ಮಂತ್ರಾಲಯ ಮಠದ ಆಪ್ತ ಕಾರ್ಯದರ್ಶಿ ಸುಯಮೇಂದ್ರಾಚಾರ್ಯರು ಕೊರೊನಾದಿಂದ ನಿಧನ

|

Updated on: Apr 30, 2021 | 9:23 PM

ಸುಯಮೇಂದ್ರಾಚಾರ್ಯರು 2009 ನೇ ಸಾಲಿನಲ್ಲಿ ಶ್ರೀ ಮಠದ ಆಪ್ತ ಕಾರ್ಯದರ್ಶಿಯಾಗಿ ನೇಮಕವಾಗಿದ್ದರು. ಪ್ರವಾಹದಲ್ಲಿ ನಲುಗಿ ಹೋಗಿದ್ದ ಮಂತ್ರಾಲಯದಲ್ಲಿ ಅಭಿವೃದ್ದಿ ಪರ್ವ ನಡೆಸಿದ್ದರು.

ಮಂತ್ರಾಲಯ ಮಠದ ಆಪ್ತ ಕಾರ್ಯದರ್ಶಿ ಸುಯಮೇಂದ್ರಾಚಾರ್ಯರು ಕೊರೊನಾದಿಂದ ನಿಧನ
ಸುಯಮೇಂದ್ರಾಚಾರ್ಯರು
Follow us on

ರಾಯಚೂರು: ಕೊರೊನಾ ಸೋಂಕಿನಿಂದ ಮಂತ್ರಾಲಯ ಮಠದ ಆಪ್ತ ಕಾರ್ಯದರ್ಶಿ ಸುಯಮೇಂದ್ರಾಚಾರ್ಯರು ಮೃತಪಟ್ಟಿದ್ದಾರೆ. ನವದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದ್ದು ಟಿವಿ9ಗೆ ಮಠದ ಮ್ಯಾನೇಜರ್ ವೆಂಕಟೇಶಾಚಾರ್ಯ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಸುಯಮೇಂದ್ರಾಚಾರ್ಯರು 2009 ನೇ ಸಾಲಿನಲ್ಲಿ ಶ್ರೀ ಮಠದ ಆಪ್ತ ಕಾರ್ಯದರ್ಶಿಯಾಗಿ ನೇಮಕವಾಗಿದ್ದರು. ಪ್ರವಾಹದಲ್ಲಿ ನಲುಗಿ ಹೋಗಿದ್ದ ಮಂತ್ರಾಲಯದಲ್ಲಿ ಅಭಿವೃದ್ದಿ ಪರ್ವ ನಡೆಸಿದ್ದರು. ಅವರು ನವ ಮಂತ್ರಾಲಯ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

2009 ರಲ್ಲಿ ತುಂಗಭದ್ರ ನದಿ ಪ್ರವಾಹದ ಹೊಡೆತಕ್ಕೆ ಮಂತ್ರಾಲಯ ಮುಳುಗಿಹೋಗಿತ್ತು. 2011 ರಲ್ಲಿ ಸುಯಮೇಂದ್ರಾಚಾರ್ಯರು ಅಂದಿನ ಶ್ರೀಗಳ ನೇತೃತ್ವದಲ್ಲಿ ನಾಡಿನ ಉದ್ದಗಲಕ್ಕೂ ಪಾದಯಾತ್ರೆ ಮಾಡಿದ್ದರು. ಪಾದಯಾತ್ರೆಯಲ್ಲಿ ಸಂಗ್ರಹವಾಗಿದ್ದ ಸಂಪೂರ್ಣ ಹಣವನ್ನು ನವ ಮಂತ್ರಾಲಯ ನಿರ್ಮಾಣಕ್ಕೆ ಬಳಸಿದ್ದರು. 24 ಕೋಟಿಗೂ ಅಧಿಕ ವೆಚ್ಚದಲ್ಲಿ ಮಂತ್ರಾಲಯದಲ್ಲಿ ಅಭಿವೃದ್ಧಿ ಪರ್ವ ನಡೆಸಿದ್ದರು.

ಶ್ರೀಮಠದ ನೂತನ ಪ್ರವೇಶ ದ್ವಾರದಿಂದ ಹಿಡಿದು ಭಕ್ತರಿಗೆ ತಂಗಲು ಸಾವಿರಕ್ಕೂ ಹೆಚ್ಚು ವಸತಿ ಗೃಹಗಳನ್ನು ‌ನಿರ್ಮಾಣ ಮಾಡಿದ್ದರು. ರಾಯರ ಮೂಲ ಬೃಂದಾವನಕ್ಕೆ ಹೊಸ ಕಾಯಕಲ್ಪ ಒದಗಿಸಿದ್ದರು. ಚೆನ್ನೈ ಮೂಲದ ಶಿಲ್ಪಿಗಳ ಮೂಲಕ ರಾಯರ ಮೂಲ ಬೃಂದಾವನದ ಹೊರ ಭಾಗದ ಪ್ರಾಕಾರದ ನವ ನಿರ್ಮಾಣ ಮಾಡಿದ್ದರು.

ಸಾವಿರಾರು ಶ್ರಿಮಠದ ಸಿಬ್ಬಂದಿಗಳ ಖಾಯಂ ನೇಮಕಾತಿ ಮಾಡುವ ಮೂಲಕ ಶ್ರೀಮಠದ ಸಿಬ್ಬಂದಿಗಳ ಅಚ್ಚು ಮೆಚ್ಚಿನ ಆಪ್ತ ಕಾರ್ಯದರ್ಶಿ ಅನ್ನಿಸಿಕೊಂಡಿದ್ದರು. ಮಂತ್ರಾಲಯದ ಗೋಪುರಕ್ಕೆ ಚಿನ್ನದ ಲೇಪನ, ರಾಯರ ಮೂಲ ಬೃಂದಾವನಕ್ಕೆ ನವರತ್ನ ಖಚಿತವಾದ ಚಿನ್ನದ ಹೊದಿಕೆಯನ್ನು ಸಹ ನಿರ್ಮಾಣ ಮಾಡಿಸಿದ್ದು ಇವರ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಂತಿತ್ತು.

ಪ್ರವಾಹದ ನಂತರ ರಾಯಚೂರು ಮಂತ್ರಾಲಯದಿಂದ ಸಂಪರ್ಕ ಕಡಿತವೊಂಡಿದ್ದ ತುಂಗಭದ್ರ ನದಿಗೆ ಸ್ಟೀಲ್ ಬ್ರಿಜ್ ನಿರ್ಮಾಣ ಮಾಡುವ ವಿಚಾರದಲ್ಲಿ ಆಂಧ್ರ ಪ್ರದೇಶ ಮತ್ತು ಕರ್ನಾಟಕ ಸರ್ಕಾರದ ನಡುವೆ ಸಂಪರ್ಕದ ಕೊಂಡಿಯಾಗಿ ಕೆಲಸ ಮಾಡಿದ್ದರು. ಮಂಚಾಲಮ್ಮ ದೆವಸ್ಥಾನವನ್ನು ಹೊಸದಾಗಿ ನಿರ್ಮಿಸಿ ಮಂತ್ರಾಲಯ ವಾಸಿಗಳ ಪ್ರೀತಿಗೆ ಪಾತ್ರರಾಗಿದ್ದು ವಿಶೇಷವಾಗಿತ್ತು.

ಕೊನೆಗೆ ಅಂದು ಅಧಿಕಾರದಲ್ಲಿದ್ದ ಸಿಎಂ ಯಡಿಯೂರಪ್ಪ ಆಂಧ್ರ ಪ್ರದೇಶ ಸರ್ಕಾರ ಅನುದಾನ ಒದಗಿಸದಿದ್ದರೂ ಸುಯಮೇಂದ್ರಾಚಾರ್ಯರ ಒತ್ತಡಕ್ಕೆ ಮಣಿದು 30 ಕೋಟಿ ವೆಚ್ಚದಲ್ಲಿ ಸ್ಟೀಲ್ ಬ್ರಿಜ್ ನಿರ್ಮಾಣ ಮಾಡಿದ್ದರು. ಈ ಕೆಲಸದಲ್ಲಿ ಸುಯಮೇಂದ್ರಾಚಾರ್ಯ ಮಹತ್ವದ ಪಾತ್ರ ವಹಿಸಿದ್ದರು.

(Suyamendracharya Mantralaya Mutt Secreatary has died from covid 19 in Delhi)

ಇದನ್ನೂ ಓದಿ: Covid Helpline Numbers: ಆಕ್ಸಿಜನ್​, ರೆಮ್​ಡೆಸಿವರ್​ ಬೇಕಾದಲ್ಲಿ ಈ ಸಂಖ್ಯೆಗಳನ್ನು ಸಂಪರ್ಕಿಸಿ

ಕೊವಿಡ್​ ಕರ್ತವ್ಯದಲ್ಲಿ ಮೃತಪಟ್ಟ ಸರ್ಕಾರಿ ನೌಕರರಿಗೆ ವಿಮೆ

Published On - 8:53 pm, Fri, 30 April 21