Bangalore Chennai Expressway: ಶೀಘ್ರ ಸಿದ್ಧವಾಗಲಿದೆ ಬೆಂಗಳೂರು ಚೆನ್ನೈ ಎಕ್ಸ್​ಪ್ರೆಸ್​​ವೇ; ದೂರ, ಸಮಯ, ಇತರ ಮಾಹಿತಿ ಇಲ್ಲಿದೆ

|

Updated on: Jul 28, 2023 | 8:41 PM

Bangalore Chennai Expressway; ಬೆಂಗಳೂರು ಚೆನ್ನೈ ಎಕ್ಸ್​ಪ್ರೆಸ್​​ವೇ ಕಾಮಗಾರಿ ಪೂರ್ಣಗೊಂಡ ನಂತರ, ಎರಡು ನಗರಗಳ ನಡುವಿನ ಪ್ರಯಾಣದ ಸಮಯ ಸುಮಾರು ಎರಡೂವರೆ ಗಂಟೆಯಷ್ಟು ಕಡಿಮೆಯಾಗುವ ನಿರೀಕ್ಷೆ ಇದೆ.

Bangalore Chennai Expressway: ಶೀಘ್ರ ಸಿದ್ಧವಾಗಲಿದೆ ಬೆಂಗಳೂರು ಚೆನ್ನೈ ಎಕ್ಸ್​ಪ್ರೆಸ್​​ವೇ; ದೂರ, ಸಮಯ, ಇತರ ಮಾಹಿತಿ ಇಲ್ಲಿದೆ
ಬೆಂಗಳೂರು ಚೆನ್ನೈ ಎಕ್ಸ್​ಪ್ರೆಸ್​​ವೇ ನಕ್ಷೆ
Image Credit source: News 9
Follow us on

ಬೆಂಗಳೂರು: ಬೆಂಗಳೂರು-ಚೆನ್ನೈ ನಡುವಣ ಮೂರನೇ ಸಂಪರ್ಕ ಮಾರ್ಗವಾಗಿರುವ, ಈಗ ನಿರ್ಮಾಣ ಹಂತದಲ್ಲಿರುವ ಎಕ್ಸ್‌ಪ್ರೆಸ್‌ವೇ (Bengaluru Chennai Expressway) ಎನ್‌ಇ-7 2024 ರ ಮಾರ್ಚ್ ವೇಳೆಗೆ ಕಾರ್ಯಾರಂಭ ಮಾಡುವ ಸಾಧ್ಯತೆಯಿದೆ. ಎಕ್ಸ್‌ಪ್ರೆಸ್‌ವೇಯ ಹೊಸಕೋಟೆ-ಮಾಲೂರು ವಿಭಾಗದ ಕಾಮಗಾರಿ ಈಗ ಚುರುಕುಗೊಂಡಿದೆ ಎಂದು ವರದಿಯಾಗಿದೆ. 262 ಕಿಮೀ ಉದ್ದದ ಎಕ್ಸ್‌ಪ್ರೆಸ್‌ವೇ ಚೆನ್ನೈ ಬೆಂಗಳೂರು ಕೈಗಾರಿಕಾ ಕಾರಿಡಾರ್‌ನ ಭಾಗವಾಗಿದೆ. ಇದರ ಕಾಮಗಾರಿ ಪೂರ್ಣಗೊಂಡ ನಂತರ, ಎರಡು ನಗರಗಳ ನಡುವಿನ ಪ್ರಯಾಣದ ಸಮಯ ಸುಮಾರು ಎರಡೂವರೆ ಗಂಟೆಯಷ್ಟು ಕಡಿಮೆಯಾಗುವ ನಿರೀಕ್ಷೆ ಇದೆ. ಸದ್ಯ ಉಭಯ ನಗರಗಳ ನಡುವಣ ಸಂಚಾರಕ್ಕೆ ಸಾಮಾನ್ಯವಾಗಿ 5-6 ಗಂಟೆ ಬೇಕಾಗುತ್ತಿದೆ.

ಬೆಂಗಳೂರು ಚೆನ್ನೈ ಎಕ್ಸ್​​ಪ್ರೆಸ್​​ ವೇಯಲ್ಲಿ ವೇಗದ ಮಿತಿ ಎಷ್ಟಿರಲಿದೆ?

26 ಎಕ್ಸ್‌ಪ್ರೆಸ್‌ ವೇಗಳನ್ನು ಕಲ್ಪಿಸುವ ಪ್ಯಾನ್-ಇಂಡಿಯಾ ಭಾರತಮಾಲಾ ರಸ್ತೆ ಜಾಲದ ಭಾಗವು ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ಮೂಲಕ ಹಾದುಹೋಗಲಿದೆ. ಈ ಹೆದ್ದಾರಿಯಲ್ಲಿ ವೇಗದ ಮಿತಿ ಗಂಟೆಗೆ 120 ಕಿ.ಮೀ. ಆಗಿರಲಿದೆ. ಎಕ್ಸ್​​ಪ್ರೆಸ್ ವೇ ಲೋಕಾರ್ಪಣೆಗೊಂಡ ನಂತರ ಬೆಂಗಳೂರು ಹಾಗೂ ಚೆನ್ನೈ ನಡುವಣ ಪ್ರಯಾಣಿಕರಿಗೆ ಈಗಿರುವ ಎರಡು ಮಾರ್ಗಗಳ ಜತೆಗೆ ಇನ್ನೊಂದು ಆಯ್ಕೆ ಲಭ್ಯವಾಗಲಿದೆ.

ಪ್ರಸ್ತುತ ಇರುವ ಎರಡು ಮಾರ್ಗಗಳ ಪೈಕಿ ಒಂದು, 335-ಕಿಮೀ ಉದ್ದದ ಹಳೆಯ ಮದ್ರಾಸ್ ಹೆದ್ದಾರಿ ಅಥವಾ ರಾಷ್ಟ್ರೀಯ ಹೆದ್ದಾರಿ-75 ಆಗಿದೆ. ಇದು ಹೊಸಕೋಟೆ, ಮುಳಬಾಗಲು, ಚಿತ್ತೂರು, ರಾಣಿಪೇಟೆ, ವಾಲಾಜಪೇಟೆ, ಶ್ರೀಪೆರಂಬದೂರು, ಪೂನ್ನಮಲ್ಲೆ, ಕೋಯಂಬೆಡು ಮೂಲಕ ಹಾದುಹೋಗುತ್ತದೆ. ಇನ್ನೊಂದು ಮಾರ್ಗವೆಂದರೆ, 372 ಕಿಮೀ ಉದ್ದದ, ಬೆಂಗಳೂರಿನಿಂದ ಎಲೆಕ್ಟ್ರಾನಿಕ್ ಸಿಟಿ, ಚಂದಾಪುರ, ಅತ್ತಿಬೆಲೆ, ಹೊಸೂರು, ಕೃಷ್ಣಗಿರಿ, ಅಂಬೂರು, ವಾಣಿಯಂಬಾಡಿ, ವಾಲಾಜಪೇಟ್, ವೆಲ್ಲೂರು, ರಾಣಿಪೇಟ್, ಕಾಂಚೀಪುರಂ, ಶ್ರೀಪೆರಂಬದೂರ್, ಪೂನಮಲ್ಲಿ ಮಾರ್ಗವಾಗಿ ಚೆನ್ನೈ ತಲುಪುವುದಾಗಿದೆ.

ಎಲ್ಲೆಲ್ಲಿ ಹಾದುಹೋಗಲಿದೆ ಎಕ್ಸ್​​ಪ್ರೆಸ್​ ವೇ

ನಿರ್ಮಾಣ ಹಂತದಲ್ಲಿರುವ ಎಕ್ಸ್‌ಪ್ರೆಸ್‌ ವೇ ಅಸ್ತಿತ್ವದಲ್ಲಿರುವ ಎರಡು ಹೆದ್ದಾರಿಗಳ ನಡುವೆ ಹಾದುಹೋಗಲಿದೆ. ಎಕ್ಸ್‌ಪ್ರೆಸ್‌ ವೇಯ ಎರಡು ಕಡೆಯ ಗಮ್ಯ ಸ್ಥಳ ಬೆಂಗಳೂರಿನ ಹೊರವಲಯದಲ್ಲಿರುವ ಹೊಸಕೋಟೆ ಮತ್ತು ಚೆನ್ನೈನ ಹೊರಗಿನ ಶ್ರೀಪೆರಂಬದೂರು ಆಗಿರಲಿವೆ. ಮಾಲೂರು, ಬಂಗಾರಪೇಟೆ, ಕೋಲಾರ, ವೆಂಕಟಗಿರಿ ಕೋಟಾ, ಪಲಮನೇರ್, ಬಂಗಾರುಪಾಲೆಂ, ಚಿತ್ತೂರು ಮತ್ತು ರಾಣಿಪೇಟೆ ಮೂಲಕ ಎಕ್ಸ್‌ಪ್ರೆಸ್‌ವೇ ಹಾದು ಹೋಗಲಿದೆ ಎಂದು ‘ನ್ಯೂಸ್ 9’ ವರದಿ ತಿಳಿಸಿದೆ.

ಇದನ್ನೂ ಓದಿ: Bengaluru Mysuru Expressway: ಎಕ್ಸ್​ಪ್ರೆಸ್​ ವೇಯಲ್ಲಿ ಬೀಳುತ್ತಿರುವ ವಿದ್ಯುತ್ ಕಂಬಗಳು; ಪ್ರಯಾಣಿಕರಿಗೆ ಆತಂಕ

ಎಕ್ಸ್‌ಪ್ರೆಸ್‌ ವೇ ನಿರ್ಮಾಣಕ್ಕೆ ತಗಲುವ ಒಟ್ಟಾರೆ ವೆಚ್ಚವನ್ನು 17,000 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಬೆಂಗಳೂರು-ಮಾಲೂರು ವಿಭಾಗಕ್ಕೆ ಮಾತ್ರ 1,160 ಕೋಟಿ ರೂಪಾಯಿ ವೆಚ್ಚವಾಗಲಿದೆ. ಇದಕ್ಕೆ 2022 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಡಿಪಾಯ ಹಾಕಿದ್ದರು.

ಪ್ರವೇಶ ನಿಯಂತ್ರಿತ, ಸಿಗ್ನಲ್ ಮುಕ್ತ ಎಕ್ಸ್​​ಪ್ರೆಸ್ ವೇ

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಮೂರು ಹಂತಗಳಲ್ಲಿ ಮತ್ತು 10 ಪ್ಯಾಕೇಜ್‌ಗಳಲ್ಲಿ ಎಕ್ಸ್​​ಪ್ರೆಸ್ ವೇ ನಿರ್ಮಿಸಲು ಉದ್ದೇಶಿಸಿತ್ತು. ಪ್ರವೇಶ ನಿಯಂತ್ರಿತ, ಸಿಗ್ನಲ್ ಮುಕ್ತ, ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇ ಅನ್ನು 2024 ರ ಆಗಸ್ಟ್ ಒಳಗೆ ಪೂರ್ಣಗೊಳಿಸಲು ಯೋಜಿಸಲಾಗಿತ್ತು. ಆದಾಗ್ಯೂ, ಯೋಜನೆಗೆ ಹೆಚ್ಚಿನ ಆಧ್ಯತೆ ನೀಡಲಾಗಿದ್ದು, 2024 ರ ಮಾರ್ಚ್ ಒಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ವರದಿ ತಿಳಿಸಿದೆ.

ಕರ್ನಾಟಕದಲ್ಲಿ ರಫ್ತು ಚಟುವಟಿಕೆಗೆ ಸಿಗಲಿದೆ ಉತ್ತೇಜನ

ದಿನಕ್ಕೆ ಸುಮಾರು 45,000 ದಿಂದ 60,000 ಪ್ರಯಾಣಿಕ ಕಾರುಗಳ ಸಂಚಾರ ಸಾಮರ್ಥ್ಯವನ್ನು ಎಕ್ಸ್‌ಪ್ರೆಸ್‌ ವೇ ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಮೂರು ರಾಜ್ಯಗಳಲ್ಲಿ ಕೈಗಾರಿಕಾ ಅಭಿವೃದ್ಧಿ ಮತ್ತು ವಾಣಿಜ್ಯ ಚಟುವಟಿಕೆಗಳ ಉತ್ತೇಜನಕ್ಕೆ ಇದು ಪೂರಕವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಹೆಚ್ಚಿನ ಮೌಲ್ಯದ ಕೈಗಾರಿಕಾ ಉತ್ಪಾದನೆ ಮತ್ತು ಉದ್ಯೋಗದ ಸೃಷ್ಟಿಗೆ ಎಕ್ಸ್​ಪ್ರೆಸ್ ವೇ ಕೊಡುಗೆ ನೀಡಲಿದೆ. ಕೆಲವೇ ಗಂಟೆಗಳಲ್ಲಿ ಚೆನ್ನೈ ಬಂದರಿನೊಂದಿಗೆ ಬೆಂಗಳೂರನ್ನು ಸಂಪರ್ಕಿಸುವುದರಿಂದ ಕರ್ನಾಟಕದಲ್ಲಿ ರಫ್ತು ಚಟುವಟಿಕೆಗೆ ಉತ್ತೇಜನ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ವರದಿ ತಿಳಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:21 pm, Fri, 28 July 23