ಶಿವಮೊಗ್ಗ, ಫೆಬ್ರವರಿ 22: ನಗರದ ನೆಹರು ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 2840 ಕೋಟಿ ರೂ. ವೆಚ್ಚದಲ್ಲಿ ಹೈವೇ, ಫ್ಲೈಓವರ್ ಹೆದ್ದಾರಿ ಕಾಮಗಾರಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ರಿಮೋಟ್ ಮೂಲಕ ಚಾಲನೆ ನೀಡಿದ್ದಾರೆ. ಬಳಿಕ ಕನ್ನಡದಲ್ಲಿ ಭಾಷಣ ಆರಂಭಿಸಿದ ಅವರು, ದೇಶದಲ್ಲಿ ಅತ್ಯುತ್ತಮ ನಾಡಗೀತೆ ಕರ್ನಾಟಕ ರಾಜ್ಯದಾಗಿದೆ. ಈ ಹಾಡು ಕೇಳಿ ನನಗೆ ತುಂಬಾ ಖುಷಿ ಆಯ್ತು. ಈ ಹಾಡು ರಚನೆ ಮಾಡಿದವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ. ಅಭಿವೃದ್ಧಿ ಹೊಂದಿದ ರಾಜ್ಯವೆಂದರೆ ಕರ್ನಾಟಕ. ರಾಜ್ಯ ಐಟಿ ಬಿಟಿ ಮೂಲಕ ಗಮನ ಸೆಳೆದಿದೆ. ಈ ಮೂಲಕ ದೇಶದ ಅಭಿವೃದ್ಧಿ ಕೂಡ ನಡೆಯುತ್ತಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳಿವೆ. 2014 ರಿಂದ ಕಾರ್ಖಾನೆಯಲ್ಲಿ ವಿದ್ಯುತ್ ಮತ್ತು ಇಂಧನ ಉತ್ಪಾದನೆಗೆ ಬಳಕೆ ಮಾಡಲಾಗಿದೆ. ಭತ್ತದ ಹೊಟ್ಟಿನ ಮೂಲಕ ವಿಮಾನದ ಇಂಧನ ಉತ್ಪಾದನೆ. ಏಥಿನಾಲ್ ಇಂಧನ ಬೇಕು. ಏಥಾನಾಲ್ನ 400 ಪಂಪ್ಗಳು ದೇಶದಲ್ಲಿ ಓಪನ್ ಆಗಲಿದೆ. ಇದಕ್ಕೆ ರಾಜ್ಯ ಸರ್ಕಾರಗಳು ಸಾಥ್ ನೀಡಬೇಕಿದೆ. ಇದರಿಂದ ಗ್ರಾಮೀಣ ಅಭಿವೃದ್ಧಿ ಮತ್ತು ಸ್ಮಾರ್ಟ್ ಆಗಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಬೆಳಗಾವಿ ವಿಮಾನಗಳ ಇಂಧನ ಉತ್ಪಾದನೆ ಮಾಡುವ ಕೇಂದ್ರವಾಗಲಿದೆ: ಕೇಂದ್ರ ಸಚಿವ ನಿತಿನ್ ಗಡ್ಕರಿ
ಅಮೇರಿಕ ಹೈವೇ ಮಾದರಿಯಲ್ಲಿ ರಾಜ್ಯದ ಹೈವೇಗಳು 2028 ರಲ್ಲಿ ಪೂರ್ಣ ಅಭಿವೃದ್ದಿ ಆಗಲಿದೆ. ತುಮಕೂರು-ಶಿವಮೊಗ್ಗ ಹೈವೇ 6,500 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ನಡೆಯುತ್ತಿದೆ. ಶೀಘ್ರದಲ್ಲೇ ಈ ಹೈವೇ ಕಾಮಗಾರಿ ಪೂರ್ಣ ಆಗಲಿದೆ. ಮೈಸೂರು-ಮಡಿಕೇರಿ ಹೈವೇ ಯೋಜನೆ ಶೀಘ್ರದಲ್ಲಿ ಆರಂಭ ಆಗಲಿದೆ ಎಂದರು.
ತುಮಕೂರು ಬೈಪಾಸ್ ಅಭಿವೃದ್ದಿ ಕೂಡ ಆಗಲಿದೆ. ಬೆಂಗಳೂರು-ಚೈನೈ ಎಕ್ಸಪ್ರೆಸ್ ಹೈವೇ ಶೀಘ್ರದಲ್ಲಿ ಪೂರ್ಣ ಆಗಲಿದೆ. ಈ ಮೂಲಕ ಪ್ರಯಾಣದ ಅಂತರ ಕಡಿಮೆ ಆಗಲಿದೆ. ಕರ್ನಾಟಕ, ತಮಿಳುನಾಡಿನಲ್ಲಿ ಕೈಗಾರಿಕೆಗಳ ಅಭಿವೃದ್ದಿ ಮಾಡಲಾಗುತ್ತಿದೆ. 17 ಸಾವಿರ ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನ ರಿಂಗ್ ರೋಡ್ಗಳ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಆ ಮೂಲಕ ಬೆಂಗಳೂರಿನ ಟ್ರಾಫಿಕ್ ಜಾಮ್ ಸಮಸ್ಯೆಗೆ ಪರಿಹಾರ ಸಿಗಲಿದೆ. ಸೊಲ್ಲಾಪುರ-ಕರ್ನೂಲ್ ನಡುವೆ ಹೈವೇ ಕಾಮಗಾರಿ ನಡೆಯುತ್ತಿದ್ದು, ದೇಶದ ವಿವಿಧ ರಾಜ್ಯಗಳ ಸಂಪರ್ಕ ಯೋಜನೆ ಆಗಿದೆ ಎಂದು ಹೇಳಿದ್ದಾರೆ.
ಸಚಿವ ಸತೀಶ್ ಜಾರಕಿಹೋಳಿ ಮಾತನಾಡಿ, ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಮೂಲಕ 6200 ಕೋಟಿ ರೂ. ವೆಚ್ಚದಲ್ಲಿ 300 ಕಿ.ಮೀ ಹೈವೇ ಅಭಿವೃದ್ದಿ ಕಾಮಗಾರಿ ಮತ್ತು ಶಂಕು ಸ್ಥಾಪನೆ ಮಾಡಲಾಗಿದೆ. ರಾಜ್ಯಕ್ಕೆ ಇವತ್ತು ವಿಶೇಷ ದಿನವಾಗಿದೆ. ಸುವರ್ಣ ಅಕ್ಷರದಲ್ಲಿ ಬರೆದಿಡುವ ದಿನ. ರಸ್ತೆ ಅಭಿವೃದ್ಧಿಯಿಂದ ಎಲ್ಲ ಅಭಿವೃದ್ಧಿ ಸಾಧ್ಯ. ಗಡ್ಕರಿ ಅವರು ಯಾವುದೇ ಪಕ್ಷದ ಪರ ಕೆಲಸ ಮಾಡದ ವ್ಯಕ್ತಿ. ಕೇವಲ ದೇಶದ ಅಭಿವೃದ್ಧಿಯ ಪರ ಅವರು ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಶಿವಮೊಗ್ಗ ಜಿಲ್ಲೆಯಲ್ಲಿ 600 ಕೋಟಿ ರೂ. ವೆಚ್ಚದಲ್ಲಿ ಹೆದ್ದಾರಿ ಅಭಿವೃದ್ಧಿ ಮಾಡಲಾಗುತ್ತಿದೆ. 2014ರಿಂದ 2023ರವರೆಗೆ 1,46,145 ಲಕ್ಷ ಕಿ.ಮೀ. ಹೆದ್ದಾರಿ ಅಭಿವೃದ್ಧಿ. ಇಂದು 139 ಕೋಟಿ ರೂ. ವೆಚ್ಚದ ಕಾಮಗಾರಿಗೆ ಗಡ್ಕರಿ ಚಾಲನೆ ನೀಡಿದ್ದಾರೆ. ಇನ್ನೂ 6 ತಿಂಗಳಲ್ಲಿ ಹೆದ್ದಾರಿ ಕಾಮಗಾರಿ ಪೂರ್ಣವಾಗಲಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚಿತ್ರಣ ಸಂಪೂರ್ಣ ಬದಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ 6,975 ಕೋಟಿ ರೂ. ಮೌಲ್ಯದ ಕಾಮಗಾರಿಗೆ ಚಾಲನೆ: ನಿತಿನ್ ಗಡ್ಕರಿಯನ್ನು ಕೊಂಡಾಡಿದ ಸತೀಶ್ ಜಾರಕಿಹೊಳಿ
ಜಿಲ್ಲೆಯಲ್ಲಿ ವಿದ್ಯಾನಗರ ಸೇತುವೆ ಸೇರಿ 139.41 ಕೋಟಿ ರೂ. ವೆಚ್ಚದ 4 ಕಾಮಗಾರಿಗಳ ಉದ್ಘಾಟನೆ ಮಾಡಿದ್ದು, 2138.30 ಕೋಟಿ ರೂ. ವೆಚ್ಚದ 6 ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಶಿವಮೊಗ್ಗದ ವಿದ್ಯಾನಗರದಲ್ಲಿ 43.90 ಕೋಟಿ ರೂ. ವೆಚ್ಚದ ರೈಲ್ವೆ ಮೇಲ್ಸೇತುವೆ ಲೋಕಾರ್ಪಣೆಗೊಳಿಸಲಾಗಿದೆ. ಸಮಾರಂಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಬಳ್ಳಾರಿ ಸಂಸದ ದೇವೆಂದ್ರಪ್ಪ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಶಾಸಕರಾದ ಆರಗ ಜ್ಞಾನೇಂದ್ರ, ಎಸ್.ಎನ್. ಚನ್ನಬಸಪ್ಪ, ರುದ್ರೆಗೌಡ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.