ಕಲಬುರಗಿ: ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಮಹಾಮಾರಿ ಕೊರೊನಾಗೆ ಒಂದೇ ದಿನದಲ್ಲಿ ತಾಯಿ, ಮಗ ಇಬ್ಬರೂ ಬಲಿಯಾಗಿರುವ ಘಟನೆ ನಡೆದಿದೆ. ಚಾಂದಿಬಾಯಿ ನಾಯಕ್(74), ಭಜನ್ ನಾಯಕ್(32) ಕೊರೊನಾ ಸೋಂಕಿಗೆ ಬಲಿಯಾದ ತಾಯಿ-ಮಗ. ಇನ್ನು ದುರಂತವೆಂದರೆ 9 ದಿನದ ಹಿಂದೆ ಚಾಂದಿಬಾಯಿ ಹಿರಿಯ ಪುತ್ರ ಸಹ ಬಲಿಯಾಗಿದ್ದರು.
ಕೊರೊನಾ ಸೋಂಕು ಜನರನ್ನು ನರಳುವಂತೆ ಮಾಡಿದೆ. ಜನರ ಜೀವನವನ್ನೇ ಕಿತ್ತುಕೊಂಡಿದೆ. ಇಲ್ಲೊಂದು ಕುಟುಂಬ ಕೊರೊನಾಗೆ ಬಲಿಯಾಗಿದೆ. ಸೋಂಕು ದೃಢಪಟ್ಟ ಬಳಿಕ ತಾಯಿ ಮಗ ಇಬ್ಬರೂ ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮುಂಜಾನೆ ಮಗ ಭಜನ್ ನಾಯಕ್ ಮೃತಪಟ್ಟಿದ್ದಾನೆ. ಬಳಿಕ ನಿನ್ನೆ ಸಂಜೆ ತಾಯಿ ಚಾಂದಿಬಾಯಿ ಕೊಡ ಕೊರೊನಾದಿಂದ ಕೊನೆಯುಸಿರೆಳೆದಿದ್ದಾರೆ. ಇನ್ನು ಒಂಬತ್ತು ದಿನಗಳ ಹಿಂದೆ ಚಾಂದಿಬಾಯಿ ಅವರ ಹಿರಿಯ ಪುತ್ರ ಪ್ರಕಾಶ್ ನಾಯಕ್(46) ಕೂಡಾ ಕೊರೊನಾ ಸೋಂಕಿಗೆ ಬಲಿಯಾಗಿದ್ದರು. ಒಂದೇ ಕುಟುಂಬದ ತಾಯಿ ಮತ್ತು ಇಬ್ಬರು ಮಕ್ಕಳು ಕೊರೊನಾಗೆ ಬಲಿಯಾಗಿದ್ದಾರೆ.
ನೊಂದ ಯುವಕ ಆತ್ಮಹತ್ಯೆ
ಕೊರೊನಾದಿಂದಾಗಿ ಮೈಸೂರಿನಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೈಸೂರಿನ ಟಿ.ಕೆ.ಬಡಾವಣೆಯಲ್ಲಿ ಭಾರ್ಗವ್(24) ಲಾಕ್‌ಡೌನ್ ವೇಳೆ ಕೆಲಸವಿಲ್ಲ ಎಂದು ನೊಂದು ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತಂದೆ ಮತ್ತು ತಾಯಿ ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಪುತ್ರ ಭಾರ್ಗವ್ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಲಾಕ್‌ಡೌನ್ ನಂತರ ಅಂಗಡಿ ಬಂದ್ ಆಗಿತ್ತು. ಕೆಲಸವಿಲ್ಲದೆ ಮನೆಯಲ್ಲೇ ಇರ್ತಿದ್ದ. ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮೈಸೂರು/ಮಂಡ್ಯ: ಅಪ್ಪ-ಅಮ್ಮ ಸತ್ತರು ಅಂತಾ… ತನ್ನ ಜನ್ಮ ದಿನವೇ ವಿಷ ಸೇವಿಸಿ ಪುತ್ರ ಸಹ ಸೂಸೈಡ್