ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣ ಟರ್ಮಿನಲ್ (Shivamogga Airport Terminal) ಕಟ್ಟಡದ ಮೇಲ್ಛಾವಣಿಯನ್ನು ಹೊದಿಕೆಯಿಂದ ಮುಚ್ಚಬೇಕು. ಹಾಗೂ ಸರ್ಕಾರಿ ಬಸ್‌ಗಳ ಮೇಲಿರುವ ಸರ್ಕಾರಿ ಜಾಹೀರಾತುಗಳನ್ನು ತೆಗೆಯುವಂತೆ ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ದಾರೆ. ಚುನಾವಣಾ ವೇಳೆಯಲ್ಲಿ ನೀತಿ ಸಂಹಿತೆಯಡಿ (Code Of Conduct) ವಿಮಾನ ನಿಲ್ದಾಣದ ಮೇಲಿರುವ ಕಮಲ ಚಿಹ್ನೆಯನ್ನು ಬಟ್ಟೆಯಿಂದ ಸಂಪೂರ್ಣವಾಗಿ ಮುಚ್ಚಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಕೆ.ದೇವೇಂದ್ರಪ್ಪ ನೇತೃತ್ವದ ನಿಯೋಗ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.
ಕಮಲದ ಆಕಾರದಲ್ಲಿರುವ ವಿಮಾನ ನಿಲ್ದಾಣದ ಟರ್ಮಿನಲ್ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಬಿಜೆಪಿಯವರು ಇದೇ ನಮ್ಮ ಸಾಧನೆ ಎಂದು ಬಿಂಬಿಸುತ್ತಿದ್ದಾರೆ. ಆದ್ದರಿಂದ ಚುನಾವಣಾಧಿಕಾರಿಗಳು ಚುನಾವಣೆ ಮುಗಿಯುವವರೆಗೂ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕಮಲದ ಚಿಹ್ನೆ ಇರುವ ಭಾಗವನ್ನು ಮುಚ್ಚಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಇತ್ತೀಚೆಗೆ ಉದ್ಘಾಟನೆಗೊಂಡ ಈ ವಿಮಾನ ನಿಲ್ದಾಣದ ಕಟ್ಟಡದ ವಿನ್ಯಾಸ ಸಂಪೂರ್ಣವಾಗಿ ಬಿಜೆಪಿ ಚಿಹ್ನೆಯಾದ ಕಮಲದ ವಿನ್ಯಾಸದಲ್ಲಿದೆ. ಈ ಬಗ್ಗೆ ಕಟ್ಟಡ ಆರಂಭವಾದಾಗಲೇ ಈ ಬಗ್ಗೆ ಕಾಂಗ್ರೆಸ್ ಗಮನ ಸೆಳೆದಿತ್ತು. ಸಾರ್ವಜನಿಕರು, ವಿವಿಧ ಸಂಘಟನೆಗಳು ಹೋರಾಟ ಮಾಡಿದ್ದವು. ಆದರೂ ಕಮಲದ ಚಿಹ್ನೆಯನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಹೀಗಾಗಿ ಇದನ್ನು ಚುನಾವಣಾ ನೀತಿ ಸಂಹಿತೆಯ ಪ್ರಕಾರ ಚುನಾವಣಾಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಕಮಲದ ಚಿಹ್ನೆ ಇರುವ ಎಲ್ಲ ಭಾಗವನ್ನು ಮುಚ್ಚಬೇಕು. ಆ ಮೂಲಕ ನೀತಿ ಸಂಹಿತೆಯನ್ನು ಕಾಪಾಡಬೇಕು. ಒಂದುವೇಳೆ ಜಿಲ್ಲಾಡಳಿತ ಅಥವಾ ಚುನಾವಣಾಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಕೆಪಿಸಿಸಿ ವತಿಯಿಂದಲೇ ಅದನ್ನು ಮುಚ್ಚಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಅದೇ ರೀತಿ ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ಮುಖ್ಯಮಂತ್ರಿ ಹಾಗೂ ಪ್ರಧಾನಮಂತ್ರಿ ಮತ್ತು ಸಚಿವ ಸಂಪುಟದ ಮಂತ್ರಿಗಳ ಮುಖವಿರುವ ಜಾಹೀರಾತುಗಳು ಇವೆ. ಜೊತೆಗೆ ಸ್ಟಿಕ್ಕರ್‌ಗಳು ರಾರಾಜಿಸುತ್ತಿವೆ. ಇದು ಕೂಡ ಚುನಾವಣಾ ನೀತಿ ಸಂಹಿತೆಗೆ ವಿರೋಧವಾಗಿದೆ. ಈ ಕೂಡಲೇ ಬಸ್‌ಗಳ ಮೇಲಿರುವ ಭಾವಚಿತ್ರ ಮತ್ತು ಜಾಹೀರಾತು ಬರಹಗಳನ್ನು ತೆಗೆದುಹಾಕಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಇನ್ನು ಇದಕ್ಕೆ ಬಿಜೆಪಿ ಕಾರ್ಯಕರ್ತರು ಲೇವಡಿ ಮಾಡಿದ್ದು, ನಿಮ್ಮ ಹಸ್ತ ಕಾಂಗ್ರೆಸ್ ಚಿಹ್ನೆಯಾಗಿದೆ. ಚುನಾವಣೆ ಮುಗಿಯುವವರೆಗೂ ನಿಮ್ಮ ಕೈಗಳನ್ನು ತೆಗೆದಿಟ್ಟು ಬನ್ನಿ ಎಂದು ವ್ಯಂಗ್ಯವಾಡಿದ್ದಾರೆ.
ಶಿವಮೊಗ್ಗ ಜಿಲ್ಲಾಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 7:12 am, Mon, 10 April 23