ಹೆಣ್ಣಿನ ಮುಟ್ಟು ಮದುವೆ ಬಸಿರು ಸಂಗಾತಿ ಆಯ್ಕೆಗಳೆಲ್ಲದರ ಬಗ್ಗೆ ಸನ್ಯಾಸಿಗಳಿಗೇಕೆ ಚಿಂತೆ?

‘ಕೌಟುಂಬಿಕ ವ್ಯವಸ್ಥೆ ಗಟ್ಟಿಯಾಗಿರುವ ನಮ್ಮ ಸಮಾಜದಲ್ಲಿ ಅಂತರ್ಜಾತಿಯ ವಿವಾಹಗಳು ನಮ್ಮ ಪೀಳಿಗೆಯವರಿಗೂ ಅಂದುಕೊಂಡಷ್ಟು ಸುಲಭವಾಗಿಲ್ಲ. ಆಯ್ಕೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮಠಗಳು ನಿಯಂತ್ರಿಸುತ್ತಿವೆ. ಹೆಣ್ಣು ಬ್ರಾಹ್ಮಣ ಜಾತಿಯವಳಾಗಿರಲಿ, ಶೂದ್ರಳಾಗಿರಲಿ ಆಯಾ ಜಾತಿಯ ಮಠಗಳು ಕುಟುಂಬ ಅಥವಾ ಸಮಾಜದ ಮೂಲಕ ಆಕೆಯ ಬದುಕಿನ ಸ್ವಾತಂತ್ರ್ಯ ನಿಯಂತ್ರಿಸುವ ಕೆಲಸ ಮಾಡುತ್ತವೆ. ಆಚರಣೆಯ, ಪದ್ಧತಿ, ಸಂಪ್ರದಾಯ ಹುಸಿ ಕಲ್ಪಿತ ಗೌರವ ಮತ್ತು ಮರ್ಯಾದೆ ಮೂಲಕ ಅಪ್ಪ ಅಮ್ಮ ಅಣ್ಣ ತಮ್ಮ ನೆರೆಹೊರೆಯವರ ಮೂಲಕ ನಿಯಂತ್ರಿಸುವ ಕೆಲಸ ಮಾಡುತ್ತವೆ.‘ ಚೈತ್ರಿಕಾ ನಾಯ್ಕ ಹರ್ಗಿ

ಹೆಣ್ಣಿನ ಮುಟ್ಟು ಮದುವೆ ಬಸಿರು ಸಂಗಾತಿ ಆಯ್ಕೆಗಳೆಲ್ಲದರ ಬಗ್ಗೆ ಸನ್ಯಾಸಿಗಳಿಗೇಕೆ ಚಿಂತೆ?
ಸೌಜನ್ಯ : ಅಂತರ್ಜಾಲ
Follow us
ಶ್ರೀದೇವಿ ಕಳಸದ
| Updated By: Digi Tech Desk

Updated on:Mar 18, 2021 | 3:46 PM

ಪುರುಷ ಪ್ರಧಾನ ವ್ಯವಸ್ಥೆಯ ಮುಖಗಳು ಒಂದಿಲ್ಲೊಂದು ರೀತಿಯಲ್ಲಿ ತಮ್ಮ ವಿಕಾರತನವನ್ನು ಪ್ರತಿನಿತ್ಯ ಪ್ರದರ್ಶನ ಮಾಡುತ್ತವೆ. ಅದರಲ್ಲೂ ರಕ್ಷಕರ ಸೋಗು ಹಾಕಿದ ಭಕ್ಷಕರು ಜಾಸ್ತಿ ಅಪಾಯಕಾರಿ. ಜಾತಿ ರಕ್ಷಕ ಮತ್ತು ಧರ್ಮ ರಕ್ಷಕ ಸೋಗಿನಲ್ಲಿರುವ ಸ್ತ್ರೀ ಸ್ವಾತಂತ್ರ ಭಂಜಕರು ಇನ್ನೂ ಅಪಾಯಕಾರಿ. ಏಕೆಂದರೆ ತಮ್ಮ ವಾದಗಳನ್ನು ಪ್ರತಿಪಾದಿಸಲು ಅವರಿಗೆ ಧರ್ಮಗ್ರಂಥಗಳ ಅಪಾರ ಉದಾಹರಣೆ ಸನ್ನಿವೇಶ ಸಿಗುತ್ತವೆ. ಪುರುಷ ಪ್ರಧಾನ ಸಮಾಜದ ರಾಯಭಾರಿಗಳಂತಿರುವ ಸ್ವಾಮಿಜಿಗಳು ಸ್ತ್ರೀಯರ ಸ್ವಾತಂತ್ರ್ಯಕ್ಕೆ ಬೀಗ ಹಾಕಲು ಕೀಲಿಕೈ ಹಿಡಿದು ನಿಂತಿರುತ್ತಾರೆ. ಜನರಲ್ಲಿ ಅರಿವು ಮೂಡಿಸುವ ಬದಲು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಮನುಷ್ಯನ ಬಲಹೀನತೆಗಳನ್ನು ಪೋಷಿಸುವ ಕೆಲಸ ಜಾತಿ ಮಠಗಳು ಮತ್ತು ಸ್ವಾಮೀಜಿಗಳಿಂದ ಆಗುತ್ತಿವೆ. ಸರ್ಕಾರದ ಆಡಳಿತ ವ್ಯವಸ್ಥೆಯ ಮಟ್ಟದಲ್ಲಿ ಯೋಜನೆಗಳ ಜಾರಿಗಾಗಿ ಆರ್ಥಿಕ ಮತ್ತು ಸಾಮಾಜಿಕ ನ್ಯಾಯದ ನೆಲೆಗಟ್ಟಿನಲ್ಲಿ ಜಾತಿಗಳನ್ನು ಒಳಪಂಗಡಗಳನ್ನು ಗುರುತಿಸಿ ವಿಂಗಡನೆ ಮಾಡಲಾಗಿದೆ. ಸಾಮಾಜಿಕ ಅನ್ಯಾಯಕ್ಕೆ ಒಳಗಾದವರಿಗೆ ಸಂವಿಧಾನದ ಅಡಿಯಲ್ಲಿ ನ್ಯಾಯ ಒದಗಿಸಲು ಇದೊಂದು ಅಭಿವೃದ್ಧಿ ಪರ ನಡೆ. ಇದರ ಹೊರತಾಗಿ ನಾವು ಜಾತಿಯನ್ನು ಸಾಂಸ್ಕೃತಿಕ ವಿಭಿನ್ನತೆಯ ನೆಲೆಯಲ್ಲಿ ನೋಡಬೇಕಿದೆ.

ಆಚರಣೆ, ಉಡುಗೆ-ತೊಡುಗೆ, ಮೌಢ್ಯವಲ್ಲದ ಸಂಪ್ರದಾಯಗಳ ಹಿನ್ನೆಲೆಯಲ್ಲಿ ಜಾತಿಯನ್ನು ನೋಡುವ ಪರಿಕಲ್ಪನೆಯನ್ನು ನಾವೆಲ್ಲರೂ ಇಂದು ಬೆಳೆಸಿಕೊಳ್ಳುವ ತುರ್ತು ಇದೆ. ಜಾತಿಯ ಮಠಗಳು ಕೂಡ ತನ್ನ ಜನರಿಗೆ ಇದನ್ನೇ ಹೇಳಬೇಕು. ಜಾತಿಯನ್ನು ಮೀರುವುದು ಎಂಬುದಕ್ಕಿಂದ ಜಾತಿಯಲ್ಲಿನ ಮೌಢ್ಯಗಳನ್ನು ಮೀರಿದರೆ ಸಾಮರಸ್ಯದ ಬದುಕು ಸಾಧ್ಯ ಎಂಬುದು ಜಾಗೃತಿಯೆಡೆಗಿನ ನಡೆ. ಆದರೆ ಈ ಜಾತಿ ಮಠಗಳು ಮತ್ತು ಅದರ ಸ್ವಾಮೀಜಿಗಳು ಜಾತಿಜಾತಿಗಳ ನಡುವಿನ ಅಂತರವನ್ನು ಹೆಚ್ಚಿಸಿ ತಮ್ಮ ಅಸ್ತಿತ್ವಕ್ಕಾಗಿ ಜಾತಿಯ ಕರ್ಮಠತನಗಳನ್ನು ಬೆಳೆಸುತ್ತಿರುವುದು ಅವರ ಸಮಾವೇಶಗಳು ಹೋರಾಟಗಳು, ಅಸಂಬದ್ಧ ಹೇಳಿಕೆಗಳನ್ನು, ಅವರ ಅಭಿರುಚಿ ಮತ್ತು ರಾಜಕೀಯ ಆಸಕ್ತಿಯನ್ನು ನೋಡಿದರೆ ಕಣ್ಣಿಗೆ ರಾಚುತ್ತಿದೆ.

ಸ್ತ್ರೀಯರು ಗಂಡಿನ ಅಡಿಯಾಳಾಗಿ ಇರಬೇಕು ಎಂಬ ವಿಷಬೀಜವನ್ನು ಬಿತ್ತುತ್ತಿರುವುದೇ ಪುರುಷ ಪ್ರಧಾನ ವ್ಯವಸ್ಥೆಯ ಕಾವಲುಗಾರರಂತೆ ವರ್ತಿಸುವ ಸ್ವಾಮೀಜಿಗಳು. ಉದಾ- ‘ಆರ್ಯ ಈಡಿಗ ಮಹಿಳೆಯರು ಕನಿಷ್ಟ ಐದು ಮಕ್ಕಳನ್ನಾದರೂ ಹೆರಲಿ ಸಾಕಲು ಆಗದಿದ್ದರೆ ಎರಡು ಮಕ್ಕಳನ್ನು ಇಟ್ಟುಕೊಂಡು ಮೂರು ಮಕ್ಕಳನ್ನು ಮಠಕ್ಕೆ ಬಿಡಲಿ ಎಂದು ಆರ್ಯ ಈಡಿಗರ ಪ್ರಣಮಾನಂದ ಸ್ವಾಮೀಜಿ ಒಂದೆಡೆ ಹೇಳಿದರೆ; ಇನ್ನೊಂದೆಡೆ, ‘ಬ್ರಾಹ್ಮಣ ಹೆಣ್ಣುಮಕ್ಕಳು ಇತರೆ ಜಾತಿ ಧರ್ಮದ ಯುವಕರನ್ನು ವರಿಸುತ್ತಿರುವುದರ ಕುರಿತು ಗಂಭೀರ ಚಿಂತನೆಯ ಅಗತ್ಯವಿದೆ, ಅಂತರ್ಜಾತಿ ವಿವಾಹ ತಡೆಗೆ ಮಾತೃಮಂಡಳಿ ರೂಪಿಸಬೇಕು’ ಎಂದು ಪೇಜಾವರ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ ಹೇಳಿದ್ದಾರೆ. ಸ್ವಾಮಿ ಕೃಷ್ಣ ಸ್ವರೂಪ ದಾಸ್​ಜೀ ಎನ್ನುವ ಸ್ವಾಮೀಜಿ ಎಂಬ ಇನ್ನೊಬ್ಬ ಪುಣ್ಯಾತ್ಮ ‘ಮುಟ್ಟಾದ ಹೆಂಗಸು ಗಂಡನಿಗೆ ಅಡುಗೆ ಮಾಡಿ ಬಡಿಸಿದರೆ ಆಕೆ ಮುಂದಿನ ಜನ್ಮದಲ್ಲಿ ನಾಯಿಯಾಗುತ್ತಾಳೆ’ ಎಂದಿದ್ದರು. ಹಾಗೆ ಕೊರಟಗೆರೆಯ ಸಿದ್ದರ ಬೆಟ್ಟ ಕ್ಷೇತ್ರದ ವೀರಭದ್ರ ಸ್ವಾಮೀಜಿ ‘ಹೆಣ್ಣು ಮಕ್ಕಳು ಸಂಗಾತಿಯ ಆಯ್ಕೆಯಲ್ಲಿ ಸ್ವತಂತ್ರ ನಿರ್ಧಾರ ಮಾಡುವಂತಿಲ್ಲ, ಮಾತು ಕೇಳದ ಮಗಳ ಕೈ ಕಾಲು ಮುರಿಯಿರಿ’ ಎಂದು ವೀರಶೈವ ಲಿಂಗಾಯತ ಸೇವಾ ಸಮಿತಿ ಸಮಾರಂಭದಲ್ಲಿ ಹೇಳಿದ್ದರು. ಇವೆಲ್ಲಾ ಪ್ರಮುಖ ಜಾತಿ ಮಠಗಳ ಸ್ವಾಮೀಜಿಗಳ ಉವಾಚಗಳು.

ಅಷ್ಟಕ್ಕೂ ಈ ಸನ್ಯಾಸಿ ಸ್ವಾಮೀಜಿಗಳಿಗೆ ಹೆಣ್ಣಿನ ಮದುವೆ, ಮುಟ್ಟು, ಬಸಿರು, ಸಂಗಾತಿ ಆಯ್ಕೆ ಇವುಗಳ ಬಗ್ಗೆ ಯಾಕೆ ಚಿಂತೆ ? ಎಂದು ಕೇಳುವಂತಿಲ್ಲ. ಅವರ ಅಸ್ತಿತ್ವ ನಿಂತಿರುವುದೇ ಜಾತಿಗಳು ಮತ್ತು ಪುರುಷರ ಪ್ರಧಾನ ಸಮಾಜದ ನಂಬಿಕೆಗಳನ್ನು ಗಟ್ಟಿಗೊಳಿಸಿ ವೈಚಾರಿಕ ಬಲಹೀನ ಗಂಡು ಸಮಾಜ ಅವರ ಬೆಂಬಲಕ್ಕೆ ನಿಲ್ಲುವಂತೆ ಮಾಡುವುದರಲ್ಲಿ ಅಡಗಿದೆ. ಗಂಡಿನ ಅನುಕೂಲಕ್ಕಾಗಿ ಹೆಣ್ಣು ಇರಬೇಕು ಎಂಬ ಧೋರಣೆ ಎದ್ದು ಕಾಣುತ್ತದೆ. ಹುಸಿ ಪಾಪಪುಣ್ಯದ ಕಲ್ಪನೆಯಲ್ಲಿ ಆಕೆಯನ್ನು ಕಟ್ಟಿ ಹಾಕುವ ಪ್ರಯತ್ನ ನಡೆಯುತ್ತಿರುತ್ತದೆ. ಹೆಣ್ಣು ಮತ್ತು ಗಂಡಿನ ಬಲಹೀನತೆಗಳ ಪರಿಚಯ ಇವರಿಗೆ ಚೆನ್ನಾಗಿಯೇ ಇರುತ್ತದೆ.

ಇಂತಹ ನಂಬಿಕೆಗಳನ್ನು ಜಾತಿ ಮಠಗಳು ಕುಟುಂಬಗಳ ಮೇಲೆ ಹೇರುವುದರಿಂದ ಕೌಟುಂಬಿಕ ವ್ಯವಸ್ಥೆ ಗಟ್ಟಿಯಾಗಿರುವ ನಮ್ಮ ಸಮಾಜದಲ್ಲಿ ಅಂತರ್ಜಾತಿಯ ವಿವಾಹಗಳು ನಮ್ಮ ಪೀಳಿಗೆಯವರಿಗೂ ಅಂದುಕೊಂಡಷ್ಟು ಸುಲಭವಾಗಿಲ್ಲ. ಆಯ್ಕೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮಠಗಳು ನಿಯಂತ್ರಿಸುತ್ತಿವೆ. ಹೆಣ್ಣು ಬ್ರಾಹ್ಮಣ ಜಾತಿಯವಳಾಗಿರಲಿ, ಶೂದ್ರಳಾಗಿರಲಿ ಆಯಾ ಜಾತಿಯ ಮಠಗಳು ಕುಟುಂಬ ಅಥವಾ ಸಮಾಜದ ಮೂಲಕ ಆಕೆಯ ಬದುಕಿನ ಸ್ವಾತಂತ್ರ್ಯ ನಿಯಂತ್ರಿಸುವ ಕೆಲಸ ಮಾಡುತ್ತವೆ. ಆಚರಣೆಯ, ಪದ್ಧತಿ, ಸಂಪ್ರದಾಯ ಹುಸಿ ಕಲ್ಪಿತ ಗೌರವ ಮತ್ತು ಮರ್ಯಾದೆ ಮೂಲಕ ಅಪ್ಪ ಅಮ್ಮ ಅಣ್ಣ ತಮ್ಮ ನೆರೆಹೊರೆಯವರ ಮೂಲಕ ನಿಯಂತ್ರಿಸುವ ಕೆಲಸ ಮಾಡುತ್ತವೆ.

ಅಂತರ್ಜಾತಿಯ ವಿವಾಹದಲ್ಲಿ ಹೆಚ್ಚಾಗಿ ಹೆಣ್ಣು ಗಂಡಿನ ಮನೆಯ ಆಹಾರ ಪದ್ಧತಿ ರೀತಿ ರಿವಾಜುಗಳಿಗೆ ತಕ್ಕಂತೆ ಬದಲಾಗಬೇಕೆ ಹೊರತು ಗಂಡು ಬದಲಾಗುವುದು ಕಡಿಮೆ. ಈ ಮಠ ಮಾನ್ಯಗಳು ಉದಾ – ಬ್ರಾಹ್ಮಣರಲ್ಲಿ ಹೆಣ್ಣಿನ ಸಂಖ್ಯೆ ಕಡಿಮೆಯಾಗಿ ವರನಿಗೆ ವಧು ಸಿಗದಿರುವಾಗ ಸ್ವಾಮೀಜಿಗಳು ಬೇರೆ ಜಾತಿಯ ಹೆಣ್ಣನ್ನು ತಂದು ಮದುವೆ ಮಾಡಲು ಮಠಗಳು ಪರಿಹಾರ ಕಂಡುಕೊಂಡಿವೆ. ಆದರೆ ಬೇರೆ ಜಾತಿ ಎನ್ನುವ ಕಾರಣಕ್ಕೆ ಆಕೆಯ ಹೆತ್ತ ತಂದೆ ತಾಯಿ ಮದುವೆಯ ಶಾಸ್ತ್ರದಲ್ಲಿ ಭಾಗವಹಿಸುವಂತಿಲ್ಲ. ಆಕೆಯನ್ನ ಬ್ರಾಹ್ಮಣ ಜಾತಿಯವರು ದತ್ತು ಪಡೆದು ಮದುವೆ ನಡೆಸಬೇಕು. ಮದುವೆಯಾದ ನಂತರ ತವರಿನ ಸಂಪರ್ಕ ಕಳೆದುಕೊಳ್ಳಬೇಕು. ಇಲ್ಲಿ ಹೆಣ್ಣಿನ ಸ್ವಾತಂತ್ರ್ಯದ ಮೇಲೆ ಗಂಡು ಪ್ರಧಾನ ವ್ಯವಸ್ಥೆಯ ಮಠದ ಸಂಪ್ರದಾಯ ಹೇರಲ್ಪಡುತ್ತದೆ.

ಇನ್ನು ಪ್ರೀತಿ ಸ್ನೇಹ ಇನ್ಯಾವುದೇ ರೀತಿಯ ಸಂಬಂಧಕ್ಕೆ ಜಾತಿ ಅಡ್ಡವಾಗಲಾರದು. ಆದರೆ ಮದುವೆಯ ವಿಚಾರ ಬಂದಕೂಡಲೇ ಜಾತಿ ಪ್ರಶ್ನಾರ್ಥಕವಾಗುತ್ತದೆ. ಸಮಾಜವನ್ನು ಕಪಿಮುಷ್ಟಿಯಲ್ಲಿ ಹಿಡಿದುಕೊಳ್ಳುವ ಮಠಗಳು ಜನರ ಮುಕ್ತಬದುಕಿಗೆ ಸ್ವಾತಂತ್ರ್ಯಕ್ಕೆ ಮತ್ತು ಸ್ವಸ್ಥ ಸಮಾಜಕ್ಕೆ ಅಡ್ಡಗಾಲಾಗಿರುವುದೇ ಹೆಚ್ಚು. ಜಾತಿಯ ಮೌಢ್ಯವನ್ನು ಮೀರುವ ಹಾದಿಯಲ್ಲಿ ಕುಟುಂಬದ ಆಲೋಚನಾ ಕ್ರಮ, ನಂಬಿಕೆಗಳು ಕುಟುಂಬ ವ್ಯವಸ್ಥೆಯನ್ನು ಮೇಲ್ಮಟ್ಟದಲ್ಲಿ ಇಂತಹ ಮಠಗಳು ಸ್ವಾಮೀಜಿಗಳು ಕಪಿಮುಷ್ಟಿಯಲ್ಲಿಟ್ಟುಕೊಂಡಿರುತ್ತವೆ. ಇದರ ಪ್ರಭಾವಕ್ಕೆ ಒಳಗಾಗುವವರು ಅಷ್ಟು ಸುಲಭದಲ್ಲಿ ವ್ಯಕ್ತಿ ಸ್ವಾತಂತ್ರ್ಯವನ್ನು ಒಪ್ಪಲಾರರು. ಹೆಣ್ಣು ಹೆರುವ ಯಂತ್ರವಲ್ಲ. ಹೆಣ್ಣಿನ ಮುಟ್ಟು ಮೈಲಿಗೆಯಲ್ಲ. ಹೆಣ್ಣು ಗಂಡಿನ ಅನುಕೂಲಕ್ಕಾಗಿ ಇಲ್ಲ. ತನ್ನ ಮಗಳಿಗೆ, ಸಂಗಾತಿಗೆ, ಗೆಳತಿಗೆ, ಅಕ್ಕ ತಂಗಿಗೆ ಬೇಕಾದಲ್ಲಿ ಓಡಾಡುವ, ಬಟ್ಟೆ ತೊಡುವ ಸ್ವಾತಂತ್ರ್ಯ ನೀಡಿದ್ದೇನೆ ಎನ್ನುವ ವ್ಯಕ್ತಿ ಪುರುಷ ಪ್ರಧಾನ ವ್ಯವಸ್ಥೆಗೆ ಉದಾಹರಣೆ. ಸ್ವಾತಂತ್ರ್ಯ ಕೊಡುವುದು ಮತ್ತು ತೆಗೆದುಕೊಳ್ಳುವುದರ ನಡುವೆ ಸಮಾಜ ಮತ್ತು ಹೆಣ್ಣಿನ ನಡುವೆ ಸಂಘರ್ಷ ಇದ್ದೇ ಇದೆ.

inter caste marriage and politics

ಲೇಖಕಿ ಚೈತ್ರಿಕಾ ನಾಯ್ಕ ಹರ್ಗಿ

ಇದನ್ನೂ ಓದಿ : ಬೀಸು ಹೇಳಿಕೆ ಕೊಡುವ ಮುನ್ನ ಒಮ್ಮೆ ಯೋಚಿಸಿ ಸ್ವಾಮೀಜಿಗಳೇ

Published On - 12:44 pm, Thu, 18 March 21

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್