘ಡಿನೋಟಿಫಿಕೇಶನ್ ಕುರಿತು, ಡಿಸೆಂಬರ್ 3ನೇ ವಾರದೊಳಗೆ ವರದಿ ನೀಡಲು ಸೂಚಿಸಿದ್ದೇನೆ. ಸಂತ್ರಸ್ತರ ಭೂಮಿಯ ಹಕ್ಕಿನ ಬಗ್ಗೆ ಶಿವಮೊಗ್ಗ ಜಿಲ್ಲಾಧಿಕಾರಿಯಿಂದಲೂ ಮಾಹಿತಿ ಪಡೆದುಕೊಂಡಿದ್ದೇನೆ. ಜಿಲ್ಲಾಧಿಕಾರಿ ವರದಿ ಸಲ್ಲಿಸಿದ ನಂತರ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟು, ಮುಳುಗಡೆ ಸಂತ್ರಸ್ತರಿಗೆ ಭೂಮಿಯ ಹಕ್ಕು ಕೊಡುತ್ತೇವೆ. ಸಂತ್ರಸ್ತರಿಗೆ ಭೂ ಮಂಜೂರಾತಿ ಮಾಡಲು ಹಿಂದಿನ ಸರ್ಕಾರ ಕೇಂದ್ರದಿಂದ ಅನುಮತಿ ಪಡೆದಿರಲಿಲ್ಲ’ ಎಂದು ತಮ್ಮ ನಿಲುವು ಸ್ಪಷ್ಟಪಡಿಸಿದ್ದರು.
‘ಮುಖ್ಯಮಂತ್ರಿ ಹೇಳುತ್ತಿರುವ ರೀತಿಯಲ್ಲಿ, ಅಷ್ಟು ಸುಲಭವಾಗಿ ಸಮಸ್ಯೆ ಪರಿಹಾರವಾಗುವುದಿಲ್ಲ’ ಎಂದು ಕಾಂಗ್ರೆಸ್ನ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ‘ಟಿವಿ9’ಗೆ ಪ್ರತಿಕ್ರಿಯಿಸಿದರು. ‘ಕಳೆದ ನಾಲ್ಕೈದು ವರ್ಷಗಳಿಂದ ಬಿಜೆಪಿಯು ಶರಾವತಿ ನೆರೆ ಸಂತ್ರಸ್ತರ ಸಮಸ್ಯೆಗೆ ಸ್ಪಂದಿಸಿಲ್ಲ. ಈಗ ಚುನಾವಣೆಯು ಹತ್ತಿರ ಬಂದಾಗ ಬಿಜೆಪಿ ಇದು ನೆನಪಾಗಿದೆ. ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿದ್ದಾಗ ಸಾವಿರಾರು ಸಂತ್ರಸ್ತರಿಗೆ ಹಕ್ಕುಪತ್ರ ನೀಡಲಾಗಿದೆ. ಈಗ ಸಿಎಂ ಸುಳ್ಳು ಭರವಸೆ ನೀಡುತ್ತಿದ್ದಾರೆ. ಬೊಮ್ಮಾಯಿ ತಲೆ ಕೆಳಗೆ ಮಾಡಿದರೂ ಡಿಸೆಂಬರ್ನಲ್ಲಿ ಹಕ್ಕುಪತ್ರ ನೀಡಲು ಸಾಧ್ಯವಿಲ್ಲ. ಹಕ್ಕು ನೀಡಲು ಸಾಧ್ಯವಾಗಲು ಕೇಂದ್ರ ಸರ್ಕಾರವು ಅರಣ್ಯ ಹಕ್ಕು ಕಾಯ್ದೆಗೆ ತಿದ್ದುಪಡಿ ಮಾಡಬೇಕು. ಬಳಿಕ ಸರ್ವೇ ಆಗಬೇಕು’ ಎಂದು ಅವರು ಅಭಿಪ್ರಾಯಪಟ್ಟರು.