ಕಾವೇರಿ ನೀರು ವಿವಾದ: ಕೇಂದ್ರ ಜಲಶಕ್ತಿ ಸಚಿವರನ್ನ ಭೇಟಿಯಾದ ಸಿದ್ದರಾಮಯ್ಯ, ಏನೆಲ್ಲಾ ಚರ್ಚೆ ಆಯ್ತು?

| Updated By: ರಮೇಶ್ ಬಿ. ಜವಳಗೇರಾ

Updated on: Sep 21, 2023 | 11:55 AM

ಕಾವೇರಿ ನದಿ ನೀರಿನ ವಿಚಾರಕ್ಕೆ ತಮಿಳುನಾಡು ಪದೇ ಪದೇ ಕ್ಯಾತೆ ತೆಗೆಯುತ್ತಿರುವುದಕ್ಕೆ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಕಾವೇರಿ ನೀರು ಹರಿಸುವ ಸಂಬಂಧ ಬಗೆಹರಿಸಲು ಸಿದ್ದರಾಮಯ್ಯ ನವದೆಹಲಿಯಲ್ಲಿ ಠಿಕಾಣಿ ಹೂಡಿದ್ದು ಇಂದು ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಕರ್ನಾಟಕದ ವಾಸ್ತವ ಪರಿಸ್ಥಿರಿಯನ್ನು ಗಮನಕ್ಕೆ ತಂದರು. ಹಾಗಾದ್ರೆ, ಸಿದ್ದರಾಮಯ್ಯ ಏನೆಲ್ಲಾ ಹೇಳಿದ್ದಾರೆ ಎನ್ನುವ ವಿವರ ಇಲ್ಲಿದೆ.

ಕಾವೇರಿ ನೀರು ವಿವಾದ: ಕೇಂದ್ರ ಜಲಶಕ್ತಿ ಸಚಿವರನ್ನ ಭೇಟಿಯಾದ ಸಿದ್ದರಾಮಯ್ಯ, ಏನೆಲ್ಲಾ ಚರ್ಚೆ ಆಯ್ತು?
ಕೇಂದ್ರ ಜಲಶಕ್ತಿ ಸಚಿವರನ್ನ ಭೇಟಿಯಾದ ಸಿದ್ದರಾಮಯ್ಯ
Follow us on

ನವದೆಹಲಿ, (ಸೆಪ್ಟೆಂಬರ್ 21): ತಮಿಳುನಾಡಿಗೆ ಕಾವೇರಿ‌ ನದಿ ನೀರು (Cauvery River Water Dispute)ಬಿಡುವ ವಿಚಾರದಲ್ಲಿ ಉಂಟಾಗಿರುವ ಬಿಕ್ಕಟ್ಟು ಶಮನಕ್ಕೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅವರ ಮಂತ್ರಿ ಮಂಡಲದ ಕೆಲ ಸಚಿವರು ದೆಹಲಿಯಲ್ಲಿ ಕಸರತ್ತು ನಡೆಸಿದ್ದಾರೆ. ಇಂದು (ಸೆಪ್ಟೆಂಬರ್ 21) ಬೆಳಗ್ಗೆ ಸಿದ್ದರಾಮಯ್ಯ ಅವರು ರಾಜ್ಯದ ನಿಯೋಗದೊಂದಿಗೆ ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್(Gajendra Singh Shekhawat) ಅವರನ್ನು ಭೇಟಿ ಮಾಡಿದರು. ಈ ವೇಳೆ ಇಂದಿನ ಕಾವೇರಿ ನೀರಿನ ಮಟ್ಟ ಹಾಗೂ ಮುಂದೆ ಎದುರಾಗಲಿರುವ ನೀರಿನ ಸಮಸ್ಯೆ ಬಗ್ಗೆ ವಿವರಿಸಿದ್ದಾರೆ.

ಗಜೇಂದ್ರ ಸಿಂಗ್ ಶೇಖಾವತ್ ಭೇಟಿ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ಇಂದು‌ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿದ್ದೇವು. ಸಂಸದರು, ಕೇಂದ್ರ ಸಚಿವರು ಹಾಗೂ ಅಧಿಕಾರಿಗಳು ಇದ್ದರು. ಅವರಿಗೆ ಕರ್ನಾಟಕ ವಾಸ್ತಾಂಶ ತಿಳಿಸಿದ್ದೇವೆ. ಅಲ್ಲೇ CWMA ಮಾಡಿದ ಆದೇಶದ ಬಗ್ಗೆ ವಿವರಣೆ ನೀಡಿದ್ದೇನೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:  Explainer; ಕಾವೇರಿ ವಿವಾದದ ಕಿಡಿ ಹೊತ್ತಿಕೊಂಡಿದ್ದು ಯಾವಾಗ? ಇಲ್ಲಿದೆ ನದಿ ನೀರು ಹಂಚಿಕೆ ಕಲಹದ ಸುದೀರ್ಘ ಇತಿಹಾಸ

ನಮ್ಮ ಡ್ಯಾಂಗಳಲ್ಲಿ ನೀರಿಲ್ಲ ಎನ್ನುವುದು ಮತ್ತು ನಮ್ಮಗೆ ಜುಲೈ ವರೆಗೂ ಬೇಕಾದ ನೀರಿನ ಪ್ರಮಾಣದ ಬಗ್ಗೆ ಮಾಹಿತಿ ನೀಡಿದೆ. ಒಟ್ಟು 106 ಟಿಎಂಸಿ ನೀರು ಬೇಕಾಗಬಹುದು. ಆದರೆ ನಮ್ಮ ಬಳಿ 52 ಟಿಎಂಸಿ ನೀರಿದೆ. ಈಗ ನೀರು ಹರಿಸಿದ್ರೆ ಕುಡಿಯುವ ನೀರಿನ ಸಮಸ್ಯೆಯಾಗಲಿದೆ. ಅದನ್ನು ಕೇಂದ್ರ ಸಚಿವರ ಗಮನಕ್ಕೆ ತಂದಿದ್ದೇನೆ. ಅಗಸ್ಟ್ ತಿಂಗಳಲ್ಲಿ ಬಹಳಷ್ಟು ‌ಮಳೆಯ ಕೊರತೆಯಾಗಿದೆ. ಸೆಪ್ಟೆಂಬರ್ ನಲ್ಲೂ ವಾಡಿಕೆಯಂತೆ ‌ಮಳೆಯಾಗಿಲ್ಲ. ಈ ಹಿನ್ನಲೆ ಒಳಹರಿವು ಕಡಿಮೆಯಾಗಿದೆ ಎನ್ನುವ ಅಂಶವನ್ನು ತಿಳಿಸಿದ್ದೇನೆ ಎಂದು ವಿವರಿಸಿದರು.

ಜಲಾಶಯದ ನೀರಿನ ಮಟ್ಟ ನೋಡಿದ್ರೆ ಬೆಳೆ ನಾಶ ಪರಿಸ್ಥಿತಿ ಇದೆ. ರೈತರ ಬೆಳೆ ನಾಶ ಹಾಗೂ ಕುಡಿಯುವ ನೀರಿಗೆ ಸಮಸ್ಯೆ ಎದುರಾಗುತ್ತೆ. ಸುಪ್ರೀಂಕೋರ್ಟ್​ನಲ್ಲಿ ಇವತ್ತು ಅರ್ಜಿ ವಿಚಾರಣೆಗೆ ಬರಲಿದೆ. ಇನ್ನು ಪ್ರಧಾನಮಂತ್ರಿ ಮೋದಿ ಭೇಟಿಗೆ ಇನ್ನೂ ಸಮಯ ನೀಡಿಲ್ಲ ಎಂದರು.

ಗಜೇಂದ್ರ ಸಿಂಗ್ ಶೇಖಾವತ್ ಭೇಟಿ ನಿಯೋಗದಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ ಜೋಷಿ, ಶೋಭಾ ಕರಂದ್ಲಾಜೆ, ರಾಜ್ಯದ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಕೃಷಿ ಸಚಿವ ಚಲುವರಾಯಸ್ವಾಮಿ, ಕಾನೂನು ಸಚಿವ ಎಚ್.ಕೆ.ಪಾಟೀಲ್, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿಗಳಾದ ಟಿ.ಬಿ.ಜಯಚಂದ್ರ, ಪ್ರಕಾಶ್ ಹುಕ್ಕೇರಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಜಲ ಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ಜಯರಾಮ್, ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಸೇರಿ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 11:00 am, Thu, 21 September 23