ಮೊನ್ನೆ ತಾನೇ ಶಿವಮೊಗ್ಗ ನೂತನ ಏರ್ಪೋರ್ಟ್ ಉದ್ಘಾಟನೆ ಆಗಿದೆ. ಶಿವಮೊಗ್ಗ ರೈಲ್ವೆ ನಿಲ್ದಾಣ ಮೇಲ್ದರ್ಜೆಗೇರಿದೆ. ಹೊಸ ಹೊಸ ರೈಲು, ಹೈವೇ ಸೇರಿದಂತೆ ನೂರೆಂಟು ಯೋಜನೆಗಳು ಶಿವಮೊಗ್ಗದ ಚಿತ್ರಣ ಬದಲಿಸಿವೆ. ಈ ನಡುವೆ ಶಿವಮೊಗ್ಗದ ನಗರದಲ್ಲಿ ಸೈಟ್ ಗೆ ಕೋಟಿ ಕೋಟಿ ಬೆಲೆ ಬಂದುಬಿಟ್ಟಿದೆ. ಖಾಲಿಯಿದ್ದ ಪಾಲಿಕೆ ನಿವೇಶನಗಳು (Shivamogga City Corporation) ನುಂಗಣ್ಣರ ಪಾಲಾಗುತ್ತಿವೆ. ಈ ನಡುವೆ ಪಾಲಿಕೆ ಸೈಟ್ ವಿಚಾರವಾಗಿ ಮರ್ಡರ್ ಅಟ್ಯಾಕ್ ನಡೆದಿದೆ. ಏನಿದು ಸೈಟ್ ಗಾಗಿ ಫೈಟ್ ಅಂತೀರಾ ಈ ಸ್ಟೋರಿ ನೋಡಿ… ಶಿವಮೊಗ್ಗದ ವಿನೋಬನಗರದ 60 ಅಡಿ ರಸ್ತೆಯ 8ನೇ ತಿರುವಿನಲ್ಲಿ ಜಗದೀಶ್ ಅವರು ತಮ್ಮ ಮನೆ ಪಕ್ಕದಲ್ಲಿರುವ ಪಾಲಿಕೆಯ ದೊಡ್ಡ ಸೈಟ್ ಅನ್ನು (site) ಕಳೆದ ನಾಲ್ಕು ದಶಕಗಳಿಂದ ತಮ್ಮ ಹೈನುಗಾರಿಕೆಗೆ ತಿಪ್ಪಿಗುಂಡಿ ಮಾಡಿಕೊಂಡು ಸಗಣಿ ಹಾಕಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಪಕ್ಕದ ಮನೆಯ ಸುಬ್ರಮಣಿ ಕೂಡಾ ಇದೇ ಸೈಟ್ ಜಾಗದಲ್ಲಿ ತನ್ನ ಲಾರಿ ಮತ್ತು ಮರಳನ್ನು ಸಂಗ್ರಹಿಸುತ್ತಾನೆ. ಪಾಲಿಕೆಯ ಈ ಸೈಟ್ ವಿಚಾರವಾಗಿ ಸುಬ್ರಮಣಿ ಕಿರಿಕ್ ಮಾಡಿದ್ದಾನೆ. ಸೈಟ್ ಬಳಕೆ ವಿಚಾರದಲ್ಲಿ ಜಗದೀಶ್ ಮತ್ತು ಸುಬ್ರಮಣಿ ಕುಟುಂಬಗಳ ನಡುವಣ ಚಿಕ್ಕ ಫೈಟ್ ಮುಂದೆ ದೊಡ್ಡ ಜಗಳವಾಗಿದೆ (Shivamogga).
ಈ ನಡುವೆ ಸುಬ್ರಮಣಿ ಮತ್ತು ಆತನ ಕುಟುಂಬದ ಲೋಕೇಶ್ ಮತ್ತು ರಾಜೇಶ್ ಇವರಿಗೆ ಪಾಲಿಕೆ ಸೈಟ್ ಎನ್ನುವುದು ಗೊತ್ತಿದ್ದು ಆ ಜಾಗದ ವಿಚಾರವಾಗಿ ಜಗದೀಶ್ ಮತ್ತು ಆತನ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಜಗದೀಶ್ ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ನಡುವೆ ಜಗದೀಶ್ ಕುಟುಂಬಸ್ಥರು ಮತ್ತು ಸಂಬಂಧಿಕರು ಬಂದು ಅತನನ್ನು ರಕ್ಷಣೆ ಮಾಡುತ್ತಾರೆ. ಗಲಾಟೆಯಲ್ಲಿ ಗಾಯಗೊಂಡಿದ್ದ ಜಗದೀಶ್ ಮೆಗ್ಗಾನ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ.
ಹೀಗೆ ಪಾಲಿಕೆ ಸೈಟ್ ಬಳಕೆ ವಿಚಾರಕ್ಕೆ ವಿನಾಕಾರಣವಾಗಿ ಗಲಾಟೆ ಮಾಡಿ ಮಾರಣಾಂತಿಕ ಹಲ್ಲೆ ಮಾಡಿರುವ ಸುಬ್ರಮಣಿ ಮತ್ತು ಆತನ ಕುಟುಂಬಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ವಿನೋಬ ನಗರದ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ಲೋಕೇಶ್, ಸುಬ್ರಮಣಿ, ಶಾಂತಮ್ಮ, ಸಂತೋಷ, ರಾಜೇಶ್ ಒಟ್ಟು ಐವರ ಮೇಲೆ ಎಫ್ ಐ ಆರ್ ದಾಖಲು ಆಗಿದೆ. ಈ ಗಲಾಟೆಯ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ನೊಂದ ಕುಟುಂಬಸ್ಥರು ಪೊಲೀಸ್ ಇಲಾಖೆಗೆ ಒತ್ತಾಯಿಸಿದ್ದಾರೆ.
ಶಿವಮೊಗ್ಗ ನಗರದ ವ್ಯಾಪ್ತಿಯಲ್ಲಿ ಸಾವಿರಾರು ಪಾಲಿಕೆ ಸೈಟ್ ಗಳಿವೆ. ಈಗಾಗಲೇ ಅನೇಕ ಪಾಲಿಕೆ ಸೈಟ್ ಗಳು ಫೋರ್ಜರಿ ದಾಖಲೆ ಸೃಷ್ಟಿಸಿಕೊಂಡು ನುಂಗಣ್ಣರ ಪಾಲಾಗಿದೆ. ಈ ನಡುವೆ 31 ವಾರ್ಡ್ ಗಳಲ್ಲಿ ಕೋಟಿ ಕೋಟಿ ಮೌಲ್ಯದ ಸೈಟ್ ಗಳಿವೆ. ಇಂತಹ ಸೈಟ್ ಗಳನ್ನು ಗುರುತಿಸಿ ಅವುಗಳಿಗೆ ಬೇಲಿ ಹಾಕಿ ರಕ್ಷಣೆ ಮಾಡಬೇಕಿದೆ. ಆದ್ರೆ ಪಾಲಿಕೆ ಮತ್ತು ವಾರ್ಡ್ ಗಳ ಸದಸ್ಯರು ಇದರ ಬಗ್ಗೆ ಯಾವುದೇ ಗಮನ ಹರಿಸುತ್ತಿಲ್ಲ. ಇದೇ ನಿರ್ಲಕ್ಷ್ಯದಿಂದ ಪಾಲಿಕೆ ಸೈಟ್ ಗಳ ವಿಚಾರದಲ್ಲಿ ಗಲಾಟೆ, ಜಗಳ, ಮಾರಣಾಂತಿಕ ಹಲ್ಲೆ ಕೇಸ್ ಗಳು ನಗರದಲ್ಲಿ ದಿನೇ ದಿನೇ ಜಾಸ್ತಿಯಾಗುತ್ತಿವೆ.
ಸದ್ಯ ವಿನೋಬ ನಗರದಲ್ಲಿ ಪಾಲಿಕೆ ಸೈಟ್ ಬಳಕೆ ವಿಚಾರವಾಗಿ ನಡೆದ ಗಲಾಟೆಯು ಮತ್ತೊಮ್ಮೆ ಪಾಲಿಕೆ ಅಧಿಕಾರಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ಸದ್ಯ ನಗರದಲ್ಲಿ ಖಾಸಗಿ ಸೈಟ್ ಗಳೇ ಇಲ್ಲ. ಇರುವ ಪಾಲಿಕೆಯ ಸೈಟ್ ಗಳ ಮೇಲೆ ಸದ್ಯ ನುಂಗಣ್ಣರ ಕಣ್ಣು ಬಿದ್ದಿದೆ. ಹಣವಂತರು ಬ್ರೋಕರ್ ಗಳ ಮೂಲಕ ಫೋರ್ಜರಿ ದಾಖಲೆ ಸೃಷ್ಟಿ ಮಾಡಿರುವ ಪಾಲಿಕೆ ಸೈಟ್ ಗಳನ್ನು ಲಕ್ಷಾಂತರ ರೂಪಾಯಿ ಕೊಟ್ಟು ಖರೀದಿಸುತ್ತಾರೆ. ಇನ್ನು ಒತ್ತುವರಿ ಮಾಡಿದ ಸೈಟ್ ತಮ್ಮದೇ ಎಂದು ಕೆಲವರು ಸೈಟ್ ಗಳನ್ನು ಕಬಳಿಸುತ್ತಿದ್ದಾರೆ. ಹೀಗೆ ನಗರದಲ್ಲಿರುವ ಪಾಲಿಕೆಯ ಕೋಟಿ ಕೋಟಿ ಮೌಲ್ಯದ ಸೈಟ್ ಗಳ ರಕ್ಷಣೆ ಮಾಡಬೇಕಿದೆ. ಈ ಪಾಲಿಕೆ ಸೈಟ್ ವಿಚಾರವಾಗಿ ನಡೆದ ಗಲಾಟೆ ಕುರಿತು ಆಯುಕ್ತರು ಹೇಳುವುದು ಹೀಗೆ.
ಶಿವಮೊಗ್ಗ ನಗರದಲ್ಲಿ ಖಾಲಿ ಸೈಟ್ ಗಳಿಗೆ ಫುಲ್ ಡಿಮ್ಯಾಂಡ್. ಖಾಲಿ ಸೈಟ್ ವಿಚಾರವಾಗಿ ಗಲಾಟೆಗಳು ಜಾಸ್ತಿಯಾಗುತ್ತಿವೆ. ಈ ನಡುವೆ ಪಾಲಿಕೆ ಸೈಟ್ ಜಾಗ ಬಳಕೆ ವಿಚಾರವಾಗಿ ಮಾರಣಾಂತಿಕ ಹಲ್ಲೆ ಕೇಸ್ ನಡೆದಿದೆ. ಹೀಗೆ ಹೈನುಗಾರಿಕೆ ಮೂಲಕ ಉಪಜೀವನ ಮಾಡುತ್ತಿದ್ದ ವ್ಯಕ್ತಿಯು ಸದ್ಯ ಹಲ್ಲೆಗೊಳಗಾಗಿ ಇಕ್ಕಟ್ಟಿಗೆ ಸಿಲುಕಿದ್ದಾನೆ. ಪಾಲಿಕೆಯ ಅಧಿಕಾರಿಗಳ ಬೇಜವಾಬ್ದಾರಿಗೆ ಅಮಾಯಕರು ಪೆಟ್ಟು ತಿಂದು ಹಾಸಿಗೆ ಹಿಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದಲ್ಲಿ ನಡೆಯುತ್ತಿರುವ ಭೂ ಮಾಫಿಯಾದ ವಿರುದ್ದ ಪಾಲಿಕೆ ಆಯುಕ್ತರು ದಿಟ್ಟ ಕ್ರಮಕ್ಕೆ ಮುಂದಾಗಬೇಕಿದೆ.
ವರದಿ: ಬಸವರಾಜ್ ಯರಗಣವಿ, ಟಿವಿ9, ಶಿವಮೊಗ್ಗ