ಶಿವಮೊಗ್ಗ: ಸಂಘರ್ಷಪೀಡಿತ ಸುಡಾನ್ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರ ಹಮ್ಮಿಕೊಂಡಿದ್ದ ‘ಆಪರೇಷನ್ ಕಾವೇರಿ (Operation Kaveri)’ ಕಾರ್ಯಾಚರಣೆ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಎಲ್ಲ ಭಾರತೀಯರನ್ನು ವಾಪಸ್ ಕರೆತರಲಾಗಿದೆ. ಈವರೆಗೆ ಕರ್ನಾಟದ 439 ಮಂದಿಯನ್ನು ಸುಡಾನ್‌ನಿಂದ ಕರೆದುಕೊಂಡು ಬರಲಾಗಿದೆ. ಇನ್ನು ಈ ಪೈಕಿ ಶಿವಮೊಗ್ಗದ 194 ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯದ ಜನರು(Hakki Pikki tribe members) ಇದ್ದು, ಇವರೊಂದಿಗೆ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಇಂದು(ಮೇ 07) ಶಿವಮೊಗ್ಗದಲ್ಲಿ (Shivamogga) ಸಂವಾದ ನಡೆಸಿದ್ದು, ಹಕ್ಕಿಪಿಕ್ಕಿ ಸಮುದಾಯದ ಜನರು ಸುಡಾನ್ನಲ್ಲಿ ಎದುರಿಸಿದ ಸಮಸ್ಯೆಗಳು ಹಾಗೂ ಅಲ್ಲಿನ ಭೀಕರತೆ ಬಗ್ಗೆ ಬಿಚ್ಚಿಟ್ಟರು.
ಇದನ್ನೂ ಓದಿ: Operation Kaveri: ಆಪರೇಷನ್ ಕಾವೇರಿ ಯಶಸ್ವಿ; ಕರ್ನಾಟಕಕ್ಕೆ ಬಂದವರು ಎಷ್ಟು ಜನ?
ಇದೇ ವೇಳೆ, ಕೇಂದ್ರ ಸರ್ಕಾರವು ಹೇಗೆ ರಕ್ಷಣೆ ಮಾಡಿತು ಎಂದು ಹಕ್ಕಿಪಿಕ್ಕಿ ಸಮುದಾಯದವರು ವಿವರಿಸಿದ್ದು, ನಮಗೆ ಒಂದು ಸಣ್ಣ ಗಾಯ ಕೂಡ ಆಗದಂತೆ ಸರ್ಕಾರ ಮುತುವರ್ಜಿ ವಹಿಸಿತು. ನರೇಂದ್ರ ಮೋದಿ ಅವರ ಶ್ರಮದಿಂದಾಗಿ ನಾವು ಭಾರತಕ್ಕೆ ಬಂದೆವು ಎಂದು ಸಂತಸ ವ್ಯಕ್ತಪಡಿಸಿದರು.
ಈ ವೇಳೆ ಕೇಂದ್ರ ಸರ್ಕಾರದ ಆಪರೇಷನ್ ಕಾವೇರಿ ತಂಡ ಮಾಡಿದ ರಕ್ಷಣಾ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಕ್ಕಿ ಪಿಕ್ಕಿ ಬುಡಕಟ್ಟು ಸಮುದಾಯದ ಜನರು ಕೃತಜ್ಞತೆ ತಿಳಿಸಿದರು. ಸಮುದಾಯದವರ ಜತೆ ಮಾತನಾಡುತ್ತ ಮೋದಿ ಅವರು ಭಾರತೀಯರ ರಕ್ಷಣೆಯ ವಿಚಾರವನ್ನು ಪ್ರಸ್ತಾಪಿಸಿದರು. ಜಗತ್ತಿನ ಯಾವುದೇ ಮೂಲೆಯಲ್ಲಿ ಭಾರತೀಯರು ಸಂಕಷ್ಟಕ್ಕೆ ಸಿಲುಕಿದರೂ ಸರ್ಕಾರ ಅವರ ನೆರವಿಗೆ ಬರುತ್ತದೆ. ಸಂಕಷ್ಟಕ್ಕೆ ಸಿಲುಕಿದವರನ್ನು ರಕ್ಷಣೆ ಮಾಡುತ್ತದೆ. ಹಾಗೆಯೇ, ನೀವು ಕೂಡ, ನಾವು ಒಬ್ಬರಿಗೆ ಸಹಾಯ ಮಾಡಿದರೆ, ನಮಗೆ ಬೇರೆಯವರು ಸಹಾಯ ಮಾಡುತ್ತಾರೆ ಎಂಬ ಮನೋಭಾವನೆ ರೂಢಿಸಿಕೊಳ್ಳಿ. ಆ ಮೂಲಕ ದೇಶಕ್ಕೆ, ಸಮಾಜಕ್ಕೆ ಕೊಡುಗೆ ನೀಡಿ ಎಂದು ಕರೆ ನೀಡಿದರು.
ಸುಡಾನ್ನಲ್ಲಿ ಸಿಲುಕಿಕೊಂಡಿರುವ ಎಲ್ಲ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಪ್ರಕ್ರಿಯೆ ಸಂಪೂರ್ಣವಾಗಿ ಕೊನೆಗೊಂಡಿದೆ. ಇದೀಗ ಎಲ್ಲ ಭಾರತೀಯರು ಭಾರತಕ್ಕೆ ಬಂದಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಈವರೆಗೆ ಕರ್ನಾಟದ 439 ಮಂದಿಯನ್ನು ಸುಡಾನ್‌ನಿಂದ ಕರೆದುಕೊಂಡು ಬರಲಾಗಿದೆ. ಈ ಪೈಕಿ 194 ಮಂದಿ ಶಿವಮೊಗ್ಗದವರು. 116 ಮಂದಿ ಮೈಸೂರಿನವರು. ದಾವಣಗೆರೆಯ 32, ಬೆಂಗಳೂರಿನ 31, ಬೆಳಗಾವಿಯ 24 ಮಂದಿಯನ್ನು ರಕ್ಷಿಸಿ ಕರೆದುಕೊಂಡು ಬರಲಾಗಿದೆ. ಉಳಿದವರು ಕೊಡಗು, ರಾಮನಗರ, ಹಾಸನ, ಕಲಬುರಗಿ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಧಾರವಾಡ ಹಾಗೂ ತುಮಕೂರು ಜಿಲ್ಲೆಯವರು. ಇದುವರೆಗೆ 14 ಬ್ಯಾಚ್‌ಗಳಲ್ಲಿ ಕರ್ನಾಟಕದವರನ್ನು ಕರೆತರಲಾಗಿದೆ. ಇವರಲ್ಲಿ ಬೆಂಗಳೂರು ಮಾತ್ರವಲ್ಲದೆ ಮುಂಬೈ, ದೆಹಲಿ, ಕೊಚ್ಚಿ, ಅಹಮದಾಬಾದ್‌ನಲ್ಲೂ ಅನೇಕರು ಬಂದಿಳಿದಿದ್ದನ್ನು ಇಲ್ಲಿ ಸ್ಮರಿಸಬಹುದು.