ಮಲೆನಾಡು ದಸರಾ: ಶಿವಮೊಗ್ಗದಲ್ಲಿ ಬೆಳ್ಳಿ ಸವಾರಿ ಹೊತ್ತು ಜಂಬೂ ಸವಾರಿ ತಾಲೀಮಿಗೆ ಹೆಜ್ಜೆ ಹಾಕಿದ ಸಾಗರ

| Updated By: ಆಯೇಷಾ ಬಾನು

Updated on: Oct 03, 2022 | 11:15 AM

ಅ. 5 ರಂದು ನಡೆಯುವ ದಸರಾ ಜಂಬೂಸವಾವರಿಗೆ ಶಿವಮೊಗ್ಗದ ಸಕ್ರೈಬೈಲಿನಿಂದ ಮೂರು ಆನೆಗಳು ನಗರಕ್ಕೆ ಎಂಟ್ರಿಕೊಟ್ಟಿವೆ. ಮುರು ದಿನ ಈ ಆನೆಗಳಿಗೆ ಸಾರ್ವಜನಿಕವಾಗಿ ಹೊಂದಿಕೊಂಡು ಓಡಾಡುವ ವಾತಾವರಣ ನಿರ್ಮಾಣ ಮಾಡಲು ರಿಹರ್ಸಲ್ ಮಾಡಿಸಲಾಗುತ್ತಿದೆ.

ಮಲೆನಾಡು ದಸರಾ: ಶಿವಮೊಗ್ಗದಲ್ಲಿ ಬೆಳ್ಳಿ ಸವಾರಿ ಹೊತ್ತು ಜಂಬೂ ಸವಾರಿ ತಾಲೀಮಿಗೆ ಹೆಜ್ಜೆ ಹಾಕಿದ ಸಾಗರ
ಮಲೆನಾಡು ದಸರಾ
Follow us on

ಶಿವಮೊಗ್ಗ: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದೆ. ಜಂಬೂ ಸವಾರಿಗೆ ದಿನಗಣನೆ ಶುರುವಾಗಿದೆ. ಇನ್ನು ಮೈಸೂರಿನಂತೆ ಶಿವಮೊಗ್ಗ ಜಿಲ್ಲೆಯಲ್ಲಿಯೂ ದಸರಾ ಸಂಭ್ರಮ ಕಳೆಗಟ್ಟಿದೆ. ಮಲೆನಾಡಿನಲ್ಲಿ 10 ದಿನಗಳ ಕಾಲ ಅದ್ಧೂರಿಯಾಗಿ ದಸರಾ ಆಚರಿಸಲಾಗುತ್ತೆ. ಮಲೆನಾಡಿನ ದಸರಾ ಅ. 5 ರಂದು ಕೊನೆಗೊಳ್ಳಲಿದೆ. ಸದ್ಯ ಈಗ ಮಲೆನಾಡಿನಲ್ಲಿ ಜಂಬುಸವಾರಿ ತಾಲೀಮು ಶುರುವಾಗಿದೆ.

ಮೈಸೂರಿನಂತೆ ಮಲೆನಾಡಿನಲ್ಲೂ ಸಾಂಪ್ರದಾಯಿಕ ದಸರಾ ಆಚರಣೆಯ ಕೊನೆಯ ದಿನ ಮಧ್ಯಾಹ್ನ ನಂದಿಕೋಲು ಪೂಜೆಯ ಮಾಡಿ. ಬಳಿಕ ಬೆಳ್ಳಿಯ 300 ಕೆಜಿ ದೇವಿಯ ಅಂಬಾರಿಯನ್ನು ಹೊತ್ತು ಆನೆಯ ಅದ್ದೂರಿ ಮೆರವಣಿಗೆ ಸಾಗುತ್ತೆ. ಅದರಂತೆ ಇಂದು ಜಂಬೂ ಸವಾರಿಗೆ ಭರ್ಜರಿ ತಯಾರಿ ನಡೆದಿದ್ದು ಸಾವಿರಾರು ಜನರು ಈ ಮೋಹಕ ದೃಶ್ಯಗಳನ್ನು ಕಣ್ತುಂಬಿಕೊಂಡಿದ್ದಾರೆ.

ಅ. 5 ರಂದು ನಡೆಯುವ ದಸರಾ ಜಂಬೂಸವಾವರಿಗೆ ಶಿವಮೊಗ್ಗದ ಸಕ್ರೈಬೈಲಿನಿಂದ ಮೂರು ಆನೆಗಳು ನಗರಕ್ಕೆ ಎಂಟ್ರಿಕೊಟ್ಟಿವೆ. ಮುರು ದಿನ ಈ ಆನೆಗಳಿಗೆ ಸಾರ್ವಜನಿಕವಾಗಿ ಹೊಂದಿಕೊಂಡು ಓಡಾಡುವ ವಾತಾವರಣ ನಿರ್ಮಾಣ ಮಾಡಲು ರಿಹರ್ಸಲ್ ಮಾಡಿಸಲಾಗುತ್ತಿದೆ. ಬೆಳ್ಳಿ ಅಂಬಾರಿ ಹೊತ್ತು ಸಾಗುವ ತರಬೇತಿ ನೀಡಲಾಗುತ್ತಿದೆ. ಈ ವರ್ಷವೂ ಸಾಗರ ಎಂಬ ಆನೆಯು ಅಂಬಾರಿಯನ್ನು ಹೊತ್ತು ಮೆರವಣಿಗೆಯಲ್ಲಿ ಸಾಗಲಿದ್ದಾನೆ. ಇದನ್ನೂ ಓದಿ: ದಸರಾ ಹಿನ್ನೆಲೆ ಬೆಂಗಳೂರು ಏರ್ಪೋಟ್​ನಲ್ಲಿ ಕಳೆಗಟ್ಟಿದ ಸಂಭ್ರಮ: ದೇಶ ವಿದೇಶದಿಂದ ಬರುವ ಪ್ರಯಾಣಿಕರಿಗೆ ಮಸ್ತ್ ಮನರಂಜನೆ

ಪ್ರತಿ ವರ್ಷ ಮಲೆನಾಡಿನಲ್ಲೂ ನಡೆಯುತ್ತೆ ದಸರಾ

ಶಿವಮೊಗ್ಗ ನಗರದ ಕೋಟೆ ರಸ್ತೆಯಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸಾಗರ ಆನೆಯು 300 ಕೆಜಿಯ ಬೆಳ್ಳಿಯ ಅಂಬಾರಿಯನ್ನು ಹೊತ್ತು ಸಾಗಲಿದೆ. ಹೀಗಾಗಿ ಇಂದು ಸಾಗರ ಆನೆಗೆ ರಿಹರ್ಸಲ್ ಮಾಡಿಸಲಾಗುತ್ತಿದ್ದು ಗೀತಾ ಮತ್ತು ಬಾನುಮತಿ ಎಂಬ ಎರಡು ಆನೆಗಳು ಸಾಥ್ ನೀಡಿವೆ. ಅಂಬಾರಿಯಲ್ಲಿ ಕೂರಿಸಲಾಗಿದ್ದ ದೇವಿಯ ಮೂರ್ತಿಯು ಎಲ್ಲರ ಗಮನ ಸೆಳೆದಿದೆ. ತಹಸೀಲ್ದಾರ್ ಗಿರೀಶ್ ಮತ್ತು ಪಾಲಿಕೆ ಮೇಯರ್ ಉಪಮೇಯರ್ ಅವರು ಜಂಬೂ ಸವಾರಿಗೆ ಚಾಲನೆ ನೀಡಿದರು. ಕೋಟೆ ರಸ್ತೆಯಿಂದ ಆರಂಭಗೊಂಡ ಜಂಬೂ ಸವಾರಿಯು ಗಾಂಧಿನಗರ ಮಾರ್ಗವಾಗಿ, ನೆಹರು ರಸ್ತೆ ಗೋಪಿ ವೃತ್ತ ಜೈಲ್ ರಸ್ತೆ ಮೂಲಕ ಸಾಗಿತು. ಸಾವಿರಾರು ಜನರು ಎರಡು ಬದಿಯಲ್ಲಿ ನಿಂತು ಜಂಬೂ ಸವಾರಿ ಮತ್ತು ಅಂಬಾರಿಯನ್ನು ನೋಡಿ ಸಂತೋಷ ಪಟ್ಟರು. ಮೆರವಣಿಗೆಯ ಉದ್ದಕ್ಕೂ ಹತ್ತು ಹಲವು ಜಾನಪದ ಕಲಾತಂಡಗಳು ಭಾಗವಹಿಸಿದ್ದವು. ಜಾನಪದ ಕಲಾ ತಂಡಗಳ ವಾದ್ಯಮೇಳಗಳು ಸಾಥ್ ನೀಡಿದವು. ಇದರ ಜೊತೆಗೆ ವಿವಿಧ ಟ್ಯಾಬ್ಲೋ, ದೊಡ್ಡ ದೊಡ್ಡ ಮುಖವಾಡ ಹಾಕಿಕೊಂಡಿರುವ ರೂಪಕಗಳು ಮಕ್ಕಳನ್ನು ತಮ್ಮತ್ತ ಸೆಳೆಯುತ್ತಿದ್ದವು. ಹೀಗೆ ತುಂಬಾ ವಿಜೃಂಭಣೆಯಿಂದ ಅಂಬಾರಿಹೊತ್ತ ಜಂಬೂ ಸವಾರಿಯ ರಿಹಾರ್ಸೆಲ್ ನೆರವೇರಿದೆ.

ಮಲೆನಾಡಿನ ದಸರಾದ ವಿಶೇಷತೆ ಅಂದ್ರೆ ನಗರದಲ್ಲಿರುವ ನೂರಾರು ದೇವಸ್ಥಾನಗಳ ಉತ್ಸವ ಮೂರ್ತಿಗಳನ್ನು ಆಯಾ ಬಡಾವಣೆಯ ಜನರು ತೆರದ ವಾಹನದಲ್ಲಿ ಮೆರವಣಿಗೆ ಮಾಡುತ್ತಾರೆ. ನಂತರ ನಗರದ ಹಳೇ ಜೈಲು ಮೈದಾದನಲ್ಲಿ ನಡೆಯುವ ಬನ್ನಿಮುಡಿಯುವ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ಹೀಗೆ ನೂರಾರು ದೇವಸ್ಥಾನಗಳ ಉತ್ಸವ ಮೂರ್ತಿಗಳ ಸಮ್ಮುಖದಲ್ಲಿ ಶಿವಮೊಗ್ಗ ತಹಸೀಲ್ದಾರ್ ನಾಗರಾಜ್ ಸಾಂಪ್ರದಾಯಕ ಉಡುಗೆ ತೊಟ್ಟು ಸಾವಿರಾರು ಜನರ ನಡುವೆ ಅಂಬು (ಬಾಳೆದಿಂಡು)ನ್ನು ಕಡಿಯುತ್ತಾರೆ. ಈ ಮೂಲಕ ಮಲೆನಾಡಿನಲ್ಲಿ ಬನ್ನಿಮುಡಿಯುವ ಹಬ್ಬಕ್ಕೆ ಚಾಲನೆ ಸಿಗುತ್ತದೆ. ಈ ಬನ್ನಿ ಮುಡಿಯುವುದು ಸಾರ್ವಜನಿಕವಾಗಿ ಎಲ್ಲರೂ ಪರಸ್ಪರ ವಿನಿಯಮ ಮಾಡಿಕೊಂಡು ವಿಜಯದಶಮಿಯನ್ನು ಆಚರಿಸುವುದು ಮಲೆನಾಡಿನ ಸಂಪ್ರದಾಯ. ಈ ಬನ್ನಿಮುಡಿಯುವ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಬಳಿಕ ಮತ್ತೊಂದು ಆಕರ್ಷಣೆ ಅಂದ್ರೆ ಅದು ರಾವಣನ ಅಹಂಕಾರ ದಹಿಸುವುದು. ರಾವಣನನನ್ನು ದಹಿಸುವ ಮೂಲಕ ಜನರು ವಿಜಯದಶಮಿಯ ಆಚರಣೆ ಮಾಡುತ್ತಾರೆ. ನಂತರ ಲಕ್ಷಾಂತರ ರೂಪಾಯಿ ಮೌಲ್ಯದ ಸುಡು ಮದ್ದುಗಳ ಪ್ರದರ್ಶನವು ಎಲ್ಲರ ಪ್ರಮುಖ ಆಕರ್ಷಣೆಯಾಗುತ್ತೆ. ಹೀಗೆ ಹಳೇ ಜೈಲು ಮೈದಾನ(ಪ್ರೀಡಂ ಪಾರ್ಕ್ ಮೈದಾನ) ದಲ್ಲಿ ನಡೆಯುವ ಬನ್ನಿಮುಡಿಯುವ ಕಾರ್ಯಕ್ರಮವು ಎಲ್ಲರನ್ನು ಮಂತ್ರಮುಗ್ದರನ್ನಾಗಿಸುತ್ತದೆ. ಇದನ್ನೂ ಓದಿ: ಪೊಲೀಸ್ ಸಹಾಯವಾಣಿ 112 ಆರಂಭ: ಕರೆ ಬಂದ 15 ನಿಮಿಷದಲ್ಲಿ ಸ್ಥಳಕ್ಕೆ ಸಿಬ್ಬಂದಿ; ಕಮಿಷನರ್ ಪ್ರತಾಪ್ ರೆಡ್ಡಿ

ಮಲೆನಾಡಿನ ದಸರಾ ಮತ್ತು ಅಚಣೆಗಳು ಸಹಜವಾಗಿ ಇಡೀ ರಾಜ್ಯದ ಗಮನ ಸೆಳೆದಿತ್ತು. ಮೈಸೂರಿನಂತೆ ಎಲ್ಲ ಸಂಪ್ರದಾಯಗಳು ಇಲ್ಲಿಯೂ ಕಂಡು ಬರುವುದು ವಿಶೇಷ. ಜಂಬೂ ಸವಾರಿಯಿಂದ ಹಿಡಿದು ಬನ್ನಿಮುಡಿಯುವ ಆಚರಣೆಗಳು ಎಲ್ಲವೂ ಅತ್ಯಾಕರ್ಷಣೆಯಿಂದ ಕೂಡಿವೆ. ಅಕ್ಟೋಬರ್ 5ರಂದು ಶಿವಮೊಗ್ಗದಲ್ಲಿ ಜಂಬೂ ಸವಾರಿ ನಡೆಯಲಿದ್ದು ಅದಕ್ಕೆ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ.

ವರದಿ: ಬಸವರಾಜ್ ಯರಗಣವಿ, ಟಿವಿ9 ಶಿವಮೊಗ್ಗ

Published On - 11:15 am, Mon, 3 October 22