ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕು ಹೆಚ್ಚುತ್ತಿರುವ ಹೊರತಾಗಿಯೂ ಸೋಂಕು ನಿಯಂತ್ರಣಕ್ಕೆ ಸದ್ಯಕ್ಕೆ ಲಾಕ್ಡೌನ್ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಖಡಾಖಂಡಿತವಾಗಿ ಹೇಳಿದ್ದಾರೆ. ಆದರೆ, ಕೊರೊನಾ ಸೋಂಕಿಗೆ ಕಡಿವಾಣ ಹಾಕಬೇಕೆಂದರೆ ಕೆಲ ಕಠಿಣ ಮಾರ್ಗಸೂಚಿಗಳನ್ನು ಪಾಲಿಸುವಂತೆ ತಾಂತ್ರಿಕ ಸಲಹಾ ಸಮಿತಿಯು ಸರ್ಕಾರಕ್ಕೆ ಸೂಚನೆ ನೀಡಿದೆ. ವಾಣಿಜ್ಯ ಚಟುವಟಿಕೆಗಳನ್ನು ಹೊರತುಪಡಿಸಿ ಮತ್ತೆಲ್ಲಾ ಚಟುವಟಿಕೆಗಳಿಗೆ ನಿರ್ಬಂಧ ಹೇರುವಂತೆ ತಾಂತ್ರಿಕ ಸಲಹಾ ಸಮಿತಿ ಸೂಚಿಸಿದೆ.
ಮಾಲ್, ಪಬ್, ರೆಸ್ಟೋರೆಂಟ್ಗಳಿಗೆ ಮತ್ತಷ್ಟು ಟಫ್ ರೂಲ್ಸ್ ಬಗ್ಗೆ ಸಲಹೆ ನೀಡಿರುವ ತಾಂತ್ರಿಕ ಸಲಹಾ ಸಮಿತಿಯು ಸಂತೆ, ಮಧುವೆ, ಶುಭ, ಸಮಾರಂಭಕ್ಕೆ ಎರಡು ತಿಂಗಳವರೆಗೆ ನಿರ್ಬಂಧ ಹೇರುವುದು ಉತ್ತಮ ಎಂದು ಅಭಿಪ್ರಾಯಪಟ್ಟಿದೆ. ಕೆ.ಆರ್.ಮಾರುಕಟ್ಟೆ ಬಂದ್ ಮಾಡಿ, ರಸ್ತೆ ಬದಿ ಅಲ್ಲಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡಬೇಕು, ಬೆಂಗಳೂರಿನಲ್ಲಿ ವೀಕೆಂಡ್ ಲಾಕ್ಡೌನ್ ಮಾಡಬೇಕು, ವಾಣಿಜ್ಯ ಚಟುವಟಿಕೆ ಹೊರತುಪಡಿಸಿ ಮತ್ತೆಲ್ಲಾ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂಬ ಪ್ರಸ್ತಾಪವೂ ಇದೆ.
ಆಸ್ಪತ್ರೆಯಲ್ಲಿ ಹೆಚ್ಚು ಬೆಡ್ಗಳ ವ್ಯವಸ್ಥೆ ಮಾಡಬೇಕು, ಹೊಟೇಲ್ಗಳಲ್ಲಿ ಹೋಂ ಐಸೋಲೇಷನ್ ವ್ಯವಸ್ಥೆ ಮಾಡಬೇಕು. ಖಾಸಗಿ ಆಸ್ಪತ್ರೆಗಳಿಂದ ಐಸೋಲೇಷನ್ ವ್ಯವಸ್ಥೆ ಆಗಬೇಕು, ಆಕ್ಸಿಜನ್ ಕೊರತೆ ಉಂಟಾಗದಂತೆ ನಿಗಾವಹಿಸಬೇಕು, ಐಸಿಯು ಬೆಡ್ ವ್ಯವಸ್ಥೆ ಮಾಡಬೇಕು ಎಂಬ ಸಲಹೆಯನ್ನು ನೀಡಲಾಗಿದ್ದು ಯಾವುದೇ ಪರಿಸ್ಥಿತಿಯನ್ನು ನಿರ್ವಹಿಸಲು ಸಿದ್ಧರಾಗಿರುವಂತೆ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲು ಸೂಚನೆ ನೀಡಲಾಗಿದೆ.
ಮೇಲಾಗಿ 18 ವರ್ಷ ಮೇಲ್ಪಟ್ಟವರಿಗೂ ಆದಷ್ಟು ಬೇಗ ಕೊರೊನಾ ಲಸಿಕೆ ಸಿಗುವಂತೆ ಮಾಡಲು ಹಾಗೂ ಅಗತ್ಯಕ್ಕೆ ಅನುಗುಣವಾಗಿ ರೆಮ್ಡಿಸಿವಿರ್ ಪೂರೈಕೆ ನೋಡಿಕೊಳ್ಳಲು ಸಹ ಸೂಚನೆ ನೀಡಲಾಗಿದೆ. ಇದೆಲ್ಲದರೊಂದಿಗೆ ಗಡಿ ಭಾಗದಿಂದ ಬರುವವರನ್ನು ತಡೆಯಬೇಕು, ಬೆಂಗಳೂರಿನಲ್ಲಿರುವವರು ಹಳ್ಳಿಗೆ ಹೋಗುವುದನ್ನು ತಡೆಯಬೇಕು, ರಾಜಕೀಯ ಸಭೆ ಸಮಾರಂಭಗಳನ್ನು ನಿಲ್ಲಿಸಬೇಕು ಮತ್ತು ಗುಂಪುಗೂಡುವುದನ್ನು ನಿಷೇಧಿಸಲೇಬೇಕು ಎಂದು ಸ್ಪಷ್ಟವಾಗಿ ಸೂಚಿಸಿರುವ ತಾಂತ್ರಿಕಾ ಸಲಹಾ ಸಮಿತಿ ಸೆಕ್ಷನ್ 144 ಜಾರಿ ಮಾಡುವುದಕ್ಕೂ ಸೂಚಿಸಿದೆ ಎಂದು ತಿಳಿದು ಬಂದಿದೆ.
ಯಾವಾಗ ಲಾಕ್ ಡೌನ್ ಅಗತ್ಯ?
ಒಂದುವೇಳೆ ಆಸ್ಪತ್ರೆಯಲ್ಲಿ ಬೆಡ್ಗಳು ಫುಲ್ ಆದರೆ, ಐಸಿಯು ಕೊರತೆ ಉಂಟಾದರೆ ಹಾಗೂ ಮರಣ ಪ್ರಮಾಣ ಹೆಚ್ಚಾದರೆ ಕಠಿಣ ಲಾಕ್ಡೌನ್ ಮಾಡುವಂತೆ ಸೂಚಿಸಲಾಗಿದ್ದು, ಆದಷ್ಟು ನಿಯಮಾವಳಿಗಳ ಪಾಲನೆಯಾಗುವಂತೆ ನೋಡಿಕೊಳ್ಳಬೇಕು ಮತ್ತು ಪರಿಸ್ಥಿತಿ ಬಿಗಡಾಯಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಇದೇ ಸಮಿತಿಯು ಸೂಚನೆ ನೀಡಿದೆ.
ಇದನ್ನೂ ಓದಿ:
ಬೆಂಗಳೂರಿನಲ್ಲಿ ಕೊರೊನಾ ನಿಯಮ ಉಲ್ಲಂಘಿಸಿದವರಿಂದ ಭರ್ಜರಿ ದಂಡ ವಸೂಲಿ.. 11 ದಿನದಲ್ಲಿ 83.49 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹ
(Technical Advisory Committee in Karnataka suggest to go with tough rules to control Coronavirus spread)