
ಬೆಂಗಳೂರು, ಸೆಪ್ಟೆಂಬರ್ 24: ಪದ್ಮಭೂಷಣ, ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ (SL Bhyrappa) ನಿಧನ ಹೊಂದಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿನ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ಎಸ್.ಎಲ್. ಭೈರಪ್ಪ ವಿಧಿವಶರಾಗಿದ್ದಾರೆ. ಎಸ್.ಎಲ್.ಭೈರಪ್ಪ ಎಂದೇ ಪ್ರಸಿದ್ಧಿ ಪಡೆದಿದ್ದ ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ, ಕನ್ನಡ ಸಾಹಿತ್ಯ ಲೋಕದ ದಿಗ್ಗಜರಲ್ಲಿ ಒಬ್ಬರಾಗಿದ್ದರು. ಇವರ ಹಲವು ಪುಸ್ತಕಗಳು ಇಂಗ್ಲಿಷ್ ಸೇರಿದಂತೆ ಭಾರತದ ವಿವಿಧ ಭಾಷೆಗಳಿಗೆ ಅನುವಾದಗೊಂಡಿವೆ. 2023ರಲ್ಲಿ ಭಾರತ ಸರ್ಕಾರ ಇವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು.
ಪ್ರಸಿದ್ಧ ಕಾದಂಬರಿಕಾರ, ತತ್ವಜ್ಞಾನಿ, ಲೇಖಕರಾಗಿದ್ದ S.L.ಭೈರಪ್ಪ ಅವರ ಪೂರ್ಣ ಹೆಸರು ಸಂತೆಶಿವರ ಲಿಂಗಣ್ಣಯ್ಯ ಭೈರಪ್ಪ. 1931ರ ಆ.20ರಲ್ಲಿ ಹಾಸನ ಜಿಲ್ಲೆ ಸಂತೆಶಿವರ ಗ್ರಾಮದಲ್ಲಿ ಹೊಯ್ಸಳ ಕರ್ನಾಟಕ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದ ಭೈರಪ್ಪನವರು, ಹುಟ್ಟೂರಿನಲ್ಲೇ ಪ್ರಾಥಮಿಕ ಶಿಕ್ಷಣವನ್ನ ಪಡೆದಿದ್ದರು. ಕಿತ್ತು ತಿನ್ನುವ ಬಡತನದ ನಡುವೆಯೂ ತಾಯಿಯಿಂದ ಪ್ರಭಾವಿತರಾಗಿದ್ದ ಅವರು, ಗಾಂಧೀಜಿ ಮೌಲ್ಯಗಳಿಗೂ ಮಾರಿ ಹೋಗಿದ್ದರು. ಸ್ವಾತಂತ್ರ್ಯ ಚಳುವಳಿಗೆ ತೊಡಗಿಸಿಕೊಂಡಾಗ ಅವರಿಗೆ ಆಗಿನ್ನೂ ಕೇವಲ 13 ವರ್ಷ. ಬಳಿಕ ಪ್ರೌಢ ಶಿಕ್ಷಣ ಮತ್ತು ಕಾಲೇಜು ದಿನಗಳನ್ನ ಮೈಸೂರಿನಲ್ಲಿ ಪೂರೈಸಿದ್ದ ಭೈರಪ್ಪನವರು, ಸುವರ್ಣ ಪದಕದೊಂದಿಗೆ ಎಂ.ಎ ತೇರ್ಗಡೆಯಾಗಿದ್ದರು. ಇಂಗ್ಲೀಷ್ನಲ್ಲಿ ರಚಿಸಿದ “ಸತ್ಯ ಮತ್ತು ಸೌಂದರ್ಯ” ಎಂಬ ಮಹಾ ಪ್ರಬಂಧಕ್ಕೆ ಬರೋಡಾದ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಗಳಿಸಿದ್ದರು. ಹುಬ್ಬಳ್ಳಿ, ಗುಜರಾತ್, ದೆಹಲಿಯಲ್ಲಿ ಉಪನ್ಯಾಸಕ ವೃತ್ತಿ ಕೈಗೊಂಡಿದ್ದ ಭೈರಪ್ಪನವರು, ನಾಲ್ಕು ದಶಕಗಳಲ್ಲಿ 21 ಕಾದಂಬರಿಗಳನ್ನು ಬರೆದಿದ್ದಾರೆ.
ಇದನ್ನೂ ಓದಿ: ಪದ್ಮಭೂಷಣ, ಹಿರಿಯ ಸಾಹಿತಿ ಎಸ್ಎಲ್ ಭೈರಪ್ಪ ನಿಧನ
ಭೈರಪ್ಪನವರಿಗೆ ಅವರದೇ ಆದ ದೊಡ್ಡ ಓದುಗ ಬಳಗವಿದ್ದು, ಇಂಗ್ಲಿಷ್ ಸೇರಿ ವಿವಿಧ ಭಾಷೆಗಳಿಗೆ ಅವರ ಕಾದಂಬರಿಗಳು ಅನುವಾದ ಗೊಂಡಿವೆ. ಗೃಹಭಂಗ,ವಂಶವೃಕ್ಷ, ನೆಲೆ, ಸಾಕ್ಷಿ, ನಾಯಿ ನೆರಳು, ತಬ್ಬಲಿಯು ನೀನಾದೆ ಮಗನೆ, ದಾಟು, ಧರ್ಮಶ್ರೀ, ಪರ್ವ, ಭಿತ್ತಿ ಸೇರಿ ಹಲವು ಮರಾಠಿ ಓದುಗರ ಮೆಚ್ಚುಗೆಗೂ ಪಾತ್ರವಾಗಿದ್ದವು. ವಂಶವೃಕ್ಷಕ್ಕೆ 1966 ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1975ರಲ್ಲಿ ದಾಟು ಕಾದಂಬರಿಗೆ ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. ಭೈರಪ್ಪನವರು ರಚಿಸಿದ ಕಾದಂಬರಿಗಳಲ್ಲಿಯೇ ‘ಪರ್ವ’ ಅತ್ಯಂತ ಜನಪ್ರಿಯ.94 ವರ್ಷ ಪೂರೈಸಿದರೂ ಸಹ ಇಂದಿಗೂ ಸಹ ಭೈರಪ್ಪನವರು ಜೀವನದ ಬಗೆಗಿನ ಉತ್ಸಾಹವನ್ನು ಹಾಗೆಯೇ ಉಳಿಸಿಕೊಂಡಿದ್ದರು.
ʻಧರ್ಮಶ್ರೀʼ ಕಾದಂಬರಿಯಿಂದ ಹಿಡಿದು ಇತ್ತೀಚಿನ ವರ್ಷಗಳಲ್ಲಿ ಮೂಡಿಬಂದ ʻಉತ್ತರಕಾಂಡʼದವರೆಗೆ ಜೀವನದ ವಿವಿಧ ಸ್ತರಗಳ ಕುರಿತು ಚಿಂತನೆ ಮಾಡುವಂತಹ ಬೃಹತ್ ಕಥಾನಕಗಳನ್ನು ಕೊಡುಗೆಯಾಗಿ ನೀಡಿರುವ ಕರುನಾಡಿನ ಜೀವಂತ ಸಾಹಿತ್ಯ ದಂತಕಥೆ ಎಸ್.ಎಲ್. ಭೈರಪ್ಪ. ಪದ್ಮಭೂಷಣ ಮಾತ್ರವಲ್ಲದೆ, 2011ರಲ್ಲಿ ನಾಡೋಜ ಪ್ರಶಸ್ತಿ, 2010ರಲ್ಲಿ ಸರಸ್ವತಿ ಸಮ್ಮಾನ್ ಪ್ರಶಸ್ತಿ, 2007ರಲ್ಲಿ ಕಲಬುರಗಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಕೂಡ ಇವರಿಗೆ ಸಂದಿವೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 3:33 pm, Wed, 24 September 25