Shivamogga: ಸಂಬಂಧಿಯಿಂದಲೇ ಕಳ್ಳತನ; ಬೆಚ್ಚಿಬಿದ್ದ ಕುಟುಂಬಸ್ಥರು

| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 14, 2022 | 10:58 AM

ತಾಲೂಕಿನ ಅಗಸವಳ್ಳಿ ಗ್ರಾಮದ ಅಕ್ಬರ್ ಎಂಬುವವರ ಮನೆಯಲ್ಲಿ 11 ಲಕ್ಷ ನಗದು, 30 ಗ್ರಾಂ ಚಿನ್ನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಂಧಿ ಸೇರಿ ನಾಲ್ವರು ಕಳ್ಳರನ್ನ ಬಂಧಿಸಿದ ಪೊಲೀಸರು.

Shivamogga: ಸಂಬಂಧಿಯಿಂದಲೇ ಕಳ್ಳತನ; ಬೆಚ್ಚಿಬಿದ್ದ ಕುಟುಂಬಸ್ಥರು
ಶಿವಮೊಗ್ಗ
Follow us on

ಶಿವಮೊಗ್ಗ: ತಾಲೂಕಿನ ಅಗಸವಳ್ಳಿ ಗ್ರಾಮದಲ್ಲಿ ಡಿ. 6 ರಂದು ಅಕ್ಬರ್ ಎಂಬುವವರ ಮನೆಯಲ್ಲಿ ಕಳ್ಳತನವಾಗಿ, 11 ಲಕ್ಷ ನಗದು ಮತ್ತು 30 ಗ್ರಾಂ ಚಿನ್ನಾಭರಣವನ್ನು ಕಳ್ಳರು ಎಗರಿಸಿಕೊಂಡು ಹೋಗಿದ್ದರು. ಇದೀಗ ಪೊಲೀಸರು ನಾಲ್ವರು ಕಳ್ಳರನ್ನ ಬಂಧಿಸಿದ್ದು, ಇವರಲ್ಲಿ ಸುಹೆಲ್ ಎಂಬುವವನು ಕಳ್ಳತನವಾದ ಮನೆ ಮಾಲೀಕ ಅಕ್ಬರ್​ ಅವರ ಹೆಂಡತಿಯ ಸಂಬಂಧಿ ಎಂದು ತಿಳಿದು ಬಂದಿದೆ. ಇದನ್ನು ಕೇಳಿ ಕುಟುಂಬದವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ.

ಡಿ. 6 ರಂದು ಅಕ್ಬರ್ ಎಂಬುವವರು ಕುಟುಂಬ ಸಮೇತರಾಗಿ ಶುಭ ಕಾರ್ಯಕ್ರಮಕ್ಕೆಂದು ಶಿವಮೊಗ್ಗಕ್ಕೆ ತೆರಳಿದ್ದರು. ಹೀಗೆ ಕಾರ್ಯಕ್ರಮಕ್ಕೆ ಹೋಗಿ ವಾಪಸ್ ಶಿವಮೊಗ್ಗದ ತಮ್ಮ ಮನೆಗೆ ಬಂದಿದ್ದಾರೆ. ಮನೆಯ ಮುಂಭಾಗದ ಬಾಗಿಲಿಗೆ ಹಾಕಿದ ಬೀಗ್ ಒಡೆಯಲಾಗಿತ್ತು. ಮನೆ ಒಳಗೆ ಹೋಗಿ ನೋಡಿದರೆ ಮನೆಯ ಬೀರು ಒಡೆದ ಕಳ್ಳರು ಅದರಲ್ಲಿಟ್ಟಿದ್ದ ಹಣ, ಚಿನ್ನಾಭರಣವನ್ನ ಕದ್ದುಕೊಂಡು ಹೋಗಿದ್ದರು. ಕಷ್ಟಪಟ್ಟು ದುಡಿದು ಒಂದಿಷ್ಟು ಹಣ ಮತ್ತು ಚಿನ್ನಾಭರಣ ಕೂಡಿಟ್ಟಿದ್ದ ಅಕ್ಬರ್ ಹಾಗೂ ಕುಟುಂಬಸ್ಥರಿಗೆ ಏನು ಮಾಡಬೇಕೆಂದು ದಿಕ್ಕು ತೋಚದೆ. ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ.

ಕಳ್ಳರು ಸಿಕ್ಕಿಬಿದ್ದಿದ್ದು ಹೇಗೆ?

ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆಗೆ ಮುಂದಾಗುತ್ತಾರೆ. ಕಳ್ಳತನವಾದ ಮನೆಯ ಸುತ್ತಮುತ್ತಲು ಹಾಗೂ ಅಕ್ಕಪಕ್ಕದವರಿಂದ ಎಲ್ಲ ಮಾಹಿತಿಯನ್ನು ಕಲೆ ಹಾಕುತ್ತಾರೆ. ಈ ನಡುವೆ ಶಿವಮೊಗ್ಗ ಹೊರವಲಯದ ಸೂಳೆಬೈಲಿನಲ್ಲಿ ಡಿ.10 ರಂದು ಒಂದು ಬೈಕ್ ಮಹಿಳೆಗೆ ಗುದ್ದಿರುವ ಕೇಸ್ ದಾಖಲಾಗಿತ್ತು. ಬೈಕ್​ನಲ್ಲಿ ಸುಹೆಲ್ ಮತ್ತು ಆತನ ಸ್ನೇಹಿತನಿದ್ದನು. ಈ ಬೈಕ್ ಅಪಘಾತ ಮಾಡಿದ ಸುಹೆಲ್ ಬೇರೆ ಯಾರು ಅಲ್ಲ. ಮನೆಗಳ್ಳತನವಾಗಿರುವ ಮನೆ ಮಾಲೀಕ ಅಕ್ಬರ್​ನ ಹೆಂಡತಿಯ ಸಂಬಂಧಿ. ಹೀಗೆ ತುಂಗಾ ನಗರ ಪೊಲೀಸರು ಅಪಘಾತ ಪ್ರಕರಣದಲ್ಲಿ ಸುಹೆಲ್ ಮತ್ತು ಜಂಗ್ಲಿ ಅಲಿಯಾಸ್ ಮಂಜು ಇಬ್ಬರನ್ನು ವಿಚಾರಣೆಗೆ ಒಳಪಡಿಸುತ್ತಾರೆ.

ಬೈಕ್ ಅಪಘಾತವಾದ ಸಂದರ್ಭದಲ್ಲಿ ಬೈಕ್​ನಲ್ಲಿಟ್ಟಿದ್ದ ಒಂದು ಹಣದ ಕಂತೆ ಕೆಳಗೆ ಬಿದ್ದಿತ್ತು. ಬೈಕ್​ನಿಂದ ಹಣ ಬಿದ್ದಿರುವ ವಿಚಾರ ಪೊಲೀಸರ ಗಮನಕ್ಕೆ ಬರುತ್ತದೆ. ಆಗಲೇ ಪೊಲೀಸರಿಗೆ ಇಬ್ಬರ ಮೇಲೆ ಸಂಶಯ ಶುರುವಾಗಿತ್ತು. ಅವರ ಹಿಂದೆ ಮುಂದೆ ಎಲ್ಲವನ್ನೂ ವಿಚಾರಣೆ ಮಾಡುತ್ತಾರೆ. ಆಗ ಅಕ್ಬರ್ ಮನೆಯನ್ನ ಸುಹೆಲ್, ಜಂಗ್ಲಿ ಮಂಜಾ, ಅಶೋಕ ಮತ್ತು ಅರುಣ ನಾಲ್ವರು ಸೇರಿ ಕಳ್ಳತನ ಮಾಡಿರುವ ಸಂಗತಿ ಬಹಿರಂಗವಾಗುತ್ತದೆ. ಕಳ್ಳತನ ಮಾಡಿ ಸಂಬಂಧಿ ಜೊತೆಗೆ ಇದ್ದು ಹುಡುಕಾಟದ ನಾಟಕವಾಡಿದ್ದ ಸುಹೆಲ್. ಹೀಗೆ ತನ್ನ ಗ್ಯಾಂಗ್ ಜೊತೆ ಕಳ್ಳತನ ಮಾಡಿ ಸೇಫ್ ಆಗಿದ್ದನು. ಆದರೆ ಕಳ್ಳತನ ಪ್ರಕರಣದ ತನಿಖೆಯಲ್ಲಿದ್ದ ಪೊಲೀಸರಿಗೆ ಅಪಘಾತ ಪ್ರಕರಣದ ತನಿಖೆಯಿಂದ ಕಳ್ಳತರು ಪತ್ತೆಯಾಗಿದ್ದಾರೆ. ಅವರ ಬಳಿಯಿದ್ದ ಕಳ್ಳತನ ಮಾಡಿರುವ 11 ಲಕ್ಷ ರೂ. ಮತ್ತು 30 ಗ್ರಾಂ ಚಿನ್ನಾಭರಣವನ್ನು ತುಂಗಾ ನಗರ ಪೊಲೀಸರು ಸೀಜ್ ಮಾಡಿದ್ದಾರೆ.

ಇದನ್ನೂ ಓದಿ:ಶಿವಮೊಗ್ಗದಲ್ಲಿ ಸಿಎಫ್ಐ ಸೇರುವಂತೆ ಗೋಡೆ ಬರಹ ಬರೆದಿದ್ದ ಕಿಡಿಗೇಡಿಗಳು; ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಕೆ.ಎಸ್​ ಈಶ್ವರಪ್ಪ ಆಗ್ರಹ

ಸಂಬಂಧಿಯಾಗಿ ಹತ್ತಿರವಾಗಿದ್ದ ವ್ಯಕ್ತಿಯೇ ಮನೆಗೆ ಕನ್ನ ಹಾಕಿ ಲಕ್ಷಾಂತರ ರೂಪಾಯಿ ಕಳ್ಳತನ ಮಾಡಿದ್ದವ ಕೊನೆಗೂ ಸಿಕ್ಕಿ ಬಿದ್ದಿದ್ದಾನೆ. ಈತನೇ ಮನೆ ಕಳ್ಳತನ ಮಾಡಿರುವ ಸಂಗತಿ ಬಯಲಾಗುತ್ತಿದ್ದಂತೆ ಕುಟುಂಬಸ್ಥರಿಗೆ ದೊಡ್ಡ ಆಘಾತವಾಗಿದೆ. ಸಂಬಂಧಿಯೇ ದೋಖಾ ಮಾಡಿರುವ ಸತ್ಯವನ್ನ ಇನ್ನೂ ಮನೆ ಮಾಲೀಕರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ.

ವರದಿ: ಬಸವರಾಜ್ ಯರಗಣವಿ ಟಿವಿ9 ಶಿವಮೊಗ್ಗ

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:56 am, Wed, 14 December 22