ಮಹಿಳೆಯೊಬ್ಬರು ಮನೆಯಿಂದ ಮಿಸ್ಸಿಂಗ್ ಆಗಿ ಕೆಲವು ದಿನಗಳು ಆಗಿತ್ತು. ಕುಟುಂಬಸ್ಥರು ಎಲ್ಲೆಡೆ ಮಹಿಳೆಗಾಗಿ ಹುಡುಕಾಟ ನಡೆಸಿದ್ದರು. ಆದ್ರೆ ಮಹಿಳೆ ಮಾತ್ರ ಎಲ್ಲೂ ಪತ್ತೆಯಾಗಿರಲಿಲ್ಲ. ಕೊನೆಗೂ ಮಹಿಳೆಯ (Woman) ಮೃತದೇಹವು ಪತ್ತೆಯಾಗಿದೆ. ಮೃತ ಮಹಿಳೆಯ ಮರ್ಡರ್ ಮಾಡಿದ ಹಂತಕರು ಗೋಣಿ ಚೀಲದಲ್ಲಿ ಶವವಿಟ್ಟು ಎಸ್ಕೇಪ್ ಆಗಿದ್ದಾರೆ. ಮಹಿಳೆಯ ಮರ್ಡರ್ ರಹಸ್ಯ ಕುರಿತು ಒಂದು ವರದಿ ಇಲ್ಲಿದೆ. ಶಿವಮೊಗ್ಗ ಮೆಗ್ಗಾನ್ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಕಂಡು ಬಂದ ದೃಶ್ಯಾವಳಿಗಳು ಹೀಗಿದ್ದವು: ನಗ್ನ ಸ್ಥಿತಿಯಲ್ಲಿ ಮಹಿಳೆಯ ಮೃತದೇಹವು ಪತ್ತೆಯಾಗಿತ್ತು. ಕುಟುಂಬಸ್ಥರು ಮತ್ತು ಸಂಬಂಧಿಗಳು, ಬೀದಿ ಬದಿ ವ್ಯಾಪಾರಸ್ಥರು (Flower Vendor) ನೋವು ಮತ್ತು ಆಕ್ರೋಶ ಹೊರಹಾಕುತ್ತಿದ್ದರು. ಮಹಿಳೆಯನ್ನು ಬಟ್ಟೆ ಎಲ್ಲ ಬಿಚ್ಚಿ ಕೊಲೆ (Murder) ಮಾಡಿದ್ದಾರೆ. ಮೃತದೇಹ ನಗ್ನವಾಗಿರುವುದರಿಂದ ನೂರೆಂಟು ಅನುಮಾನಗಳು ಈ ಕೇಸ್ ನಲ್ಲಿವೆ. ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಅವರೆಲ್ಲ ಒತ್ತಾಯಿಸಿದರು. ಹೀಗೆ ಮೃತಪಟ್ಟ ಮಹಿಳೆಯ ಹೆಸರು ಮಮತಾಜ್ ಬೇಗಂ. ಶಿವಮೊಗ್ಗದ (Shivamogga) ರಾಗಿಗುಡ್ಡ ನಿವಾಸಿ.
ಕಳೆದ 15 ವರ್ಷಗಳಿಂದ ಈ ಮಹಿಳೆ ಹೂವಿನ ವ್ಯಾಪಾರದ ಮೂಲಕ ತನ್ನ ಜೀವನ ನಡೆಸುತ್ತಿದ್ದಳು. ಪತಿ ಷರೀಫ್ ಆಟೋ ಚಾಲಕ. ಇಬ್ಬರು ಮಕ್ಕಳಿದ್ದಾರೆ. ಮಗಳ ಮದುವೆಯನ್ನು ಇತ್ತೀಚೆಗಷ್ಟೇ ಮಾಡಿ ಮುಗಿಸಿದ್ದಳು. ಗಂಡು ಮಗು ಪುಟ್ಟ ದಿನಸಿ ಅಂಗಡಿಯಿಟ್ಟುಕೊಂಡಿದ್ದಾನೆ. ಮಹಿಳೆಯು ಎಂದಿನಂತೆ ಮಾರ್ಚ್ 6 ರಂದು ಶಿವಮೊಗ್ಗ ತಾಲೂಕಿನ ಹೊಳಲೂರು ಗ್ರಾಮಕ್ಕೆ ಹೂವಿನ ವ್ಯಾಪಾರಕ್ಕೆಂದು ಬೆಳಗ್ಗೆ ಆರು ಗಂಟೆಗೆ ತೆರಳಿದ್ದಳು. ಆ ದಿನ 8.30ರ ಬೆಳಗ್ಗೆ ಆಸುಪಾಸಿನಲ್ಲಿ ಕೊನೆಯದಾಗಿ ಹೊಳಲೂರು ಗ್ರಾಮದಲ್ಲಿ ಮಹಿಳೆ ಕಾಣಿಸಿಕೊಂಡಿದ್ದಾಳೆ.
ಅದರ ಬಳಿಕ ಮಹಿಳೆ ಕಂಡಿರಲಿಲ್ಲ. ಸಂಜೆಯಾದ್ರೂ ಮಹಿಳೆಯು ವಾಪಸ್ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು. ಮಾರ್ಚ್ 11 ರ ಸಂಜೆ ಮಮತಾಜ್ ಬೇಗಂ ಳ ಮೃತದೇಹವು ಭದ್ರಾವತಿ ತಾಲೂಕಿನ ಸನ್ಯಾಸಿ ಕೋಡಿಮಗ್ಗ ಗ್ರಾಮದ ಭದ್ರಾ ಸೇತುವೆ ಕೆಳಗೆ ಗೋಣಿ ಚೀಲದಲ್ಲಿ ಪತ್ತೆಯಾಗಿತ್ತು.
ಇದನ್ನು ನೋಡಿದ ಸ್ಥಳೀಯರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ಕುಟುಂಬಸ್ಥರು ಗೋಣಿ ಚೀಲದಲ್ಲಿರುವ ಶವ ನೋಡಿ ಅದು ಮಮತಾಜ್ ಬೇಗಂ ಶವ ಎನ್ನುವುದು ಖಚಿತ ಪಡಿಸಿದ್ದರು. ಕುಟುಂಬಸ್ಥರಿಗೆ ಮತ್ತಷ್ಟು ಆಘಾತ ತಂದ ವಿಷಯವೆಂದರೆ ಮೃತಳ ದೇಹದ ಮೇಲೆ ಯಾವುದೇ ಬಟ್ಟೆ ಇರಲಿಲ್ಲ. ನಗ್ನ ಮತ್ತು ಕೊಳೆತ ಸ್ಥಿತಿಯಲ್ಲಿ ಶವವಿತ್ತು. ತಲೆ ಮತ್ತು ಕಿವಿ ಭಾಗದಲ್ಲಿ ಪೆಟ್ಟು ಬಿದ್ದಿರುವುದು ಕಂಡು ಬಂದಿತ್ತು. ಮೇಲ್ನೋಟಕ್ಕೆ ಇಂದು ವ್ಯವಸ್ಥಿತ ಕೊಲೆ ಎನ್ನುವುದು ಕುಟುಂಬಸ್ಥರಿಗೆ ಗೊತ್ತಾಗಿತ್ತು.
ನಿತ್ಯ ಬೆಳಗಿನ ಜಾವ ಹೋಗಿ ಹೊಳಲೂರಿನಲ್ಲಿ ವ್ಯಾಪಾರ ಮುಗಿಸಿಕೊಂಡು ಮಧ್ಯಾಹ್ನ ಮಹಿಳೆ ವಾಪಸ್ ಶಿವಮೊಗ್ಗಕ್ಕೆ ಬರುತ್ತಿದ್ದಳು. ಆದ್ರೆ ಮಾ. 6 ರಂದು ಹೋದ ಮಹಿಳೆಯು ಜೀವಂತವಾಗಿ ವಾಪಸ್ ಬರಲೇ ಇಲ್ಲ. ಮಹಿಳೆಯು ತನ್ನ ಮಗಳ ಮದುವೆಗೆ ಸಾಲವೆಂದು 80 ಸಾವಿರ ಹೊಳಲೂರಿನಲ್ಲಿ ಪರಿಚಯಸ್ಥರ ಬಳಿ ಪಡೆದುಕೊಂಡಿದ್ದಳು. ಆ ದಿನ ಆ ಹಣ ವಾಪಸ್ ಕೊಡುವುದಕ್ಕೆಂದು ಆ 80 ಸಾವಿರ ರೂ ತೆಗೆದುಕೊಂಡು ಹೋಗಿದ್ದಳು. ಈ ಹಣಕ್ಕಾಗಿಯೇ ಮರ್ಡರ್ ಆಗಿರುವ ಸಾಧ್ಯತೆಯಿದೆ.
ದುಷ್ಕರ್ಮಿಗಳು ಮಹಿಳೆಯನ್ನು ಪುಸಲಾಯಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಮಹಿಳೆ ಬಳಿ ಇರುವ ಹಣ ಕಿತ್ತುಕೊಂಡಿದ್ದಾರೆ. ಈ ನಡುವೆ ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಮಹಿಳೆಯ ಮೇಲೆ ದೊಣ್ಣೆ ಮತ್ತು ಕಲ್ಲಿನಿಂದ ದಾಳಿ ಮಾಡಿದ್ದಾರೆ. ಇದರಿಂದ ಮಹಿಳೆ ಮೃತಪಟ್ಟಿದ್ದಾಳೆ. ಈ ಕೊಲೆ ಪ್ರಕರಣವನ್ನು ಮುಚ್ಚಿಹಾಕಲು ಹಂತಕರು ಮೃತದೇಹವನ್ನು ಗೋಣಿ ಚೀಲದಲ್ಲಿ ತುಂಬಿದ್ದಾರೆ. ಚಾಲಾಕಿ ಹಂತಕರು ಮಹಿಳೆಯ ಸೀರೆ ಮತ್ತು ಆ ದಿನ ಹಾಕಿಕೊಂಡಿದ್ದ ಸ್ವೆಟರ್ ಸೇರಿದಂತೆ ಎಲ್ಲ ಬಟ್ಟೆಯನ್ನು ತೆಗೆದಿದ್ದಾರೆ.
ಮೃತ ಮಹಿಳೆಯ ನಗ್ನ ದೇಹವನ್ನು ಗೋಣಿ ಚೀಲದಲ್ಲಿ ತುಂಬಿ ಹೊಳಲೂರಿನಿಂದ ಸ್ವಲ್ಪ ದೂರ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ರಸ್ತೆಯ ಭದ್ರಾ ಸೇತುವೆ ಕೆಳಗೆ ಮೃತ ದೇಹವಿದ್ದ ಗೋಣಿ ಚೀಲವನ್ನು ಎಸೆದು ಎಸ್ಕೇಪ್ ಆಗಿದ್ದಾರೆ. ಮಿಸ್ಸಿಂಗ್ ಆಗಿ ನಾಲ್ಕು ದಿನಗಳ ಬಳಿಕ ಮೃತ ಮಹಿಳೆಯ ಶವ ಪತ್ತೆಯಾಗಿದೆ. ಮಹಿಳೆ ಮಿಸ್ಸಿಂಗ್ ಕೇಸ್ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲು ಆಗಿತ್ತು.
ಮಹಿಳೆಯ ಶವ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದು, ಕೊಲೆ ಕೇಸ್ ದಾಖಲು ಆಗಿದೆ. ಸದ್ಯ ಹೊಳೆಹೊನ್ನೂರು ಪೊಲೀಸರು ನಗ್ನ ಸ್ಥಿತಿಯಲ್ಲಿ ಪತ್ತೆಯಾದ ಮಹಿಳೆಯ ಕೊಲೆ ರಹಸ್ಯದ ತನಿಖೆಗೆ ಮುಂದಾಗಿದ್ದಾರೆ. ಇನ್ನು ಶಿವಮೊಗ್ಗದ ಬೀದಿ ಬದಿ ವ್ಯಾಪಾರಸ್ಥರ ಸಂಘದವರು ಘಟನೆ ಖಂಡಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದರು. ತತಕ್ಷಣ ಕೊಲೆ ಮಾಡಿದವರನ್ನು ಪತ್ತೆ ಮಾಡಿ ಕಠಿಣ ಶಿಕ್ಷೆ ನೀಡಬೇಕೆಂದು ಜಿಲ್ಲಾ ಎಸ್ಪಿಗೆ ಒತ್ತಾಯಿಸಿದ್ದಾರೆ.
ದಶಕಗಳಿಂದ ಒಂದೇ ಗ್ರಾಮದಲ್ಲಿ ಹೂವಿನ ವ್ಯಾಪಾರ ಮಾಡಿಕೊಂಡು ಉಪಜೀವನ ನಡೆಸುತ್ತಿದ್ದ ಮಹಿಳೆಯ ಮರ್ಡರ್ ಆಗಿದೆ. ಹೊಳಲೂರು ಗ್ರಾಮದಲ್ಲಿ ಈ ಕೊಲೆ ಪ್ರಕರಣವು ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಹೂವಿನ ವ್ಯಾಪಾರಿ ಮಹಿಳೆಯನ್ನು ಮರ್ಡರ್ ಮಾಡಿದ್ದು ಯಾರು.. ಯಾಕೆ ಎನ್ನುವುದು ಮಾತ್ರ ನಿಗೂಢವಾಗಿದೆ. ಹೊಳೆಹೊನ್ನೂರು ಪೊಲೀಸರು ಮಹಿಳೆಯ ಮರ್ಡರ್ ಕೇಸ್ ರಹಸ್ಯ ಬಯಲು ಮಾಡಬೇಕಿದೆ.
ವರದಿ: ಬಸವರಾಜ್ ಯರಗಣವಿ ಟಿವಿ9 ಶಿವಮೊಗ್ಗ
Published On - 4:28 pm, Tue, 14 March 23