ಕೈದಿಗೆ ರಕ್ತದಾನ: ಮಾನವೀಯತೆ ಮೆರೆದ ಹಾವೇರಿ ಜೈಲು ಸಿಬ್ಬಂದಿಗಳು
ವಿಚಾರಣಾಧೀನ ಕೈದಿಗೆ ರಕ್ತ ಬೇಕು ಎಂದಾಗ ಯಾರೂ ಸಹ ರಕ್ತದಾನ ಮಾಡುವುದಕ್ಕೆ ಮುಂದಾಗಿರಲಿಲ್ಲ. ಕೊನೆಗೆ ಜೈಲಿನಲ್ಲಿರುವ ಮಂಜುನಾಥ ಮತ್ತು ಸಂತೋಷ ಎಂಬ ಇಬ್ಬರು ಸಿಬ್ಬಂದಿಗಳೇ ವಿಚಾರಣಾಧೀನ ಕೈದಿಗಾಗಿ ರಕ್ತದಾನ ಮಾಡಿದ್ದಾರೆ.
ಹಾವೇರಿ: ಜೈಲಿನಲ್ಲಿರುವ ಕೈದಿಗಳು ಅಂದರೆ ಸಾಕು ಜನರು ಅವರನ್ನ ಸಮಾಜಕ್ಕೆ ಬೇಡವಾದವರು ಅಥವಾ ಅಪರಾಧಿಗಳು ಎನ್ನುವ ದೃಷ್ಟಿಯಿಂದಲೇ ನೋಡುತ್ತಾರೆ. ಆದರೆ ಜೈಲಿನಲ್ಲಿದ್ದ ವಿಚಾರಣಾಧೀನ ಕೈದಿಯೊಬ್ಬರು ಅನಾರೋಗ್ಯಕ್ಕೆ ತುತ್ತಾಗಿದ್ದು, ರಕ್ತದ ಕೊರತೆಯಿಂದ ಬಳಲುತ್ತಿದ್ದರು. ಇವರಿಗೆ ರಕ್ತ ಹೇಗೆ ಹೊಂದಿಸುವುದು ಎಂದು ಯೋಚಿಸುತ್ತಿರುವಾಗಲೇ ಜೈಲಿನ ಸಿಬ್ಬಂದಿಗಳಿಬ್ಬರು ವಿಚಾರಣಾಧೀನ ಕೈದಿಗಾಗಿ ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಕಳೆದ 8 ತಿಂಗಳುಗಳ ಹಿಂದೆ ಗಾಂಜಾ ಕೇಸ್ನಲ್ಲಿ ಶೆಟ್ಟೆಪ್ಪ ಎಂಬಾತ ಬಂಧಿತನಾಗಿ ಜೈಲು ಸೇರಿದ್ದ. ಆದರೆ ನಿನ್ನೆ ಇದ್ದಕ್ಕಿದ್ದಂತೆ ಶೆಟ್ಟೆಪ್ಪನ ಆರೋಗ್ಯದಲ್ಲಿ ಏರುಪೇರಾಗಿತ್ತು. ತಕ್ಷಣವೆ ಶೆಟ್ಟೆಪ್ಪನನ್ನ ಜೈಲು ಸಿಬ್ಬಂದಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಶೆಟ್ಟೆಪ್ಪನನ್ನ ತಪಾಸಣೆ ಮಾಡಿದ್ದ ವೈದ್ಯರು ಶೆಟ್ಟೆಪ್ಪನಿಗೆ ರಕ್ತದ ಕೊರತೆ ಇದೆ ಎಂದು ಹೇಳಿದ್ದು, ಎರಡು ಬಾಟಲ್ ರಕ್ತ ಹಾಕಬೇಕು ಎಂದು ಹೇಳಿದ್ದಾರೆ.
ಆದರೆ ವಿಚಾರಣಾಧೀನ ಕೈದಿಗೆ ರಕ್ತ ಬೇಕು ಎಂದಾಗ ಯಾರೂ ಸಹ ರಕ್ತದಾನ ಮಾಡುವುದಕ್ಕೆ ಮುಂದಾಗಿರಲಿಲ್ಲ. ಕೊನೆಗೆ ಜೈಲಿನಲ್ಲಿರುವ ಮಂಜುನಾಥ ಮತ್ತು ಸಂತೋಷ ಎಂಬ ಇಬ್ಬರು ಸಿಬ್ಬಂದಿಗಳೇ ವಿಚಾರಣಾಧೀನ ಕೈದಿಗಾಗಿ ರಕ್ತದಾನ ಮಾಡಿದ್ದಾರೆ. ರಕ್ತ ಸಿಗದಿರುವ ವಿಷಯ ತಿಳಿದಾಗ ಸಿಬ್ಬಂದಿಗಳಿಬ್ಬರು ಜೈಲು ಅಧೀಕ್ಷಕರ ಗಮನಕ್ಕೆ ತಂದು ರಕ್ತದಾನ ಮಾಡುವ ವಿಚಾರ ತಿಳಿಸಿದ್ದಾರೆ. ತಕ್ಷಣವೆ ಜೈಲು ಅಧೀಕ್ಷಕರು ಇಬ್ಬರು ಸಿಬ್ಬಂದಿಗಳನ್ನ ಜಿಲ್ಲಾಸ್ಪತ್ರೆಯ ರಕ್ತಭಂಡಾರಕ್ಕೆ ಕರೆದುಕೊಂಡು ಬಂದು ರಕ್ತದಾನ ಮಾಡಿಸಿದ್ದಾರೆ. ಇಬ್ಬರು ಸಿಬ್ಬಂದಿಗಳು ರಕ್ತದಾನ ಮಾಡುವ ಮೂಲಕ ಮಾನವೀಯತೆ ಪ್ರದರ್ಶಿಸಿದ್ದಾರೆ.
ಶೆಟ್ಟೆಪ್ಪ ವಿಚಾರಣಾಧೀನ ಕೈದಿಯಾಗಿ ಜೈಲು ಸೇರಿದ ಮೇಲೆ ಆತನ ಸಂದರ್ಶನಕ್ಕೆ ಕುಟುಂಬದವರಿಗೆ ಅವಕಾಶ ಇರಲಿಲ್ಲ. ಆದರೆ ಇಬ್ಬರು ಜೈಲು ಸಿಬ್ಬಂದಿಗಳೇ ರಕ್ತ ಕೊಡುವುದಕ್ಕೆ ಮುಂದೆ ಬಂದಿದ್ದು, ನಂತರ ಜೈಲು ಅಧೀಕ್ಷಕರು ನ್ಯಾಯಾಲಯದ ಅನುಮತಿ ಪಡೆದುಕೊಂಡು ಇಬ್ಬರು ಜೈಲು ಸಿಬ್ಬಂದಿಗಳಿಂದ ರಕ್ತದಾನ ಮಾಡಿಸಿದ್ದಾರೆ. ಇಬ್ಬರು ಜೈಲು ಸಿಬ್ಬಂದಿಗಳ ರಕ್ತ ಪಡೆದ ಜಿಲ್ಲಾಸ್ಪತ್ರೆಯ ರಕ್ತ ನಿಧಿ ಘಟಕದವರು ವಿಚಾರಣಾಧೀನ ಕೈದಿಗೆ ಅಗತ್ಯವಿದ್ದ ಗ್ರೂಪ್ ನ ಎರಡು ಬಾಟಲ್ ರಕ್ತ ನೀಡಿದ್ದಾರೆ.
ರಕ್ತನಿಧಿ ಘಟಕದವರು ನೀಡಿದ ರಕ್ತವನ್ನ ವೈದ್ಯರು ವಿಚಾರಣಾಧೀನ ಕೈದಿ ಶೆಟ್ಟೆಪ್ಪನಿಗೆ ಹಾಕಿದ್ದಾರೆ. ಇದರಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಶೆಟ್ಟೆಪ್ಪನ ಆರೋಗ್ಯದಲ್ಲಿ ಈಗ ಚೇತರಿಕೆ ಕಂಡು ಬರುತ್ತಿದೆ ಎಂದು ಜಿಲ್ಲಾಸ್ಪತ್ರೆಯ ವೈದ್ಯಕೀಯ ಮೂಲಗಳು ತಿಳಿಸಿವೆ. ರಕ್ತದಾನ ಮಾಡುವುದು ಎಂದಾಗ ಅದೆಷ್ಟೋ ಜನರು ಹಿಂದೇಟು ಹಾಕುತ್ತಾರೆ. ಇಂತಹದರಲ್ಲಿ ವಿಚಾರಣಾಧೀನ ಕೈದಿಗೆ ಜೈಲು ಸಿಬ್ಬಂದಿಗಳೇ ರಕ್ತದಾನ ಮಾಡಿರುವುದು ಉತ್ತಮವಾದ ಕೆಲಸ.
ಉದ್ಯೋಗ ನೀಡಿ.. ಜೈಲು ಹಕ್ಕಿಗಳಲ್ಲಿ ಸಂತಸ ಸೃಜಿಸುವಂತೆ ಮಾಡಿದ ಜಿಲ್ಲಾ ಕಾರಾಗೃಹ, ಕೈದಿಗಳ ಕೈಗೆ ದುಡಿಮೆಯ ಹಣ!