Operation Kaveri: ಆಪರೇಷನ್ ಕಾವೇರಿ ಯಶಸ್ವಿ; ಕರ್ನಾಟಕಕ್ಕೆ ಬಂದವರು ಎಷ್ಟು ಜನ?
ಶುಕ್ರವಾರ ಒಟ್ಟು 80 ಮಂದಿಯನ್ನು ವಾಪಸ್ ಕರೆದುಕೊಂಡು ಬರಲಾಗಿದೆ. ಅವರನ್ನು ಕೆಎಸ್ಆರ್ಟಿಸಿ ಬಸ್ಗಳ ಮೂಲಕ ಮೈಸೂರು, ಶಿವಮೊಗ್ಗ ಹಾಗೂ ದಾವಣಗೆರೆಗಳಿಗೆ ಕಳುಹಿಸಿಕೊಡಲಾಗಿದೆ.
ಬೆಂಗಳೂರು: ಸಂಘರ್ಷಪೀಡಿತ ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರ ಹಮ್ಮಿಕೊಂಡಿದ್ದ ‘ಆಪರೇಷನ್ ಕಾವೇರಿ (Operation Kaveri)’ ಕಾರ್ಯಾಚರಣೆ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಎಲ್ಲ ಭಾರತೀಯರನ್ನು ವಾಪಸ್ ಕರೆತರಲಾಗಿದೆ. ಕೊನೆಯ ಹಂತದ ಕಾರ್ಯಾಚರಣೆಯಲ್ಲಿ 97 ಮಂದಿಯನ್ನು ಕರೆತರಲಾಗಿದ್ದು, ಇವರೆಲ್ಲ ಶುಕ್ರವಾರ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಕರ್ನಾಟಕದ ಇನ್ನೂ 16 ಮಂದಿಯನ್ನು ಕರೆದುಕೊಂಡು ಬರಲಾಗಿದ್ದು, ಇವರು ಮುಂಬೈ ತಲುಪಿದ್ದಾರೆ. ಅದ್ದಿಸ್ ಅಬಾಬಾದಿಂದ ಬಂದ ಮೊದಲ ವಿಮಾನ ಶುಕ್ರವಾರ ಬೆಳಿಗ್ಗೆ ಬೆಂಗಳೂರು ತಲುಪಿತ್ತು. ಇದರಲ್ಲಿ 18 ಮಂದಿ ಇದ್ದರು. ಇದರ ಬೆನ್ನಲ್ಲೇ 53 ಮಂದಿ ಇದ್ದ ಮತ್ತೊಂದು ವಿಮಾನ ಕೂಡ ತಲುಪಿತು. ಕರೆತಂದವರನ್ನೆಲ್ಲ ಸದ್ಯ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ.
ಸೌದಿ ಅರೇಬಿಯಾದ ಜೆದ್ದಾದಿಂದ 26 ಮಂದಿಯನ್ನು ಒಳಗೊಂಡ ಮೂರನೇ ವಿಮಾನ ಕೂಡ ಶುಕ್ರವಾರ ಬೆಂಗಳೂರು ತಲುಪಿದೆ. ಎಲ್ಲರನ್ನೂ ಸುರಕ್ಷಿತವಾಗಿ ವಾಪಸ್ ಕರೆದುಕೊಂಡು ಬಂದಿರುವ ಬಗ್ಗೆ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ಮಾಹಿತಿ ನೀಡಿದ್ದಾರೆ.
ಶುಕ್ರವಾರ ಒಟ್ಟು 80 ಮಂದಿಯನ್ನು ವಾಪಸ್ ಕರೆದುಕೊಂಡು ಬರಲಾಗಿದೆ. ಅವರನ್ನು ಕೆಎಸ್ಆರ್ಟಿಸಿ ಬಸ್ಗಳ ಮೂಲಕ ಮೈಸೂರು, ಶಿವಮೊಗ್ಗ ಹಾಗೂ ದಾವಣಗೆರೆಗಳಿಗೆ ಕಳುಹಿಸಿಕೊಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಯಾವ ಜಿಲ್ಲೆಯ ಎಷ್ಟು ಮಂದಿಯ ರಕ್ಷಣೆ?
ಈವರೆಗೆ ಕರ್ನಾಟದ 439 ಮಂದಿಯನ್ನು ಸುಡಾನ್‌ನಿಂದ ಕರೆದುಕೊಂಡು ಬರಲಾಗಿದೆ. ಈ ಪೈಕಿ 194 ಮಂದಿ ಶಿವಮೊಗ್ಗದವರು. 116 ಮಂದಿ ಮೈಸೂರಿನವರು. ದಾವಣಗೆರೆಯ 32, ಬೆಂಗಳೂರಿನ 31, ಬೆಳಗಾವಿಯ 24 ಮಂದಿಯನ್ನು ರಕ್ಷಿಸಿ ಕರೆದುಕೊಂಡು ಬರಲಾಗಿದೆ. ಉಳಿದವರು ಕೊಡಗು, ರಾಮನಗರ, ಹಾಸನ, ಕಲಬುರಗಿ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಧಾರವಾಡ ಹಾಗೂ ತುಮಕೂರು ಜಿಲ್ಲೆಯವರು. ಇದುವರೆಗೆ 14 ಬ್ಯಾಚ್‌ಗಳಲ್ಲಿ ಕರ್ನಾಟಕದವರನ್ನು ಕರೆತರಲಾಗಿದೆ. ಇವರಲ್ಲಿ ಬೆಂಗಳೂರು ಮಾತ್ರವಲ್ಲದೆ ಮುಂಬೈ, ದೆಹಲಿ, ಕೊಚ್ಚಿ, ಅಹಮದಾಬಾದ್‌ನಲ್ಲೂ ಅನೇಕರು ಬಂದಿಳಿದಿದ್ದಾರೆ.
ಇದನ್ನೂ ಓದಿ: Operation Kaveri: ಆಪರೇಷನ್ ಕಾವೇರಿ ಯಶಸ್ವಿ: ಸುಡಾನ್‌ನಿಂದ ತವರಿಗೆ ಬಂದ ಎಲ್ಲ ಭಾರತೀಯರು
ಆಪರೇಷನ್ ಕಾವೇರಿ ಅಡಿಯಲ್ಲಿ ಸುಮಾರು 3,800 ಜನರನ್ನು ಈಗ ಸುಡಾನ್‌ನಿಂದ ರಕ್ಷಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಶುಕ್ರವಾರ ಟ್ವೀಟ್ ಮಾಡಿದ್ದರು. ಸಂಘರ್ಷಪೀಡಿತ ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸಲು ಕೇಂದ್ರ ಸರ್ಕಾರವು ಆಪರೇಷನ್ ಕಾವೇರಿಯನ್ನು ಪ್ರಾರಂಭಿಸಿತ್ತು, ಇದು ಒಂಬತ್ತು ದಿನಗಳ ಕಾರ್ಯಚರಣೆಯ ಪ್ರಮುಖ ಭಾಗವಾಗಿತ್ತು. ಭಾರತೀಯ ನೌಕಾಪಡೆಯ 5 ಹಡಗುಗಳು ಮತ್ತು 16 ಭಾರತೀಯ ವಾಯುಪಡೆಯ ವಿಮಾನಗಳನ್ನು ಬಳಸಿ ಕಾರ್ಯಾಚರಣೆಯನ್ನು ನಡೆಸಲಾಯಿತು.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ