ಕಾರ ಹುಣ್ಣಿಮೆಗೆ ಕೊರೊನಾ ಕರಿನೆರಳು, ಸರಳವಾಗಿ ಆಚರಿಸಿದ ರೈತರು
ಕಲಬುರಗಿ: ಕಾರ ಹುಣ್ಣಿಮೆ. ಇದು ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ರೈತರು ಸಂಭ್ರಮದಿಂದ ಆಚರಿಸುವ ಹಬ್ಬ. ಬೇಸಿಗೆ ಕಾಲ ಮುಗಿದು, ಮುಂಗಾರು ಹಂಗಾಮು ಪ್ರಾರಂಭವಾಗುವ ಹೊತ್ತಿಗೆ ಬರುವ ಕಾರ ಹುಣ್ಣಿಮೆ ರೈತರ ಮೊದಲ ಹಬ್ಬ ಅಂತಲೇ ಕರೆಯಲಾಗುತ್ತದೆ. ಯಾಕಂದ್ರೆ ಬೇಸಿಗೆಯಲ್ಲಿ ಎತ್ತುಗಳಿಂದ ಭೂಮಿಯಲ್ಲಿ ಉಳುಮೆ ಮಾಡುವ ರೈತರು ನಂತರ ಕಾರ ಹುಣ್ಣಿಮೆ ಸಂದರ್ಭದಲ್ಲಿ ಅವುಗಳಿಗೆ ವಿಶ್ರಾಂತಿಯನ್ನು ನೀಡಿ, ನಂತರ ಮುಂಗಾರು ಮಳೆಯಾಗುತ್ತಿದ್ದಂತೆ ಮತ್ತೆ ಕೃಷಿಯಲ್ಲಿನ ಉಳುಮೆಗೆ ಎತ್ತುಗಳಿಗೆ ಗಳೆ ಕಟ್ಟುತ್ತಾರೆ. ಹೀಗಾಗಿ ಕಾರ ಹುಣ್ಣಿಮೆಯನ್ನು ಪ್ರತಿ […]
ಕಲಬುರಗಿ: ಕಾರ ಹುಣ್ಣಿಮೆ. ಇದು ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ರೈತರು ಸಂಭ್ರಮದಿಂದ ಆಚರಿಸುವ ಹಬ್ಬ. ಬೇಸಿಗೆ ಕಾಲ ಮುಗಿದು, ಮುಂಗಾರು ಹಂಗಾಮು ಪ್ರಾರಂಭವಾಗುವ ಹೊತ್ತಿಗೆ ಬರುವ ಕಾರ ಹುಣ್ಣಿಮೆ ರೈತರ ಮೊದಲ ಹಬ್ಬ ಅಂತಲೇ ಕರೆಯಲಾಗುತ್ತದೆ.
ಯಾಕಂದ್ರೆ ಬೇಸಿಗೆಯಲ್ಲಿ ಎತ್ತುಗಳಿಂದ ಭೂಮಿಯಲ್ಲಿ ಉಳುಮೆ ಮಾಡುವ ರೈತರು ನಂತರ ಕಾರ ಹುಣ್ಣಿಮೆ ಸಂದರ್ಭದಲ್ಲಿ ಅವುಗಳಿಗೆ ವಿಶ್ರಾಂತಿಯನ್ನು ನೀಡಿ, ನಂತರ ಮುಂಗಾರು ಮಳೆಯಾಗುತ್ತಿದ್ದಂತೆ ಮತ್ತೆ ಕೃಷಿಯಲ್ಲಿನ ಉಳುಮೆಗೆ ಎತ್ತುಗಳಿಗೆ ಗಳೆ ಕಟ್ಟುತ್ತಾರೆ. ಹೀಗಾಗಿ ಕಾರ ಹುಣ್ಣಿಮೆಯನ್ನು ಪ್ರತಿ ವರ್ಷ ರೈತರು ಸಂಭ್ರಮದಿಂದ ಆಚರಿಸುತ್ತಿದ್ದರು.
ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಸೇರಿದಂತೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಮತ್ತು ಇಡೀ ಉತ್ತರ ಕರ್ನಾಟಕ ಭಾಗದಲ್ಲಿ ರೈತರು ಕಾರ ಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸುತ್ತಿದ್ದರು. ಆದ್ರೆ ಈ ಭಾರಿಯ ಕಾರ ಹುಣ್ಣಿಮೆಗೆ ಕೊರೊನಾದ ಕರಿನೆರಳು ಬಿದ್ದಿದೆ.
ಏನಿದು ಕಾರ ಹುಣ್ಣಿಮೆ: ದೇಶಕ್ಕೆ ರೈತ ಬೆನ್ನೆಲುಬಾದ್ರೆ, ರೈತರಿಗೆ ಮಾತ್ರ ಎತ್ತುಗಳು ಬೆನ್ನೆಲಬು. ಹೌದು ಎತ್ತುಗಳು ರೈತರ ಬೆನ್ನೆಲುಬಾಗಿ ಕೃಷಿ ಭೂಮಿಯಲ್ಲಿ ದುಡಿಯುತ್ತವೆ. ಯಂತ್ರಗಳು ಇರಲಿ ಇರದಿರಲಿ, ರೈತರ ಜಮೀನಿನಲ್ಲಿ ಅತಿ ಹೆಚ್ಚು ದುಡಿಯುವವು ಇದೇ ಎತ್ತುಗಳು. ಇತ್ತೀಚೆಗೆ ಕೃಷಿಯಲ್ಲಿ ಯಂತ್ರಗಳ ಬಳಕೆ ಹೆಚ್ಚಾಗುತ್ತಿದೆ. ಆದ್ರೂ ಕೂಡಾ ಗ್ರಾಮೀಣ ಭಾಗದಲ್ಲಿ ಇಂದಿಗೂ ಕೃಷಿಗೆ ಎತ್ತುಗಳೇ ಆಧಾರ.
ಹೀಗಾಗಿ ರೈತರು ಎತ್ತುಗಳನ್ನು ಪೂಜನೀಯ ಭಾವದಿಂದ ಕಾಣುತ್ತಾರೆ. ಪ್ರತಿ ವರ್ಷ ರೈತರು ಉಳುಮೆಗೆ ಎತ್ತುಗಳನ್ನು ಬಳಸುತ್ತಾರೆ. ಬೇಸಿಗೆಯಲ್ಲಿ ಸುಡು ಬಿಸಿಲಿನಲ್ಲಿ ಎತ್ತುಗಳಿಂದ ಉಳುಮೆ ಮಾಡುವ ರೈತರು, ಕಾರ ಹುಣ್ಣಿಮೆಯ ದಿನದಂದು ಎತ್ತುಗಳಿಗೆ ತಮ್ಮ ಕೃತಜ್ಞತೆಯನ್ನು ಸಮರ್ಪಿಸುತ್ತಾರೆ. ಅವುಗಳನ್ನು ಪೂಜೆ ಮಾಡಿ, ಅವುಗಳ ಸೇವೆಯನ್ನು ಸ್ಮರಿಸುತ್ತಾರೆ. ಹೌದು ಕಾರ ಹುಣ್ಣಿಮೆಯಂದು ರೈತರು ಎತ್ತುಗಳ ಮೈ ತೊಳೆದು, ಅವುಗಳಿಗೆ ಬಣ್ಣ ಹಚ್ಚುತ್ತಾರೆ. ಅವುಗಳ ಕೊರಳಲ್ಲಿ ಗೆಜ್ಜೆ ಸರ ಸೇರಿದಂತೆ ವಿವಿಧ ಅಲಂಕಾರಿಕ ವಸ್ತುಗಳನ್ನು ಹಾಕುತ್ತಾರೆ.
ಹೋಳಿಗೆ ಸೇರಿದಂತೆ ವಿವಿಧ ರೀತಿ ಸಿಹಿ ಅಡುಗೆಯನ್ನು ಮನೆಯಲ್ಲಿ ಮಾಡ್ತಾರೆ. ತಮ್ಮ ಮನೆಯಲ್ಲಿರುವ ಎತ್ತುಗಳಿಗೆ ಹೋಳಿಗೆ ಸೇರಿದಂತೆ ಸಿಹಿ ತಿನಿಸುಗಳನ್ನು ತಿನ್ನಿಸುತ್ತಾರೆ. ನಂತರ ದೇವಸ್ಥಾನಗಳಿಗೆ ಎತ್ತುಗಳನ್ನು ಓಯ್ದು, ಕರಿ ಹರಿದು, ಎತ್ತುಗಳಿಗೆ ಏನು ತೊಂದರೆಯಾಗದಂತೆ ದೇವರಲ್ಲಿ ಸ್ಮರಿಸಿ ಬರ್ತಾರೆ. ಕಾರ ಹುಣ್ಣಿಮೆಯ ದಿನ ಎತ್ತುಗಳನ್ನು ಪೂಜನೀಯ ಭಾವದಿಂದ ರೈತರು ಕಾಣುತ್ತಾರೆ. ಅನೇಕ ಕಡೆ ಗ್ರಾಮದಲ್ಲಿ ಎತ್ತುಗಳ ಮೆರವಣಿಗೆ ಮಾಡಲಾಗುತ್ತದೆ. ಅನೇಕ ಕಡೆ ಕಾರ ಹುಣ್ಣಿಮೆಯ ಸಂದರ್ಭದಲ್ಲಿ ಎತ್ತಿನ ಬಂಡಿಯನ್ನು ಓಡಿಸಲಾಗುತ್ತದೆ. ಕೊಬ್ಬರಿ ಹೋರಿಯನ್ನು ಓಡಿಸುವ ಸಂಪ್ರದಾಯವಿದೆ. ರೈತರು ಎತ್ತುಗಳಿಗೆ ಪೂಜೆ ಮಾಡಿದ್ರೆ, ಗೌಳಿ ಸಮಾಜದವರು ತಮ್ಮ ಜೀವನಕ್ಕೆ ಆಧಾರವಾಗಿರುವ ಎಮ್ಮೆ, ಹಸುಗಳನ್ನು ಪೂಜಿಸುತ್ತಾರೆ. ರೈತರು ಕೂಡಾ ಎತ್ತುಗಳ ಜೊತೆ ತಮ್ಮ ಮನೆಯಲ್ಲಿರುವ ಬೇರೆ ರಾಸುಗಳಿಗೆ ಕೂಡಾ ಪೂಜೆ ಮಾಡುತ್ತಾರೆ. ಸಿಹಿ ತಿನಿಸುಗಳನ್ನು ತಿನ್ನಿಸುತ್ತಾರೆ.
ಕಾರ ಹುಣ್ಣಿಮೆಗೆ ಕೊರೊನಾ ಕರಿನೆರಳು: ಹೌದು ಪ್ರತಿ ವರ್ಷ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಕಾರ ಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿತ್ತು. ಇಡೀ ಗ್ರಾಮಕ್ಕೆ ಗ್ರಾಮವೇ ಸೇರಿಕೊಂಡು ಹಬ್ಬವನ್ನು ಮಾಡಲಾಗುತ್ತಿತ್ತು. ಆದ್ರೆ ಕಲಬುರಗಿಯಲ್ಲಿ ಈ ಬಾರಿ ಕೊರೊನಾದ ಅಟ್ಟಹಾಸ ಹೆಚ್ಚಾಗಿದೆ. ಕೇವಲ ಕಲಬುರಗಿ ಮಾತ್ರವಲ್ಲಾ, ಇಡೀ ರಾಜ್ಯದಲ್ಲಿ ಕೊರೊನಾ ರಣಕೇಕೆ ಹಾಕುತ್ತಿದೆ. ಅದರಲ್ಲೂ ಕಲಬುರಗಿಯಲ್ಲಿ ಅತಿ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಹೀಗಾಗಿ ಕಾರ ಹುಣ್ಣಿಮೆಯ ಸಂಭ್ರಮ ಗ್ರಾಮೀಣ ಭಾಗದಲ್ಲಿ ಕಡಿಮೆಯಾಗಿದೆ.
ರೈತರು ಸಂಭ್ರಮದಿಂದ ಹಬ್ಬ ಆಚರಿಸಲು ಸಿದ್ದರಿದ್ದರು ಕೂಡಾ ಕೊರೊನಾದ ಕರಿನೆರಳಿನಿಂದಾಗಿ ರೈತರು ಸರಳವಾಗಿ ಈ ಬಾರಿ ಕಾರ ಹುಣ್ಣಿಮೆಯನ್ನು ಆಚರಿಸಿದ್ದಾರೆ. ಮನೆಯಲ್ಲಿಯೇ ಎತ್ತುಗಳಿಗೆ ಪೂಜೆ ಮಾಡಿ ಸುಮ್ಮನಾಗಿದ್ದಾರೆ. ಅನೇಕ ಕಡೆ ಗ್ರಾಮಸ್ಥರು ಸೇರಿ ಹಬ್ಬ ಆಚರಿಸಲು ಜಿಲ್ಲಾಡಳಿತ ಪರವಾನಗಿಯನ್ನು ನೀಡಿಲ್ಲ. ಯಾಕಂದ್ರೆ ಕಲಬುರಗಿ ಜಿಲ್ಲೆಯ ಶಹಬಾದ್ ತಾಲೂಕಿನ ಭಂಕೂರು ಗ್ರಾಮದಲ್ಲಿ ಸುಪ್ರಸಿದ್ದ ಕಾರ ಹುಣ್ಣಿಮೆ ನಡೆಯುತ್ತಿತ್ತು. ಆದ್ರೆ ಈ ಬಾರಿ ಕೊರೊನಾದ ಹಿನ್ನೆಲೆಯಲ್ಲಿ ಕಾರ ಹುಣ್ಣಿಮೆ ಆಚರಣೆಗೆ ಅವಕಾಶವನ್ನು ಜಿಲ್ಲಾಡಳಿತ ನೀಡಿಲ್ಲ. ಮತ್ತೊಂದಡೆ ರೈತರು ಕೂಡಾ ಕೊರೊನಾದಿಂದಾಗಿ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಸರಳವಾಗಿ ಕಾರ ಹುಣ್ಣಿಮೆಯನ್ನು ಆಚರಿಸಿದ್ದಾರೆ.
Published On - 7:57 am, Sat, 6 June 20