ಶಿವಮೊಗ್ಗ, ಫೆ.23: ಜಿಲ್ಲೆಯ ಹೊಸನಗರ(Hosanagara) ತಾಲೂಕಿನ ರಿಪ್ಪನಪೇಟೆ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಆಗರವಾಗಿದ್ದು, ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಲಕ್ಷ್ಮಮ್ಮ (57) ಎಂಬ ವೃದ್ಧೆ ಸಾವನ್ನಪ್ಪಿದ್ದಾರೆ. ತಡರಾತ್ರಿ ವೃದ್ಧೆಯ ಆರೋಗ್ಯದಲ್ಲಿ ಏರುಪೇರಾಗಿದ್ದು, ಲೋ ಬಿಪಿ ಹಿನ್ನಲೆಯಲ್ಲಿ ವೃದ್ದೆ ಅಸ್ವಸ್ಥಗೊಂಡಿದ್ದರು. ಕೂಡಲೇ ಕುಟುಂಬಸ್ಥರು ರಿಪ್ಪನಪೇಟೆ ಸರ್ಕಾರಿ ಆಸ್ಪತ್ರೆಗೆ ರೋಗಿಯನ್ನು ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಆಸ್ಪತ್ರೆಯಲ್ಲಿ ವೈದ್ಯರು ಕರ್ತವ್ಯಕ್ಕೆ ಗೈರಾಗಿದ್ದು, ನರ್ಸ್ಗಳಿಂದ ರೋಗಿಯ ತಪಾಸಣೆ ಮಾಡಿಸಲಾಗಿದೆ.
ಆದರೆ, ವೃದ್ಧೆಯ ಸ್ಥಿತಿ ಗಂಭೀರವಾದ ಹಿನ್ನಲೆ ಶಿವಮೊಗ್ಗ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸರ್ಕಾರಿ ಆಸ್ಪತ್ರೆಯ ನರ್ಸ್ಗಳು ಸೂಚಿಸಿದ್ದಾರೆ. ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲು ಅಂಬುಲೇನ್ಸ್ ಸಿಕ್ಕಿಲ್ಲ. ಪರಿಣಾಮ ವೃದ್ಧೆಗೆ ಸೂಕ್ತ ಚಿಕಿತ್ಸೆ ರಿಪ್ಪನಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಸಿಗದ ಹಿನ್ನಲೆ ರೋಗಿಯ ಕುಟುಂಬಸ್ಥರು ಪರದಾಟ ನಡೆಸಿದ್ದಾರೆ. ಒಂದು ಗಂಟೆ ಪರದಾಡಿದ ಬಳಿಕ ಖಾಸಗಿ ವಾಹನದಲ್ಲಿ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರಾದರೂ, ವೃದ್ಧೆ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ:ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಅವ್ಯವಸ್ಥೆ ತಾಂಡವ: ಸ್ನಾನಕ್ಕೆ ಬಿಸಿ ನೀರಿಲ್ಲದೆ ಪರದಾಡುತ್ತಿರುವ ಬಾಣಂತಿಯರು
ಹಾಸನ: ಜಿಲ್ಲೆಯ ಬೇಲೂರು ತಾಲೂಕು ಆಸ್ಪತ್ರೆಯಲ್ಲೂ ರೋಗಿಗಳು ಪರದಾಟ ನಡೆಸುವ ಸ್ಥಿತಿ ನಿರ್ಮಾಣವಾಗಿದೆ. ವೈದ್ಯರು, ನರ್ಸ್ಗಳು ಬಾರದಿದ್ದರಿಂದ ರೋಗಿಗಳು ನೆಲದ ಮೇಲೆಯೇ ಮಲಗಿದ್ದಾರೆ. ವಿಚಾರ ತಿಳಿದು ಆಸ್ಪತ್ರೆಗೆ ಕರವೇ ಕಾರ್ಯಕರ್ತರು ಭೇಟಿ ನೀಡಿ ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಆರೋಗ್ಯ ಅಧಿಕಾರಿಗಳಿಗೆ ಕರೆಮಾಡಿ ಮಾಹಿತಿ ನೀಡಿದ ಕಾರ್ಯಕರ್ತರು, ಬೇಲೂರು ತಾಲೂಕು ಆಸ್ಪತ್ರೆಗೆ ಸಿಬ್ಬಂದಿ ನೇಮಿಸುವಂತೆ ಒತ್ತಾಯಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ