ಅಡಕೆ ಆಮದು ಮೇಲಿನ ಕನಿಷ್ಠ ದರ 100 ರೂ.ಗೆ ಹೆಚ್ಚಿಸಿದ ಕೇಂದ್ರ ಸರ್ಕಾರ: ಧನ್ಯವಾದ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ

| Updated By: ಗಂಗಾಧರ​ ಬ. ಸಾಬೋಜಿ

Updated on: Feb 15, 2023 | 4:17 PM

ನೆರೆಯ ರಾಷ್ಟ್ರಗಳಿಂದ ದೇಶಕ್ಕೆ ಅಡಿಕೆ ಆಮದು ವಿಚಾರವಾಗಿ ಕೇಂದ್ರ ಸರ್ಕಾರ ಕ್ರಮಕೈಗೊಂಡಿರುವ ನಿರ್ಧಾರಕ್ಕೆ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಟ್ವೀಟ್​ ಮೂಲಕ ಧನ್ಯವಾದ ತಿಳಿಸಿದ್ದಾರೆ.

ಅಡಕೆ ಆಮದು ಮೇಲಿನ ಕನಿಷ್ಠ ದರ 100 ರೂ.ಗೆ ಹೆಚ್ಚಿಸಿದ ಕೇಂದ್ರ ಸರ್ಕಾರ: ಧನ್ಯವಾದ ಸಲ್ಲಿಸಿದ ಸಂಸದ ಬಿ.ವೈ. ರಾಘವೇಂದ್ರ
ಅಡಿಕೆ, ಸಂಸದ ರಾಘವೇಂದ್ರ
Image Credit source: indiatvnews.com
Follow us on

ಶಿವಮೊಗ್ಗ: ನೆರೆಯ ರಾಷ್ಟ್ರಗಳಿಂದ ದೇಶಕ್ಕೆ ಅಡಿಕೆ (Areca Nut) ಆಮದು ವಿಚಾರವಾಗಿ ಕೇಂದ್ರ ಸರ್ಕಾರ ಕ್ರಮಕೈಗೊಂಡಿದೆ. ಕನಿಷ್ಟ ಆಮದು ದರ 251 ರೂ. ನಿಂದ 351 ರೂಪಾಯಿ ಅಂದರೆ ಕನಿಷ್ಟ 100 ರೂ. ಅನ್ನು ಕೇಂದ್ರ ಸರ್ಕಾರ ಹೆಚ್ಚಿಸಿ ಆದೇಶ ಹೊರಡಿಸಿದೆ. ಆಮದು ದರ ಹೆಚ್ಚಿಸಿದ್ದಕ್ಕೆ ಕೇಂದ್ರ ಸರ್ಕಾರಕ್ಕೆ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ (B.Y. Raghavendra) ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರ ಹಿತಕಾಯುವ ಕೆಲಸ ಮಾಡಿದೆ ಎಂದು ಹೇಳಿದ್ದಾರೆ. ಆಮದು ದರ ಹೆಚ್ಚಳಕ್ಕೆ ಕ್ಯಾಂಫ್ಕೋ ಸೇರಿದಂತೆ ಸಹಕಾರಿ ಸಂಸ್ಥೆಗಳು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ಒತ್ತಾಯಿಸಿದ್ದರು.

ಪ್ರಧಾನಿ ನರೇಂದ್ರ ಮೋದಿಗೆ ಸಚಿವೆ ಶೋಭಾ ಕರಂದ್ಲಾಜೆ ಧನ್ಯವಾದ  

ಇನ್ನು ಮುಂದೆ ಯಾವುದೇ ದೇಶದಿಂದ ಅಡಿಕೆ ಆಮದು ಮಾಡಿದರೂ ಕೆಜಿಗೆ 351 ಕ್ಕಿಂತ ಹೆಚ್ಚಿನ ಬೆಲೆ ಕೊಡಬೇಕಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ಪ್ರಧಾನಿ  ನರೇಂದ್ರ ಮೋದಿ ಸರ್ಕಾರ ಬದ್ಧವಾಗಿದೆ. ಹೊರದೇಶದಿಂದ ಕಡಿಮೆ ಬೆಲೆಗೆ ಆಮದಾಗುತ್ತಿರುವ ಅಡಿಕೆ ರಾಜ್ಯದ ಬೆಳೆಗಾರರನ್ನು ಕಂಗೆಡಿಸಿತ್ತು, ನಮ್ಮ ರಾಜ್ಯದ ಅಡಿಕೆ ಬೆಲೆಯನ್ನು ತೀವ್ರವಾಗಿ ಬಾಧಿಸಿತ್ತು. ಇಂದು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ, ನಮ್ಮ ಅಡಿಕೆ ಬೆಳೆಗಾರರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹೊರದೇಶಗಳಿಂದ ಆಮದಾಗುವ ಅಡಿಕೆ ಬೆಳೆಯ ಆಮದು ದರವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ.
ಹಿಂದಿನ ₹251 ಕನಿಷ್ಠ ಆಮದು ದರವನ್ನು ₹100 ಗಳಿಂದ, ₹351ಕ್ಕೆ ಹೆಚ್ಚಿಸಿದೆ. ಇನ್ನು ಮುಂದೆ ಯಾವುದೇ ದೇಶದಿಂದ ಅಡಿಕೆ ಆಮದು ಮಾಡಿದರೂ ₹351 ಕ್ಕಿಂತ ಹೆಚ್ಚಿನ ಬೆಲೆಯನ್ನು ಕೊಡಬೇಕಾಗಿದೆ. ಮೋದಿ ಸರ್ಕಾರದ ಈ ಆದೇಶ, ದೇಶೀಯ ಮಾರುಕಟ್ಟೆಯಲ್ಲಿ ನಮ್ಮ ರೈತರ ಅಡಿಕೆಗೆ ಹೆಚ್ಚಿನ ಬೆಲೆ ದೊರಕಿಸಿಕೊಡುವಲ್ಲಿ ಸಹಾಯಕವಾಗಲಿದೆ. ವಿದೇಶಿ ಅಡಿಕೆಗಳ ಮೇಲಿನ ಕನಿಷ್ಠ ಆಮದು ಬೆಲೆಯನ್ನು ₹351ಕ್ಕೇ ಏರಿಸುವ ಕೇಂದ್ರ ಸರ್ಕಾರದ ನಡೆಯನ್ನು ಸ್ವಾಗತಿಸುತ್ತಾ, ಸದಾ ರೈತರ ಹಿತ ಕಾಯುವ ನಮ್ಮ ನೆಚ್ಚಿನ ಪ್ರಧಾನಿ ಮೋದಿಯವರಿಗೆ ನಾನು ಮನಪೂರ್ವಕವಾಗಿ ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಸಿದ್ದರಾಮಯ್ಯ ಆಕ್ರೋಶ

ಕೇಂದ್ರ ಸರ್ಕಾರದ ದುಷ್ಟ ನೀತಿಯಿಂದಾಗಿ ಈಗ ಅಡಿಕೆ ಬೆಳೆಗಾರರ ಬದುಕೂ ನೆಲಕಚ್ಚುವಂತಾಗಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. ಈಗಾಗಲೇ ಕೊಳೆ ರೋಗ ಮತ್ತು ಎಲೆ ಚುಕ್ಕಿ ರೋಗ ಕರ್ನಾಟಕದಾದ್ಯಂತ ವಿಪರೀತ ಹರಡಿದ್ದು, ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ. ಈ ಸಮಯದಲ್ಲೇ ಕೇಂದ್ರ ಸರ್ಕಾರದ ವಿಶ್ವಾಸ ದ್ರೋಹದ ಸಾಂಕ್ರಾಮಿಕ ರೋಗ ಈಗ ಅಡಿಕೆ ಬೆಳೆ ಮತ್ತು ಬೆಳೆಗಾರರನ್ನು ಆವರಿಸಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.