ರಾಮನಗರ: ನಾಳೆ(ಜುಲೈ 19) ಮತ್ತು ಜುಲೈ 22ರಂದು ನಡೆಯಲಿರುವ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಕೊನೆ ಘಳಿಗೆಯಲ್ಲೂ ಯಾವುದೇ ವಿದ್ಯಾರ್ಥಿಗೆ ಹಾಲ್ ಟಿಕೆಟ್ ಸಿಗದಿದ್ದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಂಪರ್ಕಿಸುವಂತೆ ರಾಮನಗರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಕಳೆದ ವರ್ಷಕ್ಕಿಂತ ಈ ವರ್ಷ ಪರೀಕ್ಷಾ ಕೇಂದ್ರಗಳ ಸಂಖ್ಯೆ ಹೆಚ್ಚಳ ಮಾಡಿದ್ದೇವೆ . ಪರೀಕ್ಷಾ ಕೊಠಡಿಗಳ ಸಂಖ್ಯೆ ಹಾಗೂ ಪರೀಕ್ಷಾ ಸಿಬ್ಬಂದಿಗಳ ಸಂಖ್ಯೆ ಹೆಚ್ಚಳವಾಗಿದೆ. ನಮ್ಮ ಪರೀಕ್ಷಾ ಕೇಂದ್ರಗಳು ಕೇವಲ ಪರೀಕ್ಷಾ ಕೇಂದ್ರಗಳಲ್ಲ ಸುರಕ್ಷಾ ಕೇಂದ್ರಗಳು. ಮಕ್ಕಳು ಯಾವುದೇ ಆತಂಕವಿಲ್ಲದೇ ಬಂದು ಪರೀಕ್ಷೆ ಬರೆಯುತ್ತಾರೆ ವಿಶ್ವಾಸ ವ್ಯಕ್ತಪಡಿಸಿದರು.
ಗ್ರೀಷ್ಮಾ ಎಂಬ ವಿದ್ಯಾರ್ಥಿನಿಯದ್ದು ತಾಂತ್ರಿಕ ಸಮಸ್ಯೆ ಇತ್ತು. ಆಕೆ ಹತ್ತನೇ ತರಗತಿಗೆ ದಾಖಲಾಗಿರಲಿಲ್ಲ, ಪರೀಕ್ಷೆಗೆ ಅರ್ಜಿ ಹಾಕಿರಲಿಲ್ಲ. ಇಂತಹ ದೂರುಗಳು ಬಂದಲ್ಲಿ ಸಮಸ್ಯೆ ಬಗೆಹರಿಸಿದ್ದೇವೆ. ಶಾಲಾ ಹಾಗೂ ಕಾಲೇಜು ಆರಂಭದ ಬಗ್ಗೆ ಆಯುಕ್ತರ ನೇತೃತ್ವದಲ್ಲಿ ಕಾರ್ಯಪಡೆ ರಚಿಸಲಾಗಿದೆ. ಈ ತಿಂಗಳ ಕೊನೆಯಲ್ಲಿ ಹೇಗೆ ಶಾಲೆಗಳನ್ನು ಪ್ರಾರಂಭ ಮಾಡಬಹುದು, ಯಾವ ತರಗತಿಗಳನ್ನು ಪ್ರಾರಂಭ ಮಾಡಬಹುದು, ವಾರದಲ್ಲಿ ಎಷ್ಟು ದಿನ ತರಗತಿಗಳನ್ನು ಮಾಡಬೇಕು ಎಂಬ ವರದಿಯನ್ನು ಈ ಕಾರ್ಯಪಡೆ ನೀಡಲಿದೆ. ಅದರ ಆಧಾರದ ಮೇಲೆ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.
ಪರೀಕ್ಷೆ ನಡೆಸಲು ಸರ್ಕಾರ ಮತ್ತು ಶಿಕ್ಷಣ ಇಲಾಖೆ ಸರ್ವ ಸನ್ನದ್ಧವಾಗಿದೆ. ಆರೋಗ್ಯ ಇಲಾಖೆ ನೀಡಿರುವ ಮಾರ್ಗಸೂಚಿಯನ್ನು ಚಾಚೂತಪ್ಪದೇ ಪಾಲಿಸಲು ಕ್ರಮವಹಿಸಿದ್ದೇವೆ. ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಬಾರಿ 4,885 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, 73,066 ಕೊಠಡಿಗಳಲ್ಲಿ ಪರೀಕ್ಷೆಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.
ಇದನ್ನೂ ಓದಿ:
(SSLC Exams 2021 Education Minister Suresh Kumar says please contact BEO if any students did not have hall Ticket)