ಶಿವಮೊಗ್ಗ ಪೊಲೀಸರಿಂದ ಬಂಧಿತರಾಗಿರುವ ಶಂಕಿತ ಉಗ್ರರಾದ ಯಾಸಿನ್ @ ಬೈಲು ಹಾಗೂ ಮಾಜ್ ಮುನೀರ್ ವಿಚಾರಣೆ ತೀವ್ರಗೊಳಿಸಿದ್ದಾರೆ. ತನಿಖೆ ವೇಳೆ ಶಿವಮೊಗ್ಗ ಪೋಲೀಸರು ಇಡೀ ಘಟನೆ ಕುರಿತಾಗಿ ತನಿಖೆ ಚುರುಕುಗೊಳಿಸಿದ್ದು, ಟೆರರ್ ಆಕ್ಟಿವಿಟಿಸ್ ನ ಇನ್ ಸೈಡ್ ಕಹಾನಿ ಒಂದೊಂದಾಗಿ ರಿವೀಲ್ ಆಗ್ತಿದೆ. ಶಂಕಿತ ಉಗ್ರರು ಕನೆಕ್ಟ್ ಆಗಿದ್ದು ಹೇಗೆ..? ತುಂಗಾ ನದಿ ತೀರದಲ್ಲಿ ಸ್ಪೋಟಕಗಳ ಟ್ರಯಲ್ ನಡೆಸಿ ತಗ್ಲಾಕೊಂಡ ಶಂಕಿತ ಟೆರರ್ ಗಳ ಟೆರರ್ ಆಕ್ಟಿವೀಟಿಸ್ ಗೆ ಹಣ ಪೂರೈಕೆಯಾಗಿದ್ದು ಹೇಗೆ…? ಹಣ ಪೂರೈಕೆ ಮಾಡಿದ್ದವರು ಯಾರು..? ಸದ್ಯ ಮಹಜರು ಪ್ರಕ್ರಿಯೆ ನಡೆಸಿ ಯಾವೆಲ್ಲ ಮಹತ್ವದ ಸಾಕ್ಷ್ಯಾಧಾರಗಳನ್ನ ಸಂಗ್ರಹಿಸಿ ವಶಕ್ಕೆ ಪಡೆದಿದ್ದಾರೆ ಅನ್ನೋ ಸ್ಪೋಟಕ ಸಂಗತಿ ಶಿವಮೊಗ್ಗ ಪೊಲೀಸರು ಇಂಚಿಂಚಾಗಿ ಬಿಚ್ವಿಟ್ಟಿದ್ದಾರೆ. ಈ ಕುರಿತ ಇನ್ ಸೈಡ್ ಡಿಟೇಲ್ಸ್ ಇಲ್ಲಿದೆ:
ಕಳೆದ ಆಗಸ್ಟ್ 15 ರಂದು ಶಿವಮೊಗ್ಗ ನಗರದಲ್ಲಿ ಯುವಕನ ಮೇಲೆ ಕೆಲ ಯುವಕರು ಚಾಕುವಿನಿಂದ ಹಲ್ಲೆ ಮಾಡಿ ಕೊಲ್ಲಲು ಪ್ರಯತ್ನಿಸಿದ್ದು, ಈ ಘಟನೆ ಕುರಿತಂತೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ತನಿಖೆ ಮುಂದುವರೆದು, ಇದೇ ಪ್ರಕರಣದಲ್ಲಿ ಶಂಕಿತ ಟೆರರ್ ಯಾಸೀನ್ ಟೆರರ್ ಆಕ್ಟಿವೀಟಿಸ್ ಕುರಿತಂತೆ ಕ್ಲ್ಯೂ ಲಭ್ಯವಾಗಿತ್ತು.
ಬಂಧಿತ ಶಂಕಿತ ಉಗ್ರ ಯಾಸಿನ್ ನಿಕಟ ಸಂಪರ್ಕದಲ್ಲಿದ್ದ, ಸದ್ಯ ಎಸ್ಕೇಪ್ ಆಗಿರುವ ಶಂಕಿತ ಉಗ್ರ ಶಾರೀಕ್ 2020 ರಲ್ಲಿ ಗೋಡೆ ಬರಹದ ಪ್ರಕರಣದಲ್ಲಿ ಆರೋಪಿಯಾಗಿದ್ದ, ಬಂಧಿತನಾಗಿ ಸುಮಾರು 8 ತಿಂಗಳವರೆಗೆ ಜೈಲಿನಲ್ಲಿ ಇದ್ದು, ಫೆಬ್ರವರಿ 2021 ರಲ್ಲಿ ಬಿಡುಗಡೆಯಾಗಿದ್ದ.
ವಿಧ್ವಂಸಕ ಕೃತ್ಯಗಳನ್ನು ಮುಂದುವರಿಸುವ ಸಲುವಾಗಿ ಒಳಸಂಚು ಮಾಡಿ, ದೇಶದ ಐಕ್ಯತೆ, ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಧಕ್ಕೆಯನ್ನುಂಟು ಮಾಡುವುದಕ್ಕಾಗಿ ಮತ್ತು ಉದ್ದೇಶಪೂರ್ವಕವಾಗಿ ಸಾರ್ವಜನಿಕ ಆಸ್ತಿ ಮತ್ತು ಪ್ರಾಣಕ್ಕೆ ಅಪಾಯವಾಗುವ ಸ್ಫೋಟಕಗಳನ್ನು ಇಟ್ಟುಕೊಂಡಿರುವ ಬಗ್ಗೆ ಶಿವಮೊಗ್ಗ ಪೊಲೀಸರಿಗೆ ಮಹತ್ವದ ಸಾಕ್ಷ್ಯಧಾರಗಳು ಲಭ್ಯವಾಗಿದೆ. ಭಾರತದ ರಾಷ್ಟ್ರಧ್ವಜವನ್ನು ಸುಟ್ಟಿರುವ ವಿಷಯವಾಗಿ ಕೇಸ್ ದಾಖಲಾಗಿದ್ದು, ಆರೋಪಿಗಳಾದ ಎ 1 – ಶಾರೀಕ್ ಸೊಪ್ಪುಗುಡ್ಡೆ ತೀರ್ಥಹಳ್ಳಿ ನಿವಾಸಿ ಮತ್ತು ಎ2-ಮಾಜ್ ಮುನೀರ್ ಅಹ್ಮದ್ , ಮಂಗಳೂರು ನಿವಾಸಿ ಮತ್ತು ಎ3-ಸೈಯ್ಯದ್ ಯಾಸಿನ್ @ ಯಾಸೀನ್ @ ಬೈಲು, ಶಿವಮೊಗ್ಗದ ಸಿದ್ಧೇಶ್ವರ ನಗರ ನಿವಾಸಿಯಾಗಿದ್ದಾನೆ.
ತೀರ್ಥಹಳ್ಳಿ ಡಿ.ವೈ.ಎಸ್.ಪಿ ಎ3-ಸೈಯದ್ ಯಾಸಿನ್‌ನನ್ನು ಹಾಗೂ ಎ2-ಮಾಜ್ ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು. ಶಂಕಿತ ಉಗ್ರರು ಪರಸ್ಪರ ಒಬ್ಬೊರಿಗೊಬ್ಬರು ಪರಿಚಯ ಆಗಿದ್ದು ಎಲ್ಲಿ…? ಸಂಪರ್ಕ ಹೇಗಾಯ್ತು ಅನ್ನೋದರ ಕುರಿತು ಮಾಹಿತಿ ಕಲೆಹಾಕಿದ್ದಾರೆ.
ಸೈಯದ್ ಯಾಸಿನ್‌ನು ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ, ಅವನ ಜೊತೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಮಾಜ್ ಮುನೀರ್ ಅಹಮ್ಮದ್ ಪರಿಚಯವಾಗಿತ್ತು, ಮಾಜ್ ಅಹಮ್ಮದ್ ಮುಖಾಂತರ ಯಾಸಿನ್‌ಗೆ ಶಾರೀಕ್‌ನ ಪರಿಚಯವಾಯಿತು, ಯಾಸೀನ್ ಇಬರನ್ನೂ ಭೇಟಿಯಾದಗಲ್ಲೆಲ್ಲಾ ಶಾರೀಕ್‌ನು ಮತ್ತು ಮಾಜ್ ಮುಸ್ಲಿಂ ಮೂಲಭೂತವಾದದ ಬಗ್ಗೆ ಮಾತನಾಡುತ್ತಿದ್ದರು. ಮತ್ತು ಯಾಸಿನ್‌ನ ಮೊಬೈಲ್‌ಗೆ ಮುಸ್ಲಿಂ ಉಗ್ರವಾದಿಗಳಿಗೆ ಸಂಬಂಧಿಸಿದ ಮತ್ತು ಪಿ.ಡಿ.ಎಫ್ ಫೈಲ್‌ಗಳು, ವಿಡಿಯೋ-ಆಡಿಯೋಗಳನ್ನು ಮತ್ತು ಅವುಗಳ ಲಿಂಕ್‌ಗಳನ್ನು ಕಳಿಸ್ತಿದ್ದಾಗಿ ಬಾಯ್ಬಿಟ್ಟಿದ್ದಾನೆ.
ಸೋಷಿಯಲ್ ಮೀಡಿಯಾ ಮೂಲಕ ಸತತ ಸಂಪರ್ಕದಲ್ಲಿದ್ದ ಬಂಧಿತ ಶಂಕಿತ ಉಗ್ರರು:
ಶಂಕಿತ ಉಗ್ರರ ಮಧ್ಯೆ ಇನ್ಸ್ಟಾ ಗ್ರಾಮ್, ವೈರ್, ಎಲಿಮೆಂಟ್, ಏಕ್ಕರ್ ಇತ್ಯಾದಿ ಮೆಸೆಂಜರ್ ಅಪ್‌ಗಳ ಮುಖಾಂತರ ಲಿಂಕ್ ಗಳು, ವಿಡಿಯೋ-ಆಡಿಯೋ ಕ್ಲಿಪ್ ಗಳ ರವಾನೆಗೊಂಡಿವೆ. ಉಗ್ರ ಸಂಘಟನೆ ಇಸ್ಲಾಂಮಿಕ್ ಸ್ಟೇಟ್ (ISIS) ನ ಭಯೋತ್ಪಾದಕ ಕೃತ್ಯಗಳನ್ನು ಮುಂದುವರಿಸಲು ಆರೋಪಿಗಳು ಪ್ಲಾನ್ ಮಾಡಿದ್ದು, ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿರುವುದು ಕೇವಲ ಬ್ರಿಟಿಷರ ಆಡಳಿತದಿಂದ ಮಾತ್ರ ಆದರೆ ನಮಗೆ ನಿಜವಾದ ಸ್ವಾತಂತ್ರ್ಯ ಸಿಗಬೇಕಾದರೆ ಈಗ ಇರುವ ಭಾರತದ ವ್ಯವಸ್ಥೆಯ ವಿರುದ್ಧ ಯುದ್ಧ ಸಾರಿ, ಖಿಲಾಫತ್, ಸ್ಥಾಪಿಸಬೇಕಾಗಿರುತ್ತದೆ ಮತ್ತು ಷರಿಯಾ ಕಾನೂನು ಜಾರಿಗೊಳಿಸಬೇಕಾಗಿರುತ್ತದೆ ಎಂಬ ವಿಚಾರಧಾರೆಯನ್ನು ಹೊಂದಿದ್ದರು.
ಈ ವಿಚಾರಧಾರೆಗೆ ಅನುಗುಣವಾಗಿ ISIS ಕಾರ್ಯನಿರ್ವಹಿಸುತ್ತಿರುತ್ತದೆ. ಹಾಗೂ ಇಸ್ಲಾಂ ಧರ್ಮವನ್ನು ಉನ್ನತಿಗೇರಿಸುವ ಸಲುವಾಗಿ ಜಿಹಾದ್ ಮೂಲಕ ಕಾಫಿರ್‌ಗಳ ವಿರುದ್ಧ ಯುದ್ಧ ಸಾರುತ್ತಿರುತ್ತಾರೆ. ಇದೇ ರೀತಿಯಾಗಿ ಆರೋಪಿಗಳು ಕೂಡಾ ಅವರು ನಂಬಿದಂತೆ ಕಾಫಿರ್‌ಗಳ ವಿರುದ್ಧ, ಜಿಹಾದ್ ಕೆಲಸವನ್ನು ಮಾಡಲು ಅದಕ್ಕೋಸ್ಕರ ಸ್ಫೋಟಕಗಳನ್ನು ತಯಾರಿಸಲು ಬೇಕಾದ ಸಾಮಾಗ್ರಿಗಳನ್ನು ಸಂಗ್ರಸಿ ಇಟ್ಟುಕೊಂಡಿರುತ್ತಾರೆಂಬ ಅಘಾತಕಾರಿ ಮಾಹಿತಿ ಹೊರಬಿದ್ದಿದೆ.
ಆರೋಪಿತರು ತಮ್ಮ ಮೊಬೈಲ್‌ಗಳಲ್ಲಿ ಟೆಲಿಗ್ರಾಂ ಆಪ್ ನ್ನು ಹೊಂದಿದ್ದರು, ಇದರ ಅಧಿಕೃತ ಮಾಧ್ಯಮವಾದ ISIS ನ ಅಲ್-ಹಕ್ ನ ಟೆಲಿಗ್ರಾಂ ಜನರು ಸದಸ್ಯರಾಗಿದ್ದರು. ಆಮೆ-ಹಯತ್ ನಿಂದ ಐಸಿಎಸ್ ಪ್ರಚಾರಕ್ಕೆ ಸಂಬಂಧಿಸಿದ ಸಾಮಾಗ್ರಿಗಳನ್ನು ಆರೋಪಿತರು ಸ್ವೀಕರಿಸುತ್ತಿದ್ದರು ಎನ್ನಲಾಗ್ತಿದೆ.
ತಲೆಮರೆಸಿಕೊಂಡಿರುವ ಶಂಕಿತ ಉಗ್ರ ಶಾರೀಕ್‌ನು ಶೇರ್ ಮಾಡಿರುವ ಪಿ.ಡಿ.ಎಫ್. ಫೈಲ್‌ಗಳು ಮತ್ತು ವಿಡಿಯೋಗಳಲ್ಲಿ ಬಾಂಬ್ ತಯಾರು ಮಾಡುವ ವಿಧಾನವನ್ನು ತಿಳಿದುಕೊಂಡು ಅದಕ್ಕೆ ಬೇಕಾಗಿರುವ ಟೈಮರ್, ರೀಲೆ ಸರ್ಕ್ಯೂಟ್‌ಗಳನ್ನು ಈ ಮುಖಾಂತರ ಖರೀದಿಸಿದ್ದು, ಶಿವಮೊಗ್ಗದಲ್ಲಿ 19 ವೊಲ್ಟ್ ನ ಎರಡು ಬ್ಯಾಟರಿಗಳು, ನಿಟ್ ವೈರ್‌ಗಳು, ನ್ಯೂಟ್ ಬಾಕ್ಸ್‌ಗಳು ಹಾಗು ಇತರೆ ಸ್ಫೋಟಕ ವಸ್ತುಗಳನ್ನು ಖರೀದಿಸಿ ಬಾಂಬ್‌ನ್ನು ತಯಾರು ಮಾಡಿದ್ದಾರೆ ಎನ್ನಲಾಗಿದೆ.
ಶಿವಮೊಗ್ಗದ ತುಂಗಾನದಿಯ ದಡದಲ್ಲಿರುವ ಸ್ಥಳೀಯವಾಗಿ ಕೆಮ್ಮನಗುಂಡಿ ಎಂದು ಕರೆಯುವ ಜಾಗದಲ್ಲಿ ಶಂಕಿತ ಉಗ್ರರು ತಾವು ತಯಾರಿಸಿದ ಬಾಂಬ್‌ನ್ನು ಪ್ರಾಯೋಗಿಕವಾಗಿ ಸ್ಫೋಟ ಮಾಡಿದ್ದಾರೆ ಹಾಗೂ ಪ್ರಾಯೋಗಿಕವಾಗಿ ಮಾಡಿರುವ ಸ್ಫೋಟವು ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ಜಿಹಾದ್ ಮಾಡಲು ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿ ಇಟ್ಟಿರುತ್ತಾರೆ. ಸ್ವಾತಂತ್ರ್ಯ ದಿನಾಚರಣೆಯ ನಂತರದ ದಿನಗಳಲ್ಲಿ ಭಾರತ ದೇಶದ ರಾಷ್ಟ್ರ ಧ್ವಜವನ್ನು ಬಾಂಬ್ ಸಿಡಿಸಿದ ಜಾಗದ ಹತ್ತಿರ ಸುಟ್ಟು ಹಾಕಿ ಅದನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದ. ಮತ್ತು ಬಾಂಬ್ ತಯಾರಿಸಲು ಬೇಕಾದ ಹಣವನ್ನು ಶಾರೀಕ್‌ನ ಆನ್‌ಲೈನ್ ಮುಖಾಂತರ ಯಾಸಿನ್‌ಗೆ ಕಳುಹಿಸಿದ್ದಾನೆ.
ಪ್ರಕರಣದ ಮೂರು ಜನ ಆರೋಪಿಗಳು ಮತ್ತು ಅವರ ಸಂಬಂಧಿಕರ ಮನೆಗಳು ಸೇರಿದಂತೆ ಶಿವಮೊಗ್ಗ, ಮಂಗಳೂರು ಹಾಗೂ ತೀರ್ಥಹಳ್ಳಿಯಲ್ಲಿ ಒಟ್ಟು 11 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಶೋಧಿಸಿ ಹಲವಾರು ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಪ್ರಮುಖ ಸಾಕ್ಷ್ಯಗಳ ಪೈಕಿ ಒಟ್ಟು 14 ಮೊಬೈಲ್‌ಗಳು ಮತ್ತು 1 ಡಾಂಗಲ್, 2 ಲ್ಯಾಪ್ ಟಾಪ್‌ಗಳು, 1 ಪೆನ್ ಡ್ರೈವ್ ಹಾಗೂ ಇತರೆ ಎಲೆಕ್ಟ್ರಾನಿಕ್ಸ್ ಗ್ಯಾಜೆಟ್‌ಗಳು, ಬಾಂಬ್ ಸ್ಫೋಟ ಮಾಡಿದ ಸ್ಥಳದಲ್ಲಿ ದೊರಕಿದ ಛಿದ್ರಗೊಂಡ ಬಾಂಬ್‌ನ ಅವಶೇಷಗಳು, ಬಾಂಬ್ ತಯಾರಿಸಲು ಬೇಕಾದ ಸಾಮಗ್ರಿಗಳು -ರಿಲೆ ಸರ್ಕಿಟ್, ಬಲ್ಬ್ಗಳು, ಮ್ಯಾಚ್ ಬಾಕ್ಸ್‌ಗಳು, ವೈರ್‌ಗಳು, ಬ್ಯಾಟರಿಗಳು, ಸ್ಫೋಟಕ ವಸ್ತುಗಳು ಹಾಗೂ ಸುಟ್ಟಿರುವ ಭಾರತದ ತ್ರಿವರ್ಣ ರಾಷ್ಟ್ರ ಧ್ವಜ ಪತ್ತೆಯಾಗಿದೆ. ಸದ್ಯ ತಲೆಮರೆಸಿಕೊಂಡಿರುವ ಶಾರೀಕ್ ಈತನ ಕೃತ್ಯಕ್ಕೆ ಬಳಸಿದ್ದ ಒಂದು ಮಾರುತಿ ರಿಡ್ಜ್ ಕಾರ್ ಅನ್ನು ಶಿವಮೊಗ್ಗ ಪೊಲೀಸರು ಸೀಜ಼್ ಮಾಡಿದ್ದಾರೆ. ಶಂಕಿತ ಟೆರರ್ ಶಾರೀಕ್ ಪತ್ತೆಗೆ ಶಿವಮೊಗ್ಗ ಎಸ್ ಪಿ ಬಿ.ಎಂ. ಲಕ್ಷ್ಮೀ ಪ್ರಸಾದ್ ಎರಡು ವಿಶೇಷ ತಂಡಗಳನ್ನು ರಚಿಸಿ ಶೋಧ ಮುಂದುರೆಸಿರುವುದಾಗಿ ಮಾಹಿತಿ ನೀಡಿದ್ದಾರೆ.
(ಶಿವಪ್ರಸಾದ್ ಬಿ, ಟಿವಿ 9, ಬೆಂಗಳೂರು)
Published On - 6:12 pm, Fri, 23 September 22