ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ಪ್ರತಿಷ್ಠಿತ ಕಾಲೇಜೊಂದರ ಯುವಕ-ಯುವತಿಯ ಕಾಮದಾಟ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿ ನಾಯಕನನ್ನು ಪೊಲೀಸರು ಬಂಧಿಸಿದ್ದಾರೆ. ಅಶ್ಲೀಲ ವಿಡಿಯೋದಲ್ಲಿದ್ದ ವಿದ್ಯಾರ್ಥಿ ನಾಯಕನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬಂಧಿತ ಆರೋಪಿ ತೀರ್ಥಹಳ್ಳಿಯ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದ, ವಿದ್ಯಾರ್ಥಿ ಸಂಘಟನೆಯೊಂದರಲ್ಲಿ (ಎಬಿವಿಪಿ) ತೊಡಗಿಸಿಕೊಂಡಿದ್ದ. ಕೆಲವು ಯುವತಿಯರ ಜೊತೆಗೆ ಈತ ಸಲುಗೆಯಿಂದ ಇರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral) ಆಗಿವೆ.
ಆರೋಪಿ ಬಂಧನದ ಬಳಿಕ ವಿಡಿಯೋ ವೈರಲ್ ಬಗ್ಗೆ ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದೆ. ಅಶ್ಲೀಲ ಫೋಟೊ, ವಿಡಿಯೋಗಳನ್ನು ವಾಟ್ಸಪ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡುತ್ತಿರುವುದು ಗೊತ್ತಾಗಿದೆ. ಈ ರೀತಿ ಷೇರ್ ಮಾಡುವುದು ಮತ್ತು ಸ್ಟೋರ್ ಮಾಡುವುದು ಮಾಹಿತಿ ತಂತ್ರಜ್ಞಾನ ಕಾಯ್ದೆ 67 (E) ಅಡಿ ಶಿಕ್ಷಾರ್ಹ ಅಪರಾಧ. ಆರೋಪ ಸಾಬೀತಾದರೆ 5 ವರ್ಷದವರೆಗೆ ಜೈಲು ಮತ್ತು ದಂಡ ವಿಧಿಸಲಾಗುತ್ತದೆ. ಈ ಕುರಿತು ಗ್ರೂಪ್ ಅಡ್ಮಿನ್‌ಗಳು ಕೂಡ ಎಚ್ಚರ ವಹಿಸಬೇಕು ಎಂದು ಸೂಚಿಸಿದ್ದಾರೆ.
ಇನ್ನು ಈ ಬಗ್ಗೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದು, ಅವನು ಯಾವ ಸಂಘಟನೆ ಮುಖಂಡನೋ, ಅವನೊಬ್ಬ ಕೊಳಕು ಮನುಷ್ಯ. ನಾನು ಈ ಬಗ್ಗೆ ಪೊಲೀಸ್ ಅಧಿಕಾರಿ ಜೊತೆ ಮಾತನಾಡ್ತೇನೆ.ಅವನ ಬಗ್ಗೆ ಏನು ಬೇಕಾದರೂ ಕ್ರಮ ಕೈಗೊಳ್ಳಲಿ. ಗಾಂಜಾ, ಅಫೀಮು ಆರಂಭವಾಗಿದೆ. ಇದನ್ನು ಮಟ್ಟ ಹಾಕಲು ಪೋಷಕರು ಗಮನ ಹರಿಸಬೇಕು. 3-4 ದಿನದಲ್ಲಿ ಶಾಲಾ ಕಾಲೇಜು ಮುಖ್ಯಸ್ಥರು ಪೊಲೀಸರ ಸಭೆ ಕರೆದು ಚರ್ಚೆ ಮಾಡ್ತೇನೆ. ಕೇವಲ ತೀರ್ಥಹಳ್ಳಿ ಅಲ್ಲ, ರಾಜ್ಯದ ಎಲ್ಲಾ ಕಡೆ ಇದು ಇದೆ ಎಂದರು.
ಯುತಿಯರೊಂದಿಗೆ ನಗ್ನವಾಗಿ ವಿಡಿಯೋ ಕಾಲ್ ಮಾಡಿ ರೆಕಾರ್ಡಿಂಗ್ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ (Social Media) ಹಂಚಿಕೊಂಡಿರುವ ಬಗ್ಗೆ ಯುವಕನ ವಿರುದ್ಧ ಆರೋಪ ಕೇಳಿ ಬಂದಿದೆ. ಸದ್ಯ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಹೆಣ್ಣು ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದ ವಿದ್ಯಾರ್ಥಿ ಮುಖಂಡ ಹಾಗೂ ಬಿಜೆಪಿ ಕಾರ್ಯಕರ್ತನ (BJP Activist) ಕರ್ಮಕಾಂಡ ಬಯಲಾಗಿದೆ ಎಂದು ಕಾಂಗ್ರೆಸ್ (Congress) ಟ್ವೀಟ್ ಮಾಡಿದೆ.
ಇನ್ನು, ಎಬಿವಿಪಿ ನಾಯಕನ ವಿರುದ್ಧ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ತನಿಖೆ ಕೈಗೊಳ್ಳಬೇಕು ಎಂದು ಎನ್‌ಎಸ್‌ಯುಐ ಸಂಘಟನೆ ಕಾರ್ಯಕರ್ತರು ತೀರ್ಥಹಳ್ಳಿ ಡಿವೈಎಸ್‌ಪಿಗೆ ದೂರು ನೀಡಿದ್ದರು.