ಶಿವಮೊಗ್ಗ: ಖಾಸಗಿ ಕಂಪನಿಯ ಮೊಬೈಲ್ ಟವರನ್ನೇ ಕದ್ದೊಯ್ದ ಕಳ್ಳರು!

| Updated By: ಗಣಪತಿ ಶರ್ಮ

Updated on: Oct 25, 2024 | 11:13 AM

ಕಳ್ಳರು ಚಿನ್ನ, ಬೆಳ್ಳಿ, ಬೈಕ್ ಸೇರಿದಂತೆ ಬೆಳೆಬಾಳುವ ವಸ್ತುಗಳನ್ನು ಕದ್ದುಕೊಂಡು ಹೋಗಿರುವ ಬಗ್ಗೆ ಸುದ್ದಿಗಳಾಗುತ್ತಿರುತ್ತವೆ. ಆದರೆ, ಶಿವಮೊಗ್ಗ ನಗರದಲ್ಲಿ ಮೊಬೈಲ್ ಟವರನ್ನೇ ಗಪ್ ಚುಪ್ ಆಗಿ ಕದ್ದೊಯ್ದಿರುವ ಪ್ರಕರಣ ಬೆಳಕಿಗೆ ಬಂದಿದೆ! ಮೊಬೈಲ್ ಟವರ್ ಕಳ್ಳತನ ಪ್ರಕರಣದ ಅಚ್ಚರಿಯ ಮಾಹಿತಿ ಇಲ್ಲಿದೆ.

ಶಿವಮೊಗ್ಗ: ಖಾಸಗಿ ಕಂಪನಿಯ ಮೊಬೈಲ್ ಟವರನ್ನೇ ಕದ್ದೊಯ್ದ ಕಳ್ಳರು!
ಮೊಬೈಲ್ ಟವರ್ ಇದ್ದ ಜಾಗ
Follow us on

ಶಿವಮೊಗ್ಗ, ಅಕ್ಟೋಬರ್ 25: ಶಿವಮೊಗ್ಗ ನಗರದಲ್ಲಿ ಖಾಸಗಿ ಕಂಪನಿಯು ಜನರ ಅನುಕೂಲಕ್ಕಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಮೊಬೈಲ್ ಟವರ್ ಹಾಕಿತ್ತು. ಈ ಮೊಬೈಲ್ ಟವರ್ ಮೇಲೆಯೇ ಕಳ್ಳರ ಕಣ್ಣು ಬಿದ್ದಿದೆ. ಶಿವಮೊಗ್ಗದ ಟಿಪ್ಪು ನಗರದ ಖಾಲಿ ಜಾಗದಲ್ಲಿ ಖಾಸಗಿ ಸಂಸ್ಥೆಯೊಂದು 2008ರಲ್ಲಿ ಮೊಬೈಲ್‌ ಟವರ್‌ ಅಳವಡಿಸಿತ್ತು. ಅದೇ ಸಂಸ್ಥೆ ಟವರ್‌ನ ನಿರ್ವಹಣೆ ಮಾಡುತ್ತಿತ್ತು. ಕೋವಿಡ್‌ ಸಂದರ್ಭ ನಿರ್ವಹಣೆ ಸಾಧ್ಯವಾಗಿರಲಿಲ್ಲ. ಅದಾಗಿ ಬಹಳ ಸಮಯದ ನಂತರ ಸಂಸ್ಥೆಯವರು ಸ್ಥಳಕ್ಕೆ ಬಂದಾಗ ಮೊಬೈಲ್‌ ಟವರ್‌ ಮತ್ತು ಅದಕ್ಕೆ ಅಳವಡಿಸಿದ್ದ ಬಿಡಿ ಭಾಗಗಳೇ ನಾಪತ್ತೆಯಾಗಿವೆ!

ತುಂಗಾ ನಗರ ಠಾಣೆ ವ್ಯಾಪ್ತಿಯಲ್ಲಿ ಈ ಮೊಬೈಲ್ ಟವರ್ ಕಳ್ಳತನವಾಗಿದೆ. ಟವರ್ ಕಳ್ಳತನ ಕುರಿತು ಖಾಸಗಿ ಕಂಪನಿಯು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದೆ. ಈಗ ನ್ಯಾಯಾಲಯದ ಸೂಚನೆ ಮೇರೆಗೆ ತುಂಗಾ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟವರ್‌ ಮತ್ತು ಬಿಡಿ ಭಾಗಗಳ ಅಂದಾಜು ಮೌಲ್ಯ 46.30 ಲಕ್ಷ ರೂ. ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಜಾಗದ ಮಾಲೀಕರು ಹೇಳುವುದೇನು?

ಈ ಕಳ್ಳತನ ಕುರಿತು ಖಾಲಿ ಜಾಗದ ಮಾಲೀಕ ಅಫ್ಜಲ್ ಬೇಗ್ ವ್ಯತಿರಿಕ್ತವಾದ ಹೇಳಿಕೆ ನೀಡಿದ್ದಾರೆ. ಟವರ್ ಕಳ್ಳತನವಾಗಿಲ್ಲ. ಖಾಸಗಿ ಕಂಪನಿಯವರೇ ಬಂದು ಅದನ್ನು ತೆಗೆದುಕೊಂಡು ಹೋಗಿದ್ದಾರೆಂದು ಸ್ಪಷ್ಟನೆ ನೀಡಿದ್ದಾರೆ.

ಶಿವಮೊಗ್ಗ ನಗರ

ನಿಷ್ಕ್ರಿಯ ಟವರ್ ಮೇಲೆ ಬಿತ್ತು ಕಳ್ಳದೃಷ್ಟಿ

ಟವರ್​ಗೆ 10 ವರ್ಷದ ವರೆಗೆ ಪ್ರತಿ ತಿಂಗಳು 15 ಸಾವಿರ ರೂಪಾಯಿ ಬಾಡಿಗೆ ಬಗ್ಗೆ ಜಾಗದ ಮಾಲೀಕರ ನಡುವೆ ಕರಾರು ಆಗಿತ್ತು. ನಾಲ್ಕೈದು ವರ್ಷ ಬಾಡಿಗೆ ಪಾವತಿಸಲಾಗಿತ್ತು. ನಂತರ ಖಾಸಗಿ ಕಂಪನಿಯವರು ಖಾಲಿ ಜಾಗದ ಮಾಲೀಕರಿಗೆ ಬಾಡಿಗೆ ನೀಡಿಲ್ಲ. ಇದರ ಬಳಿಕ ಟವರ್ ಬಗ್ಗೆ ಖಾಸಗಿ ಕಂಪನಿ ಮತ್ತು ಜಾಗದ ಮಾಲೀಕರು ನಿರ್ಲಕ್ಷ್ಯ ಮಾಡಿದ್ದಾರೆ. ಲಕ್ಷಾಂತರ ರೂಪಾಯಿ ಮೌಲ್ಯದ ಮೊಬೈಲ್ ಟವರ್ ಕಳೆದ ನಾಲ್ಕು ವರ್ಷಗಳ ಹಿಂದೆ ದುರಸ್ತಿಗೆ ಬಂದಿತ್ತು. ಅದರ ರಿಪೇರಿ ಮಾಡುವ ಗೋಜಿಗೆ ಖಾಸಗಿ ಕಂಪನಿಯವರು ಹೋಗಿರಲಿಲ್ಲ.

ಹಂತ ಹಂತವಾಗಿ ಟವರ್ ಬಿಡಿಭಾಗಗಳ ಎಗರಿಸಿದ ಕಳ್ಳರು

ಮೊಬೈಲ್ ಟವರ್ ನಿಷ್ಕ್ರಿಯವಾಗಿರುವುದನ್ನು ಕಳ್ಳರು ಗಮನಿಸಿದ್ದಾರೆ. ಹಂತ ಹಂತವಾಗಿ ಟವರ್ ಬಿಡಿಭಾಗಗಳನ್ನು ಕಳ್ಳರು ಎಗರಿಸಿದ್ದಾರೆ. ಕಳೆದ ಒಂದೆರಡು ವರ್ಷಗಳ ಹಿಂದೆ ಮೊಬೈಲ್ ಟವರ್ ಖಾಲಿ ಜಾಗದಲ್ಲಿ ಇರಲಿಲ್ಲ. ಟವರ್ ಸಮೇತ ಕಳ್ಳರು ಅದನ್ನು ಎಗರಿಸಿದ್ದಾರೆ ಎನ್ನುವುದು ಖಾಸಗಿ ಕಂಪನಿಯ ಮಾಲೀಕರ ಆರೋಪವಾಗಿದೆ. ಈ ಕಳ್ಳತನ ಕುರಿತು ಸ್ಥಳೀಯರು ಅಚ್ಚರಿಸಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ: ಪೊಲೀಸ್ ಸಿಬ್ಬಂದಿಯನ್ನೇ ಬಾನೆಟ್ ಮೇಲೆ ಹೊತ್ತೊಯ್ದ ಕಾರು ಚಾಲಕ

ಶಿವಮೊಗ್ಗ ನಗರದಲ್ಲಿ ಮೊಬೈಲ್ ಟವರ್ ಕಳ್ಳತನ ಪ್ರಕರಣವು ಸದ್ಯ ಅನೇಕ ಗೊಂದಲ ಮೂಡಿಸಿದೆ. ಖಾಸಗಿ ಕಂಪನಿ ಟವರ್ ಕಳ್ಳತನವಾಗಿದೆ ಎಂದು ದೂರು ನೀಡಿದರೆ, ಅತ್ತ ಟವರ್ ಹಾಕಿದ ಜಾಗದ ಮಾಲೀಕರು ಟವರ್ ಕಳ್ಳತನವಾಗಿಲ್ಲ ಎಂದಿರುವುದು ಅಚ್ಚರಿಗೆ ಕಾರಣವಾಗಿದೆ. ಇದೀಗ ತುಂಗಾ ನಗರ ಪೊಲೀಸರು ಮೊಬೈಲ್ ಟವರ್ ಎಲ್ಲಿ ಹೋಯಿತು ಎಂಬುದನ್ನು ಪತ್ತೆ ಮಾಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ