
ಬೆಂಗಳೂರು, ನವೆಂಬರ್ 20: ಮದುವೆ, ಪ್ರವಾಸ, ಕ್ರೀಡಾಕೂಟ ಅಥವಾ ಇತರ ಕಾರ್ಯಕ್ರಮಗಳಿಗೆ ಗುಂಪಾಗಿ ರೈಲಿನಲ್ಲಿ ಪ್ರಯಾಣಿಸುವವರಿಗೆ ನೈಋತ್ಯ ರೈಲ್ವೆ ಸಿಹಿ ಸುದ್ದಿ ನೀಡಿದೆ. ಗುಂಪು ಅಥವಾ ಬಲ್ಕ್ ಬುಕಿಂಗ್‌ಗೆ ಸಂಬಂಧಿಸಿದ ನಿಯಮಗಳನ್ನು ಸರಳಗೊಳಿಸಿದ್ದು, ಹಿಂದಿನ ಎಲ್ಲ ಮಾರ್ಗಸೂಚಿಗಳನ್ನು ರದ್ದುಪಡಿಸಿ ಹೊಸ ಮಾರ್ಗಸೂಚಿ ಹೊರಡಿಸಿದೆ.
ಮದುವೆ ಸಮಾರಂಭಗಳಿಗೆ ಹೋಗುವವರು, ವಿದ್ಯಾರ್ಥಿಗಳು, ಯಾತ್ರಿಕರು, ಕ್ರೀಡಾ ತಂಡಗಳು ಮತ್ತು ಸಾಂಸ್ಕೃತಿಕ ಗುಂಪುಗಳಂತೆ ನಿರ್ದಿಷ್ಟ ಉದ್ದೇಶಕ್ಕಾಗಿ ಪ್ರಯಾಣಿಸುವ ಅಧಿಕೃತ ಗುಂಪುಗಳಿಗೆ ಈ ಸೌಲಭ್ಯ ಸಿಗಲಿದೆ. ಟಿಕೆಟ್ ದೃಢಪಟ್ಟಿರಲಿ, ಆರ್‌ಎಸಿ ಇರಲಿ ಅಥವಾ ಕಾಯುವ ಪಟ್ಟಿಯಲ್ಲಿರಲಿ, ಎಲ್ಲ ದರ್ಜೆಗಳಿಗೂ ಇದು ಅನ್ವಯಿಸುತ್ತದೆ.
ಮುಂಗಡ ಕಾಯ್ದಿರಿಸುವಿಕೆ ಆರಂಭವಾದ ಒಂದು ಗಂಟೆಯ ನಂತರ, ಅಂದರೆ ಬೆಳಗ್ಗೆ 9 ಗಂಟೆಯಿಂದ ಪ್ರಮುಖ ನಿಲ್ದಾಣಗಳಲ್ಲಿ ಮಾತ್ರ ಗುಂಪು ಬುಕಿಂಗ್‌ಗೆ ಅವಕಾಶ ಇರುತ್ತದೆ.
ಈ ಬಾರಿಯ ಪ್ರಮುಖ ಬದಲಾವಣೆ ಇದು. ಗುಂಪು ಕಾಯ್ದಿರಿಸುವಿಕೆಯಲ್ಲಿ ನೀಡಬಹುದಾದ ಬರ್ತ್‌ಗಳ ಸಂಖ್ಯೆಗೆ ಇದ್ದ ಗರಿಷ್ಠ ಮಿತಿಯನ್ನು ತೆಗೆದುಹಾಕಲಾಗಿದೆ. ಈ ಹಿಂದಿನ ನಿಯಮ ಮತ್ತು ಮಿತಿಗಳನ್ನು ಹಿಂಪಡೆಯಲಾಗಿದೆ. ಈಗ ಮುಖ್ಯ ಕಾಯ್ದಿರಿಸುವಿಕೆ ಮೇಲ್ವಿಚಾರಕರು (ಸಿಆರ್‌ಎಸ್) ಅಥವಾ ನಿಲ್ದಾಣ ವ್ಯವಸ್ಥಾಪಕರು ಗುಂಪು ಕಾಯ್ದಿರಿಸುವಿಕೆಗೆ ಅನುಮತಿ ನೀಡುವ ಅಧಿಕಾರ ಹೊಂದಿರುತ್ತಾರೆ.
ಹಿಂದಿರುಗುವ ಪ್ರಯಾಣಕ್ಕೂ ಅದೇ ಬುಕಿಂಗ್ ಕಚೇರಿಯಲ್ಲಿ ಗ್ರೂಪ್ ಬುಕಿಂಗ್‌ಗೆ ಅನುಮತಿ ಪಡೆಯಬಹುದು. ಆದರೆ ಅದನ್ನು ಪ್ರತ್ಯೇಕ ಪ್ರಯಾಣವೆಂದು ಪರಿಗಣಿಸಲಾಗುತ್ತದೆ.
ಅನುಮತಿ ನೀಡಿದ ಎಲ್ಲ ಗ್ರೂಪ್ ಬುಕಿಂಗ್‌ಗಳ ಪ್ರತ್ಯೇಕ ದಾಖಲೆ ಪುಸ್ತಕವನ್ನು ಸಿಆರ್‌ಎಸ್ ಅಥವಾ ನಿಲ್ದಾಣ ವ್ಯವಸ್ಥಾಪಕರು ನಿರ್ವಹಿಸಬೇಕು. ಅರ್ಜಿ ನಮೂನೆ ಮತ್ತು ಪ್ರಯಾಣಿಕರ ಪಟ್ಟಿಯ ಪ್ರತಿ ಪುಟದ ಮೇಲೆ ಮೊಹರು ಮತ್ತು ಸಹಿ ಹಾಕಬೇಕು. ಅಕ್ರಮ ಗುಂಪುಗಳು ಬರ್ತ್ ಅಥವಾ ಆಸನಗಳನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಡೆದು, ನಿಜವಾದ ಗುಂಪು ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವುದು ಈ ಸೌಲಭ್ಯದ ಉದ್ದೇಶ ಎಂದು ರೈಲ್ವೆ ತಿಳಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ