ಬೆಂಗಳೂರು: ಪ್ರಧಾನಿ ಮೋದಿ ಬಹಳ ದಿನಗಳ ನಂತರ ಎರಡು ದಿನಗಳ ಪ್ರವಾಸ ಏರ್ಪಾಟು ಮಾಡಿಕೊಂಡು ರಾಜ್ಯಕ್ಕೆ ಬಂದಿದ್ದಾರೆ. ಪ್ರಧಾನಿ ಮೋದಿ ಅವರ ಆಗಮನವನ್ನು ಸ್ವಾಗತ ಮಾಡ್ತೇವೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪ್ರಧಾನಿ ಹುದ್ದೆ ಯಾವ ಪಕ್ಷಕ್ಕೂ ಸೇರಿದ್ದಲ್ಲ. 130 ಕೋಟಿ ಭಾರತೀಯರ ಪ್ರಧಾನಿ ಅವರು. ಎಂದೂ ಕಂಡು ಕೇಳರಿಯದಂತ ಭೀಕರ ಪ್ರವಾಹ ಬಂದಿತ್ತು. ಪ್ರವಾಹ ಬಂದಾಗ ಅವರು ಕರ್ನಾಟಕಕ್ಕೆ ಬರಲಿಲ್ಲ. ಕರ್ನಾಟಕದಲ್ಲಿ ಜನರು ಅನೇಕ ಕಷ್ಟ ನಷ್ಟಗಳಿಗೆ ತುತ್ತಾಗಿದ್ರು. ಬಹಳ ಜನ ಬೀದಿಪಾಲಾಗಿದ್ರು. ಬೇರೆಲ್ಲ ವಿಚಾರಕ್ಕೆ ಮೋದಿ ಟ್ವೀಟ್ ಮಾಡ್ತಾರೆ. ಆದರೆ ಜನರಿಗೆ ಸಾಂತ್ವನ ಹೇಳುವ ಕೆಲಸ ಮಾಡಲಿಲ್ಲ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ರು.
ಹಿಂದಿನ ಪ್ರಧಾನಿಗಳೆಲ್ಲ ಜನರ ಕಷ್ಟ ಕೇಳುವ ಆಲಿಸುವ ಕೆಲಸ ಮಾಡಿದ್ದಾರೆ. 2009 ರಲ್ಲಿ ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ರು, ಆಗ ಪ್ರವಾಹ ಬಂದ ಎರಡೇ ದಿನದಲ್ಲಿ ಮನಮೋಹನ್ ಸಿಂಗ್ ಏರಿಯಲ್ ಸರ್ವೆ ಮಾಡಿದ್ರು. ಪ್ರವಾಹದ ನಷ್ಟ ನನ್ನ ಪ್ರಕಾರ 1ಲಕ್ಷ ಕೋಟಿಗೂ ಹೆಚ್ಚು. ಸಿಎಂ ಯಡಿಯೂರಪ್ಪ ಪ್ರಕಾರ 50000 ಕೋಟಿ ರೂ. ಆದರೆ ಅವರು 30ಸಾವಿರ ಕೋಟಿ ಅಂತ ಕೇಂದ್ರಕ್ಕೆ ವರದಿ ಕೊಟ್ಟಿದ್ರು. ಆದರೆ ಅವರು ಮೂರು ತಿಂಗಳ ನಂತರ ಕೊಟ್ಟಿದ್ದು 1200 ಕೋಟಿ ಮಾತ್ರ ಎಂದು ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಹರಿಹಾಯ್ದರು.
ದೇಶದ ಆರ್ಥಿಕ ಪರಿಸ್ಥಿತಿ ದಿವಾಳಿಯಾಗಿದೆ:
ಭಾರತದ ಜಿಡಿಪಿ ದರ ಅತ್ಯಂತ ಕೆಳಮಟ್ಟಕ್ಕೆ ಹೋಗಿಬಿಟ್ಟಿದೆ. ಅವರು ಶೇಕಡಾ 4ರಷ್ಟು ಜಿಡಿಪಿ ದರ ಇದೆ ಎಂದು ಹೇಳ್ತಾರೆ. ಆದರೆ ನನ್ನ ಪ್ರಕಾರ ಶೇಕಡಾ 2ರಷ್ಟು ಮಾತ್ರ ಇರಬಹುದು. ಬಿಜೆಪಿ ಪಕ್ಷದ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳ್ತಾರೆ ಜಿಡಿಪಿ ದರ ಶೇ. 2ರಿಂದ 2.5 ಇದೆ ಎಂದು. ಆದರೆ ದೇಶದ ಆರ್ಥಿಕ ಪರಿಸ್ಥಿತಿ ದಿವಾಳಿಯಾಗಿದೆ.
ಕೇಂದ್ರದಿಂದ ರಾಜ್ಯಕ್ಕೆ ಕೊಡಬೇಕಾದ ಹಣವನ್ನು ಕೊಟ್ಟಿಲ್ಲ. ಜಿಎಸ್‌ಟಿ ಹಣ ಕೊಟ್ಟಿಲ್ಲ, ನೀರಾವರಿ ಹಣವನ್ನೂ ಕೊಟ್ಟಿಲ್ಲ. ಹಣವನ್ನು ಕೇಳಿದರೆ ಖಜಾನೆಯಲ್ಲಿ ದುಡ್ಡಿಲ್ಲ ಎಂದು ಹೇಳ್ತಾರೆ. ಖಜಾನೆಯಲ್ಲಿ ಹಣವಿಲ್ಲದಿದ್ದರೆ ಅಭಿವೃದ್ಧಿ ಹೇಗೆ ಆಗುತ್ತದೆ. ಕೇಂದ್ರ ಬಿಜೆಪಿ ಸರ್ಕಾರ ಹೇಗೆ ದಿವಾಳಿಯಾಗಿದೆಯೋ ಅದೇ ರೀತಿ ರಾಜ್ಯ ಸರ್ಕಾರ ದಿವಾಳಿ ಮಾಡಲು ಹೊರಟಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವಿದ್ಯಾರ್ಥಿಗಳ ಮುಂದೆ ರಾಜಕೀಯ ಭಾಷಣ ಬೇಕಿತ್ತಾ?
ಪ್ರಧಾನಿ ಮೋದಿ ಸಿದ್ಧಗಂಗಾ ಮಠದಲ್ಲಿ ಭಾಷಣ ಮಾಡಿದರು. ಮಕ್ಕಳ ವಿದ್ಯಾಭ್ಯಾಸ, ಭವಿಷ್ಯದ ಬಗ್ಗೆ ಮಾತನಾಡಬೇಕು. ಆದ್ರೆ ವಿದ್ಯಾರ್ಥಿಗಳ ಮುಂದೆ ರಾಜಕೀಯ ಭಾಷಣ ಬೇಕಿತ್ತಾ? ಮಕ್ಕಳ ಮುಂದೆ ಸಿಎಎ ಬಗ್ಗೆ ಮಾತಾಡುವುದು ಎಷ್ಟು ಸರಿ? ಹೀಗಾಗಿ ಪ್ರಧಾನಿ ಮೋದಿ ಭಾಷಣದ ವಿರುದ್ಧ ಟೀಕಿಸಿದ್ದೆ.
ಕೊಳಕು ರಾಜಕೀಯ ಭಾಷಣ ಎಂದು ಟ್ವೀಟ್ ಮಾಡಿದ್ದೆ. ಪಾಕಿಸ್ತಾನ ಒಂದು ದುಷ್ಟ ರಾಷ್ಟ್ರ ಎಂದು ನಾನೂ ಒಪ್ಪಿಕೊಳ್ತೇನೆ. ಆದರೆ ಇಲ್ಲಿನ ಅಲ್ಪಸಂಖ್ಯಾತರ ಬಗ್ಗೆ ನೀವೇನು ಮಾಡ್ತಿದ್ದೀರಿ? ರೈತರು ಸಂಕಷ್ಟದಲ್ಲಿದ್ದಾರೆ, ಆದ್ರೆ ಸಾಲ ಮನ್ನಾ ಮಾಡಲಿಲ್ಲ. ಮಹದಾಯಿ ವಿವಾದ ಬಗೆಹರಿಸಿ ಅಂದ್ರೆ ಬಗೆಹರಿಸಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಬರೀ ಸುಳ್ಳನ್ನೇ ಹೇಳುತ್ತಿದ್ದಾರೆ. ಮೋದಿ ಹೇಳಿರುವುದರಲ್ಲಿ ಶೇಕಡಾ 90ರಷ್ಟು ಈಡೇರಿಸಿಲ್ಲ ಎಂದು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.
Published On - 11:59 am, Fri, 3 January 20