ಒಂದು ದೇಶ, ಒಂದು ನಂಬರ್: ಪ್ರಧಾನಿ ಮೋದಿ ಕನಸಾದ ERSS ವಾಹನ ಸೇವೆಗೆ ವಿಜಯಪುರದಲ್ಲಿ ಚಾಲನೆ
ಯಾವುದೇ ಪ್ರದೇಶದಿಂದ 112 ಗೆ ಕರೆ ಮಾಡಿದ ಕೂಡಲೇ 15 ಸೆಂಕೆಡ್ಸ್ ಒಳಗೆ ಕರೆ ಸ್ವೀಕರಿಸಲಾಗುತ್ತದೆ. ಪ್ರತಿ ರಾಜ್ಯಗಳಲ್ಲಿಯೂ ಒಂದೊಂದು ಪ್ರಧಾನ ಕಚೇರಿ ಮಾಡಲಾಗಿದೆ. ಅಲ್ಲಿ ಕರೆ ಸ್ವೀಕಾರ ಮಾಡಿದ ಕೂಡಲೇ ಆ ಕರೆ ಎಲ್ಲಿಂದ ಬಂದಿದೆ. ಯಾವ ಜಿಲ್ಲೆ, ತಾಲೂಕು ಗ್ರಾಮ ಎಂದು ಗುರುತಿಸಲಾಗುತ್ತದೆ.

ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನಂತೆ ಇಡೀ ದೇಶದಲ್ಲಿ ತುರ್ತು ಸೇವೆಗೆ ಒಂದೇ ನಂಬರ್ ಇರಬೇಕೆಂದು ನಿರ್ಧರಿಸಿ, ಒಂದು ದೇಶ ಒಂದು ನಂಬರ್ ಎಂಬ ಪರಿಕಲ್ಪನೆಯಲ್ಲಿ 112 ಸಂಖ್ಯೆಯಡಿ ಎಲ್ಲಾ ತುರ್ತು ಸೇವೆಗಳನ್ನು ಸೇರಿಸಲು ಉದ್ದೇಶಿಸಲಾಗಿದೆ. ಮುಂದಿನ ದಿನಗಳಲ್ಲಿ ಅಗ್ನಿಶಾಮದ ದಳದ ಸಂಖ್ಯೆ 101, ಅಂಬ್ಯುಲೆನ್ಸ್ ಸೇವೆಯ ನಂಬರ್ 108ಸಹ ಇದರಲ್ಲಿ ವಿಲೀನಗೊಳ್ಳಲಿದ್ದು, ಇದಕ್ಕಾಗಿ ERSS ವಾಹನಗಳನ್ನು ಸೇವೆಗೆ ನಿಯೋಜಿಸಲಾಗಿದೆ. ಕಳೆದ ಜನವರಿ 16 ರಂದು ರಾಜಧಾನಿ ಬೆಂಗಳೂರಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ERSS ವಾಹನಗಳಿಗೆ Emergency Response Support System (ERSS ) ಚಾಲನೆ ನೀಡಿದ್ದರು.
ಈ ನಿಟ್ಟಿನಲ್ಲಿ ಇಂದು ವಿಜಯಪುರ ಜಿಲ್ಲೆಯ ಎಸ್ಪಿ ಅನುಪಮ ಅಗ್ರವಾಲ್ ನಗರದ ಗಾಂಧಿಚೌಕದಲ್ಲಿ ERSS ವಾಹನಗಳಿಗೆ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದ್ದಾರೆ. ನಗರದಲ್ಲಿ ERSS ವಾಹನಗಳ ಸಂಚಾರ ಮಾಡಿಸುವ ಮೂಲಕ ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಯಿತು. ಇದೇ ವೇಳೆ ಮಾತನಾಡಿದ ಎಸ್ಪಿ ಅನುಪಮ ಅಗ್ರವಾಲ್ ವಿಜಯಪುರ ಜಿಲ್ಲೆಗೆ ಸರ್ಕಾರದಿಂದ 14 ERSS ವಾಹನಗಳನ್ನು ನೀಡಲಾಗಿದೆ. ಈ ಪೈಕಿ ಇಂಡಿ ಹಾಗೂ ಬಸವನಬಾಗೇವಾಡಿ ವಿಭಾಗಕ್ಕೆ ತಲಾ 5 ಹಾಗೂ ವಿಜಯಪುರ ನಗರಕ್ಕೆ 4 ವಾಹನಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಜನ ಸಾಮಾನ್ಯರಿಗೆ ತ್ವರಿತ ಸೇವೆ ನೀಡುವ ಉದ್ದೇಶದಿಂ.ದ ನಿತ್ಯ 24 ಗಂಟೆಗಳ ಕಾಲ ನಮ್ಮ ಸಿಬ್ಬಂದಿ ಸೇವೆಗೆ ನಿರತಾಗಿರುತ್ತಾರೆ. ಒಂದು ERSS ವಾಹನದಲ್ಲಿ ಓರ್ವ ಚಾಲಕ, ಓರ್ವ ಎಎಸ್ಐ ಹಾಗೂ ಓರ್ವ ಹೆಡ್ ಕಾನ್ಸಸ್ಟೇಬಲ್ ಅಥವಾ ಕಾನ್ಸಸ್ಟೇಬಲ್ ಇರುತ್ತಾರೆ. ವಿಜಯಪುರ ನಗರದಲ್ಲಿ ಇದಕ್ಕಾಗಿ ಒಂದು ಕಚೇರಿಯನ್ನು ನಿಯೋಜಿಸಿದ್ದೇವೆ. ಇದರ ಉಸ್ತುವಾರಿಗಾಗಿ ಓರ್ವ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅವರನ್ನು ನೇಮಕ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಜಿಲ್ಲೆಯ ಯಾವುದೇ ಮೂಲೆಯಲ್ಲಿ ಸಮಸ್ಯೆಯಾದರೂ ತ್ವರಿತವಾಗಿ ಸ್ಥಳಕ್ಕೆ ಧಾವಿಸಿ ಜನರ ಮನೆ ಬಾಗಿಲಿವೆ ಸೇವೆ ನೀಡುವ ಉದ್ದೇಶ ಈ ಯೋಜನೆಯದ್ದು. 112 ಸಂಖ್ಯೆಗೆ ಕರೆ ಮಾಡಿದ ತಕ್ಷಣ ನಮ್ಮ ಸಿಬ್ಬಂದಿ ಸೇವೆಗೆ ಲಭ್ಯರಿರುತ್ತಾರೆ. ಗ್ರಾಮೀಣ ಭಾಗದಲ್ಲಿನ ಜನರಿಗೆ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಲು ಅನೇಕ ಸಮಸ್ಯೆಗಳಿರುತ್ತವೆ. ಹಣಕಾಸಿನ ಸಮಸ್ಯೆಯೂ ಇರುತ್ತದೆ. ಇಂಥ ಕೆಲ ಕಾರಣಗಳಿಂದ ಎಷ್ಟೋ ಪ್ರಕರಣಗಳು ಬೆಳಕಿಗೆ ಬರುವುದೇ ಇಲ್ಲ. ಅದು ಅನೇಕ ಜನರಿಗೆ ಅನ್ಯಾಯವಾಗಲೂ ಕಾರಣವಾಗಿದೆ. ಆದರೆ ERSS ಸೇವೆಯಿಂದ ಜನ ಸಾಮಾನ್ಯರಿಗೆ ನ್ಯಾಯ ಸಿಗುವಂತಾಗುತ್ತದೆ. ಜನರ ಮನೆಯ ಬಾಗಿಲಿಗೆ ಸೇವೆ ಸಿಗಲಿದೆ ಎಂದು ವಿವರಿಸಿದ್ದಾರೆ.
ERSS ಎಂದರೆ ಎಮರ್ಜೆನ್ಸಿ ರೆಸ್ಪಾನ್ಸ್ ಸಪೋರ್ಟ್ ಸಿಸ್ಟಮ್ ಎಂದು ಕರೆಯಲಾಗುತ್ತದೆ. ತುರ್ತು ಪರಿಸ್ಥಿತಿಯಲ್ಲಿರುವವರಿಗೆ ಸಹಾಯವಾಗಬೇಕೆಂಬ ನಿಟ್ಟಿನಲ್ಲಿ ಭಾರತ ಸರ್ಕಾರ ಈ ಯೋಜನೆ ಜಾರಿ ಮಾಡಿದೆ. ದೇಶದ ಯಾವುದೇ ಮೂಲೆಯಿಂದಲೂ 112 ಕ್ಕೆ ಕರೆ ಮಾಡಿದಾಗ ತಕ್ಷಣದಲ್ಲಿ ತುರ್ತು ಸೇವೆಗಳು ನಾಗರಿಕರಿಗೆ ಸಿಗುತ್ತವೆ. ಅಪಾಯದಲ್ಲಿರುವವರು ಪೊಲೀಸ್, ಅಗ್ನಿಶಾಮಕ ದಳ, ಆರೋಗ್ಯ ಸೇವೆಗಳನ್ನು ಈ ಮೂಲಕ ಪಡೆಯಬಹುದಾಗಿದೆ.
ಕಾರ್ಯ ವಿಧಾನ ಹೇಗಿರುತ್ತದೆ? ಯಾವುದೇ ಪ್ರದೇಶದಿಂದ 112 ಗೆ ಕರೆ ಮಾಡಿದ ಕೂಡಲೇ 15 ಸೆಂಕೆಡ್ಸ್ ಒಳಗೆ ಕರೆ ಸ್ವೀಕರಿಸಲಾಗುತ್ತದೆ. ಪ್ರತಿ ರಾಜ್ಯಗಳಲ್ಲಿಯೂ ಒಂದೊಂದು ಪ್ರಧಾನ ಕಚೇರಿ ಮಾಡಲಾಗಿದೆ. ಅಲ್ಲಿ ಕರೆ ಸ್ವೀಕಾರ ಮಾಡಿದ ಕೂಡಲೇ ಆ ಕರೆ ಎಲ್ಲಿಂದ ಬಂದಿದೆ. ಯಾವ ಜಿಲ್ಲೆ, ತಾಲೂಕು ಗ್ರಾಮ ಎಂದು ಗುರುತಿಸಲಾಗುತ್ತದೆ. ಈ ಮಾಹಿತಿ ಕಲೆ ಹಾಕಿದ ನಂತರ ಅಲ್ಲಿಂದ ಸಂಬಂಧಿಸಿದ ಪೊಲೀಸ್ ಠಾಣೆಗೆ ತುರ್ತು ಕರೆ ಮಾಡಿ ಮಾಹಿತಿ ನೀಡಲಾಗುತ್ತದೆ. ಪ್ರಧಾನ ಕಚೇರಿಯಿಂದ ಮಾಹಿತಿ ಪಡೆದ ERSS ಪಡೆ ತುರ್ತಾಗಿ ಕರೆ ಮಾಡಿದ ಸ್ಥಳಕ್ಕೆ ತೆರಳುತ್ತಾರೆ. ಇದಕ್ಕಾಗಿ ಗೂಗಲ್ ಮ್ಯಾಪ್, ಮೊಬೈಲ್ ಸಿಗ್ನಲ್, ಟವರ್ ಲೊಕಟೇಶನ್ ಮೂಲಕ ತುರ್ತು ಸೇವೆಗೆ ಕರೆ ಮಾಡಿದವರ ಸ್ಥಳವನ್ನು ಗುರುತು ಮಾಡಿಕೊಳ್ಳುತ್ತಾರೆ.
ಇಷ್ಟೆಲ್ಲಾ ಕಾರ್ಯಗಳು 15 ನಿಮಿಷದೊಳಗೆ ನಡೆಯುತ್ತವೆ. ಕರೆ ಮಾಡಿದವರ ಸ್ಥಳಕ್ಕೆ ತೆರಳಿ ಅವರಿಗೆ ಬೇಕಾದ ಸುರಕ್ಷತೆ ಹಾಗೂ ಸಮಸ್ಯೆಗಳನ್ನು ಬಗೆ ಹರಿಸಲಾಗುತ್ತದೆ. ಜನ ಸಾಮಾನ್ಯರ ಮನೆಯ ಬಾಗಿಲಿಗೆ ERSS ಸೇವೆ ಲಭ್ಯವಾಗುತ್ತದೆ. ಈ ವ್ಯವಸ್ಥೆಯಲ್ಲಿ ಕರೆ, ಎಸ್ಎಮ್ಎಸ್ ಆಧರಿಸಿ ಮೊಬೈಲ್ ಸಿಗ್ನಲ್ ಮೂಲಕ ಸಹಾಯಕ್ಕಾಗಿ ಕರೆ ಮಾಡಿದವರ ಸ್ಥಳಕ್ಕೆ ತೆರಳುವುದು ಸಾಧ್ಯವಿದೆ. ಅಪಾಯದಲ್ಲಿರುವವರು 112 ಗುಂಡಿ ಒತ್ತಿದರೂ ಸಾಕು ಅತ್ತ ಸಹಾಯಕ್ಕೆ ಧಾವಿಸಲು ERSS ಸನ್ನದ್ಧವಾಗುತ್ತದೆ.
ಇಂದು ವಿಜಯಪುರ ಜಿಲ್ಲೆಯಲ್ಲಿ 14 ERSS ವಾಹನಗಳಿಗೆ ಚಾಲನೆ ನೀಡಲಾಗಿದ್ದು, ನಮ್ಮ ತಂಡ ನಿತ್ಯ 24 ಗಂಟೆಗಳ ಸೇವೆಗೆ ಅಣಿಯಾಗಿದೆ. ತುರ್ತು ಸೇವೆಗೆ ಇಡೀ ದೇಶದಲ್ಲಿ ಒಂದೇ ನಂಬರ್ ಎಂಬ ಪ್ರಧಾನಿ ಮೋದಿ ಅವರ ಯೋಜನೆ ಪ್ರಕಾರ 112 ನಂಬರ್ ಕಾರ್ಯ ನಿರ್ವಹಿಸುತ್ತದೆ. ಇದು ಬಡವರಿಗೆ, ಗ್ರಾಮೀಣ ಭಾಗದ ಜನರಿಗೆ ಅನಕೂಲವಾಗಲಿದೆ. ನಮ್ಮ ಇಲಾಖೆ ಇವರೆಲ್ಲರ ಮನೆ ಬಾಗಿಲಿಗೆ ತೆರಳಿ ಸಹಾಯ ಮಾಡುವಲ್ಲಿ ಸನ್ನದ್ಧವಾಗಿದೆ ಎಂದು ಅನುಪಮ ಅಗ್ರವಾಲ್ ಅಭಿಪ್ರಾಯಪಟ್ಟಿದ್ದಾರೆ.
ಅಮಿತ್ ಶಾ ಕರ್ನಾಟಕ ಪ್ರವಾಸ: ಜನವರಿ 16, 17ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ ಕೇಂದ್ರ ಗೃಹ ಸಚಿವ
Published On - 6:36 pm, Sat, 23 January 21