ಮಣ್ಣೆತ್ತಿನ ಅಮಾವಾಸ್ಯೆ ಎಂದರೇನು? ಮಣ್ಣಿನಿಂದ ಮಾಡಿದ ಎತ್ತುಗಳ ಪೂಜೆಗಿರುವ ಮಹತ್ವದ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕು

| Updated By: preethi shettigar

Updated on: Jul 09, 2021 | 11:43 AM

ರೈತರಿಗೆ ಎತ್ತುಗಳು ಕಣ್ಣುಗಳಿದ್ದಂತೆ. ಮತ್ತೊಂದಡೆ ಮಣ್ಣು ಕೂಡಾ ದೇವ ಸ್ವರೂಪಿ. ಎತ್ತುಗಳು ಜಮೀನಿನಲ್ಲಿ ರೈತನಿಗಾಗಿ ಹಗಲಿರಳು ದುಡಿದರೆ, ಮತ್ತೊಂದಡೆ ಭೂತಾಯಿ ರೈತನಿಗೆ ಅನ್ನ ನೀಡುತ್ತಾಳೆ. ಹೀಗಾಗಿ ಮಣ್ಣು ಮತ್ತು ಎತ್ತುಗಳನ್ನು ರೈತರು ಪೂಜನೀಯ ಭಾವದಿಂದ ಕಾಣುತ್ತಾರೆ. ಅದರಲ್ಲೂ ಕೂಡಾ ಮುಂಗಾರು ಮಳೆ ಪ್ರಾರಂಭದ ನಂತರ ಬರುವ ಕಾರ ಹುಣ್ಣಿಮೆ ಮತ್ತು ಮಣ್ಣೆತ್ತಿನ ಅಮಾವಾಸ್ಯೆಯನ್ನು ರೈತರು ಸಂಭ್ರಮದಿಂದ ಆಚರಿಸುತ್ತಾರೆ. ತಮ್ಮ ನೋವು ನಲಿವುಗಳನ್ನು ಬದಿಗಿಟ್ಟು, ಎತ್ತುಗಳನ್ನು ಪೂಜಿಸುತ್ತಾರೆ.

ಮಣ್ಣೆತ್ತಿನ ಅಮಾವಾಸ್ಯೆ ಎಂದರೇನು? ಮಣ್ಣಿನಿಂದ ಮಾಡಿದ ಎತ್ತುಗಳ ಪೂಜೆಗಿರುವ ಮಹತ್ವದ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕು
ಮಣ್ಣಿನಿಂದ ಮಾಡಿದ ಎತ್ತುಗಳು
Follow us on

ಕಲಬುರಗಿ: ಭಾರತ ದೇಶದಲ್ಲಿ ವಿವಿಧ ಭಾಗದಲ್ಲಿ ವಿವಿಧ ರೀತಿಯ ಸಂಪ್ರದಾಯಗಳನ್ನು, ಹಬ್ಬಗಳನ್ನು ಜನರು ಆಚರಣೆ ಮಾಡುತ್ತಾ ಬಂದಿದ್ದಾರೆ. ಅದರಲ್ಲೂ ರೈತ ಸಮುದಾಯ ಮಣ್ಣು ಮತ್ತು ತಮ್ಮ ಜಾನುವಾರುಗಳನ್ನು ಪ್ರೀತಿಯಿಂದ ಕಾಣುತ್ತಾರೆ. ಹೀಗಾಗಿ ಅವುಗಳ ಸುತ್ತಲೇ ಅನೇಕ ಹಬ್ಬಗಳು ಬೆಸೆದುಕೊಂಡಿವೆ. ಅಲ್ಲದೇ ಮಣ್ಣು ಮತ್ತು ಮಾನವನಿಗೆ ಅವಿನಾಭಾವ ಸಂಬಂಧ. ಅದರಲ್ಲೂ ರೈತರಿಗೆ ಮಣ್ಣಿನ ಮೇಲೆ ಇನ್ನಿಲ್ಲದ ಒಲವು. ಹೀಗಾಗಿ ಮಣ್ಣನ್ನು ಕೂಡಾ ರೈತರು ದೇವ ಸ್ವರೂಪಿಯಾಗಿ ಕಾಣುತ್ತಾರೆ. ಅದರಲ್ಲೂ ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದ ಭಾಗದಲ್ಲಿ ರೈತರಿಗೆ ಎತ್ತುಗಳು ಎರಡು ಕಣ್ಣುಗಳಿದ್ದಂತೆ. ಹೀಗಾಗಿ ಕಾರ ಹುಣ್ಣಿಮೆಯಂದು ಎತ್ತುಗಳಿಗೆ ಸಿಂಗರಿಸಿ ಪೂಜೆ ಮಾಡುವ ರೈತರು, ಮಣ್ಣೆತ್ತಿನ ಅಮಾವಾಸ್ಯೆ ದಿನ ಕೂಡಾ ಮಣ್ಣಿನಿಂದ ಎತ್ತುಗಳನ್ನು ಮಾಡಿ, ಅವುಗಳಿಗೆ ಪೂಜೆ ಮಾಡುವ ಸಂಪ್ರದಾಯವನ್ನು ಅನಾದಿ ಕಾಲದಿಂದಲೂ ಮಾಡಿಕೊಂಡು ಬಂದಿದ್ದಾರೆ. ಕೊರೊನಾ ಎರಡನೇ ಅಲೆ ಕೊಂಚ ಸುಧಾರಿಸಿರುವುದರಿಂದ ಮಣ್ಣೆತ್ತಿನ ಅಮಾವಾಸ್ಯೆ ಸಂಭ್ರಮ ಇದೀಗ ಕಲಬುರಗಿಯಲ್ಲಿ ಜೋರಾಗಿ ನಡೆಯಲಿದೆ.

ಎನಿದು ಮಣ್ಣೆತ್ತಿನ ಅಮಾವಾಸ್ಯೆ?
ಕಾರ ಹುಣ್ಣಿಮೆಯ ನಂತರ ಬರುವುದೇ ಮಣ್ಣೆತ್ತಿನ ಅಮಾವಾಸ್ಯೆ. ಮಣ್ಣೆತ್ತಿನ ಅಮಾವಾಸ್ಯೆಯಂದು ರೈತರು ಹೊಲಕ್ಕೆ ಹೋಗಿ, ಜಿಗುಟಾಗಿರುವ ಮಣ್ಣನ್ನು ಮನೆಗೆ ತಂದು, ಮನೆಯಲ್ಲಿ ಮಣ್ಣಿನಿಂದ ಜೋಡಿ ಎತ್ತುಗಳನ್ನು ಮಾಡುತ್ತಾರೆ. ಬಳಿಕ ಮಣ್ಣಿನ ಎತ್ತುಗಳಿಗೆ ಸಿಂಗಾರ ಮಾಡುತ್ತಾರೆ. ಕೆಲವರು ಬಣ್ಣ ಹಚ್ಚಿದರೆ, ಇನ್ನು ಕೆಲವರು ಅಲಂಕಾರಿಕ ವಸ್ತುಗಳನ್ನು ಹಚ್ಚಿ, ಅವುಗಳಿಗೆ ಸಿಂಗಾರ ಮಾಡುತ್ತಾರೆ. ನಂತರ ಮನೆಯ ದೇವರ ಕೋಣೆಯಲ್ಲಿಟ್ಟು ಅದನ್ನು ಪೂಜೆ ಮಾಡುತ್ತಾರೆ. ನಂತರ ಕೆಲವರು ಗ್ರಾಮದ ಹನಮಂತ ದೇವರು, ಗ್ರಾಮ ದೇವತೆಯ ದೇವಸ್ಥಾನಗಳಿಗೆ ಮಣ್ಣಿನ ಎತ್ತುಗಳನ್ನು ತೆಗೆದುಕೊಂಡು ಹೋಗಿ ಪೂಜೆ ಮಾಡಿಕೊಂಡು ಬರುತ್ತಾರೆ. ಪೂಜೆ ಮಾಡಿದ ನಂತರ ಮಣ್ಣಿನ ಎತ್ತುಗಳಿಗೆ, ಹೋಳಿಗೆ, ಕಡಬಿನಿಂದ ಮಾಡಿದ ಆಹಾರವನ್ನು ಎಡೆ ಇಡುತ್ತಾರೆ. ಬಳಿಕ ತಮ್ಮ ಮನೆಯ ಹಿತ್ತಲಲ್ಲಿ ಮತ್ತು ಜಮೀನಿನಲ್ಲಿ ಮಣ್ಣಿನ ಎತ್ತುಗಳನ್ನು ತೆಗೆದುಕೊಂಡು ಹೋಗಿ ಇಡುತ್ತಾರೆ. ಆ ಮೂಲಕ ಭೂ ತಾಯಿ ಮತ್ತು ಎತ್ತುಗಳು ನಮ್ಮನ್ನು ಕಾಪಾಡಿ ಎಂದು ಪ್ರಾರ್ಥನೆ ಮಾಡುತ್ತಾರೆ.

ಎತ್ತುಗಳು ರೈತರ ಜೀವಾಳ
ರೈತರಿಗೆ ಎತ್ತುಗಳು ಕಣ್ಣುಗಳಿದ್ದಂತೆ. ಮತ್ತೊಂದಡೆ ಮಣ್ಣು ಕೂಡಾ ದೇವ ಸ್ವರೂಪಿ. ಎತ್ತುಗಳು ಜಮೀನಿನಲ್ಲಿ ರೈತನಿಗಾಗಿ ಹಗಲಿರಳು ದುಡಿದರೆ, ಮತ್ತೊಂದಡೆ ಭೂತಾಯಿ ರೈತನಿಗೆ ಅನ್ನ ನೀಡುತ್ತಾಳೆ. ಹೀಗಾಗಿ ಮಣ್ಣು ಮತ್ತು ಎತ್ತುಗಳನ್ನು ರೈತರು ಪೂಜನೀಯ ಭಾವದಿಂದ ಕಾಣುತ್ತಾರೆ. ಅದರಲ್ಲೂ ಕೂಡಾ ಮುಂಗಾರು ಮಳೆ ಪ್ರಾರಂಭದ ನಂತರ ಬರುವ ಕಾರ ಹುಣ್ಣಿಮೆ ಮತ್ತು ಮಣ್ಣೆತ್ತಿನ ಅಮಾವಾಸ್ಯೆಯನ್ನು ರೈತರು ಸಂಭ್ರಮದಿಂದ ಆಚರಿಸುತ್ತಾರೆ. ತಮ್ಮ ನೋವು ನಲಿವುಗಳನ್ನು ಬದಿಗಿಟ್ಟು, ಎತ್ತುಗಳನ್ನು ಪೂಜಿಸುತ್ತಾರೆ. ಕಾರ ಹುಣ್ಣಿಮೆಯ ಸಮಯದಲ್ಲಿ ಎತ್ತುಗಳನ್ನು ಪೂಜಿಸಿದರೆ ಮಣ್ಣೆತ್ತಿನ ಅಮಾವಾಸ್ಯೆಯಂದು ಮಣ್ಣಿನಿಂದ ಮಾಡಿದ ಎತ್ತುಗಳನ್ನು ಪೂಜಿಸುತ್ತಾರೆ.

ಇನ್ನು ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುವ ಅನೇಕ ಹಬ್ಬಗಳಿಗೂ ಮತ್ತು ಮಣ್ಣಿಗೂ ಸಂಬಂಧವಿದೆ. ಮಣ್ಣೆತ್ತಿನ ಅಮಾವಾಸ್ಯೆಯಂದು ಮಣ್ಣಿನಿಂದ ಎತ್ತುಗಳನ್ನು ಮಾಡಿ ಪೂಜಿಸುವ ಜನರು, ನಂತರ ನಾಗರ ಪಂಚಮಿಗೆ ಮಣ್ಣಿನಿಂದ ನಾಗರ ಹಾವನ್ನು ಮಾಡಿ ಪೂಜಿಸುತ್ತಾರೆ. ಇದಾದ ನಂತರ ಗೌರಿ ಹುಣ್ಣಿಮೆಗೆ ಮಣ್ಣಿನ ಗೌರಿಯನ್ನು ಮಾಡುತ್ತಾರೆ. ಗಣೇಶ ಚತುರ್ಥಿಯಂದು ಮಣ್ಣಿನ ಗಣೇಶನನ್ನು ಮಾಡಿ, ಪೂಜಿಸುತ್ತಾರೆ. ಬಳಿಕ ಮಣ್ಣಿನಿಂದ ಮಾಡಿದ ಜೋಕಮಾರನನ್ನು ಮಾಡಿ, ಚರಗವನ್ನು ಚೆಲ್ಲುವ ಮೂಲಕ ಆ ವರ್ಷದ ಮಣ್ಣಿನ ಪೂಜೆಯನ್ನು ಮುಗಿಸುತ್ತಾರೆ.

ಮಾರುಕಟ್ಟೆಗೆ ಲಗ್ಗೆಯಿಟ್ಟ ಬಣ್ಣ ಬಣ್ಣದ ಎತ್ತುಗಳು
ಗ್ರಾಮೀಣ ಭಾಗದಲ್ಲಿನ ರೈತರು ಇಂದಿಗೂ ಕೂಡಾ ಜಮೀನಿನಲ್ಲಿರುವ ಮಣ್ಣನ್ನು ತಂದು, ಅದರಿಂದ ಎತ್ತುಗಳನ್ನು ಮಾಡಿ, ಮನೆಯಲ್ಲಿಟ್ಟು ಪೂಜೆ ಮಾಡುತ್ತಾರೆ. ಅಂತೆಯೇ ನಗರದಲ್ಲಿರುವ ಅನೇಕರು ಕೂಡ ಮಣ್ಣೆತ್ತಿನ ಅಮಾವಾಸ್ಯೆಯಂದು ಎತ್ತುಗಳನ್ನು ಪೂಜೆ ಮಾಡುತ್ತಾರೆ. ಆದರೆ ನಗರದಲ್ಲಿ ಮಣ್ಣು ತಂದು ಅದರಿಂದ ಎತ್ತುಗಳನ್ನು ಮಾಡಲು ಆಗುವುದಿಲ್ಲ. ಅಲ್ಲದೇ ಅಲ್ಲಿ ಮಣ್ಣು ಕೂಡಾ ಹಳ್ಳಿಯಲ್ಲಿ ಸಿಕ್ಕಂತೆ ಸಿಗುವುದಿಲ್ಲ. ಹೀಗಾಗಿ ಮಾರುಕಟ್ಟೆಯಲ್ಲಿ  ಬಣ್ಣ ಬಣ್ಣದ ಮಣ್ಣಿನ ಎತ್ತುಗಳನ್ನು ಮಾರಾಟ ಮಾಡಲಾಗುತ್ತದೆ. ಜನರು ಮಾರುಕಟ್ಟೆಯಲ್ಲಿ ಸಿಗುವ ಎತ್ತುಗಳನ್ನು ತೆಗೆದುಕೊಂಡು ಹೋಗಿ ಮನೆಯಲ್ಲಿಟ್ಟು ಪೂಜೆ ಮಾಡುತ್ತಾರೆ. ಅನೇಕ ಕುಂಬಾರರು ಈ ಸಮಯದಲ್ಲಿ ಮಣ್ಣಿನ ಎತ್ತುಗಳನ್ನು ಸಿದ್ಧ ಮಾಡಿ ಮಾರಾಟ ಮಾಡುತ್ತಾರೆ. ಅದರಂತೆ ಇಂದು ಕಲಬುರಗಿ ನಗರದಲ್ಲಿ ಕೂಡ ಮಣ್ಣಿನ ಎತ್ತುಗಳ ಮಾರಾಟ ಜೋರಾಗಿ ನಡೆಯಿತು. ಅನೇಕರು 50 ರಿಂದ 100 ರೂಪಾಯಿ ನೀಡಿ, ಮಣ್ಣಿನ ಸುಂದರ ಎತ್ತುಗಳನ್ನು ತೆಗೆದುಕೊಂಡು ಹೋಗಿ ಪೂಜೆ ಮಾಡಿದ್ದಾರೆ.

ಇಷ್ಟು ದಿನ ಜಿಲ್ಲೆಯಲ್ಲಿ ಕೊರೊನಾದ ಕಾಟ ಹೆಚ್ಚಾಗಿತ್ತು. ಹೀಗಾಗಿ ಅನೇಕ ಹಬ್ಬಗಳನ್ನು ಮಾಡಲು ರೈತರಿಗೆ ಆಗಿರಲಿಲ್ಲ. ಆದರೆ ಇದೀಗ ಜಿಲ್ಲೆಯಲ್ಲಿ ನಿಧಾನವಾಗಿ ಕೊರೊನಾ ಕಡಿಮೆಯಾಗಿದೆ. ಹೀಗಾಗಿ ರೈತ ಸಮುದಾಯ ಸಂಭ್ರಮದಿಂದ ಹಬ್ಬ ಮಾಡುತ್ತಿದ್ದಾರೆ.

ಪುರಾತನ ಕಾಲದಿಂದಲೂ ಕೂಡ ರೈತ ಸಮುದಾಯ ಮಣ್ಣೆತ್ತಿನ ಅಮಾವಾಸ್ಯೆಯನ್ನು ಸಂಭ್ರಮದಿಂದ ಆಚರಿಸುತ್ತಾ ಬಂದಿದ್ದಾರೆ. ಇದೀಗ ಹಬ್ಬಗಳು ಕಳೆ ಕಳೆದುಕೊಂಡರು ಕೂಡಾ, ಇನ್ನು ಸಂಪ್ರದಾಯಗಳು ನಿಂತಿಲ್ಲಾ. ಮಣ್ಣೆತ್ತಿನ ಅಮಾವಾಸ್ಯೆಯಂದು ಮಣ್ಣಿನ ಎತ್ತುಗಳನ್ನು ಪೂಜಿಸಿ, ರೈತರು ಕೃತಾರ್ಥರಾಗುತ್ತಾರೆ ಎಂದು ಗ್ರಾಮಸ್ಥರಾದ ಗುರು ಪಟ್ಟಣ ಶೆಟ್ಟಿ ಹೇಳಿದ್ದಾರೆ.

ವರದಿ: ಸಂಜಯ್ ಚಿಕ್ಕಮಠ 

ಇದನ್ನೂ ಓದಿ:
ಕಾರ ಹುಣ್ಣಿಮೆಗೆ ಕೊರೊನಾ ಕರಿನೆರಳು, ಸರಳವಾಗಿ ಆಚರಿಸಿದ ರೈತರು

ಎತ್ತುಗಳಿಗೆ ಕೃತಜ್ಞತೆ ಹೇಳುವ ಕಾರ ಹುಣ್ಣಿಮೆ; ಏನಿದರ ವಿಶೇಷತೆ?

Published On - 11:24 am, Fri, 9 July 21