ಸಾವಿನಲ್ಲೂ ಸಾರ್ಥಕತೆ ಮೆರೆದ ಬಳ್ಳಾರಿ ಶಿಕ್ಷಕ; ವಿಮ್ಸ್ ಆಸ್ಪತ್ರೆಗೆ ದೇಹ ದಾನ!

|

Updated on: Mar 18, 2021 | 1:06 PM

ವಿಮ್ಸ್ ಆಸ್ಪತ್ರೆಗೆ ಹಿರಿಯ ಶಿಕ್ಷಕ ಗಾಳಿ ಮಹೇಶ್ ಅವರ ತಂದೆ ಗಾಳಿ ಚನ್ನಪ್ಪ ಹಾಗೂ ತಾಯಿ ಗಾಳಿ ಪಾರ್ವತಮ್ಮ ಕೂಡ ಇದೇ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದೇಹ ದಾನ ಮಾಡಿ ಮತ್ತೊಬ್ಬರಿಗೆ ಸ್ಫೂರ್ತಿಯಾಗಿದ್ದರು. ಹೀಗಾಗಿ ಅವರ ಮಗನಾದ ಗಾಳಿ ಮಹೇಶ್ರವರು ಕೂಡ ಅದೇ ಹಾದಿ ಹಿಡಿಯುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಸಾವಿನಲ್ಲೂ ಸಾರ್ಥಕತೆ ಮೆರೆದ ಬಳ್ಳಾರಿ ಶಿಕ್ಷಕ; ವಿಮ್ಸ್ ಆಸ್ಪತ್ರೆಗೆ ದೇಹ ದಾನ!
ವಿಮ್ಸ್ ಆಸ್ಪತ್ರೆಗೆ ಮೃತ ಶಿಕ್ಷಕನ ದೇಹವನ್ನು ದಾನ ಮಾಡಿದ ಕುಟುಂಬ
Follow us on

ಬಳ್ಳಾರಿ: ಈ ಭೂಮಿಯ ಮೇಲೆ ಹುಟ್ಟಿದ ಪ್ರತಿ ಜೀವಿಯು ಒಂದಲ್ಲಾ ಒಂದು ದಿನ ಮಣ್ಣಾಗಲೇ ಬೇಕು. ಸಾವು ಸಹಜವಾಗಿಯೇ ಬರಬಹುದು ಅಥವಾ ಅನಾಹುತದಿಂದ ಸಂಭವಿಸಬಹುದು. ಒಬ್ಬ ಮನುಷ್ಯ ಸತ್ತ ಮೇಲೆ ಈ ಸಮಾಜಕ್ಕೆ ಏನು ಕೊಡುಗೆ ಕೊಟ್ಟ ಎಂಬ ಗುರುತು ಮಾತ್ರ ಉಳಿಯುತ್ತದೆ. ಆ ಗುರುತು ಉಳಿಯುವ ಹಾಗೆ ಬದುಕುವವರ ಸಂಖ್ಯೆ ವಿರಳ. ಆದರೆ ಗಣಿನಾಡಿನಲ್ಲಿ ಶಿಕ್ಷಕರೊಬ್ಬರು ಜೀವ ಹೋದ ನಂತರವೂ ಸಮಾಜದಲ್ಲಿ ಗುರುತು ಉಳಿಯುವಂತಹ ಕೆಲಸ ಮಾಡಿ ಹೋಗಿದ್ದಾರೆ.

ಜಿಲ್ಲೆಯ ಸಿರುಗುಪ್ಪ ತಾಲೂಕಿನ ದೇಶನೂರು ಗ್ರಾಮದ ಸದಾಶಿವರೆಡ್ಡಿ ಪ್ರೌಢ ಶಾಲೆಯ ಹಿರಿಯ ಶಿಕ್ಷಕ ಗಾಳಿ ಮಹೇಶ್ (60) ಸಾವನ್ನಪ್ಪಿದ್ದು, ಅವರ ಅಪೇಕ್ಷೆಯಂತೆ ಕುಟುಂಬಸ್ಥರು ಮೃತದೇಹವನ್ನ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾನ ಮಾಡಿದ್ದಾರೆ. ಗಾಳಿ ಮಹೇಶ್ ಅವರು ಕಳೆದ ಎರಡ್ಮೂರು ತಿಂಗಳ ಹಿಂದಷ್ಟೆ ತಮ್ಮ ಮೃತದೇಹವನ್ನ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾನ ಮಾಡುವುದಾಗಿ ಆನ್ಲೈನ್ ಮೂಲಕ ನೋಂದಣಿ ಮಾಡಿಸಿಕೊಂಡಿದ್ದರು. ಅದನ್ನ ತಮ್ಮ ಕುಟುಂಬ ಸದಸ್ಯರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದರು. ಹೀಗಾಗಿ ವಿಮ್ಸ್ ಆಸ್ಪತ್ರೆ ಶವಾಗಾರ ಸಿಬ್ಬಂದಿಗೆ ಮೃತದೇಹವನ್ನ ಆವರ ಪತ್ನಿ, ಮಗಳು, ಬಂಧುಗಳು ಹಾಗೂ ಸ್ನೇಹಿತರ ಸಮಕ್ಷಮದಲ್ಲಿ ಹಸ್ತಾಂತರಿಸಲಾಯಿತು.

ಹೆತ್ತವರ ದಾರಿ ಹಿಡಿದ ಮಗ
ವಿಮ್ಸ್ ಆಸ್ಪತ್ರೆಗೆ ಹಿರಿಯ ಶಿಕ್ಷಕ ಗಾಳಿ ಮಹೇಶ್ ಅವರ ತಂದೆ ಗಾಳಿ ಚನ್ನಪ್ಪ ಹಾಗೂ ತಾಯಿ ಗಾಳಿ ಪಾರ್ವತಮ್ಮ ಕೂಡ ಇದೇ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದೇಹ ದಾನ ಮಾಡಿ ಮತ್ತೊಬ್ಬರಿಗೆ ಸ್ಫೂರ್ತಿಯಾಗಿದ್ದರು. ಹೀಗಾಗಿ ಅವರ ಮಗನಾದ ಗಾಳಿ ಮಹೇಶ್ರವರು ಕೂಡ ಅದೇ ಹಾದಿ ಹಿಡಿಯುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮೃತ ಶಿಕ್ಷಕನ ಪುತ್ರಿ ಆಶಾ, ನಮ್ಮ ತಂದೆಯವರು ಮೃತದೇಹವನ್ನ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾನ ಮಾಡುವ ಅಪೇಕ್ಷೆ ಹೊಂದಿದ್ದರು. ದೇಹ ದಾನ ಮಾಡುವುದರಿಂದ ಸಂಶೋಧನಾ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಈ ಕಾರ್ಯಕ್ಕೆ ಮುಂದಾಗಿರುವುದು ನಮಗೆಲ್ಲಾ ಸ್ಫೂರ್ತಿದಾಯಕವಾಗಿದೆ. ನಾನೂ ಕೂಡ ನನ್ನ ತಂದೆಯಂತೆ ಮೃತದೇಹವನ್ನ ದಾನ ಮಾಡುವ ನಿರ್ಧಾರಕ್ಕೆ ಬಂದಿರುವೆ ಎಂದು ತಿಳಿಸಿದರು.

ಮೃತ ಶಿಕ್ಷಕನ ಪತ್ನಿ ಮತ್ತು ಪುತ್ರಿ

ಅಪಾರ ಸ್ನೇಹ ಬಳಗ ಹೊಂದಿದ್ದ ಶಿಕ್ಷಕ
ಮೃತ ಮಹೇಶ್ ಅವರು ತಮ್ಮ ಮೃತದೇಹವನ್ನು ದಾನ ಮಾಡುವ ವಿಚಾರವನ್ನ ಕುಟುಂಬಸ್ಥರು ಹಾಗೂ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದರು. ಜೊತೆಗೆ ಸ್ನೇಹಿತರಿಗೆ ಕೂಡ ದೇಹದಾನದ ಬಗ್ಗೆ ಪ್ರೇರೇಪಿಸಿದ್ದರು. ದೇಶನೂರು ಸದಾಶಿವರೆಡ್ಡಿ ಪ್ರೌಢ ಶಾಲೆಯಲ್ಲಿ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗಾಳಿ ಮಹೇಶ್ ಅವರು ಅತ್ಯುತ್ತಮ ಬಾಂಧವ್ಯವನ್ನ ಹೊಂದಿದ್ದರು. ಅಪಾರ ಸ್ನೇಹ ಬಳಗವನ್ನ ಹೊಂದಿದ್ದ ಮಹೇಶ್ರವರ ನಿಧನ ಅವರ ಗೆಳೆಯರ ಬಳಗಕ್ಕೆ ಸಾಕಷ್ಟು ದು:ಖ ತರಿಸಿದೆ. ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಶಿಕ್ಷಕರು ಕೂಡ ಆಗಿದ್ದರು. ಅಪಾರ ಬಂಧು ಬಳಗವನ್ನ ಅಗಲಿದ್ದು, ಕುಟುಂಬದಲ್ಲಿ ದು:ಖ ಆವರಿಸಿದೆ. ಆದರೆ ಶಿಕ್ಷಕ ಮಹೇಶ್ ಸಾವನ್ನಪ್ಪಿದ್ದರೂ ಅವರ ಸಾವಿನಲ್ಲಿಯೂ ಸಾರ್ಥಕತೆ ಮೆರೆದ ಕಾರ್ಯ ನಿಜಕ್ಕೂ ಶ್ಲಾಘನೀಯ ಅಂತಾರೆ ಸಹದ್ಯೋಗಿ ಶಿಕ್ಷಕರು.

ಇದನ್ನೂ ಓದಿ

ಕೈದಿಗೆ ರಕ್ತದಾನ: ಮಾನವೀಯತೆ ಮೆರೆದ ಹಾವೇರಿ ಜೈಲು ಸಿಬ್ಬಂದಿಗಳು

ಹೆಣ್ಣಿನ ಮುಟ್ಟು ಮದುವೆ ಬಸಿರು ಸಂಗಾತಿ ಆಯ್ಕೆಗಳೆಲ್ಲದರ ಬಗ್ಗೆ ಸನ್ಯಾಸಿಗಳಿಗೇಕೆ ಚಿಂತೆ?