ಶಿವಮೊಗ್ಗ: ಗುತ್ತಿಗೆದಾರ ಸಂತೋಷ್ ಪಾಟೀಲ್(Santosh Patil) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಚಿವ ಕೆ.ಎಸ್.ಈಶ್ವರಪ್ಪ(KS Eshwarappa) ದಿಢೀರ್ ಸುದ್ದಿಗೋಷ್ಠಿ ಕರೆದಿದ್ದಾರೆ. ಶಿವಮೊಗ್ಗದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಯುತ್ತಿದೆ. ಬೆಳಗ್ಗೆಯಿಂದ ಈಶ್ವರಪ್ಪ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. 3 ದಿನ ಮಾಧ್ಯಮಗಳ ಜೊತೆ ಮಾತನಾಡಲ್ಲವೆಂದಿದ್ದರು. ಸದ್ಯ ದಿಢೀರ್ ಸುದ್ದಿಗೋಷ್ಠಿ ಕರೆದಿದ್ದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಈಶ್ವರಪ್ಪ ಘೋಷಣೆ ಮಾಡಿದ್ದಾರೆ.
ನಿನ್ನೆ ರಾಜೀನಾಮೆ ಪ್ರಶ್ನೆಯೇ ಇಲ್ಲ ಎಂದು ಸಚಿವ ಈಶ್ವರಪ್ಪ ಹೇಳಿದ್ದರು. ಇಂದಿನ ಬೆಳವಣಿಗೆ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ. ಕೇಸರಿ ಶಾಲ್ ಹಾಕಿಕೊಂಡು ಸುದ್ದಿಗೋಷ್ಠಿ ಆರಂಭಿಸಿದ ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ನಾಳೆ ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನಾಳೆ ಸಿಎಂಗೆ ರಾಜೀನಾಮೆ ಪತ್ರವನ್ನು ಸಲ್ಲಿಸುತ್ತೇನೆ. ಈ ಕುರಿತು ನಾನು ಸಿಎಂ ಜೊತೆಗೂ ಚರ್ಚೆ ಮಾಡಿದ್ದೇನೆ. ಸಿಎಂ ಹಾಗೂ ಎಲ್ಲ ಸ್ನೇಹಿತರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಾನು ಎಲ್ಲವನ್ನೂ ಎದುರಿಸಿ ಮುಕ್ತವಾಗಿ ಹೊರಬರುತ್ತೇನೆ. ಪಕ್ಷಕ್ಕೆ ಮುಜುಗರವಾಗಬಾರದೆಂದು ರಾಜೀನಾಮೆ ನಿರ್ಧಾರ ಮಾಡಿದ್ದೇನೆ. ನಾಳೆ ಸಂಜೆ ಸಿಎಂ ಭೇಟಿಯಾಗಿ ರಾಜೀನಾಮೆ ಸಲ್ಲಿಸುತ್ತೇನೆ. ರಾಜೀನಾಮೆ ನೀಡುವ ಬಗ್ಗೆ 3-4 ದಿನದ ಹಿಂದೆ ನಿರ್ಧರಿಸಿದ್ದೆ. ನಾನು ಬಲಿಪಶುವಾಗುವ ಪ್ರಶ್ನೆಯೇ ಉದ್ಭವಿಸಲ್ಲ ಎಂದು ತಮ್ಮ ರಾಜೀನಾಮೆ ಬಗ್ಗೆ ಘೋಷಣೆ ಮಾಡಿದ್ದಾರೆ.
3-4 ದಿನದ ಮೊದಲೇ ಈ ತೀರ್ಮಾನ ಮಾಡಿದ್ದೆ. ನಾಯಕರು ನನಗೆ ಅವಸರ ಮಾಡುವುದು ಬೇಡ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ನಾನು ಪಕ್ಷಕ್ಕೆ ಮುಜುಗರ ಆಗಬಾರದು ಎನ್ನುವ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಲು ಮುಂದಾಗಿರುವೆ. ಯಾವುದೇ ಕಾರಣಕ್ಕೂ ನಾನು ಈ ಪ್ರಕರಣದಲ್ಲಿ ಬಲಿಪಶು ಆಗುವುದಿಲ್ಲ. ಈ ಪ್ರಕರಣದಿಂದ ಆರೋಪ ಮುಕ್ತನಾಗಿ ನಾನು ಬರುತ್ತೇನೆ ಎಂದರು.
ನೈತಿಕ ಹೊಣೆ ಹೊತ್ತು ಈಶ್ವರಪ್ಪ ರಾಜೀನಾಮೆ ನೀಡಿದ್ದಾರೆ
ಇನ್ನು ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ರಾಜೀನಾಮೆ ಬಗ್ಗೆ ಸಂಜೆ ಈಶ್ವರಪ್ಪ ನನ್ನ ಜೊತೆ ಮಾತಾಡಿದ್ರು. ಪ್ರಕರಣದಲ್ಲಿ ನಾನು ಮುಕ್ತವಾಗಿ ಹೊರಬರುತ್ತೇನೆ ಅಂದಿದ್ದರು. ಅಲ್ಲಿಯವರೆಗೂ ನನಗೆ ಈ ಸ್ಥಾನ ಬೇಡ ಎಂದು ಹೇಳಿದ್ದರು. ನೈತಿಕ ಹೊಣೆ ಹೊತ್ತು ಈಶ್ವರಪ್ಪ ರಾಜೀನಾಮೆ ನೀಡಿದ್ದಾರೆ. ಇದರಲ್ಲಿ ಹೈಕಮಾಂಡ್ ಯಾವುದೇ ಒತ್ತಡ ಇಲ್ಲ. ಸ್ವ ಇಚ್ಛೆಯಿಂದ ಈಶ್ವರಪ್ಪ ರಾಜೀನಾಮೆ ನೀಡಿದ್ದಾರೆ. ತನಿಖಾ ವರದಿ ಬಂದ ಬಳಿಕ ಸತ್ಯಾಂಶ ಗೊತ್ತಾಗಲಿದೆ ಎಂದು ಸಿಎಂ ತಿಳಿಸಿದ್ದಾರೆ.
ಮುಜುಗರದಿಂದ ಪಾರಾಗಲು ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ
ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಮುಜುಗರದಿಂದ ಪಾರಾಗಲು ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಕಾರ್ಯಕಾರಿಣಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಭಾಗಿಯಾಗಲಿದ್ದಾರೆ. ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ವಿರುದ್ಧ ಉಡುಪಿನಲ್ಲಿ ಎಫ್ಐಆರ್ ದಾಖಲಾಗಿದ್ದು ಆರೋಪಿಯಾಗಿದ್ದಾರೆ. ಹೀಗಾಗಿ ರಾಜ್ಯ ಕಾರ್ಯಕಾರಿಣಿಯಲ್ಲಿ ಮುಜುಗರದಿಂದ ಪಾರಾಗಲು ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ: ಸಂತೋಷ ಕುಟುಂಬ ದುಃಖಸಾಗರದಲ್ಲಿ ಮುಳುಗಿದ್ದರೆ, ಈಶ್ವರಪ್ಪ ಸಂತೋಷದ ಅಲೆಯಲ್ಲಿ ತೇಲುತ್ತಿದ್ದಾರೆ!
ಮಿಯಾಮಿಯಲ್ಲಿ ಅಕ್ವೇರಿಯಂ ಪ್ರದರ್ಶನದ ವೇಳೆ ತರಬೇತುದಾರನ ಮೇಲೆ ದಾಳಿ ಮಾಡಿದ ಡಾಲ್ಫಿನ್; ಇಲ್ಲಿದೆ ವೈರಲ್ ವಿಡಿಯೋ
Published On - 6:03 pm, Thu, 14 April 22