ಬೆಂಗಳೂರು: ಬಿಜೆಪಿಯಲ್ಲಿನ ಖಾತೆ ಹಂಚಿಕೆ ಅಸಮಾಧಾನದ ಬಗ್ಗೆ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದರು. ಮಾತು ತಪ್ಪದ ನಾಯಕ ಯಡಿಯೂರಪ್ಪ, ಈಗ ನಾಲಿಗೆಯಿಲ್ಲದ ನಾಯಕ ಯಡಿಯೂರಪ್ಪ ಎಂದು ಟಾಂಗ್ ನೀಡಿದರು.
ಇಂದು ಸುದ್ದಿಗೋಷ್ಠಿ ನಡೆಸಿ, ರಾಜ್ಯ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಖಾತೆ ಹಂಚಿಕೆ ವಿಚಾರವಾಗಿ ನಟನೆಯನ್ನೂ ಮಾಡಿ, ಯಡಿಯೂರಪ್ಪನವರನ್ನು ವ್ಯಂಗ್ಯ ಮಾಡಿದರು. ಹಾಗೇ, ಜ. 28ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದೇನೆ. ಪರಿಷತ್ನ ಉಪಸಭಾಪತಿ ಸ್ಥಾನದ ಬಗ್ಗೆ ಚರ್ಚೆ ನಡೆಸುತ್ತೇವೆ. ಹಾಗೇ ದಲಿತ ಎಡಗೈಗೆ ಕೆಪಿಸಿಸಿ ಕಾರ್ಯಾಧ್ಯಕ್ಷನ ಸ್ಥಾನ ಕೊಡಬೇಕು ಎಂದು ಹೇಳಿದರು.
ಸಿಎಂ ಬೇಜವಾಬ್ದಾರಿ
ಇನ್ನು ಶಿವಮೊಗ್ಗದ ಸ್ಫೋಟದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಅಕ್ರಮ ಗಣಿಗಾರಿಕೆಯನ್ನು ಸಕ್ರಮ ಮಾಡಿಕೊಳ್ಳಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳುತ್ತಾರೆ. ಅಂದರೆ ಇದರಲ್ಲಿ ಸಿಎಂ ಬಿಎಸ್ವೈ ಕೂಡ ಶಾಮೀಲಾಗಿದ್ದಾರೆಂದು ತಿಳಿಯುತ್ತದೆ. ಇದು ಮುಖ್ಯಮಂತ್ರಿಯವರ ಬೇಜವಾಬ್ದಾರಿಯುತ ಹೇಳಿಕೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಕ್ರಮ ಗಣಿಗಾರಿಕೆ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಿ. ಅದು ಯಾವುದೇ ಪಕ್ಷಕ್ಕಾದರೂ ಸೇರಿರಲಿ. ಎಲ್ಲ ರೀತಿಯ ಅಕ್ರಮ ಗಣಿಗಾರಿಕೆಯನ್ನೂ ನಿಲ್ಲಿಸಬೇಕು. ಕಾನೂನು ನಮಗೊಂದು, ಬೇರೆಯವರಿಗೊಂದು ಇರೋದಿಲ್ಲ ಎಂದು ಹೇಳಿದರು.
ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ
ಇನ್ನು ರೈತರ ಹೋರಾಟದ ವಿಚಾರದಲ್ಲಿ ಸರ್ಕಾರವನ್ನು ಟೀಕಿಸಿದ್ದಕ್ಕೆ ಹಂಪನಾ ಅವರ ಬಳಿ ಮಂಡ್ಯ ಪೊಲೀಸರು ಮುಚ್ಚಳಿಕೆ ಬರೆಸಿಕೊಂಡಿದ್ದಕ್ಕೆ ಸಿದ್ದರಾಮಯ್ಯ ಕಿಡಿಕಾರಿದರು. ಇದು ಕೇವಲ ಸಂಶೋಧಕ ಹಂಪನಾಗೆ ಮಾಡಿದ ಅವಮಾನವಲ್ಲ. ಇಡೀ ಸಾಹಿತ್ಯಲೋಕಕ್ಕೆ ಮಾಡಿದ ಅವಮಾನ. ನಾನಿದ್ದನ್ನು ಖಂಡಿಸುತ್ತೇನೆ. ಮುಚ್ಚಳಿಕೆ ಬರೆಸಿಕೊಂಡ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಈಶ್ವರಪ್ಪಗೆ ಟಾಂಗ್
ಸಿದ್ದರಾಮಯ್ಯ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕ್ರಮ ಕೈಗೊಳ್ಳಲಿ ಎಂದು ಹೇಳಿದ್ದ ಸಚಿವ ಕೆ.ಎಸ್.ಈಶ್ವರಪ್ಪನವರಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಮತ್ತೆ ಸಿಎಂ ಆಗಬೇಕು ಎಂದು ಈಶ್ವರಪ್ಪನವರಿಗೆ ಆಸೆ ಇರಬೇಕು. ಹಾಗಾಗಿ ಅವರು ಈ ರೀತಿ ಮಾತನಾಡಿರಬಹುದು ಎಂದು ಹೇಳಿದರು.
ತಮಿಳುನಾಡಿನ ಜನ, ಸಂಸ್ಕೃತಿಯ ಮೇಲೆ ಪ್ರಧಾನಿ ಮೋದಿಗಿಲ್ಲ ಗೌರವ, ಆದರೆ ನನಗಿದು ಕುಟುಂಬದಂತೆ!: ರಾಹುಲ್ ಗಾಂಧಿ
Published On - 3:37 pm, Sat, 23 January 21